Monday, March 16, 2020

ಆಧುನಿಕ ಕಾಲಘಟ್ಟದ ಆಧ್ಯಾತ್ಮಿಕ ಪ್ರತಿಭೆ ತಾಜುಲ್ ಉಲಮಾ (ಖ:ಸಿ) ಉಳ್ಳಾಲ್ಲ

_*ಆಧುನಿಕ ಕಾಲಘಟ್ಟದ ಆಧ್ಯಾತ್ಮಿಕ ಪ್ರತಿಭೆ ತಾಜುಲ್ ಉಲಮಾ ಉಳ್ಳಾಲ ತಂಙಳ್ (ಖ:ಸಿ)*_
🔰🔰🔰🔰🔰🔰🔰

✍  ಗಫೂರ್ ಬಾಯಾರ್.
***********************

ಸೃಷ್ಟಿಕರ್ತನಾದ ಅಲ್ಲಾಹನನ್ನು ಆರಾಧಿಸುತ್ತಾ ಅವನ ಹಬೀಬ್ ﷺِ ರನ್ನು ಪ್ರೀತಿಸುವ ಸಲುವಾಗಿ ಅಲ್ಲಾಹನು ಮಾನವ ಕುಲವನ್ನು ಸೃಷ್ಟಿಸಿದನೆಂಬುದು ನಮ್ಮೆಲ್ಲರಿಗೂ ತಿಳಿದ ಸಂಗತಿ.

ಆದರೆ ದುನಿಯಾದ ಮೋಹಕ್ಕೆ ಬಿದ್ದು ಸೃಷ್ಟಿಕರ್ತನಾದ ಅಲ್ಲಾಹನು ನೀಡಿರುವ ದೌತ್ಯವನ್ನು ಮರೆತು ಮನಬಂದಂತೆ ಬದುಕುತ್ತಾ ದುರ್ಮಾರ್ಗದ ಹಾದಿ ಹಿಡಿದಾಗ ಆ ಜನತೆಗೆ ತಿಳಿಹೇಳಿ ತಿದ್ದಿ ಸನ್ಮಾರ್ಗದ ಹಾದಿಗೆ ತರುವ ಸಲುವಾಗಿ ಸೃಷ್ಟಿಕರ್ತನಾದ ಅಲ್ಲಾಹನು ಆಯಾ ಕಾಲಘಟ್ಟದಲ್ಲಿ ಆಯಾ ಪ್ರದೇಶಗಳಿಗೆ ತನ್ನ ಸಂದೇಶವಾಹಕರಾದ ಅಂಬಿಯಾಗಳೆಂಬ ಪ್ರವಾದಿಗಳನ್ನು ಕಳುಹಿಸಿ ಜನತೆಯನ್ನು ಸನ್ಮಾರ್ಗದ ಹಾದಿಗೆ ತರುವ ದೌತ್ಯವನ್ನು ನೀಡಿದ್ದನು.

ಪ್ರವಾದಿ ಮುಹಮ್ಮದ್ ನಬಿ ﷺِರವರ ಆಗಮನದೊಂದಿಗೆ ಅಂಬಿಯಾ ಶೃಂಖಲೆಯು ಕೊನೆಗೊಂಡಿತಾದ್ದರಿಂದ ಅನಂತರ ಜನತೆಗೆ ತಿಳಿಹೇಳಿ ತಿದ್ದಿ ಸನ್ಮಾರ್ಗದ ಹಾದಿ ತೋರುವ ದೌತ್ಯವನ್ನು ಉಲಮಾಗಳೆಂಬ ಧಾರ್ಮಿಕ ವಿದ್ವಾಂಸರಿಗೆ ಸೃಷ್ಟಿಕರ್ತನಾದ ಅಲ್ಲಾಹನು ವಹಿಸಿದ್ದಾನೆ.

ಅಂತೆಯೇ ವರ್ತಮಾನ ಕಾಲದಲ್ಲಿ ದೀನೀ ದ‌ಅ್‌ವಾದ ಮೂಲಕ ಧಾರ್ಮಿಕ ತಿಳುವಳಿಕೆಯಿಲ್ಲದ ಸಾಮಾನ್ಯ ಜನತೆಗೆ ಇಸ್ಲಾಮಿನ ಆಧ್ಯಾತ್ಮಿಕ ಸ್ವರೂಪದ ಕುರಿತು ವಿವರಿಸುತ್ತಾ ಮುಸ್ಲಿಂ ಸಮುದಾಯಕ್ಕೆ ದಿಟ್ಟ ನಾಯಕತ್ವ ನೀಡಿದ ಅನೇಕ ಮಹಾತ್ಮರು ಈ ಮಣ್ಣಿನಲ್ಲಿ ಹಾದು ಹೋಗಿದ್ದಾರೆ.

ಅಂತಹ ಮಹಾತ್ಮರುಗಳ ಪೈಕಿ ಕೇರಳದಲ್ಲಿ ಜನಿಸಿ ದಕ್ಷಿಣ ಭಾರತದ ಅಜ್ಮೀರ್ ಎಂದೇ ಅರಿಯಲ್ಪಡುವ ಉಳ್ಳಾಲದಲ್ಲಿ ನೆಲೆಸಿ ಅಲ್ಲಾಹನ ದೀನಿನ ಸೇವೆಗೆ ಅಸಂಖ್ಯ ಧಾರ್ಮಿಕ ವಿದ್ವಾಂಸರನ್ನು ರೂಪಿಸಿ ಸಮರ್ಪಿಸಿದ ಮಹಾತ್ಮರಲ್ಲೊಬ್ಬರಾಗಿದ್ದಾರೆ ಶೈಖುನಾ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಕುಂಞಿಕೋಯ ತಂಞಳ್ (ಖ.ಸಿ) ಉಳ್ಳಾಲ.

ಆಹ್ಲ್‌ಬೈತ್ ಕುಟುಂಬದ ಕಣ್ಮಣಿಯಾದ ತಾಜುಲ್ ಉಲಮಾ (ಖ:ಸಿ), ಸಯ್ಯಿದ್ ಅಬೂಬಕರ್ ಚೆರುಕುಂಞಿಕೋಯ ತಂಙಳ್ ಅಲ್ ಬುಖಾರಿ (ರ) ಮತ್ತು ವಾಯಕಾಡ್ ಹಲೀಮಾ ಕುಂಞಿ ಬೀವಿ (ರ) ದಂಪತಿಯ ಪುತ್ರನಾಗಿ ಹಿಜರಿ 1341 ರಬಿವುಲ್ ಅವ್ವಲ್ 25ರ ಶುಕ್ರವಾರದಂದು ಕಲ್ಲಿಕೋಟೆಯ ಕರುವಂತಿರುತ್ತಿ ಎಂಬಲ್ಲಿ ಜನಿಸಿದ ಮಹಾನರು ಕೇರಳದ ಹಲವೆಡೆ ಹೆಸರಾಂತ ವಿದ್ವಾಂಸರ ಶಿಷ್ಯರಾಗಿ ಜ್ಞಾನಾರ್ಜನೆ ಮಾಡಿದರು.

ಹಿಜರಿ 1371 ರಲ್ಲಿ ತಮ್ಮ ಗುರುವರ್ಯರೂ ಅಂದಿನ ಕಾಸರಗೋಡು ಖಾಝಿಯೂ ಆಗಿದ್ದ  ಅವರಾನ್ ಉಸ್ತಾದ್ (ಖ.ಸಿ)ರವರ ನಿರ್ದೇಶನದ ಮೇರೆಗೆ ಉಳ್ಳಾಲಕ್ಕೆ ತೆರಳಿ ದರ್ಸ್ ನಡೆಸಲು ಆರಂಭಿಸಿದರು.

ವಿದ್ವತ್ಪೂರ್ಣ ವಿದ್ವಾಂಸರಾಗಿದ್ದ ತಾಜುಲ್ ಉಲಮಾ (ಖ.ಸಿ) ರವರು ಆಗಮನದೊಂದಿಗೆ ಕರ್ನಾಟಕದ ಮುಸ್ಲಿಂ ಸಮುದಾಯ ಎದುರಿಸುತ್ತಿದ್ದ ಧಾರ್ಮಿಕ ನಾಯಕತ್ವದ ಕೊರತೆಯೂ ನೀಗಿತು. 

ಹಾಗೆ ಉಳ್ಳಾಲದಲ್ಲಿ ದರ್ಸ್ ಆರಂಭಿಸಿದ ಮಹಾನರ ನಿಸ್ವಾರ್ಥ ಸೇವೆ ಮತ್ತು ಕಠಿಣ ಪರಿಶ್ರಮದಿಂದಾಗಿ ಅಂದಿನ ದರ್ಸ್ ಇಂದು ಉಳ್ಳಾಲ ಸಯ್ಯದ್ ಮದನಿ ಅರಬಿಕ್ ಕಾಲೇಜಾಗಿ ವಿಶ್ವವಿಖ್ಯಾತವಾಗಿದೆ.

ಸುನ್ನತ್ ಜಮಾಅತಿನ ನೇತಾರರಾಗಿ ವಿವಿಧ ಸ್ಥಾನಗಳನ್ನು ಅಲಂಕರಿಸಿ ಸಮರ್ಥವಾಗಿ ನಿರ್ವಹಿಸುವುದರ ಮೂಲಕ ಸುನ್ನತ್ ಜಮಾಅತಿಗೆ ದಿಟ್ಟ ನಾಯಕತ್ವ ನೀಡಿದ್ದರು.

ಸುಮಾರು 95 ವರ್ಷಗಳ ಕಾಲ ಜೀವಿಸಿದ ಸಯ್ಯಿದರು, ಅತೀವ ಉತ್ಸಾಹ ಮತ್ತು ಹುರುಪಿನಿಂದ ಇಬಾದತ್ ನಡೆಸುತ್ತಿದ್ದರಲ್ಲದೆ, ಇಳಿವಯಸ್ಸಿನಲ್ಲೂ ಸಹ ವಿತ್ರ್ ನಮಾಜನ್ನು ನಿಂತುಕೊಂಡೇ ಅದೂ ಹನ್ನೊಂದು ರಖಾಅತ್ ನಿರ್ವಹಿಸುತ್ತಿದ್ದರು.

ಕೇರಳದಲ್ಲಿ ಜನಿಸಿ ಕರ್ನಾಟಕದ ಮುಸ್ಲಿಂ ಉಮ್ಮತ್ತಿನ‌ ಹೃದಯವನ್ನು ಆಧ್ಯಾತ್ಮಿಕ ಪ್ರಭೆಯಿಂದ ಬೆಳಗಿಸುವುದರ ಮೂಲಕ ಸಮುದಾಯವನ್ನು ಸನ್ಮಾರ್ಗದ ಹಾದಿಯಲ್ಲಿ ಮುನ್ನಡೆಸುವಲ್ಲಿ ಮಹತ್ವದ ಪಾತ್ರವಹಿಸಿದ ಸಯ್ಯಿದರು, 2014 ಫೆಬ್ರವರಿ ಒಂದು ಶನಿವಾರ (ಹಿಜರಿ 1435 ರಬೀವುಲ್ ಆಖಿರ್ 1)ರಂದು ಕೇರಳದ ಪಯ್ಯನ್ನೂರಿನ ಎಟ್ಟಿಕುಳಂನ ತಮ್ಮ ಸ್ವಗೃಹದಿಂದ ಪಾರತ್ರಿಕ ಲೋಕಕ್ಕೆ ಯಾತ್ರೆ ತೆರಳಿದ ಸಯ್ಯಿದರನ್ನು ಎಟ್ಟಿಕುಳಂನ ತಖ್ವಾ ಮಸೀದಿಯಲ್ಲಿ ದಫನ ಮಾಡಲಾಯಿತು.

*ಆಧುನಿಕ ಕಾಲಘಟ್ಟದಲ್ಲಿ ದೀನೀ ದ‌ಅ್‌ವಾ ನಡೆಸುತ್ತಾ ಜನಸಾಮಾನ್ಯರಲ್ಲಿ ಆಧ್ಯಾತ್ಮಿಕವಾದ ಅರಿವು ಮೂಡಿಸುವುದರ ಮೂಲಕ ಅಹ್ಲ್  ಸುನ್ನತ್ ವಲ್ ಜಮಾಅತಿಗೆ ಅಸಾಮಾನ್ಯ ಕೊಡುಗೆ ನೀಡಿದ ಮಹಾನರ ಮಖ್ಬರದಲ್ಲಿ ಆರನೇ ಉರೂಸ್ ಸಮಾರಂಭವು ನವೆಂಬರ್ 29 ರಿಂದ ಡಿಸೆಂಬರ್ 1ರ ತನಕ ನಡೆಯಲಿದೆ.*

ಸೃಷ್ಟಿಕರ್ತನಾದ ಅಲ್ಲಾಹನ ದೀನಿನ ಸೇವೆ ಮಾಡುತ್ತಲೇ ಇಹಲೋಕಕ್ಕೆ ವಿದಾಯ ಹೇಳಿದ ಆ ಸಯ್ಯಿದರ ಬರ್ಕತ್‌ನಿಂದ ಕರುಣಾನಿಧಿಯಾದ ಅಲ್ಲಾಹನು ನಮ್ಮೆಲ್ಲರನ್ನು ಇಹಪರ ವಿಜಯಿಗಳ ಸಾಲಿನಲ್ಲಿ ಸೇರಿಸಲು ಆಮೀನ್.
🍃🍃🍃🍃🍃🍃🍃🍃

No comments:

Post a Comment