Sunday, May 16, 2021

ಸುಖ ಸಂಸಾರದ ಸೂತ್ರ

#ಸುಖ_ಸಂಸಾರದ_ಸೂತ್ರ
🤝🤝🤝🤝🤝🤝🤝

ಕನ್ನಡಕ್ಕೆ 
✍️ ಗಫೂರ್ ಬಾಯಾರ್
〰️〰️〰️〰️〰️〰️〰️

ಒಮ್ಮೆ ಮಗನೊಬ್ಬ ತನ್ನ ತಾಯಿಯೊಡನೆ ಕೇಳಿದನಂತೆ, ನಮಗಾಗಿ ಅತಿಹೆಚ್ಚು ತ್ಯಾಗ ಮತ್ತು ಕಷ್ಟ ಅನುಭವಿಸಿದ್ದು ಅಮ್ಮನೋ ಅಥವಾ ಅಪ್ಪನೋ ಅಂತ.

ನಿನ್ನ ತಂದೆಯನ್ನು ನಾನು ವಿವಾಹವಾಗಿ ಬರುವಾಗ ತಂದೆಯವರು ಹೀಗಿನಂತಿರದೆ ತನ್ನ ಸ್ವಂತ ಹಿತಾಸಕ್ತಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ವಿವಾಹಾನಂತರ ಅವರು ತಮ್ಮ ಸ್ವಂತ ಹಿತಾಸಕ್ತಿಗಳನ್ನು ನನಗಾಗಿ ಮೀಸಲಿಟ್ಟರು. ಆಮೇಲೆ ನೀವೆಲ್ಲರೂ ಜನಿಸಿದ ನಂತರ ನಿಮ್ಮ ಆಹಾರ, ವಸ್ತ್ರ, ಶಿಕ್ಷಣ ಹೀಗೆ ಎಲ್ಲಾ ಅಗತ್ಯಗಳನ್ನು ಪೂರೈಸುವ ಸಲುವಾಗಿ ತಮ್ಮೆಲ್ಲ ಸುಖ ಸಂತೋಷಗಳನ್ನೂ ಬದಿಗಿಟ್ಟು ನಮ್ಮ ಸುಖ ಸಂತೋಷಗಳಲ್ಲಿ ಸಂತೃಪ್ತರಾದರು. ಅಂದರೆ ನಮ್ಮ ಈ ಸುಖ ಸಂತೋಷಗಳೆಲ್ಲವೂ ಅವರ ಬೆವರಿನ ಫಲವಾಗಿದೆ.

ತಾಯಿಯ ಅನಿಸಿಕೆ ತಿಳಿದ ನಂತರ ಆ ಮಗ ತನ್ನ ತಂದೆಯ ಬಳಿ ಹೋಗಿ ಇದೇ ಪ್ರಶ್ನೆ ಕೇಳಿದಾಗ....

ಅಪ್ಪ ಹೇಳಿದನಂತೆ ನಿಮ್ಮನ್ನು ಹೊತ್ತು ಹೆತ್ತು ಸಾಕಿ ಸಲಹಿ ಬೆಳೆಸಿ ದೊಡ್ಡವರನ್ನಾಗಿಸಲು ನಿಮ್ಮ ತಾಯಿ ಸಹಿಸಿದ ತ್ಯಾಗದ ಒಂದಂಶವನ್ನೂ ನಾನು ಸಹಿಸಿಲ್ಲ. ಅವಳ ಸಹನೆ, ತಾಳ್ಮೆ ಮತ್ತು ಪರಿಶ್ರಮದ ಫಲದಿಂದಾಗಿ ಈ ಕುಟುಂಬವು ಇಂದು ಇಷ್ಟೊಂದು ಸಂತೋಷದಿಂದಿರಲು ಸಾಧ್ಯವಾಗಿದೆ. ತನ್ನೆಲ್ಲ ಸುಖ ಸಂತೋಷಗಳನ್ನೂ ಕುಟುಂಬಕ್ಕಾಗಿ ತ್ಯಾಗ ಮಾಡಿದ ಅವಳು ಈ ತನಕ ತನಗಾಗಿ ಏನನ್ನೂ ಅಪೇಕ್ಷಿಸಿದವಳಲ್ಲ. ಅದೇ ರೀತಿ ನನಗಿಲ್ಲವೆಂದು ಕೊರಗಿದವಳೂ ಅಲ್ಲ. ನನ್ನ ಅಲ್ಪ ವರಮಾನವನ್ನು ಸಂತೋಷದಿಂದ ಸ್ವೀಕರಿಸಿದ ಕುಟುಂಬದ ಬೇಕು-ಬೇಡಗಳನ್ನು ಸರಿದೂಗಿಸಿ ಮುನ್ನಡೆಸುತ್ತಿರುವ ಅವಳ ತ್ಯಾಗದ ಮುಂದೆ ನನ್ನದೇನೂ ಅಲ್ಲ ಎಂದರಂತೆ.

*ಅಪ್ಪ-ಅಮ್ಮಂದಿರ ಈ ಮಾತನ್ನು ಕೇಳಿದ ಆ ಮಗ ಹೋಗಿ ತನ್ನ ಸಹೋದರರೊಂದಿಗೆ ಹೇಳಿದನಂತೆ ಈ ಜಗತ್ತಿನಲ್ಲಿ ಅತಿ ದೊಡ್ಡ ಸೌಭಾಗ್ಯವಂತ ಮಕ್ಕಳು ನಾವು. ಏಕೆಂದರೆ ತಂದೆಯ ಪರಿಶ್ರಮವನ್ನು ಅರ್ಥಮಾಡಿಕೊಳ್ಳುವ ತಾಯಿ, ಹಾಗೂ ತಾಯಿಯ ತ್ಯಾಗವನ್ನು ಅರ್ಥಮಾಡಿಕೊಳ್ಳುವ ತಂದೆ. ಇಂತಹ ತಾಯಿ-ತಂದೆಯರ ಮಕ್ಕಳಾದ ನಾವು ನಿಜವಾದ ಸೌಭಾಗ್ಯಶಾಲಿಗಳಲ್ಲವೇ ಎಂದನಂತೆ.*
🔰🔰🔰🔰🔰🔰🔰

ಶೈಖ್ ಅಬ್ದುರ್ರರಹ್ಮಾನ್ ಅಲ್ ಖಾದಿರಿ (ರ) ಮೊಂದಾಲ್, ಚೊಕ್ಲಿ , ಕಣ್ಣೂರು.

#ಝಿಯಾರತ್ತ್_ಕೇಂದ್ರ​​​
🕌🕌 9️⃣1️⃣ 🕌🕌
➖➖➖➖➖➖➖ 
*"ಆದ್ಯಾತ್ಮಿಕ ಪ್ರಭೆ ಪಸರಿಸಿದ ಜ್ಞಾನಿ" ಶೈಖ್ ಅಬ್ದುರ್ರಹ್ಮಾನ್ ಅಲ್ ಖಾದಿರಿ (ಖ:ಸಿ) ಮೊಂದಾಲ್, ಚೊಕ್ಲಿ, ಕಣ್ಣೂರು ಜಿಲ್ಲೆ.* 
➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪

✍ ಗಫೂರ್ ಬಾಯಾರ್
*********************

ಪ್ರಕೃತಿ ಸೌಂದರ್ಯದಿಂದ ನಿಸರ್ಗ ಪ್ರಿಯರ ಕಣ್ಮನ ಸೆಳೆದು ಮನಸ್ಸಿಗೆ ಮುದ ನೀಡುವ ರಮ್ಯ ಮನೋಹರ ತಾಣವಾಗಿದೆ ಮೊಂದಾಲ್ ಎಂಬ ಪ್ರದೇಶ. ಕಲ್ಲಿಕೋಟೆ ಮತ್ತು ಕಣ್ಣೂರು ಜಿಲ್ಲೆಗಳ ಗಡಿಭಾಗದಲ್ಲಿರುವ ಚಿಕ್ಕ ಗ್ರಾಮವಾದ ಮೊಂದಾಲ್, ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲದೆ ಇಸ್ಲಾಮಿನ ಆಧ್ಯಾತ್ಮಿಕ ಪ್ರಭೆಯೊಂದನ್ನು ತನ್ನೊಡಲಲ್ಲಿ ಅಡಗಿಸಿಕೊಂಡು ಆಧ್ಯಾತ್ಮಿಕ ಸುಗಂಧದ ಪರಿಮಳವನ್ನೂ ಸೂಸುತ್ತಾ ಧನ್ಯವಾದ ಪ್ರದೇಶವಾಗಿದೆ.

ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಮೊಂದಾಲ್‌ಗೆ ಆಧ್ಯಾತ್ಮಿಕ ಕಂಪು ನೀಡಿದ ಮಹಾನರಾಗಿದ್ದಾರೆ ಅಬ್ದುರ್ರಹ್ಮಾನ್ ಶೈಖ್ (ರ) ಮೊಂದಾಲ್.

ಅಬ್ದುರ್ರಹ್ಮಾನ್ ಶೈಖ್ (ರ) ರವರು ಹಿಜರಿ 1267ರಲ್ಲಿ ತ್ರಿಶೂರ್ ಜಿಲ್ಲೆಯ ಚಾವಕ್ಕಾಡಿನ ಮಣತ್ತಲ ಕೊಂಗಣಂ ಮನೆತನದ ಅಹಮದ್ ಮತ್ತು ಬಿಯಾತ್ತುಮ್ಮ ದಂಪತಿಗಳ ಮಗನಾಗಿ ಜನಿಸಿದರು. ಜನಿಸಿದ ನಾಲ್ಕನೇ ತಿಂಗಳಿನಲ್ಲಿ ತಾಯಿಯನ್ನು ಕಳೆದುಕೊಂಡ ಅವರು ಅನಂತರ ತಂದೆಯ ಪಾಲನೆ ಮತ್ತು ಪೋಷಣೆಯಲ್ಲಿ ಬೆಳೆದರು. ಶೈಖ್‌ರವರಿಗೆ ಇತ್ತಿಖಾದಿರ್, ಬೀರಾನ್ ಮತ್ತು ಮೊಹಿಯುದ್ದೀನ್ ಎಂಬ ಮೂವರು ಸಹೋದರರಿದ್ದರು.

ಪ್ರಾಥಮಿಕ ವಿದ್ಯಾಭ್ಯಾಸದ ಜೊತೆಗೆ ಕುರ್ಆನ್ ಪಾರಾಯಣವನ್ನೂ ತಮ್ಮ ತಂದೆಯಿಂದಲೇ ಕಲಿತ ನಂತರ ಹೆಚ್ಚಿನ ವ್ಯಾಸಂಗಕ್ಕಾಗಿ ಪೊನ್ನಾನಿಗೆ ತೆರಳಿದರು. ಆ ಕಾಲದ ಮಖ್ದೂಮಾದ ಅಬೀ ಇಬ್ರಾಹಿಂ ಮುಸ್ಲಿಯಾರ್‌ (ಖ:ಸಿ)ರವರ ಶಿಷ್ಯತ್ವ ಸ್ವೀಕರಿಸಿ ಅಧ್ಯಯನದಲ್ಲಿ ತೊಡಗಿದರು. ತದನಂತರ ಪೊನ್ನಾನಿ ಮಸೀದಿಯ *ವೆಳಕತ್ತಿರಿಕ್ಕಲ್* ಎಂಬ ವಿಶೇಷ ಜ್ಞಾನಾರ್ಜನೆ ಮಾಡಿದರು. ವಿದ್ಯಾರ್ಥಿಗಳೆಲ್ಲರೂ ಮಸೀದಿಯ ಹಾಲ್'ನಲ್ಲಿರುವ ದೀಪವೊಂದರ ಸುತ್ತ ಕುಳಿತು ವಿದ್ಯಾರ್ಜನೆ ಮಾಡುವ ಸಂಪ್ರದಾಯಕ್ಕೆ "ವೆಳಕತ್ತಿರಿಕ್ಕಲ್" ಎನ್ನುತ್ತಾರೆ. ಈ ಸಂಪ್ರದಾಯವು ಪೊನ್ನಾನಿ ಮಸೀದಿಯಲ್ಲಿರುವ ವಿಶೇಷ. ಅಂತೆಯೇ ಇದು ತಲೆತಲಾಂತರಗಳಿಂದಲೂ ರೂಢಿಯಲ್ಲಿರುವ ಪದ್ಧತಿ.

 ಅನಂತರ ಉನ್ನತ ಶಿಕ್ಷಣಕ್ಕಾಗಿ ಪಾರಕಡವ್‌ಗೆ ತೆರಳಿ ಕಕ್ಕಾಡ್ ಖಾಝಿ ಮುಹಮ್ಮದ್ (ನ:ಮ) ರವರ ಶಿಷ್ಯತ್ವ ಸ್ವೀಕರಿಸಿ ಅಧ್ಯಯನ ನಡಸಿದರಲ್ಲದೆ ಅನಂತರ ಹೆಸರಾಂತ ಸೂಫಿವರ್ಯರಾದ ಅಲಿಯುಲ್ ಕೋಫಿ (ರ) ರವರು ಅಂತ್ಯ ವಿಶ್ರಮ ಪಡೆಯುತ್ತಿರುವ ಪೆರುಂಗತ್ತೂರಿಗೆ ತೆರಳಿ ಅಲಿಯುಲ್ ಕೋಫಿ (ರ) ರವರ ಹೆಸರಿನಲ್ಲಿ ನಡೆಸಲ್ಪಡುತ್ತಿದ್ದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮುಂದುವರೆಸಿದರು.

ಹಾಗಿರಲೊಂದು ದಿನ ರಾತ್ರಿ ಶೈಖ್‌ರವರ ಕನಸಿನಲ್ಲಿ ಕಾಣಿಸಿಕೊಂಡ ಸೂಫಿ ವರ್ಯರಾದ ಅಲಿಯುಲ್‌ ಕೋಫಿ‌ (ರ)ರವರು, ತಮ್ಮ ತಂದೆಯವರು ಮರಣ ಹೊಂದಿದ್ದಾರೆ. ಹಾಗಾಗಿ ತಕ್ಷಣವೇ ಚಾವಕ್ಕಾಡಿಗೆ ಹಿಂದಿರುಗಬೇಕೆಂದು ಸೂಚಿಸಿದರು.

ಹಾಗೆ ತಮ್ಮ ಹುಟ್ಟೂರಾದ ಚಾವಕ್ಕಾಡಿಗೆ ಹಿಂದಿರುಗಿದ ಶೈಖ್‌ರವರು, ಅಲ್ಪಕಾಲ ಅಲ್ಲೇ ವಾಸ್ತವ್ಯ ಹೂಡಿದ್ದರು. 

ಈ ನಡುವೆ ಶೈಖುನಾರವರ ಕಾಲಿಗೊಂದು ಗಾಯವಾಗಿತ್ತು. ಗಾಯ ಶಮನವಾದರೆ ಅಶ್ಶೈಖ್ ಮೊಹಿಯುದ್ದಿನ್ ಅಬ್ದುಲ್ ಖಾದರ್ ಜಿಲಾನಿ (ಖ:ಸಿ) ರವರು ಅಂತ್ಯ ವಿಶ್ರಮ ಪಡೆಯುತ್ತಿರುವ ಬಗ್ದಾದಿಗೆ ಕಾಲ್ನಡಿಗೆಯಲ್ಲಿ ತೆರಳಿ ಝಿಯಾರತ್ ಮಾಡುವುದಾಗಿ ಹರಕೆ ಹೊತ್ತರು. 

ಇದಾಗಿ ಅಲ್ಪ ಕಾಲದಲ್ಲೇ ಮಹಾನರ ಕಾಲಿನ ಗಾಯ ಸಂಪೂರ್ಣ ವಾಸಿಯಾಗಿದ್ದರಿಂದ ತಮ್ಮ ಸ್ನೇಹಿತರಾದ ಮುಹಮ್ಮದ್ ಹಾಜಿಯವರೊಂದಿಗೆ ಮುಂಬೈ ಸೂರತ್ ಮಾರ್ಗವಾಗಿ ಕಾಲ್ನಡಿಗೆಯಲ್ಲೇ ಯಾತ್ರೆ ಹೊರಟರು. ಶೈಖುನಾರವರು ಅಂದು ಬಾಗ್ದಾದಿಗೆ ಯಾತ್ರೆ ಹೋಗುವಾಗ ದಾರಿಯುದ್ದಕ್ಕೂ ಹಲವಾರು ಕರಾಮತ್ತುಗಳು ಘಟಿಸಿವೆ.

ಹಾಗೆ ಬಗ್ದಾದಿಗೆ ತಲುಪಿದ ಮುಹಮ್ಮದ್ ಹಾಜಿ ಮತ್ತು ಶೈಖುನಾರಿಗೆ ಅಚ್ಚರಿಯೊಂದು ಕಾದಿತ್ತು. 

ಅದೇನೆಂದರೆ...
ಅಶ್ಶೈಖ್ ಮೊಹಿಯುದ್ದೀನ್ ಅಬ್ದುಲ್ ಖಾದರ್ ಜಿಲಾನಿ (ಖ.ಸಿ)ರವರ ಮಖ್ಬರದ ದ್ವಾರಪಾಲಕ ಬಂದು ಮುಹಮ್ಮದ್ ಹಾಜಿ ಮತ್ತು ಅಬ್ದುರ್ರಹ್ಮಾನ್ ಶೈಖ್‌ರವರ ಹೆಸರು ಕೂಗಿದರು.

ಹಾಜಿ ಮತ್ತು ಶೈಖುನಾ ಆ ದ್ವಾರಪಾಲಕರನ್ನು ಭೇಟಿಯಾದಾಗ ಆ ವ್ಯಕ್ತಿ ಹೇಳಿದರು, ದರ್ಗಾದ ಬೀಗಗಳ ಕೀಲಿಕೈಗಳನ್ನು ಸಕಲ ಗೌರವಗಳೊಂದಿಗೆ ತಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ಅಶ್ಶೈಖ್ ಮೊಹಿಯುದ್ದಿನ್ ಅಬ್ದುಲ್ ಖಾದರ್ ಜಿಲಾನಿ (ಖ.ಸಿ)ರವರು ಕನಸ್ಸಿನಲ್ಲಿ ಸೂಚಿಸಿದ್ದಾರೆನ್ನುತ್ತಾ ಸಕಲ ಗೌರವಗಳೊಂದಿಗೆ ಮಖ್ಬರದ ಕೀಲಿಕೈಗಳನ್ನು ಶೈಖುನಾರ ಕೈಗಿಟ್ಟರು.

ಎರಡು ತಿಂಗಳ ಕಾಲ  ಅಲ್ಲೇ ಇದ್ದ ಶೈಖುನಾ ಅನಂತರ ಕೀಲಿಕೈಗಳನ್ನು ದ್ವಾರಪಾಲಕರಿಗೊಪ್ಪಿಸಿ ಅಲ್ಲಿಂದ ಹಿಂದಿರುಗಿದರು.

ಬಗ್ದಾದಿನಿಂದ ಹಿಂದಿರುಗುವಾಗ ಜಿದ್ದಾ, ಮಕ್ಕಾ ಮತ್ತು ಮದೀನಾಗಳಿಗೆ ತೆರಳಿ ಝಿಯಾರತ್ ಮಾಡಿದರಲ್ಲದೆ ಹಲವಾರು ಮಹಾತ್ಮರುಗಳನ್ನು ಸಂದರ್ಶಿಸಿ ಬರ್ಕತ್ ಪಡೆದರು.

ಹಾಗೆ ತಾಯಿ ನಾಡಿಗೆ ಹಿಂದಿರುಗಿದ ಶೈಖುನಾ ಕಣ್ಣೂರು ಸಮೀಪದ ಮೊಂದಾಲ್‌ಗೆ ತೆರಳಿ  ಮಸೀದಿ ಮತ್ತು ಖಬಸ್ಥಾನವನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆಗೂ ಪಾತ್ರರಾದರಲ್ಲದೆ ಇಡೀ ಮೊಂದಾಲನ್ನು ಆಧ್ಯಾತ್ಮಿಕ ಪ್ರಭೆಯಿಂದ ಬೆಳಗಿಸಿದರು.

ಹೆಸರಾಂತ ವಿದ್ವಾಂಸರೂ, ವಲಿಯೂ ಆದ ಶಂಸುಲ್ ಉಲಮಾ ಖುತುಬಿ ಮುಹಮ್ಮದ್ ಮುಸ್ಲಿಯಾರ್ (ಖ.ಸಿ)  ರವರು ಉನ್ನತ ಸ್ಥಾನಕ್ಕೆ ತಲುಪಿರುವುದು ಖಾದಿರಿಯ್ಯ ತ್ವರೀಖತ್ತಿನ ಶೈಖಾಗಿದ್ದ ಸೂಫಿವರ್ಯರಾದ ಅಬ್ದುರ್ರಹ್ಮಾನ್ ಶೈಖ್‌ (ಖ:ಸಿ)ರವರ ತರ್ಬಿಯತ್‌ನಲ್ಲಾಗಿದೆ.

ಮೊಂದಾಲ್ ಸಮೀಪದ ಮಯ್ಯಿಇ ಎಂಬ ಸ್ಥಳದ ನದಿ ತೀರದ ಪಡಣಕರೆ ಎಂಬಲ್ಲಿ ವಾಸ್ತವ್ಯ ಹೂಡಿ ಇಲಾಹಿ ಸ್ಮರಣೆಯಲ್ಲಿ ತೊಡಗಿದ್ದ *ಮಹಾನರು ಹಿಜರಿ 1337ರ ಶಹಬಾನ್ 20 ಬುಧವಾರದಂದು ಇಹಲೋಕಕ್ಕೆ ವಿದಾಯ ಹೇಳಿದರು.*

ಮಹಾನರ ಜನಾಝವನ್ನು ಮೊಂದಾಲ್ ಜುಮಾ ಮಸೀದಿಯ ಪ್ರಾಂಗಣದಲ್ಲಿ ದಫನ ಮಾಡಲಾಯಿತು.

ಶೈಖುನಾರ ಆಪ್ತರಾಗಿದ್ದ ಮುಹಮ್ಮದ್ ಹಾಜಿ (ನ:ಮ)ಯವರ ಖಬರನ್ನು ಶೈಖುನಾರ ಮಖಾಮಿನ ಹಿಂಬಾಗದಲ್ಲಿ ಕಾಣಬಹುದಾಗಿದೆ.

ಶೈಖುನಾರ ಜೀವಿತಾವಧಿಯಲ್ಲೇ ಮೊಂದಾಲ್‌ನಲ್ಲಿ ದರ್ಸ್‌ ನಡೆಯುತ್ತಿತ್ತು. ಅಲ್ಲದೆ
ಶೈಖುನಾರ ಹೆಸರಿನಲ್ಲಿ ಒಲವಿಳಂ ಚೊಕ್ಲಿ ಎಂಬಲ್ಲಿ ರಹ್ಮಾನಿಯಾ ಯತೀಂ ಖಾನ ಹಾಗೂ ಮೋಂದಾಲ್‌ನಲ್ಲಿ ಮದ್ರಸ ನಿರ್ಮಿಸಲಾಗಿದೆ.

ಪ್ರತಿ ವರ್ಷ ಶಹಾಬಾನ್ ಮಾಸದಲ್ಲಿ ಮೊಂದಾಲ್ ಮಖಾಮಿನಲ್ಲಿ ಉರುಸ್ ನಡೆಯುತ್ತದೆ.

ಜ್ಞಾಮನೆಕಾಡ್ ಮಸೀದಿಯ ಮುಂಭಾಗದಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ, ಅರಬಿ ಸಾಹಿತ್ಯರಂಗದಲ್ಲಿ ಅಗಾಧವಾದ ಪಾಂಡಿತ್ಯವನ್ನು ಹೊಂದಿದ್ದ ಎನಿಕುಟ್ಟಿ ಮುಸ್ಲಿಯಾರ್ (ನ.ವ) ಎಂಬುವವರು ಅಬ್ದುರ್ರಹ್ಮಾನ್ ಶೈಖ್ (ಖ.ಸಿ) ರವರ ಜೀವನ ಮತ್ತು ಸಾಧನೆಯ ಕುರಿತು "ಮಿನಹತ್ತುಳ್ಳಾಹಿಲ್ ಮನ್ನಾನ್" ಎಂಬ ಮೌಲಿದನ್ನೂ ರಚಿಸಿದ್ದಾರೆ.
💧💧💧💧💧💧💧

ಕುಂಜಾಯಿನ್ ಮುಸ್ಲಿಯಾರ್ (ಖ:ಸಿ) ತಲೆಶೇರಿ, ಕಣ್ಣೂರು

#ಝಿಯಾರತ್ತ್_ಕೇಂದ್ರ​​​
🔰🔰 9️⃣0️⃣ 🔰🔰
➖➖➖➖➖➖➖
#ಹೆಸರಾಂತ_ತತ್ವಚಿಂತಕ_ಕುಂಞಾಯಿನ್ #ಮುಸ್ಲಿಯಾರ್ (ಖ:ಸಿ) ತಲೆಶ್ಶೇರಿ, ಕಣ್ಣೂರು ಜಿಲ್ಲೆ.
➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕌🕌🕌🕌🕌🕌🕌

✍ ಗಫೂರ್ ಬಾಯಾರ್
〰️〰️〰️〰️〰️〰️〰️

ಹದಿನೇಳು ಮತ್ತು ಹದಿನೆಂಟನೆ ಶತಮಾನಗಳ ನಡುವೆ ದಕ್ಷಿಣ ಭಾರತ ಕಂಡ ಹೆಸರಾಂತ ಮಾಪ್ಪಿಳ ಕವಿಯೂ ಸಮಾಜ ಸುಧಾರಕರೂ, ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸರೂ ಖಾದಿರಿಯಾ ತ್ವರೀಖತ್ತಿನ ಶೈಖರೂ ಆಗಿ ಎಲ್ಲರ ಗಮನ ಸೆಳೆದಿದ್ದ ತತ್ವಚಿಂತಕರಾಗಿದ್ದರು ಕುಂಞಾಯಿನ್ ಮುಸ್ಲಿಯಾರ್ (ಖ:ಸಿ)

ತಲಶ್ಶೇರಿಯ ಚಂದನಂಕಂಡಿ ಎಂಬಲ್ಲಿ ಮರಕ್ಕಯಿಲ್ ಮನೆತನದಲ್ಲಿ ಹದಿನೇಳನೇ ಶತಮಾನದಲ್ಲಿ ಜನಿಸಿದ ಚಂದನಂಕಂಡಿ ಮರಕ್ಕಯಿಲ್ ಕುಂಞಿ ಮಾಹಿನ್ ಕ್ರಮೇಣ ಕುಂಞಾಯಿನ್ ಮುಸ್ಲಿಯಾರ್ (ಖ:ಸಿ) ಎಂದೇ ಅರಿಯಲ್ಪಡುತ್ತಿದ್ದರು.

ಹುಟ್ಟೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗಳಿಸಿದ ಅವರು ನಂತರ ಮಲಬಾರಿನ ಮಕ್ಕ ಎಂದೇ ಅರಿಯಲ್ಪಡುವ ಪೊನ್ನಾನಿಗೆ ತೆರಳಿ ಶೈಖ್ ನೂರುದ್ದೀನ್ ಮಖ್ದೂಮ್ (ನ.ಮ) ಮತ್ತು ಅಬ್ದುಸ್ಸಲಾಂ ಮಖ್ದೂಮ್ (ನ.ಮ) ಎಂಬ ಹೆಸರಾಂತ ವಿದ್ವಾಂಸರಿಂದ ಉನ್ನತ ಶಿಕ್ಷಣ ಗಳಿಸಿದರು.

ಮಲಯಾಳಂ ತಮಿಳು ಮತ್ತು ಅರೇಬಿಕ್ ಭಾಷೆಗಳಲ್ಲಿ ಹಿಡಿತ ಹೊಂದಿದ್ದ ಅವರು ತತ್ವಚಿಂತಕರೂ, ವಿದ್ವಾಂಸರೂ ಆಗಿದ್ದರು. ಜನಸಾಮಾನ್ಯರ ನಡುವೆ ಏನಾದರೂ ಸಮಸ್ಯೆಗಳು ತಲೆದೋರಿದಾಗ ಅದರ ಪರಿಹರಿಸಲು ಅಂದಿನ ಮಖ್ದೂಮಿಗಳು (ನ:ಮ) ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರ ಬಳಿ ತೆರಳುವಂತೆ ಶಿಫಾರಸು ಮಾಡುತ್ತಿದ್ದರು.

ಕುಂಞಾಯಿನ್ ಮುಸ್ಲಿಯಾರರ ಚಿಂತನೆ, ಜಾಣ್ಮೆ, ಚತುರತೆ, ಬುದ್ದಿವಂತಿಕೆಗಳ ಬಗ್ಗೆ ಇತಿಹಾಸಕಾರರು ವಿವರಿಸುವಾಗ "ತುರ್ಕಿಯ ಚಿಂತಕ ನಸ್ರುದ್ದೀನ್ ಹೂಜ"ರಿಗೆ ಹೇೂಲಿಕೆ ಮಾಡುತ್ತಾರೆ.

ಕವಿಯಾಗಿದ್ದ ಕುಂಞಾಯೀನ್ ಮುಸ್ಲಿಯಾರ (ಖ:ಸಿ)ರು ಹಲವಾರು ಪದ್ಯ ಮತ್ತು ಗದ್ಯಗಳನ್ನು ರಚಿಸಿದ್ದರಾದರೂ ಅವುಗಳ ಪೈಕಿ ಹಲವಾರು ಕೃತಿಗಳನ್ನು ವಸಾಹತುಶಾಹಿಗಳು ನಾಶಪಡಿಸಿದ್ದಾರೆ ಎನ್ನಲಾಗುತ್ತಿದೆ.

ಅಳಿದುಳಿದ ಗ್ರಂಥ ಅಥವಾ ಕೃತಿಗಳಲ್ಲಿ ಖಾದಿರೀಯ್ಯಾ ಸೂಫಿ ಸರಣಿಯ ಪ್ರಚಾರದ ಜೊತೆಗೆ ಪ್ರವಾದಿ  ﷺِ ರವರ ಜೀವನದ ವೈಶಿಷ್ಟ್ಯತೆಯನ್ನು ಸಾರುವ ಮದ್‌ಹ್ ಮಾಲೆ, ನೂಲ್ ಮಾಲೆ ಮತ್ತು ಕಪ್ಪಪಾಟ್ ಪ್ರಮುಖವಾದವು. 

ನಾನೂರು ವರ್ಷಗಳ ಇತಿಹಾಸವನ್ನು ಹೊಂದಿರುವ ಖಾಝಿ ಮುಹಮ್ಮದ್ (ನ:ಮ) ವಿರಚಿತ ಮುಹಿಯುದ್ದೀನ್ ಮಾಲೆಯ ನಂತರ ಅತಿಹೆಚ್ಚು ಜನಪ್ರಿಯತೆ ಗಳಿಸಿದ ಕೃತಿಯಾಗಿದೆ ಕಪ್ಪಪಾಟ್.
 
*"ಕಪ್ಪಪಾಟ್ಟ್"*
🔹🔹🔹🔹🔹🔹🔹

ಒಬ್ಬ ಕಪ್ತಾನ (ಹಡಗು ಚಲಾಯಿಸುವವನು) ಮತ್ತು ಆತನ ಪತ್ನಿಯನ್ನು ಕಥಾಪಾತ್ರಧಾರಿಗಳಾಗಿಯೂ ಹಡಗನ್ನು ಈ ಕೃತಿಯ ವಸ್ತುವನ್ನಾಗಿಯೂ ಚಿತ್ರಿಸಲಾಗಿದೆ.

ಮುಹ್ಯದ್ದೀನ್ ಮಾಲೆಯಂತೆಯೇ ಮಾನವ ಜೀವನದಲ್ಲಿ ಆಧ್ಯಾತ್ಮಿಕ ಯಾತ್ರೆಯ ಅನಿವಾರ್ಯತೆ ಎಷ್ಟು ಎಂಬ ವಿಷಯದತ್ತ ಬೆಳಕು ಚೆಲ್ಲುವ ಕೃತಿಯಾಗಿದೆ ಕಪ್ಪಪಾಟ್. 

ಮೇಲ್ನೋಟಕ್ಕೆ ಶಾಂತವಾಗಿರುವಂತೆ ಕಂಡರೂ ಸಹ ಒಡಲಾಳದಲ್ಲಿ ಅಲೆಗಳ ಭೋರ್ಗರೆತ, ಸುಳಿ, ಬಿರುಗಾಳಿ, ಚಂಡಮಾರುತಗಳನ್ನೊಳಗೊಂಡ ಕಡಲಿನಲ್ಲಿ ಸಂಚರಿಸುವ ಹಡಗಿಗೆ ಮಾನವ ಜೀವನವನ್ನು ಹೋಲಿಸಿರುವ ಕವಿಯು, ಶರೀಯತ್ತಿನ ನಿಯಮಗಳನ್ನು ಪಾಲಿಸುತ್ತಾ ಜೀವನ ನಡೆಸಿದಾಗ ಮಾತ್ರವೇ ನಾವು ನಿಶ್ಚಿತ ಗುರಿ ತಲುಪಲು ಸಾಧ್ಯ ಎಂಬುದನ್ನು ಬಹು ಸೊಗಸಾಗಿ ವಿವರಿಸಿದ್ದಾರೆ. 

ಮಾನವ ಜೀವನವನ್ನು ಹಡಗಿಗೆ ಹೋಲಿಸಿ ಗದ್ಯ ರಚಿಸಲು ಮಹಾನರಿಗೆ ಪ್ರೇರಣೆ ಸಿಕ್ಕಿದ್ದು ನೂರುದ್ದೀನ್ ಮಖ್ದೂಮ್ (ನ:ಮ) ರವರಿಂದಾಗಿದೆ.

*ಸ್ವಾರಸ್ಯಕರವಾದ ಆ ಪ್ರೇರಣೆಯ ಹಿಂದಿನ ರಹಸ್ಯ ಹೀಗಿದೆ...*

ಪೊನ್ನಾನಿಯಲ್ಲಿ‌ ವ್ಯಾಸಂಗ ಮಾಡುತ್ತಿರುವಾಗ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ನೂರುದ್ದೀನ್ ಮಖ್ದೂಮ್ (ನ:ಮ) ರವರ ಮನೆಯಲ್ಲಿ ಊಟ ಮಾಡುತ್ತಿದ್ದರು. ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ಮಹಾನ್ ವಿದ್ವಾಂಸರೂ ಸೂಫಿವರ್ಯರೂ ಆಗಿದ್ದಾರೆಂದು ನೂರುದ್ದೀನ್ ಮಖ್ದೂಮ್ (ಖ.ಸಿ) ರವರು ತಮ್ಮ ಪತ್ನಿಗೆ ತಿಳಿಸಿದ್ದರು. 

ಹಾಗಾಗಿ ನೂರುದ್ದೀನ್ ಮಖ್ದೂಮ್ (ನ:ಮ)ರವರ ಪತ್ನಿಗೆ ಮುಸ್ಲಿಯಾರ್‌ರಿಂದ ಒಂದು ದ್ಸಿಕ್ರ್ ಪಡೆಯಬೇಕೆಂಬ ಮಹತ್ವಾಕಾಂಕ್ಷೆ ಇತ್ತು. ಹಾಗಿರಲೊಂದು ದಿನ ಮಹಾನರು ಊಟಕ್ಕೆ ಬಂದಾಗ ತಮಗೊಂದು ದ್ಸಿಕ್ರ್ ಹೇಳಿ ಕೊಡಿ ಎಂದರಂತೆ. ಸದಾ ಹಾಸ್ಯಪ್ರಜ್ಞೆಯಿಂದಿರುತ್ತಿದ್ದ ಮಹಾನರು ತಕ್ಷಣವೇ *"ಏಲೆ ಮಾಲೆ"* ಎಂದು ಪಠಿಸಿ ಎಂದರಂತೆ.

ಹಾಗೆ ಪತ್ನಿಯು ರಾತ್ರಿ "ಏಲೆ ಮಾಲೆ, ಏಲೆ ಮಾಲೆ" ಎಂದು ಜಪಿಸುತ್ತಿರುವುದನ್ನು ಕಂಡು ನೂರುದ್ದೀನ್ ಮಖ್ದೂಮ್ (ನ:ಮ) ಏನಿದು ಏಕೆ ಹಾಗನ್ನುತ್ತಿರುವೆ ಎಂದು ಕೇಳಿದಾಗ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ಕಲಿಸಿದ ದ್ಸಿಕ್ರ್ ಇದು ಎಂದರಂತೆ.

ಮರುದಿನ ಕುಂಞಾಯಿನ್ ಮುಸ್ಲಿಯಾರ್‌ (ಖ:ಸಿ)ರನ್ನು ಭೇಟಿಯಾದ ನೂರುದ್ದೀನ್ ಮಖ್ದೂಮ್ (ನ:ಮ)ರವರು,  "ಮನುಷ್ಯರನ್ನು ನೀವೇಕೆ ಹಡಗನ್ನಾಗಿಸುತ್ತೀರಿ.."? ಎಂದು ಕೇಳಿದರಂತೆ. ಈ ಮಾತು ಕೇಳಿದ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ಅಂದಿನಿಂದ ಮನುಷ್ಯರನ್ನು ಹಡಗಿಗೆ ಹೋಲಿಸಿ ಕಪ್ಪಪಾಟ್ (ಹಡಗು ಹಾಡು) ರಚಿಸಲಾರಂಭಿಸಿದರು ಎನ್ನಲಾಗುತ್ತದೆ.

ಪೊನ್ನಾನಿಯಲ್ಲಿ ವಿದ್ಯಾರ್ಥಿಯಾಗಿರುವಾಗ ಮಹಾನರು ರಚಿಸಿದ ಕಪ್ಪಪಾಟ್ ನಂತರ ಸಫೀನ ಎಂಬ ಹೆಸರಿನಿಂದ ಹೆಸರುವಾಸಿಯಾಯಿತು. ಹಿಂದಿನ ಕಾಲದ ಜನರು ಮಾಲೆ ಮತ್ತು ಮೌಲೀದ್‌ಗಳ ಗ್ರಂಥಗಳನ್ನು ಸಫೀನ ಎಂದೇ ಕರೆಯುತ್ತಿದ್ದರು.

ಸಫೀನ ಎಂದರೆ ಅರಬೀ ಭಾಷೆಯಲ್ಲಿ ಹಡಗು ಎಂದರ್ಥ. ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರ ಗ್ರಂಥ ಮತ್ತು ಕೃತಿಗಳು ಹಡಗಿನ ಉಪಮೆಯನ್ನು ಹೊಂದಿದ್ದರಿಂದ ಹಾಗೂ ಆ ಗ್ರಂಥಗಳು ಜನಮಾನಸದಲ್ಲಿ ಬಹಳ ಪ್ರಭಾವ ಬೀರಿದ್ದರಿಂದ ಆ ಪ್ರಭಾವವೂ ಇದಕ್ಕೆ (ಅಂದರೆ ಹಿಂದಿನ ತಲೆಮಾರಿನವರು ಗ್ರಂಥಗಳಿಗೆ ಸಫೀನ ಎನ್ನಲು) ಕಾರಣವಾಗಿರಬಹುದು ಎನ್ನುವುದು ಇತಿಹಾಸಕಾರರ ಅಂಬೋಣ.

ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರ ಮತ್ತೊಂದು ಹೆಸರಾಂತ ಕೃತಿಯಾಗಿದೆ 

*"ನೂಲ್ ಮದ್‌ಹ್"* 
🔸🔸🔸🔸🔸🔸🔸

ಖಾಝಿ ಮುಹಮ್ಮದ್ (ರ)ವರು ಮುಹಿಯುದ್ದೀನ್ ಮಾಲೆ ರಚಿಸಿದ 130 ವರ್ಷಗಳ ತರುವಾಯ ಅಷ್ಟೇ ಪ್ರಸಿದ್ಧಿ ಪಡೆದಿರುವ ಈ 'ನೂಲ್ ಮದ್‌ಹ್' 1737 ರಲ್ಲಿ ರಚಿಸಲ್ಪಟ್ಟಿತು. ನೂಲ್ ಎಂದರೆ ತಮಿಳಿನಲ್ಲಿ ಪ್ರವಾದಿ ﷺِ ಎಂಬ ಅರ್ಥವಿದೆ. ಹಾಗಾಗಿ ಪ್ರವಾದಿ ﷺِ ಕೀರ್ತನೆಗಳನ್ನೊಳಗೊಂಡ ತಮ್ಮ ಕೃತಿಗೆ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ಈ ಪದವನ್ನು ತಮಿಳಿನಿಂದ ಆಯ್ದುಕೊಂಡಿರಬಹುದೆಂದು ಇತಿಹಾಸಕಾರರು ಬಣ್ಣಿಸಿದ್ದಾರೆ.

ಕುಂಜಾಯಿನ್ ಮುಸ್ಲಿಯಾರ (ಖ:ಸಿ)ರ ಕೃತಿಗಳು ಮಲಯಾಳಂನಲ್ಲಿ ಇದ್ದರೂ ಸಹ ಅವರ ಕೃತಿಗಳಲ್ಲಿ ತಮಿಳು ಭಾಷೆಯ ಪ್ರಭಾವ ಹೆಚ್ಚಾಗಿ ಕಂಡು ಬರುತ್ತದೆ.

ಮಹಾನರ (ಖ:ಸಿ)ರ ಮೂರನೆ ಪ್ರಮುಖ ರಚನೆಯಾಗಿದೆ.

 *"ನೂಲ್ ಮಾಲ"* 
♦️♦️♦️♦️♦️♦️♦️

ಹಿಜರಿ 5ನೇ ಶತಮಾನದಲ್ಲಿ ಜೀವಿಸಿದ್ದ ಪುಣ್ಯಾತ್ಮರಾದ ಅಶೈಖ್ ಮುಹ್ಯಿದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ರ) ರವರ ಜೀವನದ ಮಹತ್ವಗಳನ್ನು ಸಾರುವ ಸ್ತುತಿಗೀತೆಗಳಾಗಿವೆ 
ನೂಲ್ ಮಾಲ.

ಹಾಸ್ಯಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ಅಂದಿನ ಕಾಲದ ನಾಡದೊರೆಯ ಅರಮನೆಯಲ್ಲಿ ವಿದೂಷಕನಾಗಿದ್ದ ಮಂಗಾಟಚ್ಚನ್ ಎಂಬುವವರೊಂದಿಗೆ ಆತ್ಮೀಯ ಸ್ನೇಹ ಬಾಂಧವ್ಯ ಹೊಂದಿದ್ದರು. ಮಂಗಾಟಚ್ಚನ್ ಮತ್ತು ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರ ನಡುವಿನ ಗೆಳೆತನದ ಹಾಸ್ಯಮಯ ಪ್ರಸಂಗಗಳು ಬಹಳ ಜನಪ್ರಿಯವಾಗಿದ್ದು ಹಾಸ್ಯದ ಝಲಕ್‌ಗಳಲ್ಲಿ ಮುಸ್ಲಿಯಾರ್ (ಖ:ಸಿ) ರನ್ನು ಹಾಸ್ಯನಟ ಎಂಬಂತೆ ಬಿಂಬಿಸಲಾಗುತ್ತಿದೆ. ಮಹಾನ್ ವಿದ್ವಾಂಸರೂ, ಸೂಫಿವರ್ಯರೂ ಆಗಿದ್ದ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರನ್ನು ಹಾಸ್ಯನಟ ಎಂಬಂತೆ ಬಿಂಬಿಸಲ್ಪಡುತ್ತಿರುವುದು ನಿಜಕ್ಕೂ ಖೇದಕರ ಸಂಗತಿ.

ಪ್ರಸ್ತುತ ಕಾಲಘಟ್ಟದಲ್ಲಿ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ಹಾಸ್ಯಗಾರರೆಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆಯಾದರೂ ಅವರ ಯಾವ ಕೃತಿಯಲ್ಲೂ ಸಹ ಕ್ಷುಲ್ಲಕ ವಿಷಯಗಳ ಪರಾಮರ್ಶೆಗಳಿಲ್ಲ. ಬದಲಾಗಿ ಎಲ್ಲ ಕೃತಿಗಳೂ ಸಹ ಆಳವಾದ ಚಿಂತನೆ ಮತ್ತು ವಿಶ್ಲೇಷಣೆಯಿಂದ ಕೂಡಿರುವಂಥಾಗಿದೆ. ಮಾತ್ರವಲ್ಲ ಅವುಗಳಲ್ಲಿ ಪ್ರಸ್ತಾಪಿರುವ ಒಂದೊಂದು ವಿಷಯಗಳೂ ಸಹ ನಮ್ಮನ್ನು ಚಿಂತನೆಯ ಒರೆಗಲ್ಲಿಗೆ ಹೆಚ್ಚುವಂತಹ ಗಹನವಾದ ವಿಷಯಗಳಾಗಿವೆ. 

ಕವಿಯೂ, ತತ್ವಜ್ಞಾನಿಯೂ, ಸಮಾಜ ಸುಧಾರಕರೂ, ಆಧ್ಯಾತ್ಮಿಕ ಚಿಂತಕರೂ ಆಗಿದ್ದ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರನ್ನು ಇತಿಹಾಸಕಾರರು ತುರ್ಕಿಯ ಹೆಸರಾಂತ ಚಿಂತಕ ನಸ್ರುದ್ದೀನ್ ಹೂಜರೊಂದಿಗೆ ಹೋಲಿಕೆ ಮಾಡಿದ್ದಾರೆ. ಅಂದರೆ ಮುಸ್ಲಿಯಾರ (ಖ:ಸಿ)ರು ಅಷ್ಟರಮಟ್ಟಿಗೆ ವಿಖ್ಯಾತಿ ಪಡೆದ ಮಹಾನರಾಗಿದ್ದರು.

ಹಾಸ್ಯ ಪ್ರಜ್ಞೆಯ ಜೊತೆಗೆ ಧಾರ್ಮಿಕ ರಂಗ ಮತ್ತು ಸಾಮಾಜಿಕ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಲೇ ಮಂಗಾಟಚ್ಚನ್‌ರ ಗೆಳೆತನದ ಮೂಲಕ ಸೌಹಾರ್ದತೆ ಹಾಗೂ ಸಾಮರಸ್ಯತೆಯ ಸಂದೇಶ ಸಾರಿದ ಕುಂಞಾಯಿನ್ ಮುಸ್ಲಿಯಾರ (ಖ:ಸಿ)ರು ಅಲ್ಲಾಹನ ಇಷ್ಟ ದಾಸರಾದ ವಿಲಾಯತ್ತಿನ ಪದವಿ ಪಡೆದು ಹಲವಾರು ಕಶ್ಫ್ ಕರಾಮತ್‌ಗಳನ್ನೂ ಕಾಣಿಸಿದ್ದರು. ಮಹಾನರ ಮರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ತಲಶ್ಶೇರಿಯ ಹಳೆ ಜುಮಾ ಮಸೀದಿಯ ಪ್ರಾಂಗಣದಲ್ಲಿ ಮಹಾನರು ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
🌀🌀🌀🌀🌀🌀🌀