Wednesday, January 25, 2023

ಲಿಂಗ ಬದಲಾವಣೆ

*ಲಿಂಗ ಬದಲಾವಣೆ ಇಸ್ಲಾಮಿನ ದೃಷ್ಠಿಕೋನದಲ್ಲಿ*
_____________________________
📝 ಮುನೀರ್ ಸಖಾಫಿ ಸಾಲೆತ್ತೂರು


ಮನುಷ್ಯ ವರ್ಗವನ್ನು ಅಲ್ಲಾಹನು 2 ವಿಭಾಗವಾಗಿ ಸೃಷ್ಟಿಸಿದ್ದಾನೆ.ಗಂಡು ಮತ್ತು ಹೆಣ್ಣು.
ಈ ಎರಡು ವಿಭಾಗವಲ್ಲದೆ 3 ನೇ ಒಂದು ವಿಭಾಗವನ್ನು ಅಲ್ಲಾಹನು ಸೃಷ್ಟಿಸಿಲ್ಲ.

ಅಲ್ಲಾಹನು ಹೇಳುತ್ತಾನೆ,
ಅವನೇ ಗಂಡು ಮತ್ತು ಹೆಣ್ಣಿನ ಜೋಡಿಯನ್ನು ಸೃಷ್ಟಿ ಮಾಡಿದ್ದಾನೆ.
ಒಂದು ಬಿಂದು ವೀರ್ಯವನ್ನು ಗರ್ಭಾಶಯಕ್ಕೆ ಸುರಿಸಲ್ಪಡುವ ಮೂಲಕ.
(ಸೂರಾ ಆನ್ನಜ್ಮ್ 45,46)

ಈ ಸೂಕ್ತದ ವ್ಯಾಖ್ಯಾನದಲ್ಲಿ ಇಮಾಮ್ ಅಬೂಬಕರ್ ಅಲ್ ಜಸ್ಸಾಸ್ (ರ) ಹೇಳುತ್ತಾರೆ,
ಗಂಡು ಮತ್ತು ಹೆಣ್ಣು ಎಂಬ ಅಲ್ಲಾಹನ ಮಾತಿನಲ್ಲಿ ಎಲ್ಲಾ ಮನುಷ್ಯರನ್ನು ಒಳಪಡಿಸಿದ್ದಾನೆ. ಯಾವುದೇ ಮನುಷ್ಯನು ಗಂಡು ಅಥವಾ ಹೆಣ್ಣು ಆಗಿರುತ್ತದೆ. ಮಂಗಳಮುಖಿ ಎಂಬ  ವಿಭಾಗವು ಅದು ಗಂಡೋ ಅಥವಾ ಹೆಣ್ಣೊ ಎಂಬ ಅಸ್ಪಷ್ಟತೆ ನಮಗಿದ್ದರೂ ಅಲ್ಲಾಹನ ಮೇಲೆ ಯಾವುದೇ ಅಸ್ಪಷ್ಟತೆ ಇಲ್ಲ. ಚಿಕ್ಕಂದಿನಲ್ಲಿ ಮಂಗಳ ಮುಖಿ ಪುರುಷನಾಗಿದ್ದನೆಯೇ ಅಥವಾ ಮಹಿಳೆಯೇ ಎಂದು ಅಸ್ಪಷ್ಟತೆ ಇದ್ದರೂ ಪ್ರಾಯ ಪೂರ್ತಿ ಆಗುವ ವೇಳೆ ಅವರು ಯಾವ ವಿಭಾಗಕ್ಕೆ ಸೇರಿದವರು ಎಂದು ತಿಳಿಯಲು ಮಾನದಂಡಗಳಿವೆ.
(ಅಹ್'ಕಾಮುಲ್ ಖುರ್'ಆನ್ 3/551)

*ಮಂಗಳ ಮುಖಿ*

ಇಮಾಮ್ ನವವಿ (ರ) ಹೇಳುತ್ತಾರೆ.
ಮಂಗಳ ಮುಖಿಯರು 2 ವಿಧದಲ್ಲಿದ್ದಾರೆ.
1. ಪುರುಷರ ಲಿಂಗ ಮತ್ತು ಮಹಿಳೆಯ  ಯೋನಿ ಇರುವವರು.
2. ಲಿಂಗವೂ ಇಲ್ಲ, ಯೋನಿಯೂ ಇಲ್ಲ. ಮೂತ್ರ ಧ್ವಾರದ ಬಳಿಯಿರುವ ಒಂದು ಧ್ವಾರದ ಮೂಲಕ ಮೂತ್ರ ವಿಸರ್ಜನೆ ಮಾಡುವವರು.
ಇದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ. ಹಸುವಲ್ಲೂ ಇದು ಕಂಡು ಬಂದಿದೆ.
ಹಿಜರಿ 674ರ ಅರಫಾ ದಿನದಂದು ವಿಶ್ವಾಸ ಯೋಗ್ಯರಾದ ಕೆಲವು ಮಂದಿ ನನ್ನ ಬಳಿ ಬಂದು ಒಂದು ಪ್ರಶ್ನೆ ಕೇಳಿದರು. ನಮ್ಮ ಬಳಿ ಗಂಡು ಮತ್ತು ಹೆಣ್ಣು ಅಲ್ಲದ ಒಂದು ಹಸು ಇದೆ. ಅದಕ್ಕೆ ಲಿಂಗವೂ ಇಲ್ಲ. ಯೋನಿಯೂ ಇಲ್ಲ. ಅದರ ಮೊಲೆಯ ಬಳಿ 
ಒಂದು ಧ್ವಾರವಿದೆ. ಆ ಮೂಲಕ ಮೂತ್ರ ವಿಸರ್ಜನೆ ಮಾಡುತ್ತದೆ.ಆ ಹಸುವನ್ನು ಖುರ್ಬಾನೀ ನೀಡಬಹುದೇ?
ಅದನ್ನು ಖುರ್ಬಾನಿ ನೀಡಬಹುದೆಂದು ನಾನು ಅವರಿಗೆ ಉತ್ತರಿಸಿದೆ.(ತಹ್'ದೀಬುಲ್ ಅಸ್ಮಾಇ ವಲ್ಲುಗಾತ್ 2/350)

*ಮಂಗಳ ಮುಖಿಯ ವರ್ಗ ತಿಳಿಯುವುದು ಹೇಗೆ?*

ಮಂಗಳ ಮುಖಿಯಾದಲ್ಲಿ ಪುರುಷ ವರ್ಗಕ್ಕೆ ಸೇರಿದವನೋ ಅಲ್ಲವೇ ಎಂದು ತೀರ್ಮಾನಿಸಬಹುದಾದ ಹಲವು ಲಕ್ಷಣಗಳು ಇಮಾಮರು ವಿವರಿಸಿದ್ದಾರೆ.

ಇಮಾಮ್ ನವವೀ (ರ) ಬರೆಯುವುದು ನೋಡಿ,

1. ಮೂತ್ರ ವಿಸರ್ಜನೆ ಮೂಲಕ

ಮಂಗಳ ಮುಖಿಯ ಲಿಂಗದ ಮೂಲಕ ಮೂತ್ರ ಹೊರ ಹೋಗುವುದಾದರೆ ಆತ ಪುರುಷನಾಗಿದ್ದಾನೆ. ಯೋನಿಯ ಮೂಲಕ ಮೂತ್ರ ಹೋಗುವುದಾರೆ ಅವಳು ಮಹಿಳೆಯಾಗಿದ್ದಾಳೆ.
ಎರಡರಲ್ಲೂ ಮೂತ್ರ ಹೋಗುವುದಾದರೆ ಮೊದಲು ಯಾವ ಧ್ವಾರದಲ್ಲಿ ಮೂತ್ರ ಹೋಗಿದೆ ಎಂದು ನೋಡಿ ಅದರಂತೆ ತೀರ್ಮಾನಿಸಬಹುದು. ಎರಡರಲ್ಲೂ ಒಂದೇ ವೇಳೆ ಮೂತ್ರ ಹೋದಲ್ಲಿ ಹೆಚ್ಚು ಮೂತ್ರ ಯಾವ ಧ್ವಾರದಲ್ಲಿ ಹೋಗಿದೆ ಎಂದು ನೋಡಿ ಅದರಂತೆ ತೀರ್ಮಾನಿಸಬಹುದು. ಎರಡಲೂ ಒಂದೇ ಅಳತೆಯಲ್ಲಿ ಮೂತ್ರ ವಿಸರ್ಜನೆ ಆಗಿದ್ದಲ್ಲಿ ಅತೀ ಹೆಚ್ಚು ಶಕ್ತಿಯೊಂದಿಗೆ ಮೂತ್ರ ಯಾವ ಧ್ವಾರದಲ್ಲಿ ಹೊರ ಹೋಗುತ್ತದೆ ಎಂದು ನೋಡಿ ಅದರಂತೆ ತೀರ್ಮಾನಿಸಬಹುದು.

2. ವೀರ್ಯದ ಮೂಲಕ 

ಪುರುಷ ಲಿಂಗದ ಮೂಲಕ  ವೀರ್ಯ ಹೊರ ಬಂದಲ್ಲಿ ಆತ ಪುರುಷನೆಂದೂ ಯೋನಿಯ ಮೂಲಕ ವೀರ್ಯ ಹೊರ ಬಂದಲ್ಲಿ ಮಹಿಳೆಯಾದವಳು ಎಂದೂ 
ರ್ತೀರ್ಮಾನಿಸಬಹುದು.
ಎರಡರಲ್ಲೂ ವೀರ್ಯ ಹೊರ ಬಂದಲ್ಲಿ ಪುರುಷರ ವೀರ್ಯದೊಂದಿಗೆ ಹೋಲಿಕೆ ಇದ್ದಲ್ಲಿ ಪುರುಷನೆಂದೂ ಮಹಿಳೆಯ  ವೀರ್ಯದೊಂದಿಗೆ ಹೋಲಿಕೆ ಇದ್ದಲ್ಲಿ ಮಹಿಳೆಯೆಂದೂ ತೀರ್ಮಾನಿಸಬಹುದಾಗಿದೆ.

3. ಪ್ರಸವದ ಮೂಲಕ

ಮಂಗಳ ಮುಖಿ ಮಗುವನ್ನು ಹೆತ್ತರೆ ಅವಳು ಮಹಿಳೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ.

4. ರಕ್ತ ಸ್ರಾವ ಮೂಲಕ

ಮಹಿಳೆಯ ಯೋನಿ ಮೂಲಕ ಮಂಗಳ ಮುಖಿಗೆ ತಿಂಗಳ ಋತು ಸ್ರಾವವಾದಲ್ಲಿ ಮಹಿಳೆ ಎಂದು ತೀರ್ಮಾನಿಸಬಹುದು.

5. ಗಡ್ಡ ಮತ್ತು ಸ್ತನ ಬೆಳೆಯುವ ಮೂಲಕ

ಪ್ರಬಲ ಅಭಿಪ್ರಾಯ ಪ್ರಕಾರ ಗಡ್ಡ ಅಥವಾ ಸ್ತನ ಬೆಳೆದಲ್ಲಿ ಅದು ವರ್ಗ ನಿರ್ಣಯದ ಲಕ್ಷಣವಲ್ಲದಿದ್ದರೂ ಎರಡನೇ ಅಭಿಪ್ರಾಯ ಪ್ರಕಾರ ವರ್ಗ ನಿರ್ಣಯಿಸಬಹುದಾಗಿದೆ.

6. ಒಲವು

ಮಂಗಳ ಮುಖಿಗೆ ಪುರುಷನೊಂದಿಗೆ ಅತೀ ಒಲವು ಇದ್ದರೆ ಅವಳು ಮಹಿಳೆಯೆಂದೂ ಮಹಿಳೆಯೊಂದಿಗೆ ಅತೀ ಒಲವು ಇದ್ದಲ್ಲಿ ಪುರುಷನೆಂದೂ ನಿರ್ಣಯಿಸಬಹುದಾಗಿದೆ.(ಇದು ಪ್ರಾಯ ಪೂರ್ತಿಯ ಬಳಿಕ ನಿರ್ಣಯ ಮಾಡಬಹುದಾದ ಲಕ್ಷಣವಾಗಿದೆ.)
ರೌಳ 1/78)
ಮಂಗಳ ಮುಖಿಯ ವರ್ಗ ನಿರ್ಣಯ ಹೇಗೆ ಎಂಬುವುದರ ಲಕ್ಷಣಗಳನ್ನಾಗಿದೆ ಇಮಾಮ್ ನವವಿ ವಿವರಿಸಿದ್ದನ್ನು ನಾವು ಓದಿದ್ದು

*ಲಿಂಗ ಬದಲಾವಣೆ*

ಪುರುಷನಾದವನು ತನ್ನ ಲಿಂಗವನ್ನು ಹಾಗೂ ಮಹಿಳೆಯಾದವಳು ಯೋನಿಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಬದಲಾವಣೆ ಮಾಡುವುದಕ್ಕೆ ಲಿಂಗ ಬದವಲಾವಣೆ ಎನ್ನುತ್ತಾರೆ.

ಲಿಂಗ ಬದಲಾವಣೆ ನಿಷಿದ್ಧವಾಗಿದೆ. ಎಂದು ಖುರ್'ಆನ್, ಹದೀಸ್ ಹಾಗೂ ಇಮಾಮರುಗಳ ಮಾತಿನಿಂದ ಸ್ಪಷ್ಟ.

ಅಲ್ಲಾಹನು ಹೇಳುತ್ತಾನೆ,
ಅಲ್ಲಾಹನ ಸೃಷ್ಟಿಗಳಲ್ಲಿ ನೀವು ಬದಲಾವಣೆ ಮಾಡದಿರಿ.(ಸೂರತುರ್ರೂಮ್ 30)
ಪ್ರಸ್ತುತ ಸೂಕ್ತಕ್ಕೆ ಪ್ರಖ್ಯಾತ ವ್ಯಾಖ್ಯಾನಗಾರರಾದ ಇಖ್ರಿಮ (ರ) ಹೇಳಿದ ತಫ್ಸೀರ್ ಈ ರೀತಿ ಓದಬಹುದು.
ವೃಷಣ ಛೇಧಿಸುವುದು, ಕಿವಿ ತುಂಡರಿಸುವುದು ಮುಂತಾದ ಕಾರ್ಯಗಳ ಮೂಲಕ ಸೃಷ್ಟಿಗಳಲ್ಲಿ ನೀವು ಬದಲಾವಣೆ ಮಾಡದಿರಿ. ಅದು ನಿಷಿದ್ಧವಾಗಿದೆ.
(ಮಆಲಿಮುತ್ತಂಝೀಲ್ 2/289)
ಇದೇ ರೀತಿ ಇಮಾಮ್ ತ್ವಬ್'ರೀ ತಫ್ಸೀರ್'ನ 9/216 ರಲ್ಲೂ ಹೇಳಿದ್ದಾರೆ.

ವೃಷಣವು (ಬೀಜ) ಮಾನವ ಸೇರಿದಂತೆ ಎಲ್ಲ ಪ್ರಾಣಿಗಳಲ್ಲಿನ ಗಂಡು ಸಂತಾನೋತ್ಪತ್ತಿ ಗ್ರಂಥಿಯಾಗಿದೆ. ಇದು ಹೆಣ್ಣಿನ ಅಂಡಾಶಯಕ್ಕೆ ಸಮಾನ ರೂಪಿಯಾಗಿದೆ. ವೃಷಣಗಳ ಕ್ರಿಯೆಗಳೆಂದರೆ ವೀರ್ಯಾಣು ಮತ್ತು ಪುಂಜನಕಗಳು (ಟೆಸ್ಟೊಸ್ಟರೋನ್) ಎರಡನ್ನೂ ಉತ್ಪತ್ತಿ ಮಾಡುವುದು.

ವೃಷಣಗಳು ಟ್ಯುನಿಕಾ ಆಲ್ಬುಜಿನಿಯಾ ಎಂದು ಕರೆಯಲ್ಪಡುವ ಗಟ್ಟಿಯಾದ ಪೊರೆಯಂಥ ಕವಚದಿಂದ ಆವೃತವಾಗಿರುತ್ತವೆ. ವೃಷಣಗಳ ಒಳಗೆ ವೀರ್ಯವಾಹಕ ನಳಿಕೆಗಳು ಎಂದು ಕರೆಯಲ್ಪಡುವ ಬಹಳ ನಯವಾದ ಸುರುಳಿ ಸುತ್ತಿಕೊಂಡಿರುವ ನಳಿಕೆಗಳಿವೆ. ಈ ನಳಿಕೆಗಳು ಜೀವಕೋಶಗಳ (ಜಂಪತಿಗಳು) ಪದರವನ್ನು ಹೊಂದಿರುತ್ತವೆ. ಇವು ಪ್ರೌಢಾವಸ್ಥೆಯಿಂದ ವೃದ್ಧಾಪ್ಯದವರೆಗೆ ವೀರ್ಯಾಣು ಕೋಶಗಳಾಗಿ ವಿಕಸನಗೊಳ್ಳುತ್ತವೆ.
ವೃಷಣ ಒಡೆಯುವುದರಿಂದ ಲೈಂಗಿಕ ಆಸಕ್ತಿ ಕುಗ್ಗುವುದರಿಂದ ಅದನ್ನು ನಿಷಿದ್ಧ ಮಾಡಲಾಗಿದೆ.
ಇರುವ ಲೈಂಗಿಕ ಆಸಕ್ತಿಯನ್ನು ಶಾಸ್ವತವಾಗಿ ಕುಗ್ಗಿಸುವುದಕ್ಕೆ ಇಸ್ಲಾಮ್ ಅನುಮತಿ ನೀಡುವುದಿಲ್ಲ.

ಪುರುಷನಾದವನು ಲಿಂಗ ಬದಲಾವಣೆ ವೇಳೆ ವೃಷಣವನ್ನೂ ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಬಿಡುತ್ತಾನೆ.
ಆದುದರಿಂದಲೇ ಅದು ನಿಷಿಧ್ಧವಾಗಿದೆ.
ಇದು ಅಲ್ಲಾಹನ ಸೃಷ್ಟಿಯನ್ನು ಬದಲಾವಣೆ ಮಾಡುವುದಾಗಿದೆ.

*ಹದೀಸ್*

ಅಬೂ ಉಮಾಮ (ರ) ಹೇಳುತ್ತಾರೆ,
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ,
4 ವಿಭಾಗವನ್ನು ಶಪಿಸಲ್ಪಡಲಾಗಿದೆ. ಅದಕ್ಕೆ ಮಲಕುಗಳು ಆಮೀನ್ ಹೇಳಿದರು.
1. ಪುರುಷನಾಗಿ ಮಹಿಳೆಯೊಂದಿಗೆ ಸಾದೃಶ್ಯವಾಗುವವನು.
2. ಮಹಿಳೆಯಾಗಿ ಪುರುಷನೊಂದಿಗೆ ಸಾದೃಶ್ಯವಾಗುವವನು.
3. ಕುರುಡರ ದಾರಿ ತಪ್ಪಿಸುವವನು.
4. ವಿವಾಹವಾಗದೆ ಬ್ರಹ್ಮ ಚರ್ಯೆಯನ್ನು ಇಷ್ಟಪಡುವವರು.
(ಮುಹ್'ಜಮುಲ್ ಕಬೀರ್7827)

ಪುರುಷನು ಮಹಿಳೆಯಂತೆ ಹಾಗೂ ಮಹಿಳೆ ಪುರುಷರಂತೆ ವರ್ತಿಸುವುದನ್ನೇ ನಿಷಿದ್ಧ ಮಾಡಿರುವಾಗ ಲಿಂಗ ಬದಲಾವಣೆ ನಿಷಿಧ್ಧ ಎಂಬುವುದಕ್ಕೆ ಬೇರೆ ಪುರಾವೆ ಬೇಕೇ?

ಸೌಂಧರ್ಯಕ್ಕಾಗಿ ಹಲ್ಲನ್ನು ಬೇರ್ಪಡಿಸುವುದನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಿರೋಧಿಸಿದ್ದಾರೆ ಎನ್ನುವ ಹದೀಸ್ ಇಮಾಮ್ ಬುಖಾರಿ ವರದಿ ಮಾಡಿದ್ದಾರೆ.
(ಓರೆ ಕೋರೆಯಾಗಿರುವ ಹಲ್ಲನ್ನು ತೆಗೆದು ಹಲ್ಲನ್ನು ಸರಿಪಡಿಸುವುದು ಹದೀಸಿನ ವ್ಯಾಪ್ತಿಗೆ ಬರಲಾರದು.)

ಹಲ್ಲುಗಳಲ್ಲಿ ಬದಲಾವಣೆ ಮಾಡಬಾರದು ಎಂದು ಹೇಳುವಾಗ ಲಿಂಗ ಬದಲಾವಣೆ ನಿಷಿದ್ಧವೆಂಬುವುದು ಪ್ರತ್ಯೇಕ ಹೇಳಬೇಕೆ?

ಅಬೂ ಹುರೈರ (ರ) ವರದಿ,
ಪುರುಷರು ಮಹಿಳೆಯ ಉಡುಪನ್ನು ಹಾಗೂ ಮಹಿಳೆಯರು ಪುರುಷರ ಉಡುಪನ್ನು ಧರಿಸುವವರನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಶಪಿಸಿದ್ದಾರೆ.(ಅಬೂ ದಾವೂದ್)
ಇಬ್ನ್ ಅಬ್ಬಾಸ್ (ರ) ವರದಿ,
ಪುರುಷರು ಮಹಿಳೆಯರೊಂದಿಗೆ ಸಾದೃಶ್ಯವಾಗುವುದನ್ನು ಹಾಗೂ ಮಹಿಳೆಯರು ಪುರುಷರೊಂದಿಗೆ ಸಾದೃಶ್ಯವಾಗುವುದನ್ನೂ ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಶಪಿಸಿದರು. ಅವರನ್ನು ನೀವು ಮನೆಯಿಂದ ಹೊರಗಟ್ಟಿರಿ. 
(ಬುಖಾರಿ 5886)

*ಲಿಂಗ ಬದಲಾಯಿಸಿದರೂ ವರ್ಗ ಬದಲಾವಣೆ ಇಲ್ಲ*

ಒಬ್ಬ ಪುರುಷ ತನ್ನ ಲಿಂಗವನ್ನು ಅಥವಾ ಮಹಿಳೆ ತನ್ನ ಯೋನಿಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಬದಲಾಯಿಸಿದರೂ ಆತನ/ಅವಳ ವರ್ಗ ಬದಲಾವಣೆ ಆಗುವುದಿಲ್ಲ.
ಬದಲಾಯಿಸುವ ಮುಂಚೆ ಯಾವ ವರ್ಗಕ್ಕೆ ಸೇರಿದ್ದನೋ/ಸೇರಿದ್ದಳೋ ಅದೇ ವರ್ಗದಲ್ಲಿ ಅವರು ಮುಂದುವರಿಯುವರು. ಕಾರಣ ಶಾರೀರಿಕವಾಗಿ ಅವರಿಗೆ ಬದಲಾವಣೆ ಆಗಿರುವುದಿಲ್ಲ. ಆದುದರಿಂದಲೇ ಆತನ ಶರೀಆತ್ತಿನ ನಿಯಮವನ್ನು ಇಮಾಮರುಗಳು ನೂರಾರು ವರ್ಷಗಳ ಮುಂಚೆಯೇ ವಿವರಿಸಿದ್ದಾರೆ.

ಇಮಾಮ್ ಖತೀಬುಶ್ಶಿರ್ಬೀನಿಯ ಮಾತು ನೋಡಿ,
ಲಿಂಗ ಛೇಧಿಸಲ್ಪಟ್ಟವನಲ್ಲಿ ಯಾವುದೇ ಕಾಮಾಸಕ್ತಿ ಇಲ್ಲದಿದ್ದಲ್ಲಿ ಆತ ಅನ್ಯ ಮಹಿಳೆಯ ಹೊಕ್ಕುಳು ಮತ್ತು ಮಂಡಿಯ ನಡುವೆ ಅಲ್ಲದ ಸ್ಥಳವನ್ನು ನೋಡುವುದು ಅನುವದನೀಯವಾಗಿದೆ.(ಇಖ್'ನಾಹ್ 3/326)
ಕಾಮಾ ಸಕ್ತಿ ಇಲ್ಲದಿರುವುದರಿಂದಲೇ ಮಹಿಳೆಯು ಆತನನ್ನೂ ನೋಡ ಬಹುದಾಗಿದೆ.

ವಿವಾಹವಾದ ಪುರುಷ ತನ್ನ ಲಿಂಗ ಬದಲಾಯಿಸಿದ್ದಲ್ಲಿ/ವೃಷಣ ಛೇಧಿಸಿದ್ದಲ್ಲಿ ಆತ ಲೈಂಗಿಕಾಸಕ್ತಿ ಇಲ್ಲದವನು ಎಂಬ ನೆಲೆಯಲ್ಲಿ ಆತನ ಪತ್ನಿಗೆ ಆತನನ್ನು ಫಸ್ಖ್  ಮಾಡುಲು ಅವಕಾಶವಿದೆಯೆಂದು ಇಮಾಮ್ ಇಬ್ನ್ ಹಜರ್ (ರ) ತನ್ನ ತುಹ್ಫತುಲ್ ಮುಹ್ತಾಜ್ ನ 7/346ರಲ್ಲಿ ವಿವರಿಸಿದ್ದಾರೆ.

*ಬದಲಾವಣೆಗೊಂಡವರ ವಾದ*

ಲಿಂಗ ಬದಲಾಯಿಸಿದವರು ಹೇಳುವ ಒಂದು ವಾದವಾಗಿದೆ "ನಾವು ಪುರುಷರಾಗಿದ್ದರೂ ಮಹಿಳೆಯ ಎಲ್ಲಾ ಗುಣಗಳು ನಮ್ಮಲ್ಲಿದ್ದವು. ಆದುದರಿಂದಲೇ ಪುರುಷರ ಮಧ್ಯೆ ಬೆರೆಯುವಿಕೆ ನಮಗೆ ಸಂಕೋಚವಾಗುತ್ತಿತ್ತು. ಆದುದರಿಂದ ನಾವು ಲಿಂಗ ಬದಲಾಯಿಸಿದ್ದೇವೆ"

ಈ ಒಂದು ಮನಸ್ಥಿತಿಗೆ ಚಿಕಿತ್ಸೆ ಮಾಡಬೇಕೆ ಹೊರತು ಲಿಂಗ ಬದಲಾಯಿಸುವಿಕೆ ಇದಕ್ಕೆ ಪರಿಹಾರವಲ್ಲ.
ಒಬ್ಬನಿಗೆ ನಾಯಿಯಂತೆ ಭಾಸವಾದರೆ ಆತ ಮಲ ತಿನ್ನಲು ತಯಾರಾಗುವನೇ?
ಹಸುವಿನಂತೆ ಭಾಸವಾದರೆ ಹುಲ್ಲು ತಿನ್ನುವನೇ?
ಆ ರೀತಿಯ ಮನಸ್ಥಿತಿಯ ಬದಲಾಯಿಸುವಿಕೆಗೆ ತಜ್ಞ ವೈಧ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಮಾಡಬೇಕು.

*ಮಂಗಳ ಮುಖಿಯರ ಸ್ಥಾನ ಇಸ್ಲಾಮಿನಲ್ಲಿ*

ಮಂಗಳ ಮುಖಿಯರು ಮನುಷ್ಯರು ತಾನೇ?ಆದುದರಿಂದ ಅವರಿಗೆ ಎಲ್ಲರಂತೆಯೇ ಸಮೂಹದ ನಡುವೆ ಸ್ಥಾನವಿದೆ. ಅವರನ್ನು ಹಿಯಾಳಿಸುವುದು ಸಲ್ಲದು.
ಕೆಲವೊಂದು ವಿಷಯದಲ್ಲಿ ಅವರಿಗೆ ಪುರುಷರಿಗೆ ಮತ್ತು ಮಹಿಳೆಯರಿಗಿಲ್ಲದ ನಿಯಮ ಇಸ್ಲಾಮ್ ಕಲ್ಪಿಸಿದೆ ಅಷ್ಟೇ.
(ಮಂಗಳ ಮುಖಿ ಎನ್ನುವುದು ಲಿಂಗ ಬದಲಾಯಿಸಿದವರ ಕುರಿತು ಹೇಳುವುದಲ್ಲ ಎಂದು ಮೇಲೆ ಹೇಳಿದ ವಿವರಣೆಯಿಂದ ತಿಳಿದು ಕೊಳ್ಳಬಹುದು)

ಒಟ್ಟಿನಲ್ಲಿ ಅಲ್ಲಾಹನು ಪುರುಷನಾಗಿ ಅಥವಾ ಮಹಿಳೆಯಾಗಿ ಸೃಷ್ಟಿಸಿರುವಾಗ ಅದನ್ನು ಬದಲಾಯಿಸುವುದು ತಪ್ಪಾಗಿದೆ. ಜನರು ತಮ್ಮ  ಇಛ್ಛೆಯಂತೆ ಲಿಂಗ ಬದಲಾಯಿಸಲು ಹೊರಟರೆ ಈ ಪ್ರಪಂಚದ ನೆಲೆ ನಿಲ್ಲುವಿಕೆಯನ್ನೇ ಅದು ಬುಡಮೇಲು ಮಾಡೀತು. ಅದು ಪಿಶಾಚಿಯ ಕೃತ್ಯವೆಂದು ಖುರ್'ಆನ್ ಪ್ರತಿಪಾದಿಸಿದೆ. ಅವರಿಗೆ ಶಾಪವಿದೆಯೆಂದು ಈಗಾಗಲೇ ಹಲವಾರು ಹದೀಸಿನಲ್ಲಿ ನೀವು ಓದಿದ್ದೀರಿ.

No comments:

Post a Comment