Sunday, January 28, 2018

*ನಾಗ ದೋಷ?*

ಭಾಗ--- 3

📝 *_ಟಿ.ಎಂ.ಮುಹ್ಯುದ್ದೀನ್ ಕಾಮಿಲ್ ಸಖಾಫಿ ,ತೋಕೆ_*

ಹಾವಿನ ಮೇಲ್ದವಡೆಯ ಮೂಳೆಗಳು ಕೆಳದವಡೆಯ ಮೂಳೆಗಳೊಂದಿಗೆ ಸ್ವತಂತ್ರವಾಗಿ ಚಲಿಸುವಂತೆ ಕೂಡಿಕೊಂಡಿರುತ್ತದೆ.ಇದರೊಂದಿಗೆ ದವಡೆಯ ಮಾಂಸ ಖಂಡಗಳು ಸಂಪೂರ್ಣವಾಗಿ ಹಿಗ್ಗಿ ಮತ್ತು ಕುಗ್ಗಬಲ್ಲವಾದ್ದರಿಂದ ಹಾವುಗಳು ಅಗಲವಾಗಿ  ಬಾಯಿ ತೆರೆಯಬಲ್ಲವು.ದವಡೆಗಳು  ಸಂಪೂರ್ಣ ತೆರೆದಾಗ ಅವುಗಳ  ನಡುವೆ ನೂರ ಐವತ್ತರಿಂದ ನೂರ ಎಂಬತ್ತು ಡಿಗ್ರಿ ಕೋನ ಏರ್ಪಡುತ್ತದೆ.ಹೀಗಾಗಿ ತನ್ನ ಶರೀರದ ವ್ಯಾಸಕ್ಕಿಂತ ಹೆಚ್ಚು ಗಾತ್ರವುಳ್ಳ ಆಗಾರವನ್ನು ನುಂಗಬಲ್ಲದು.

ಹಾವಿನ ನಾಲಗೆ ಉದ್ದವಿದ್ದು ಮುಂಭಾಗದಲ್ಲಿ ಎರಡು ಸೀಳಾಗಿರುತ್ತದೆ.ಮೇಲ್ದುಟಿ ಪುಟ್ಟ ಕಮಾನಿನಾಕಾರದಲ್ಲಿದ್ದು ಬಾಯಿ ಮುಚ್ಚಿಕೊಂಡಾಗ ಚಿಕ್ಕ ರಂಧ್ರವೇರ್ಪೆಡುತ್ತದೆ.ಈ ರಂಧ್ರದ ಮೂಲಕ ಹಾವು ಆಗಾಗ ನಾಲಗೆಯನ್ನು ಹೊರಚಾಚುತ್ತಿರುತ್ತದೆ.ಎರಡು ಸೀಳುಗಳು ಪ್ರತ್ಯೇಕವಾಗಿರುವಂತೆ ಕಾಣುವುದರಿಂದ ಹಾವಿಗೆ ಎರಡು ನಾಲಗೆಗಳಿವೆ ಎಂದು ಭಾವಿಸಲಾಗುತ್ತಿದೆ.ಬಾಯಿಯ ಒಳಭಾಗದಲ್ಲಿರುವ ನಾಲಗೆಯ ಸುತ್ತ ಚರ್ಮದ ಹೊದಿಕೆಯುಂಟು.ಮೇಲ್ದವಡೆಯಲ್ಲಿ ಎರಡು ಪುಟ್ಟ ಕುಳಿಗಳಿವೆ.ಜಾಕೊಬ್ಸನ್ ಅಂಗ ಎಂದು ಅದರ ಹೆಸರು.ನಾಲಗೆಯು ಈ ಅಂಗಕ್ಕೆ ಪುಟ್ಟ ಕಣಗಳನ್ನು ತಲುಪಿಸುತ್ತದೆ.ಆಗ ಇದು ವಾಸನೆಯನ್ನು ಗ್ರಹಿಸುತ್ತದೆ.ಹೀಗೆ ಹಾವಿನ ನಾಲಗೆ ವಾಸನೆಯನ್ನು ಗ್ರಹಿಸುವುದರ ಮೂಲಕ ಜ್ಞಾನೇಂದ್ರಿಯದಂತೆ  ಕೆಲಸ ನಿರ್ವಹಿಸುತ್ತದೆ.ವಾತಾವರಣದ ಏರಿಳಿತವನ್ನು ಕೂಡಾ ನಾಲಗೆ ಗ್ರಹಿಸಬಲ್ಲದು.

ಬಾಯಿಯ ಹೊರತಾಗಿ  ಹಾವಿನ ಶರೀರದ ಮೇಲಿರುವ ರಂಧ್ರಗಳೆಂದರೆ ಬಾಯಿಯ  ಮೇಲ್ಭಾಗದಲ್ಲಿರುವ ಒಂದು ಜೊತೆ ಹೊಳ್ಳೆ  (ನಾಸ್ಟ್ರಿಲ್)ಮತ್ತು ಒಡಲಿನ ಕೆಲಭಾಗದಲ್ಲಿ ಬಾಲ ಭಾಗದ ಮುಂದಕ್ಕೆ ಅಡ್ಡವಾಗಿರುವ ಗುದದ್ವಾರ.ಶ್ವಾಸೋಚ್ಛಾಸ ಹೊಳ್ಳೆಯ  ಮೂಲಕ ನಡೆಯುತ್ತದೆ.ಅನ್ನನಾಳ,ವಿಸರ್ಜನಾಳ  ಲಿಂಗನಾಳಗಳೆಲ್ಲವೂ ದೊಡ್ಡ  ಕರುಳಿನ ಹಿಂಭಾಗದಲ್ಲಿ ಅಂದರೆ ಗುದದ್ವಾರದ ಜೊತೆಯಲ್ಲಿ ಹೊರಕ್ಕೆ ತೆರೆದಿರುತ್ತದೆ.

ಹಾವಿಗೆ ಸುಮಾರು ಮುನ್ನೂರು ಬೆನ್ನುಮೂಳೆಗಳಿವೆ.ಇವುಗಳ ರಚನೆ ಆಧರಿಸಿ ಕುತ್ತಿಗೆ ,ಶರೀರ ಹಾಗೂ ಬಾಲದ ಭಾಗದ ಮೂಳೆಗಳೆಂದು ಗುರುತಿಸಲಾಗುತ್ತದೆ.ಶರೀರದ ಕೆಳಭಾಗದಲ್ಲಿರುವ ಅಗಲ ಹೊರಪುಗಳನ್ನು (ತಟ್ಟೆ)ಎಣಿಸಿ ಬೆನ್ನೆಲುಬಿನ ಮೂಳೆಗಳ ಸಂಖ್ಯೆಯನ್ನು ಅಂದಾಜು ಮಾಡಬಹುದು.ಏಕೆಂದರೆ ಹೊರಗಿನ ಒಂದು ತಟ್ಟೆಗೆ ಸಮವಾಗಿ ಬೆನ್ನೆಲುಬಿನಲ್ಲಿ ಒಂದು ಎಲುಬು ಇರುವುದು.ಈ ಎಲುಬುಗಳು ಒಂದಕ್ಕೊಂದು ನಯವಾಗಿ ಕೂಡಿಕೊಂಡಿರುವುದರಿಂದ ಹಾವು ಚಲಿಸುವಾಗ ಬೆನ್ನೆಲುಬು ಸುಲಭವಾಗಿ  ಬಾಗಬಲ್ಲದು.ಬೆನ್ನೆಲುಬಿನ ಮೂಳೆಯ  ಎರಡೂ ಪಕ್ಕಗಳಲ್ಲಿ ಪಕ್ಕೆಲುಬುಗಳಿವೆ.ಆದರೆ ಮಾನವನನ್ನೊಳಗೊಂಡಂತೆ ಸಸ್ತನಿಗಳಲ್ಲಿ ಕಂಡು ಬರುವ ಎದೆಮೂಳೆ (ಸ್ಪರ್ನಮ್)ಇರುವುದಿಲ್ಲ.ಇಲಾಪಡೇ ಎಂಬ ಕುಟುಂಬಕ್ಕೆ ಸೇರುವ ನಾಗರಹಾವು ,ಕಾಳಿಂಗ ಸರ್ಪ ಹಾಗೂ ಹವಳ ಸರ್ಪ ಮುಂತಾದವು ತಲೆಭಾಗದ ಪಕ್ಕೆಲುಬುಗಳನ್ನು ವಿಶಾಲವಾಗಿ ಹೊರಚಾಚುವುದರಿಂದ ಹೆಡೆ ಅಗಲವಾಗಿ ತೆರೆದುಕೊಳ್ಳುತ್ತದೆ.

ಪಕ್ಕೆಲುಬುಗಳು ಎಡಬಲಗಳಲ್ಲಿ ಚರ್ಮಕ್ಕೆ ತೀರಾ ನಿಕಟವಾಗಿ ಮಾಂಸ ಖಂಡಗಳೊಂದಿಗೆ ಬಂಧಿಸಿಕೊಂಡಿರುತ್ತದೆ.ಹಾವು ಚಲಿಸುವಾಗ ಪಕ್ಕೆಲುಬುಗಳ ತುದಿಗಳು ನೆಲಕ್ಕೆ ಒತ್ತುವುದರಿಂದ ಚಲನೆಗೆ  ಆಸರೆ ಸಿಕ್ಕಂತಾಗುತ್ತದೆ.ಆದ್ದರಿಂದ ಹಾವು ಪಕ್ಕೆಲುಬುಗಳಿಂದ ತೆವಳುತ್ತದೆ ಎಂಬ ಮಾತು ಪ್ರಚಲಿತಲ್ಲಿದೆ.

ಹಾವಿನ ಮೇಲ್ದವಡೆಯ ಮುಂಬಾಗದಲ್ಲಿ ಹಲ್ಲುಗಳಿಲ್ಲ.ಅಲ್ಲಿಯ ಎರಡೂ ಕಡೆ ಮತ್ತು ಕೆಳದವಡೆಯಲ್ಲಿ ಸಾಲಾಗಿ ಶಂಕುವಿನಾಕಾರದ ಚೂಪಾದ ಹಲ್ಲುಗಳಿವೆ.ರಚನೆಯಲ್ಲಿ ಎಲ್ಲ ಹಲ್ಲುಗಳೂ ಒಂದೇ ರೀತಿಯಲ್ಲಿರುತ್ತದೆ.ಇವು ಬೇಟೆ (ಎರೆ)ತಪ್ಪಿಸಿಕೊಳ್ಳದಂತೆ ಹಿಡಿಯಲು ಸಹಾಯಕವಾಗುತ್ತದೆ.

*ಮುಂದುವರಿಯುವುದು........*

No comments:

Post a Comment