Tuesday, October 24, 2017

ತಾಜುಲ್ ಉಲಮ (ಖ ಸಿ) ರವರ ಅಪಾರವಾದ ಪಾಂಡಿತ್ಯ
👑👑👑👑👑👑👑👑👑

📖ಹಸನ್ ಅಸ್ಲಮಿಯವರ "ತಾಜುಲ್ ಉಲಮಾ"ಎಂಬ ಚರಿತ್ರೆ ಪುಸ್ತಕದ ಭಾಗದಿಂದ📚
〰〰〰〰〰〰〰〰〰

ತಾಜುಲ್ ಉಲಮಾರ ದರ್ಸಿನ ಶೈಲಿಯಿಂದ ವಿದ್ವಾಂಸರೇ ನಿಬ್ಬೆರಗಾಗುತ್ತಿದ್ದರು. ಸ್ವಹೀಹುಲ್ ಬುಖಾರಿಯ ಹೊರತಾಗಿ ಉಳಿದೆಲ್ಲಾ ಕಿತಾಬುಗಳನ್ನು ನಿಂತುಕೊಂಡು ಕಿತಾಬ್ ನೋಡದೇ ದರ್ಸ್ ನಡೆಸುವುದು ಅವರ ಶೈಲಿ. ಸ್ವಹೀಹುಲ್ ಬುಖಾರಿಯನ್ನು ಮಾತ್ರ ಕುಳಿತು ಕಿತಾಬ್ ನೋಡಿ ಹೇಳಿಕೊಡುತ್ತಿದ್ದರು. ತಪ್ತಾಝಾನಿ(ರ) ರವರ ಶರಹುಲ್ ಅಖಾಯಿದ್ ನ ಹಾಶಿಯತ್ತುಲ್ ಖಯಾಲಿ ಹಾಗೂ ಖುತ್ಬಿ ಗ್ರಂಥದ ವ್ಯಾಖ್ಯಾನವಾದ ಮೀರ್ ವಿದ್ಯಾರ್ಥಿಗಳಿಗೆಂದಲ್ಲ ಅಧ್ಯಾಪಕರ ಪಾಲಿಗೂ ಕಬ್ಬಿಣದ ಕಡಲೆಯೇ. ಅದನ್ನು ಮನದಟ್ಟು ಮಾಡಿಕೊಳ್ಳಲು ಅಪಾರ ಬುದ್ದಿ-ಗ್ರಾಹ್ಯ ಶಕ್ತಿ ಬೇಕು. ಆದರೆ ಶೈಖುನಾ ತಾಜುಲ್ ಉಲಮಾರಿಗೆ ಅದೆಲ್ಲ ಒಂದು ವಿಷಯವೇ ಆಗಿರಲಿಲ್ಲ. ಅವರು ಎಂತಹವರಿಗೂ ಮನದಟ್ಟಾಗುವ ರೀತಿಯಲ್ಲಿ ತುಂಬಾ ಸರಳ-ಸಲೀಸಾಗಿ ಅದನ್ನು ವಿವರಿಸಿ ವಿದ್ಯಾರ್ಥಿಗಳ ಸಂದೇಹಗಳನ್ನು ವಿವರಿಸುತ್ತಿದ್ದರು. ಬದಿಯಲ್ಲಿ ಹಾಗೇ ಬರೆದಿದೆ ಎನ್ನುತ್ತಾ ಇತರರಿಗೆ ಕಿತಾಬ್ ನೋಡಿ ಓದಲೂ ಪ್ರಯಾಸಕರವಾಗಿದ್ದ ಪ್ರಸ್ತುತ ಉದ್ಧರಣಿಗಳನ್ನು ನೋಡದಯೇ ಉಲ್ಲೇಖಿಸಿ ವಿವರಿಸುತ್ತಿದ್ದರು.

ದೀನಿನ ಪ್ರಧಾನ ಭಾಗವೆಂದು ಪ್ರವಾದಿ صلّ الله عليه وسلّم ಹೇಳಿದ ಇಲ್ಮುಲ್ ಫರಾಇಳ್ವ್ (ವಾರೀಸು ಸೊತ್ತಿನ ವಿತರಣಾ ವಿವರಣೆ)ಯ ಬಗ್ಗೆ ಅವರಿಗಿದ್ದ ಅರಿವು ಅಪಾರವೆನ್ನುತ್ತಾರೆ ಬೇಕಲ ಉಸ್ತಾದ್, ಮಾಣಿ ಉಸ್ತಾದರಂತಹಾ ಮಹಾನ್ ಉಲಮಾಗಳು. ಫರಾಇಳ್ವನ್ನು ನೀವು ಕಲಿತು ಇತರಿಗೆ ಕಲಿಸಿರಿ ಎಂದಿದ್ದಾರೆ ಪ್ರವಾದಿ صلّ الله عليه وسلّم ಈ ಬಗ್ಗೆ ತಿಳಿದುಕೊಂಡು ಆ ಮಹಾನ್ ಪ್ರವಾದಿ صلّ الله عليه وسلّم ರ ಆದೇಶವನ್ನು ಶಿರಸಾವಹಿಸಿ ಪಾಲಿಸಲು ಅಪಾರ ವಿದ್ವತ್ತು, ತೀಕ್ಷ್ಣ ಬುದ್ಧಿಮತ್ತೆ ಅನಿವಾರ್ಯ.

ವ್ಯಾಕರಣ ಶಾಸ್ತ್ರ (ನಹ್ವ್-ಸ್ವರಫ್) ದಲ್ಲಿ ಕೂಡಾ ತಾಜುಲ್ ಉಲಮಾರವರು ಅಸಾಮಾನ್ಯರೆ. ಅದರಲ್ಲಿ ಅವರ ವಿದ್ವತ್ತು ನಮ್ಮ ಊಹೆಗೂ ನಿಲುಕದ್ದು. ಅಲ್ ಫಿಯ್ಯಾ ಎಂಬ ಸಾವಿರ ಬೈತ್ (ಪದ್ಯ) ಗಳ ಸಂಗ್ರಹವನ್ನು ಕಂಠಪಾಟ ಮಾಡಿದ ಹಲವರಿದ್ದಾರೆ. ನೇರ ಮುಂದಕ್ಕೆ ಹಾಡಲಿಕ್ಕಷ್ಟೇ ಅವರಿಗೆಲ್ಲ ಸಾಧ್ಯ. ಆದರೆ ತಾಜುಲ್ ಉಲಮಾ ಹಾಗಲ್ಲ ಹಿಂದಿನಿಂದ ಮುಂದಕ್ಕೆ ಹಾಡುತ್ತಾ ಹೋದ ಅದೇ ರೀತಿ ಮುಂದಿನಿಂದ ಹಿಂದಕ್ಕೂ ಹಾಡುವ ಸಾಮರ್ಥ್ಯವನ್ನು ಹೊಂದಿದ್ದರೆನ್ನುತ್ತಾರೆ ಶೈಖುನಾರನ್ನು ಹತ್ತಿರದಿಂದ ಅರಿತ ಹಲವರು. ವ್ಯಾಕರಣದಲ್ಲಿ ತಾಜುಲ್ ಉಲಮಾರನ್ನು ಮೀರಿಸುವ ಪಾಂಡಿತ್ಯವಿರುವ ಒಬ್ಬರೂ ಕೂಡ ಇಂದಿಲ್ಲ ಎನ್ನುತ್ತಿದ್ದರು ಶೈಖುನಾ ಮಾಣಿ ಉಸ್ತಾದ್.

ಲೆಕ್ಕದ ಬಗ್ಗೆ ಹೇಳುವಾಗ ಲೋಗರಿತಂ ಎಂಬ ಪ್ರಕಾರದಲ್ಲಿ ತಾಜುಲ್ ಉಲಮಾರಿಗಿದ್ದ ಅರಿವನ್ನು ಉಲ್ಲೆಖಿಸುವುದು ಉಚಿತವೆನಿಸುತ್ತದೆ. ಸೈನ್, ಕೋಸ್ ಹಾಗೂ ಟೇನ್ ಇತ್ಯಾದಿಗಳೆಲ್ಲಾ ಅದರಲ್ಲೊಳಪಡುತ್ತಿದ್ದು ತಾಜುಲ್ ಉಲಮಾರಿಗೆ ಲೋಗರಿತಂ ಬಗ್ಗೆ ಆಳವಾದ ಅರಿವಿತ್ತು. ಸೈನ್, ಕೋಸ್, ಟೇನ್ ಗಳನ್ನೆಲ್ಲಾ ಅವರು ಸುಲಲಿತವಾಗಿ ವಿವರಿಸುತ್ತಿದ್ದರು. ಬೀಜಗಣಿತ (ಅಲ್ ಜಿಬ್ರಾ) ಅವರಿಗೆ ತುಂಬಾ ಸರಳವಾಗಿತ್ತು. ಗುಣಿಸು-ಬಾಗಿಸು ಅವರಿಗೆ ಒಂದು ಪ್ರಶ್ನೆಯೇ ಅಲ್ಲ. ರೇಖಾ ಗಣಿತ (ಉಖ್ಲೈದಿಸ್) ಲೆಕ್ಕವೂ ತಥ್ವೆವ. ಖುಲಾಸತುಲ್ ಹಿಸಾಬ್, ಹಿಂದಿನ ಕಾಲದ ಅರುವತ್ತನ್ನು ಮಾಪನವಾಗಿಟ್ಟು ಮಾಡುವ ಸಿತ್ತೀನ್ ಲೆಕ್ಕಗಳೆಲ್ಲವೂ ಅವರಿಗೆ ಒಲಿದಿತ್ತು.

ಗೋಳಶಾಸ್ತ್ರ ಅಥವಾ ಇಲ್ಮುಲ್ ಫಲಕ್ ಕೂಡಾ ತಾಜುಲ್ ಉಲಮಾರವರ ನೆಚ್ಚಿನ ಸಬ್ಜೆಕ್ಟಾಗಿತ್ತು. ತಸ್ವ್ ರೀಹುಲ್ ಅಫ್ಲಾಕ್ ಗ್ರಂಥವನ್ನು ಕಲಿಸುವ ವೇಳೆ  ನಕ್ಷತ್ರಗಳ ಕುರಿತಂತೆ ಯಾವ್ಯಾವ ನಕ್ಷತ್ರಗಳು ಎಲ್ಲೆಲ್ಲಿ ಇವೆ ಎಂದು ಸ್ಪಷ್ಟವಾಗಿ ವಿವರಿಸುತ್ತಿದ್ದರು. ತಾಜುಲ್ ಉಲಮಾರ ಬಳಿ ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿದ ಬೇಕಲ ಉಸ್ತಾದರು ಹೇಳುತ್ತಾರೆ. 'ತಾಜುಲ್ ಉಲಮಾರ ಈ ರೀತಿಯ ತರಗತಿಯ ಶೈಲಿಯಿಂದ ಇಂದು ಯಾವ್ಯಾವ ನಕ್ಷತ್ರಗಳು ಎಲ್ಲೆಲ್ಲಿವೆ ಎಂದು ನಿಖರವಾಗಿ ಹೇಳಲು ನನಗೆ ಸಾಧ್ಯವಾಗುತ್ತಿವೆ. ಯಾವ ತಿಂಗಳಲ್ಲಿ ಎಂತಹ ನಕ್ಷತ್ರಗಳನ್ನು ಎಲ್ಲೆಲ್ಲಿ ಕಾಣಬಹುದೆಂದು ನನಗೆ ತಿಳಿದಿದೆ. ಅಶ್ವಿನಿ, ಭರಣಿ, ಕಾರ್ತಿಕ ಸೇರಿದಂತೆ ನಕ್ಷತ್ರಗಳನ್ನು ಎಲ್ಲಿವೆ ಎಂದು ನಾನು ತೋರಿಸಬಲ್ಲೆ' ಎಂದು ಅಭಿಮಾನ ಪೂರ್ವಕವಾಗಿ ಹೇಳುತ್ತಾರಲ್ಲದೆ 'ನಮ್ಮ ಈ ಭಾಗಕ್ಕೆ ಖಿಬ್ಲಾ ತಿರುಗಿಸುವ ಇಲ್ಮುಲ್ ಖಿಬ್ಲ, ಗೋಳಶಾಸ್ತ್ರ ಸಂಬಂಧಿತ ಇಲ್ಮುಲ್ ಫಲಕ್ ಹಾಗೂ ಸಮಯ ಸಂಬಂಧಿತ ಇಲ್ಮುಲ್ ಮೀಕಾತನ್ನು ತಾಜುಲ್ ಉಲಮಾರವರೆ ಎಂದೂ, ನಮಾಝಿನ ವೇಳಾಪಟ್ಟಿಯನ್ನು ತಯಾರಿಸುವ ಹಲವರು ತಾಜುಲ್ ಉಲಮಾರನ್ನೇ ಅವಲಂಬಿಸಿ ಅವರಿಂದಲೇ ಕಲಿತಿದ್ದಾರೆ' ಎಂದೂ ಹೇಳುತ್ತಾರೆ.
⚜⚜⚜⚜⚜⚜⚜⚜⚜
ಅಲ್ಲಾಹು ತಾಜುಲ್ ಉಲಮಾರೊಂದಿಗೆ ಸ್ವರ್ಗದಲ್ಲಿ ನಮ್ಮೆಲ್ಲರನ್ನು ಒಗ್ಗೂಡಿಸಲಿ.

✍ ನಾಸೀರ್, ಕಾವೂರ್.
➖➖➖➖➖➖➖➖➖

No comments:

Post a Comment