#ಝಿಯಾರತ್ತ್_ಕೇಂದ್ರ
==================
👉👉 9️⃣4️⃣ 👈👈
➖➖➖➖➖➖➖
*ಕಣ್ಣವಂ ವೆಳುಂಬತ್ತ್ ಮಖಾಂ ಶರೀಫ್*
ಕಣ್ಣವಂ, ತಲಶ್ಶೇರಿ, ಕಣ್ಣೂರು.
〰️〰️〰️〰️〰️〰️〰️
✍️ ಗಫೂರ್ ಬಾಯಾರ್
🔹🔹🔹🔹🔹🔹🔹
ಕೇರಳ ಸಿಂಹಮ್ (ಕೇರಳದ ಸಿಂಹ) ಎಂದೇ ಅರಿಯಲ್ಪಡುತ್ತಿದ್ದ ಕೇರಳ ವರ್ಮ ಪಝಾಶಿ ರಾಜನ ಕಾಲದಿಂದಲೂ ಜನಾಕರ್ಷಣೆಯ ಕೇಂದ್ರವಾಗಿದೆ ತಲಶೇರಿ ಮಾನಂದವಾಡಿ ನಡುವಿನ ಕಣ್ಣವಮ್ ಕಾಡು.
ಈ ಕಾಡಿನ ನಡುವೆ ಕಣ್ಣವಂ ಎಂಬ ನದಿ ಹರಿಯುತ್ತಿದ್ದು 1815 ರಲ್ಲಿ ಇದಕ್ಕೆ ಸೇತುವೆ ನಿರ್ಮಿಸುವ ಮೂಲಕ ತಲಶೇರಿಯಿಂದ ಮಾನಂದವಾಡಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿತ್ತು.
ಈ ಕಾಡಿನ ನಡುವಿನ ವೆಳುಂಬತ್ ಎಂಬಲ್ಲಿ ಸುಂದರವಾದ ಗ್ರಾಮವಿದ್ದು ಆ ಗ್ರಾಮದ ನಡುವೆ ಒಂದು ಮಸೀದಿಯೂ ಇತ್ತು.
ಕಾಲಕ್ರಮೇಣ ಕಾಡು ಪ್ರಾಣಿಗಳ ಉಪಟಳದ ಜೊತೆಗೆ ರಸ್ತೆ ಸಂಪರ್ಕವೂ ಸಂಪೂರ್ಣ ಹದಗೆಟ್ಟಿದ್ದರಿಂದ ವೆಳುಂಬತ್‌ನಲ್ಲಿ ವಾಸಿಸುತ್ತಿದ್ದವರೆಲ್ಲರೂ ಅಲ್ಲಿಂದ ಸುತ್ತಮುತ್ತಲಿನ ಪ್ರದೇಶಕ್ಕೆ ವಲಸೆ ಹೋಗಿದ್ದರಿಂದ ಕಣ್ಣವಂನಲ್ಲಿ ಜನ ವಾಸ ಇಲ್ಲವಾದ ಕಾರಣ ಅಲ್ಲಿನ ಮಸೀದಿ ಪಾಳುಬಿತ್ತು.
ಕಾಲಕ್ರಮೇಣ ಅಲ್ಲೊಂದು ಗ್ರಾಮ ಮತ್ತು ಮಸೀದಿ ಇತ್ತೆಂಬ ಸಂಗತಿಯೇ ಯಾರಿಗೂ ಗೊತ್ತಿರಲಿಲ್ಲ.
ಆದರೆ 1962ರ ಜುಲೈ 26ರಂದು ರಾತ್ರಿ ಅಲ್ಲಿ ನಡೆದ ಕರಾಮತ್‌ನಿಂದಾಗಿ ಕಣ್ಣವಮ್ ಮಸೀದಿಯ ಮಹತ್ವವು ಹೊರ ಜಗತ್ತಿಗೆ ತಿಳಿಯುವಂತಾಯಿತು.
ಆ ಕರಾಮತ್ ಏನೆಂದರೆ ಆ ತನಕ ಎಂದಿನಂತಿದ್ದ ಕಣ್ಣವಂ ಕಾಡಿನ ನಡುವಿನ ಪ್ರದೇಶವೊಂದು ಸುತ್ತಮುತ್ತಲ ಮರ ಮತ್ತು ಕಲ್ಲುಗಳ ಸಹಿತ ಹೊಳೆಯಲಾರಂಭಿಸಿತ್ತು.
ಈ ಅದ್ಭುತವನ್ನು ಕಂಡು ಆಶ್ಚರ್ಯ ಚಕಿತರಾದ ಜನ ಸಮೀಪಕ್ಕೆ ಹೋಗಿ ನೋಡಿದಾಗ ಅಲ್ಲೊಂದು ಖಬರ್‌ಸ್ಥಾನದ ಕುರುಹುಗಳಿತ್ತು. ಈ ಸುದ್ದಿ ಕಾಡ್ಗಿಚ್ಚಿನಂತೆ ಊರಿಡೀ ಹಬ್ಬಿದ್ದರಿಂದ ಸುದ್ದಿ ತಿಳಿದ ಜನರು ತಂಡೋಪತಂಡವಾಗಿ ಅಲ್ಲಿಗೆ ಬರಲಾರಂಭಿಸಿದರು. ಆದರೆ ಈ ಕರಾಮತ್ತಿನ ಕಾರಣವೇನೆಂದು ಯಾರಿಗೂ ಸ್ಪಷ್ಟವಾಗಿ ತಿಳಿಯದ ಕಾರಣ ಕೊನೆಗೆ ಕೆಲವರು ಪಾಲತ್ತುಂಕರ ಎಂಬಲ್ಲಿ ವಾಸಿಸುತ್ತಿದ್ದ ಸೂಫಿವರ್ಯರೊಬ್ಬರ ಬಳಿ ತೆರಳಿ ಘಟನೆಯನ್ನು ಅವರಿಗೆ ವಿವರಿಸಿದರು.
ವಿಷಯ ತಿಳಿದ ಆ ಮಹಾನರು, ಹೆಚ್ಚು ಪ್ರಕಾಶ ಬೀರುವ ಸ್ಥಳಕ್ಕೆ (ಮಖಾಂ ಇರುವ ಸ್ಥಳ) ಬೇಲಿ ಹಾಕಿ ಪ್ರತ್ಯೇಕಿಸಬೇಕೆಂದೂ ಅದರೊಳಗೆ ಯಾರೂ ಪ್ರವೇಶಿಸಬಾರದೆಂದೂ ಸೂಚಿಸಿದರು. ಜನರು ಅಂತೆಯೇ ಮಾಡಿದರು. ಆಮೇಲೆ ವೆಳುಂಬತ್ತ್ ಮಖಾಮ್ ಪ್ರಸಿದ್ಧವಾಯಿತು.
ಮಡವೂರು ಸಿಎಂ ವಲಿಯುಲ್ಲಾಹಿ ಖ:ಸಿರವರು ಕಣ್ಣೂರಿಗೆ ಆಗಮಿಸಿದಾಗಲೆಲ್ಲ ವೆಳುಂಬತ್ತ್ ಮಖಾಮಿಗೆ ತೆರಳಿ ಝಿಯಾರತ್ ಮಾಡುತ್ತಿದ್ದರಲ್ಲದೆ ಅಜ್ಮೀರಿನಂತೆ ಈ ಮಖಾಂ ಸಹ ಹೆಸರುವಾಸಿಯಾಗಲಿದೆ ಎಂದಿದ್ದರು.
ಈ ಮಖಾಮಿನಲ್ಲಿ ಝಿಯಾರತ್ ಮಾಡಿದರೆ ಸಂತಾನ ಸೌಭಾಗ್ಯ ಲಭಿಸುತ್ತದೆ ಎನ್ನುವುದು ಅನುಭವಿಗಳ ಉವಾಚ.
ಪ್ರತೀವರ್ಷ ರಬೀವುಲ್ ಅವ್ವಲ್ ಇಪ್ಪತ್ತಾರರ ಆಸುಪಾಸಿನಲ್ಲಿ ಇಲ್ಲಿ ಉರೂಸ್ ಜರುಗುತ್ತದೆ.
No comments:
Post a Comment