#ಝಿಯಾರತ್ತ್_ಕೇಂದ್ರ
🕌🕌 9️⃣1️⃣ 🕌🕌
➖➖➖➖➖➖➖
*"ಆದ್ಯಾತ್ಮಿಕ ಪ್ರಭೆ ಪಸರಿಸಿದ ಜ್ಞಾನಿ" ಶೈಖ್ ಅಬ್ದುರ್ರಹ್ಮಾನ್ ಅಲ್ ಖಾದಿರಿ (ಖ:ಸಿ) ಮೊಂದಾಲ್, ಚೊಕ್ಲಿ, ಕಣ್ಣೂರು ಜಿಲ್ಲೆ.*
➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪
✍ ಗಫೂರ್ ಬಾಯಾರ್
*********************
ಪ್ರಕೃತಿ ಸೌಂದರ್ಯದಿಂದ ನಿಸರ್ಗ ಪ್ರಿಯರ ಕಣ್ಮನ ಸೆಳೆದು ಮನಸ್ಸಿಗೆ ಮುದ ನೀಡುವ ರಮ್ಯ ಮನೋಹರ ತಾಣವಾಗಿದೆ ಮೊಂದಾಲ್ ಎಂಬ ಪ್ರದೇಶ. ಕಲ್ಲಿಕೋಟೆ ಮತ್ತು ಕಣ್ಣೂರು ಜಿಲ್ಲೆಗಳ ಗಡಿಭಾಗದಲ್ಲಿರುವ ಚಿಕ್ಕ ಗ್ರಾಮವಾದ ಮೊಂದಾಲ್, ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲದೆ ಇಸ್ಲಾಮಿನ ಆಧ್ಯಾತ್ಮಿಕ ಪ್ರಭೆಯೊಂದನ್ನು ತನ್ನೊಡಲಲ್ಲಿ ಅಡಗಿಸಿಕೊಂಡು ಆಧ್ಯಾತ್ಮಿಕ ಸುಗಂಧದ ಪರಿಮಳವನ್ನೂ ಸೂಸುತ್ತಾ ಧನ್ಯವಾದ ಪ್ರದೇಶವಾಗಿದೆ.
ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಮೊಂದಾಲ್‌ಗೆ ಆಧ್ಯಾತ್ಮಿಕ ಕಂಪು ನೀಡಿದ ಮಹಾನರಾಗಿದ್ದಾರೆ ಅಬ್ದುರ್ರಹ್ಮಾನ್ ಶೈಖ್ (ರ) ಮೊಂದಾಲ್.
ಅಬ್ದುರ್ರಹ್ಮಾನ್ ಶೈಖ್ (ರ) ರವರು ಹಿಜರಿ 1267ರಲ್ಲಿ ತ್ರಿಶೂರ್ ಜಿಲ್ಲೆಯ ಚಾವಕ್ಕಾಡಿನ ಮಣತ್ತಲ ಕೊಂಗಣಂ ಮನೆತನದ ಅಹಮದ್ ಮತ್ತು ಬಿಯಾತ್ತುಮ್ಮ ದಂಪತಿಗಳ ಮಗನಾಗಿ ಜನಿಸಿದರು. ಜನಿಸಿದ ನಾಲ್ಕನೇ ತಿಂಗಳಿನಲ್ಲಿ ತಾಯಿಯನ್ನು ಕಳೆದುಕೊಂಡ ಅವರು ಅನಂತರ ತಂದೆಯ ಪಾಲನೆ ಮತ್ತು ಪೋಷಣೆಯಲ್ಲಿ ಬೆಳೆದರು. ಶೈಖ್‌ರವರಿಗೆ ಇತ್ತಿಖಾದಿರ್, ಬೀರಾನ್ ಮತ್ತು ಮೊಹಿಯುದ್ದೀನ್ ಎಂಬ ಮೂವರು ಸಹೋದರರಿದ್ದರು.
ಪ್ರಾಥಮಿಕ ವಿದ್ಯಾಭ್ಯಾಸದ ಜೊತೆಗೆ ಕುರ್ಆನ್ ಪಾರಾಯಣವನ್ನೂ ತಮ್ಮ ತಂದೆಯಿಂದಲೇ ಕಲಿತ ನಂತರ ಹೆಚ್ಚಿನ ವ್ಯಾಸಂಗಕ್ಕಾಗಿ ಪೊನ್ನಾನಿಗೆ ತೆರಳಿದರು. ಆ ಕಾಲದ ಮಖ್ದೂಮಾದ ಅಬೀ ಇಬ್ರಾಹಿಂ ಮುಸ್ಲಿಯಾರ್ (ಖ:ಸಿ)ರವರ ಶಿಷ್ಯತ್ವ ಸ್ವೀಕರಿಸಿ ಅಧ್ಯಯನದಲ್ಲಿ ತೊಡಗಿದರು. ತದನಂತರ ಪೊನ್ನಾನಿ ಮಸೀದಿಯ *ವೆಳಕತ್ತಿರಿಕ್ಕಲ್* ಎಂಬ ವಿಶೇಷ ಜ್ಞಾನಾರ್ಜನೆ ಮಾಡಿದರು. ವಿದ್ಯಾರ್ಥಿಗಳೆಲ್ಲರೂ ಮಸೀದಿಯ ಹಾಲ್'ನಲ್ಲಿರುವ ದೀಪವೊಂದರ ಸುತ್ತ ಕುಳಿತು ವಿದ್ಯಾರ್ಜನೆ ಮಾಡುವ ಸಂಪ್ರದಾಯಕ್ಕೆ "ವೆಳಕತ್ತಿರಿಕ್ಕಲ್" ಎನ್ನುತ್ತಾರೆ. ಈ ಸಂಪ್ರದಾಯವು ಪೊನ್ನಾನಿ ಮಸೀದಿಯಲ್ಲಿರುವ ವಿಶೇಷ. ಅಂತೆಯೇ ಇದು ತಲೆತಲಾಂತರಗಳಿಂದಲೂ ರೂಢಿಯಲ್ಲಿರುವ ಪದ್ಧತಿ.
ಅನಂತರ ಉನ್ನತ ಶಿಕ್ಷಣಕ್ಕಾಗಿ ಪಾರಕಡವ್‌ಗೆ ತೆರಳಿ ಕಕ್ಕಾಡ್ ಖಾಝಿ ಮುಹಮ್ಮದ್ (ನ:ಮ) ರವರ ಶಿಷ್ಯತ್ವ ಸ್ವೀಕರಿಸಿ ಅಧ್ಯಯನ ನಡಸಿದರಲ್ಲದೆ ಅನಂತರ ಹೆಸರಾಂತ ಸೂಫಿವರ್ಯರಾದ ಅಲಿಯುಲ್ ಕೋಫಿ (ರ) ರವರು ಅಂತ್ಯ ವಿಶ್ರಮ ಪಡೆಯುತ್ತಿರುವ ಪೆರುಂಗತ್ತೂರಿಗೆ ತೆರಳಿ ಅಲಿಯುಲ್ ಕೋಫಿ (ರ) ರವರ ಹೆಸರಿನಲ್ಲಿ ನಡೆಸಲ್ಪಡುತ್ತಿದ್ದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮುಂದುವರೆಸಿದರು.
ಹಾಗಿರಲೊಂದು ದಿನ ರಾತ್ರಿ ಶೈಖ್‌ರವರ ಕನಸಿನಲ್ಲಿ ಕಾಣಿಸಿಕೊಂಡ ಸೂಫಿ ವರ್ಯರಾದ ಅಲಿಯುಲ್ ಕೋಫಿ (ರ)ರವರು, ತಮ್ಮ ತಂದೆಯವರು ಮರಣ ಹೊಂದಿದ್ದಾರೆ. ಹಾಗಾಗಿ ತಕ್ಷಣವೇ ಚಾವಕ್ಕಾಡಿಗೆ ಹಿಂದಿರುಗಬೇಕೆಂದು ಸೂಚಿಸಿದರು.
ಹಾಗೆ ತಮ್ಮ ಹುಟ್ಟೂರಾದ ಚಾವಕ್ಕಾಡಿಗೆ ಹಿಂದಿರುಗಿದ ಶೈಖ್‌ರವರು, ಅಲ್ಪಕಾಲ ಅಲ್ಲೇ ವಾಸ್ತವ್ಯ ಹೂಡಿದ್ದರು.
ಈ ನಡುವೆ ಶೈಖುನಾರವರ ಕಾಲಿಗೊಂದು ಗಾಯವಾಗಿತ್ತು. ಗಾಯ ಶಮನವಾದರೆ ಅಶ್ಶೈಖ್ ಮೊಹಿಯುದ್ದಿನ್ ಅಬ್ದುಲ್ ಖಾದರ್ ಜಿಲಾನಿ (ಖ:ಸಿ) ರವರು ಅಂತ್ಯ ವಿಶ್ರಮ ಪಡೆಯುತ್ತಿರುವ ಬಗ್ದಾದಿಗೆ ಕಾಲ್ನಡಿಗೆಯಲ್ಲಿ ತೆರಳಿ ಝಿಯಾರತ್ ಮಾಡುವುದಾಗಿ ಹರಕೆ ಹೊತ್ತರು.
ಇದಾಗಿ ಅಲ್ಪ ಕಾಲದಲ್ಲೇ ಮಹಾನರ ಕಾಲಿನ ಗಾಯ ಸಂಪೂರ್ಣ ವಾಸಿಯಾಗಿದ್ದರಿಂದ ತಮ್ಮ ಸ್ನೇಹಿತರಾದ ಮುಹಮ್ಮದ್ ಹಾಜಿಯವರೊಂದಿಗೆ ಮುಂಬೈ ಸೂರತ್ ಮಾರ್ಗವಾಗಿ ಕಾಲ್ನಡಿಗೆಯಲ್ಲೇ ಯಾತ್ರೆ ಹೊರಟರು. ಶೈಖುನಾರವರು ಅಂದು ಬಾಗ್ದಾದಿಗೆ ಯಾತ್ರೆ ಹೋಗುವಾಗ ದಾರಿಯುದ್ದಕ್ಕೂ ಹಲವಾರು ಕರಾಮತ್ತುಗಳು ಘಟಿಸಿವೆ.
ಹಾಗೆ ಬಗ್ದಾದಿಗೆ ತಲುಪಿದ ಮುಹಮ್ಮದ್ ಹಾಜಿ ಮತ್ತು ಶೈಖುನಾರಿಗೆ ಅಚ್ಚರಿಯೊಂದು ಕಾದಿತ್ತು.
ಅದೇನೆಂದರೆ...
ಅಶ್ಶೈಖ್ ಮೊಹಿಯುದ್ದೀನ್ ಅಬ್ದುಲ್ ಖಾದರ್ ಜಿಲಾನಿ (ಖ.ಸಿ)ರವರ ಮಖ್ಬರದ ದ್ವಾರಪಾಲಕ ಬಂದು ಮುಹಮ್ಮದ್ ಹಾಜಿ ಮತ್ತು ಅಬ್ದುರ್ರಹ್ಮಾನ್ ಶೈಖ್‌ರವರ ಹೆಸರು ಕೂಗಿದರು.
ಹಾಜಿ ಮತ್ತು ಶೈಖುನಾ ಆ ದ್ವಾರಪಾಲಕರನ್ನು ಭೇಟಿಯಾದಾಗ ಆ ವ್ಯಕ್ತಿ ಹೇಳಿದರು, ದರ್ಗಾದ ಬೀಗಗಳ ಕೀಲಿಕೈಗಳನ್ನು ಸಕಲ ಗೌರವಗಳೊಂದಿಗೆ ತಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ಅಶ್ಶೈಖ್ ಮೊಹಿಯುದ್ದಿನ್ ಅಬ್ದುಲ್ ಖಾದರ್ ಜಿಲಾನಿ (ಖ.ಸಿ)ರವರು ಕನಸ್ಸಿನಲ್ಲಿ ಸೂಚಿಸಿದ್ದಾರೆನ್ನುತ್ತಾ ಸಕಲ ಗೌರವಗಳೊಂದಿಗೆ ಮಖ್ಬರದ ಕೀಲಿಕೈಗಳನ್ನು ಶೈಖುನಾರ ಕೈಗಿಟ್ಟರು.
ಎರಡು ತಿಂಗಳ ಕಾಲ ಅಲ್ಲೇ ಇದ್ದ ಶೈಖುನಾ ಅನಂತರ ಕೀಲಿಕೈಗಳನ್ನು ದ್ವಾರಪಾಲಕರಿಗೊಪ್ಪಿಸಿ ಅಲ್ಲಿಂದ ಹಿಂದಿರುಗಿದರು.
ಬಗ್ದಾದಿನಿಂದ ಹಿಂದಿರುಗುವಾಗ ಜಿದ್ದಾ, ಮಕ್ಕಾ ಮತ್ತು ಮದೀನಾಗಳಿಗೆ ತೆರಳಿ ಝಿಯಾರತ್ ಮಾಡಿದರಲ್ಲದೆ ಹಲವಾರು ಮಹಾತ್ಮರುಗಳನ್ನು ಸಂದರ್ಶಿಸಿ ಬರ್ಕತ್ ಪಡೆದರು.
ಹಾಗೆ ತಾಯಿ ನಾಡಿಗೆ ಹಿಂದಿರುಗಿದ ಶೈಖುನಾ ಕಣ್ಣೂರು ಸಮೀಪದ ಮೊಂದಾಲ್‌ಗೆ ತೆರಳಿ ಮಸೀದಿ ಮತ್ತು ಖಬಸ್ಥಾನವನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆಗೂ ಪಾತ್ರರಾದರಲ್ಲದೆ ಇಡೀ ಮೊಂದಾಲನ್ನು ಆಧ್ಯಾತ್ಮಿಕ ಪ್ರಭೆಯಿಂದ ಬೆಳಗಿಸಿದರು.
ಹೆಸರಾಂತ ವಿದ್ವಾಂಸರೂ, ವಲಿಯೂ ಆದ ಶಂಸುಲ್ ಉಲಮಾ ಖುತುಬಿ ಮುಹಮ್ಮದ್ ಮುಸ್ಲಿಯಾರ್ (ಖ.ಸಿ) ರವರು ಉನ್ನತ ಸ್ಥಾನಕ್ಕೆ ತಲುಪಿರುವುದು ಖಾದಿರಿಯ್ಯ ತ್ವರೀಖತ್ತಿನ ಶೈಖಾಗಿದ್ದ ಸೂಫಿವರ್ಯರಾದ ಅಬ್ದುರ್ರಹ್ಮಾನ್ ಶೈಖ್ (ಖ:ಸಿ)ರವರ ತರ್ಬಿಯತ್‌ನಲ್ಲಾಗಿದೆ.
ಮೊಂದಾಲ್ ಸಮೀಪದ ಮಯ್ಯಿಇ ಎಂಬ ಸ್ಥಳದ ನದಿ ತೀರದ ಪಡಣಕರೆ ಎಂಬಲ್ಲಿ ವಾಸ್ತವ್ಯ ಹೂಡಿ ಇಲಾಹಿ ಸ್ಮರಣೆಯಲ್ಲಿ ತೊಡಗಿದ್ದ *ಮಹಾನರು ಹಿಜರಿ 1337ರ ಶಹಬಾನ್ 20 ಬುಧವಾರದಂದು ಇಹಲೋಕಕ್ಕೆ ವಿದಾಯ ಹೇಳಿದರು.*
ಮಹಾನರ ಜನಾಝವನ್ನು ಮೊಂದಾಲ್ ಜುಮಾ ಮಸೀದಿಯ ಪ್ರಾಂಗಣದಲ್ಲಿ ದಫನ ಮಾಡಲಾಯಿತು.
ಶೈಖುನಾರ ಆಪ್ತರಾಗಿದ್ದ ಮುಹಮ್ಮದ್ ಹಾಜಿ (ನ:ಮ)ಯವರ ಖಬರನ್ನು ಶೈಖುನಾರ ಮಖಾಮಿನ ಹಿಂಬಾಗದಲ್ಲಿ ಕಾಣಬಹುದಾಗಿದೆ.
ಶೈಖುನಾರ ಜೀವಿತಾವಧಿಯಲ್ಲೇ ಮೊಂದಾಲ್‌ನಲ್ಲಿ ದರ್ಸ್ ನಡೆಯುತ್ತಿತ್ತು. ಅಲ್ಲದೆ
ಶೈಖುನಾರ ಹೆಸರಿನಲ್ಲಿ ಒಲವಿಳಂ ಚೊಕ್ಲಿ ಎಂಬಲ್ಲಿ ರಹ್ಮಾನಿಯಾ ಯತೀಂ ಖಾನ ಹಾಗೂ ಮೋಂದಾಲ್‌ನಲ್ಲಿ ಮದ್ರಸ ನಿರ್ಮಿಸಲಾಗಿದೆ.
ಪ್ರತಿ ವರ್ಷ ಶಹಾಬಾನ್ ಮಾಸದಲ್ಲಿ ಮೊಂದಾಲ್ ಮಖಾಮಿನಲ್ಲಿ ಉರುಸ್ ನಡೆಯುತ್ತದೆ.
ಜ್ಞಾಮನೆಕಾಡ್ ಮಸೀದಿಯ ಮುಂಭಾಗದಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ, ಅರಬಿ ಸಾಹಿತ್ಯರಂಗದಲ್ಲಿ ಅಗಾಧವಾದ ಪಾಂಡಿತ್ಯವನ್ನು ಹೊಂದಿದ್ದ ಎನಿಕುಟ್ಟಿ ಮುಸ್ಲಿಯಾರ್ (ನ.ವ) ಎಂಬುವವರು ಅಬ್ದುರ್ರಹ್ಮಾನ್ ಶೈಖ್ (ಖ.ಸಿ) ರವರ ಜೀವನ ಮತ್ತು ಸಾಧನೆಯ ಕುರಿತು "ಮಿನಹತ್ತುಳ್ಳಾಹಿಲ್ ಮನ್ನಾನ್" ಎಂಬ ಮೌಲಿದನ್ನೂ ರಚಿಸಿದ್ದಾರೆ.
No comments:
Post a Comment