ಬಿ.ಕೆ ಯೂನುಸ್ ಇಮ್ದಾದಿ ಮಂಗಳಪದವು
ನೀನ್ಯಾಕೆ ಹೀಗಾದೆಯೋ ಗೊತ್ತಾಗ್ತಾ ಇಲ್ಲ. ನೂರಾರು ವರ್ಷಗಳಿಂದ ಪೂರ್ವಿಕ ಮಹಾತ್ಮರು ಅಂಗೀಕರಿಸಿದ ಹಲವಾರು ಪುಣ್ಯ ಕರ್ಮಗಳು ನಿನಗೆ ಕಂದಾಚಾರ ಹಾಗೂ ಬಿದ್‍ಅತಾಗಿ ಕಾಣಿಸಿತು. ಪುರಾವೆಗಳ ಪೂರ್ಣ ಪಾಠವನ್ನು ಅರ್ಥೈಸುವಲ್ಲಿ ಎಡವಿದ್ದರಿಂದ ದಿಕ್ಕುದೆಸೆಯಿಲ್ಲದ ವಾದಗಳು ನಿನ್ನಿಂದ ಬರತೊಡಗಿತು. ನೀನು ಹಾಗೂ ನಿನ್ನಂತವರು ಮಾಡಿದ ಬಹುದೊಡ್ಡ ತಪ್ಪೆಂದರೆ ಪೂರ್ವಿಕ ಇಮಾಮರನ್ನು ಬಿಟ್ಟು ಡೈರೆಕ್ಟಾಗಿ ಕುರ್‍ಆನ್ ಹಾಗೂ ಹದೀಸ್‍ಗೆ ದುಮುಕ ಹೊರಟದ್ದು. ಥೇಟ್ ಈಜಲು ತಿಳಿಯದವ ಸಮುದ್ರಕ್ಕಿಳಿದಂತೆ, ಡ್ರೈವಿಂಗ್ ಕಲಿಯದೆ ಗಾಡಿ ಚಾಲನೆಗೆ ಪ್ರಯತ್ನಿದಸಿದವನಂತೆ, ವೈದ್ಯಶಾಸ್ತ್ರ ಕಲಿಯದೆ ಡಾಕ್ಟರಾಗಲು ಹೊರಟಂತೆ... ನಿಜಕ್ಕೂ ನೀನು ಪ್ರಯತ್ನಿಸ ಹೊರಟದ್ದು ಅಂತ್ಯ ನೀಚವಾಗುವ ಕಾರ್ಯಕ್ಕೆ.
ನೋಡು... ನೀನು ಸ್ವಲ್ಪ ಅರ್ಥ ಮಾಡಿಕೋ. ಹಠ ಬಿಟ್ಟು ತೆರೆದ ಮನದೊಂದಿಗೆ ನನ್ನ ಮಾತು ಸ್ವಲ್ಪ ಕೇಳು. ಸುನ್ನಿಗಳನ್ನು ಮುಶ್ರಿಕ್ ಅಂತ ಕರೆದೆ, ಕುರಾಫಿಗಳು ಅಂದೆ, ಜನರನ್ನು ನರಕಕ್ಕೆ ಕರೆದೊಯ್ಯುವರು ಅಂತ ಪ್ರಚಾರ ಪಡಿಸಿದೆ... ಈ ಮಾತಿನ ಗೌರವವನ್ನು ನೀನೆಂದಾದರೂ ಊಹಿಸಿದ್ದೀಯಾ? ನಿನ್ನ ನೇತಾರರು ಸುನ್ನಿಗಳ ಬಗ್ಗೆ ಏನು ಹೇಳಿದರೂ ಅದನ್ನು ಕಣ್ಣು ಮುಚ್ಚಿ ನೀನು ನಂಬಿದೆ. ಸುನ್ನಿಗಳಾದ ನಾವು ಪಾಲಿಸುವ ಆಚಾರ ವಿಚಾರಗಳು ಪೂರ್ವಿಕರಾದ ಮಹಾತ್ಮರು ಆಚರಿಸಿದ್ದರೆಂಬ ಸತ್ಯವನ್ನು ನೀನೇಕೆ ಒಪ್ಪುತ್ತಿಲ್ಲ..? ನೋಡು...
ನಮ್ಮೆಲ್ಲರಿಗಿಂತಲೂ ಎಲ್ಲಾ ರೀತಿಯಿಂದಲೂ ಜ್ಞಾನಿಗಳು ಹಾಗೂ ಶ್ರೇಷ್ಠರಾಗಿದ್ದರು ಪೂರ್ವಿಕ ಮಹಾತ್ಮರು. ಕುರ್‍ಆನ್, ಹದೀಸ್, ಇಜ್‍ಮಾಅï, ಕಿಯಾಸ್‍ಗಳ ಬಗ್ಗೆ ಆಳವಾಗಿ ತಿಳಿದವರೂ, ಗ್ರಂಥ ರಚಿಸಿದವರೂ ಅವರೇ. ಹಾಗಿರುವಾಗ ಅವರನ್ನೆಲ್ಲ ಬಿಟ್ಟು ನಾವೇ ಸ್ವತಃ ಸಂಶೋಧನೆಗಿಳಿಯೋಣ ಎಂಬ ನಿನ್ನ ವಾದವು ಬಹುದೊಡ್ಡ ಆಪತ್ಕಾರಿ. ಸುನ್ನೀ ಹಾಗೂ ಸುನ್ನೀಯೇತರರ ಮದ್ಯೆಯಿರುವ ಯಾವುದೇ ತಾರ್ಕಿಕ ಸಂಗತಿಗಳನ್ನು ತೆಗೆದು ನೋಡಿದರೂ ಪೂರ್ವಿಕ ಸರಣಿಯಿಂದ ನೀನು ಎಷ್ಟೊಂದು ವ್ಯತಿ ಚಲಿಸಿದ್ದಿ ಎಂದು ಸ್ಪಷ್ಟವಾಗಿ ಗೋಚರವಾಗಬಹುದು.
ಸರಿಯಾಗಿ ಅರಬಿ ತಿಳಿಯದ , ಕಿತಾಬ್ ಕಲಿಯದ ನೀನು ಒಂದಿಷ್ಟು ಪೇಸ್‍ಬುಕ್, ವಾಟ್ಸಫ್, ಅಥವಾ ಒಂದೆರಡು ಪತ್ರಿಕೆ, ನೋಟಿಸುಗಳಲ್ಲಿ ಏನಾದರೂ ಪೋಸ್ಟ್ ಮಾಡಿದರೆ ಅಥವಾ ಬರೆದರೆ ನೀನೇ ದೊಡ್ಡ ವಿದ್ವಾಂಸ ಎಂಬ ಹುಚ್ಚು ಅಹಂಕಾರ ಖಂಡಿತಾ ಒಳ್ಳೆಯದಲ್ಲ. ವಿಷಯದ ಬಗ್ಗೆ ಆಳವಾಗಿ ಕಲಿ. ಸತ್ಯವೆಂದು ಮನವರಿಕೆಯಾದರೆ ಹಠಮಾರಿತನ ಬಿಟ್ಟು ಅದನ್ನು ಒಪ್ಪುವುದು ನಿನ್ನ ಪರಲೋಕ ರಕ್ಷಗೆ ಒಳಿತು.
ಇದು ರಬೀಯುಲ್ ಅವ್ವಲ್ ತಿಂಗಳು. ಜಗತ್ತಿನ ಮುಸ್ಲಿಮರೆಲ್ಲರೂ ಅತ್ಯಂತ ಸಂತೋಷ ಪಡುವ ತಿಂಗಳಿದು. ಕಾರಣ ನಾನು ಬಿಡಿಸಿ ಹೇಳಬೇಕಾಗಿಲ್ಲ ತಾನೇ?. ಆದರೆ ನೀನು ಇಲ್ಲೂ ತಕರಾರು ತೆಗೆದೆ. ತಲೆ ಬುಡವಿಲ್ಲದ ಹಲವಾರು ಪ್ರಶ್ನೆಗಳನ್ನು ಜನರ ಮುಂದಿಟ್ಟು ಅವರನ್ನು “ವಸ್‍ವಾಸ್”ಗೆ ತಲುಪಿಸಲು ಪ್ರಯತ್ನಿಸಿದೆ. ನಿಜಕ್ಕೂ ನೀನು ನೆಬಿ ಜನ್ಮ ದಿನವನ್ನು ವಿರೋಧಿಸಿದ್ದು ಪುರಾವೆಗಳ ಬೆಂಬಲವಿಲ್ಲ ಎಂಬ ಕಾರಣಕ್ಕಾಗಿಯೇ...? ಅಲ್ಲ.. ಖಂಡಿತಾವಾಗಿಯೂ ಅಲ್ಲ, ಯಾಕೆಂದರೆ ನೆಬಿ ಜನ್ಮ ದಿನಾಚರಣೆಯ ಪುರಾವೆಗಳನ್ನು ಸಾಕಷ್ಟು ಬಾರಿ ನಿನಗೆ ತಿಳಿಸಿಯಾಗಿದೆ. ಅದ್ಯಾವುದನ್ನೂ ನೀನು ಅಂಗೀಕರಿಸುತ್ತಿಲ್ಲ. ಕಾರಣ ನಿನ್ನ ಮೊಂಡು ಹಠ. ಸುಳ್ಳನ್ನು ಹಲವಾರು ಬಾರಿ ಪುನಾರಾವರ್ತಿಸಿ ಹೇಳಿದರೆ ಜನ ಸತ್ಯವೆಂದು ನಂಬುವರೆಂಬ ಗೊಡ್ಡು ಸಿದ್ಧಾಂತದಂತೆ ನೀನು ಪ್ರತೀ ಬಾರಿ ರಬೀಉಲ್ ಅವ್ವಲ್ ಬಂದಾಗಲೂ “ಅದೇ ಹಾಡು ಅದೇ ರಾಗ”ವೆಂಬಂತೆ ಸುಳ್ಳಿನ ಕಂತೆಗಳನ್ನು ಪ್ರಚಾರ ಪಡಿಸುತ್ತಿ.
ಸುನ್ನಿಗಳು ರಬೀಉಲ್ ಅವ್ವಲ್ ಹನ್ನೆರಡರಂದು ನೆಬಿ ಜನ್ಮ ದಿನಾಚರಣೆಯನ್ನು ಆಚರಿಸುವಾಗ ನಿನ್ನಂತಹ ಕೆಲವರು ಕೇಳುವ ಪ್ರಶ್ನೆ, ಜನ್ಮ ದಿನಾಚರಣೆ ಇಸ್ಲಾಮಿನ ಲ್ಲಿದೆಯೇ? ನೆಬಿ(ಸ.ಅ)ರಾಗಲೀ ಸ್ವಹಾಬಿಗಳಾಗಲೀ ಜನ್ಮ ದಿನವನ್ನು ಆಚರಿಸಿದ್ದಾರೆಯೇ?... ಹೀಗೆ ಉದ್ದ ಬೆಳೆಯುತ್ತಿದೆ ನಿನ್ನ ಪ್ರಶ್ನೆಯ ಪಟ್ಟಿ. ಜನ್ಮ ದಿನಾಚರಣೆ ಅಥವಾ ಮಿಲಾದುನ್ನಬಿ ಎಂದು ಹೆಸರಿಟ್ಟ ಮಾತ್ರಕ್ಕೆ ಅದು ಬಿದ್‍ಅತ್ ಅಥವಾ ಅನಿಸ್ಲಾಮಿಕವಾಗಿ ನಿನಗೆ ಕಾಣಿÉಸುತ್ತಿದೆಯಲ್ಲಾ... ನಿಜವಾಗಿಯೂ ನೀನು ಚಿಂತಿಸಿದ್ದೀಯಾ? ಈ ಮೀಲಾದುನ್ನಬಿ ಎಂಬ ಆಚರಣೆಯಂದು ಸುನ್ನಿಗಳು ಮಾಡುವ ಕಾರ್ಯಗಳಾವುದೆಂದು ಒಂದ್ಹತ್ತು ನಿಮಿಷ ಕುಳಿತು ಆಲೋಚಿಸು, ನಂತರ ಹೇಳು ಈ ಆಚರಣೆಯಲ್ಲಿ ಯಾವುದು ಅನಿಸ್ಲಾಮಿಕವೆಂದು. ಅದನ್ನು ಚಿಂತಿಸುವ ವ್ಯವದಾನ ನಿನಗಿಲ್ಲದಿದ್ದರೆ ಬೇಡ ಬಿಡು, ನಾನೇ ಹೇಳ್ತೀನಿ... ಆ ಮೇಲೆ ನೀನೇ ತೀರ್ಮಾನ ಮಾಡು ನಿನ್ನ ವಾದವು ಎಷ್ಟೊಂದು ಮೂರ್ಖತನದಿಂದ ಕೂಡಿದ್ದೆಂದು. ಸುನ್ನಿಗಳಾದ ನಾವು ಮೀಲಾದುನ್ನಬಿಯಂದು ಮಾಡುವ ಪ್ರಮುಖ ಕಾರ್ಯಗಳೆಂದರೆ...
1)ನೆಬಿ(ಸ.ಅ)ರವರ ಸ್ವಲಾತ್ ಹಾಗೂ ಮದ್‍ಹ್ ಹೇಳುವುದು
2)ನೆಬಿ(ಸ.ಅ)ರವರ ಕೀರ್ತನೆಗಳನ್ನು ಹೇಳುತ್ತಾ ರ್ಯಾಲಿ ನಡೆಸುವುದು.
3)ನೆಬಿ(ಸ.ಅ)ರವರ ಮೇಲಿನ ಪ್ರೀತಿಯಿಂದ ಆ ದಿನ ಅನ್ನದಾನ ನೀಡುವುದು.
4)ವಿದ್ಯಾರ್ಥಿಗಳಿಂದ ನೆಬಿ ಮದ್‍ಹ್ ಹೇಳಿಸಿ ಅವರಿಗೆ ಬಹುಮಾನ ನೀಡುವುದು, ದಫ್ ಬಾರಿಸುವುದು... ಇತ್ಯಾದಿ ಕಾರ್ಯಗಳಾಗಿವೆ. ಇನ್ನು ನೀನೇ ಹೇಳು ಈ ಮೇಲಿನ ಕಾರ್ಯಗಳಲ್ಲಿ ಇಸ್ಲಾಮಿಗೆ ವಿರುದ್ಧವಾದ ಕಾರ್ಯಗಳಾವುದೆಂದು. ನೆಬಿ(ಸ.ಅ)ರವರ ಮದ್‍ಹ್ ಹೇಳುವುದು, ರ್ಯಾಲಿ ನಡೆಸುವುದು, ಅನ್ನದಾನ ನೀಡುವುದು, ಬಹುಮಾನ ನೀಡುವುದು... ಇವುಗಳಲ್ಲಿ ಯಾವುದು ಬಿದ್‍ಅತೆಂದು ಹೇಳುವೆಯಾ? ನಿನಗೇ ಗೊತ್ತು ಇದ್ಯಾವುದೂ ಇಸ್ಲಾಂ ವಿರೋಧಿಸಿದ ಕಾರ್ಯಗಳಲ್ಲ ಹೊರತು ಇಸ್ಲಾಂ ಪ್ರೋತ್ಸಾಹ ನೀಡಿದ ಕಾರ್ಯಗಳೇ ಆಗಿವೆಯೆಂದು.
ಇನ್ನು, ಅದನ್ನೂ ಕಲಿಯಲು ನೀನು ಮನಸ್ಸು ಮಾಡುತ್ತಿಲ್ಲವೇ? ಇರು, ನಾನೇ ಅವುಗಳನ್ನು ವಿವರಿಸಿ ಕೊಡುತ್ತೇನೆ. ನಿನ್ನ ತಪ್ಪು ಗ್ರಹಿಕೆಯಿಂದಾಗಿ ಪುಣ್ಯ ಕರ್ಮವೊಂದರ ನಿಷೇಧಿಸುವಿಕೆಯಿಂದ ನೀನು ಹಿಂದೆ ಸರಿಯಬೇಕೆಂಬ ಉದ್ದೇಶವಲ್ಲದೆ ನಾನು ಬೇರೇನನ್ನೂ ಬಯಸಿಲ್ಲ. ಪೂರ್ವಿಕರಾದ, ಸಮುದ್ರ ಸಮಾನ ಜ್ಞಾನಿಗಳಾದ ಪಂಡಿತರು, ನೆಬಿ ಜನ್ಮ ದಿನಾಚರಣೆಯನ್ನು ಪುಣ್ಯ ಕರ್ಮವೆಂದು ಸಾರಿರುವಾಗ ಸೂರ್ಯ ಪ್ರಕಾಶವನ್ನು ಬಾಯಿಯಿಂದ ಊದಿ ನಂದಿಸಲು ಹೊರಟ ನಿನ್ನ ಬಗ್ಗೆ ಮರುಕವುಂಟಾಗುತ್ತಿದೆ.
ಒಂದೊಂದೇ ವಿಷಯಗಳನ್ನು ಎತ್ತಿ ಕೊಳ್ಳೋಣ. ಮೊದಲನೆಯದಾಗಿ ಈದ್ ಮೀಲಾದ್‍ನಂದು ನಾವು ಮಾಡುವ ಪ್ರಮುಖ ಸಂಗತಿಯಾಗಿದೆ, ನಬಿ(ಸ.ಅ)ರವರ ಸ್ವಲಾತ್ ಹಾಗೂ ಮದ್‍ಹ್ ಹೇಳುವುದು ಇವೆರಡು ಕಾರ್ಯಗಳನ್ನು ಇಸ್ಲಾಮಿ ಪುರಾವೆಗಳ ಮೂಲಕ ಹಲವಾರು ಬಾರಿ ಸಮರ್ಥಿಸಿಯಾಗಿದೆ. ಆದರೂ ಈ ಕೆಳಗಿನ ಆಯತ್ತನ್ನೊಮ್ಮೆ ನೀನು ಓದಿ ಅರ್ಥೈಸು.
(ಖಂಡಿತವಾಗಿಯು ಅಲ್ಲಾಹು ಹಾಗೂ ಅವನ ಮಲಕುಗಳು ಪ್ರವಾದಿಯವರ ಮೇಲೆ ಸ್ವಲಾತ್ ಹೇಳುವರು. ಓ ಸತ್ಯ ವಿಶ್ವಾಸಿಗಳೇ ನೀವೂ ಪ್ರವಾದಿಯವರ ಮೇಲೆ ಸ್ವಲಾತ್ ಸಲಾಂ ಹೇಳಿರಿ)
ಅಂದರೆ ಅಲ್ಲಾಹನು ಹಾಗೂ ಮಲಕುಗಳು ನಿರ್ವಸುವ ಒಂದು ಮಹತ್ತಾದ ಕರ್ಮವಾಗಿದೆ ಪ್ರವಾದಿ(ಸ.ಅ)ರವರ ಮೇಲೆ ಸ್ವಲಾತ್, ಸಲಾಂ ಹೇಳುವುದು. ಅದನ್ನು ಧಾರಾಳವಾಗಿ ನಿರ್ವಹಿಸುವಂತೆ ಅಲ್ಲಾಹನೇ ಪ್ರೋತ್ಸಾಹಿಸುವಾಗ ಇತರ ದಿನಗಳಿಗಿಂತ ಸ್ವಲ್ಪ ಹೆಚ್ಚೇ ಎನ್ನುವಂತೆ ರಬೀಉಲ್ ಅವ್ವಲ್ ಹನ್ನೆರಡರಂದು ಸುನ್ನಿಗಳಾದ ನಾವು ಅದನ್ನು ನಿರ್ವಹಿಸಿದರೆ ಅದನ್ನು ಬಿದ್‍ಅತೆನ್ನಲು ನಿನಗೆ ಪುರಾವೆಯಿದೆಯೇ...?. ಹುಂ... ಎಲ್ಲಿಯ ಪುರಾವೆ!. ಕುರ್‍ಆನ್‍ಗೆ ವಿರುದ್ಧವಾದ ಪುರಾವೆಯು ಈ ಜಗತ್ತಿನಲ್ಲಿ ಇಲ್ಲವೆಂಬುವುದು ನಿನಗೇ ಗೊತ್ತು. ದಿನ, ಸಮಯ, ಕಾಲಗಳ ವ್ಯತ್ಯಾಸವಿಲ್ಲದೆ ನಿರ್ವಹಿಸಬಹುದಾದ ಸ್ವಲಾತನ್ನು ರಬೀಉಲ್ ಅವ್ವಲ್ ಹನ್ನೆರಂದು ಹೇಳಿದರೆ ಮಾತ್ರ ಅದು ಬಿದ್‍ಅತ್ ಆಗುವುದಾದರೂ ಹೇಗೆ? ಎಂಬ ಜಿಜ್ಞಾಸೆಯು ನನಗಿದೆ.
ಸ್ವಲಾತ್ ಬಗ್ಗೆ ಬರೆಯುವಾಗ ಇನ್ನೊಂದು ವಿಷಯ ನೆನಪಿಗೆ ಬಂತು. ನಿರ್ಧಿಷ್ಟ ಪದಗಳಿಲ್ಲದ, ನೆಬಿ(ಸ.ಅ)ರವರ ಉನ್ನತ ಪದವಿಯನ್ನು ಹೊಗಳುವ, ಪ್ರೀತಿ ವ್ಯಕ್ತ ಪಡಿಸುವ ಯಾವುದೇ ಪದಗಳನ್ನು ಬಳಸಿ ಸ್ವಲಾತ್ ಹೇಳಬಹುದೆಂಬುವುದು ಪಂಡಿತ ಅಭಿಮತ. ಆದರೆ ನೀನು ಇಲ್ಲೂ ನಿನ್ನ ಕುತಂತ್ರ ಬಳಸಿದೆ. ನೆಬಿ(ಸ.ಅ)ರವರು ಹೇಳಿದ ಸ್ವಲಾತನ್ನು ಮಾತ್ರ ಹೇಳಬೇಕೆಂದು ನೀನು ವಾದಿಸಿದೆ. ಆದರೆ ಆ ವಾದದಲ್ಲಿ ನಿಮ್ಮವರು ದೃಡವಾಗಿ ನೆಲೆ ನಿಂತರಾ? ಅದೂ ಇಲ್ಲ. ನಿನ್ನ ವಿವಿಧ ನೇತಾರರ ಕೆಲವು ಭಾಷಣದ ಪ್ರಾರಂಭವನ್ನು ಒಮ್ಮೆ ಕೇಳಿ ನೋಡು. ಒಬ್ಬೊಬ್ಬರದ್ದು ಒಂದೊಂದು ಸ್ವಲಾತ್! ಆದರೆ ಅದ್ಯಾವುದೂ ಹದೀಸ್‍ನಲ್ಲಿ ವರದಿಯಾದ ಸ್ವಲಾತ್‍ಗಳಲ್ಲ! ಇನ್ನೂ ಪುರಾವೆ ಬೇಕಿದ್ದರೆ ನಿನ್ನ ನೇತಾರರು ಬರೆದ ಕೆಲವು ಪುಸ್ತಕದ ಪ್ರಾರಂಭದಲ್ಲಿ ಕೊಟ್ಟ ಸ್ವಲಾತ್‍ಗಳನ್ನು ಓದಿ ನೋಡು. ಅವುಗಳೂ ಹದೀಸ್‍ಗಳಲ್ಲಿ ವರದಿಯಾದ ಸ್ವಲಾತ್‍ಗಳಲ್ಲ್ಲ. ಈಗ ಒಂದು ವಿಷಯ ಸ್ಪಷ್ಟವಾಯಿತು. ನಿನ್ನ ನೇತಾರರು ಹೇಳುವ ಸಂಗತಿಗಳು ಸತ್ಯವಾದುದಲ್ಲ ಬದಲು ಸುನ್ನಿಗಳೊಂದಿಗೆ ಹಠ ತೀರಿಸಲು ತಮಗೆ ತೋಚಿದ ಸಂಗತಿಗಳನ್ನು ವಾದವಾಗಿ ಪ್ರಚಾರ ಪಡಿಸುತ್ತಿದ್ದಾರಷ್ಟೆ. ಇಲ್ಲದಿದ್ದರೆ ಹದೀಸ್‍ಗಳಲ್ಲಿ ವರದಿಯಾಗದ ಸ್ವಲಾತ್‍ಗಳನ್ನು ಹೇಳಬಾರದು, “ಸಯ್ಯಿದುನಾ” ಸೇರಿಸಬಾರದು ಎಂದೆಲ್ಲಾ ಹೇಳುವ ಈ ನಾಯಕರು ತಮ್ಮ ಭಾಷಣ, ಲೇಖನಗಳಲ್ಲಿ ಅವುಗಳನ್ನು ಜಾರಿಗೆ ತರದೆ ಇನ್ಯಾವುದೊ ಸ್ವಲಾತ್‍ಗಳನ್ನು ಹೇಳುವುದು ಯಾಕೆ?
ಇರಲಿ ವಿಷಯಕ್ಕೆ ಬರೋಣ. ಸ್ವಲಾತ್ ಹೇಳುವುದು ಕುರ್‍ಆನ್ ಆಜ್ಞಾಪಿಸಿದ ಸಂಗತಿಯೆಂದು ನಿನಗೆ ಮನವರಿಕೆಯಾಯಿತು. ಇನ್ನು, ಮೀಲಾದುನ್ನಬಿಯಂದು ನಾವು ಹೆಚ್ಚಾಗಿ ನಬಿ(ಸ.ಅ)ರವರ ಮದ್‍ಹ್ ಹೇಳುತ್ತೇವೆ ಎಂದೆನಲ್ಲಾ... ಖಂಡಿತವಾಗಿಯೂ ನಬಿ(ಸ.ಅ)ರವರ ಮೇಲೆ ಪ್ರೀತಿ ಇರುವವರಿಗೆ ನಬಿಯವರ ಬಗ್ಗೆ ಹೇಳದೆ ಸಮಾಧಾನವಿರಲಾರದು. ಆದ್ದರಿಂದಲೇ ಆ ದಿನ ಅವರ ಬಗ್ಗೆ ಪದ್ಯ ಗದ್ಯಗಳ ರೂಪದಲ್ಲಿ, ಹಾಡು ಭಾಷಣಗಳ ರೂಪದಲ್ಲಿ ನಾವು ಸಾಕಷ್ಟು ಕೀರ್ತನೆಗಳನ್ನು ಹೇಳುತ್ತೇವೆ. ನಿನಗೆ ನೆನಪಿದೆಯೋ ಗೊತ್ತಿಲ್ಲ. ಮುಜಾಹಿದ್ ಬಾಲುಶ್ಯೇರಿ ಎಂಬ ನಿನ್ನ ನೇತಾರ ಅಂದೊಮ್ಮೆ ಹೇಳಿದ್ದ “ನೆಬಿ(ಸ.ಅ)ರವರ ಮದ್‍ಹ್ ಹೇಳಲು ಕುರ್‍ಆನ್ ತಿಳಿಸಿಲ್ಲ, ಹೊರತು ನೆಬಿಯವರನ್ನು ಅನುಸರಿಸಿ ಎಂದಾಗಿದೆ ಕುರ್‍ಆನ್ ತಿಳಿಸಿದ್ದು.”
ಪಾಪ... ಆತನ ಅಜ್ಞಾನಕ್ಕೆ ಮರುಕ ಪಡೋಣ. ಕಾರಣ ಆತನೇ ಅಂದೊಮ್ಮೆ ಹೇಳಿದ್ದ “ನಾನು ಪಂಡಿತನಲ್ಲ. ಕಲ್ಲಿನ ಕ್ವಾರೆಯಲ್ಲಿ ಕೆಲಸ ಮಾಡುತ್ತಿದ್ದೆ, ಹೋಟೆಲ್‍ನಲ್ಲಿ ಗ್ಲಾಸ್ ತೊಳೆಯುತ್ತ್ತಿದ್ದೆ, ಗದ್ದೆಯಲ್ಲಿ ಉಳುತ್ತಿದೆ” ಅಂತ. ಆದ್ದರಿಂದ ಆತನ ಬಗ್ಗೆ ಹೆಚ್ಚು ಚರ್ಚಿಸಿ ವೃಥಾ ಸಮಯ ಕೊಲ್ಲಲು ನಾನು ಬಯಸುತ್ತಿಲ್ಲ. ಆದರೆ ಒಂದು ಮಾತಂತೂ ಸತ್ಯ. ಇಡೀ ಕುರ್‍ಆನ್ ಗ್ರಂಥವೇ ನೆಬಿಯವರ ಮದ್‍ಹ್ ಆಗಿದೆ ಎಂಬ ಪರಮ ಸತ್ಯವು ಆತನಿಗೆ ತಿಳಿದಿರಲಾರದು. ಯಾರಿಂದಲೂ ಹೇಳಲು ಸಾಧ್ಯವಾಗದಂತಹ ಶೈಲಿಯ ಮದ್‍ಹ್‍ಗಳು ಕುರ್‍ಆನ್ ನಬಿ(ಸ.ಅ)ರವರ ಬಗ್ಗೆ ಹೇಳಿದೆ. ಇನ್ಶಾಅಲ್ಲಾಹ್ ಆ ಬಗ್ಗೆ ಇನ್ನೊಮ್ಮೆ ಕಲಿಯೋಣ. ಸುನ್ನಿಗಳಾದ ನಾವು ನಮ್ಮ ನೆಬಿಯವರ ಬಗ್ಗೆ ಮದ್‍ಹ್ ಹೇಳುವುದು ನಿನ್ನಂತವರಿಗೆ ಸಹ್ಯವಾಗುತ್ತಿಲ್ಲವೆಂದು ಗೊತ್ತು. ನೋಡು... ವೃಥಾ ಮನಸ್ಸನ್ನು ಹುಣ್ಣು ಮಾಡ್ಕೋಬೇಡ. ತೆರೆದ ಹೃದಯದೊಂದಿಗೆ ವಿಷಯಗಳನ್ನು ಕಲಿ. ಅಲ್ಲಾಹು ಸನ್ಮಾರ್ಗ ತೋರಿಸಿ ಕೊಡುವನು.
ನೆಬಿ(ಸ.ಅ)ರ ಬಗ್ಗೆ ಮದ್‍ಹ್ ಹೇಳಲು ನಮಗೆ ಕಲಿಸಿದ್ದು ಸ್ವತ ನೆಬಿಯವರೆ. ಹ್ಞಾಂ... ಆಶ್ಚರ್ಯವಾಯಿತೇ... ತಾಳು, ನೆಬಿಯರೇ ಸ್ವತಃ ಮದ್‍ಹ್ ಹೇಳಿದ್ದನ್ನು ನಿನಗೆ ತೋರಿಸಿ ಕೊಡ್ತೇನೆ ಬಾ... ಇಮಾಂ ಮುಸ್ಲಿಂ(ರ)ರವರು ತನ್ನ ಗ್ರಂಥದಲ್ಲಿ ಕಿತಾಬುಲ್ ಈಮಾನ್ ಎಂಬ ಅಧ್ಯಾಯದಲ್ಲಿ ಒಂದು ಹದೀಸ್ ನೀಡಿದ್ದಾರೆ. ಅದು ಹೀಗಿದೆ.
ಅನಸ್(ರ)ರವರಿಂದÀ ವರದಿ: ನೆಬಿ(ಸ.ಅ)ರವರು ಹೇಳಿದರು. “ನಾನು ಅಂತ್ಯ ದಿನದಂದು ಪ್ರವಾದಿಗಳ ಪೈಕಿ ಅತ್ಯಂತ ಹೆಚ್ಚು ಅನುಯಾಯಿಗಳಿರುವವನಾಗಿರುವೆ. ಸ್ವರ್ಗ ಕವಾಟವನ್ನು ಪ್ರಥಮವಾಗಿ ಬಡಿಯುವವನೂ ನಾನೇ ಆಗಿರುವೆ”
ನೋಡಿದೆಯಾ... ಪರಲೋಕದಲ್ಲಿ ತನಗಿರುವ ಉನ್ನತ ಪದವಿಯನ್ನು ಸ್ವತಃ ನೆಬಿಯವರೇ ಹೇಳಿಕೊಂಡರಲ್ಲಾ... ಅಂದರೆ ನೆಬಿ(ಸ.ಅ)ರವರ ಮದ್‍ಹನ್ನು ಅವರೇ ಹೇಳಿ ತೋರಿಸಿದರು ಎಂದಾಯಿತು. ಈಗ ನೀನೇ ಹೇಳು. ನೆಬಿ(ಸ.ಅ)ರವರ ಮಾದರಿಯನ್ನು ಸ್ವೀಕರಿಸಬೇಕೆಂದು ಹೇಳುವ ನೀನು ನೆಬಿ(ಸ.ಅ)ರವರ ಮದ್‍ಹನ್ನು ಸುನ್ನಿಗಳು ಹೇಳುವಾಗ ವಿರೋಧಿಸುವುದಾದರೂ ಯಾಕೆ?. ತನ್ನ ಬಗ್ಗೆ ಮದ್‍ಹ್ ಹೇಳಿ ನೆಬಿ(ಸ.ಅ)ರವರು ತೋರಿಸಿ ಕೊಟ್ಟಿರುವಾಗ ಅದನ್ನು ಮಾದರಿಯಾಗಿಸಿ ಮದ್‍ಹ್ ಹೇಳುವುದು ನಿನಗೆ ತಪ್ಪಾಗಿ ಕಂಡಿತೇ?. ನೆಬಿ(ಸ.ಅ)ರವರು ತನ್ನ ಬಗ್ಗೆ ಹೇಳಿಕೊಂಡದ್ದು ಕೇವಲ ಒಂದು ಬಾರಿ ಮಾತ್ರವಲ್ಲ. ಹಲವಾರು ಬಾರಿ ಹೇಳಿದ್ದಾರೆ. ಪುಟ ದೀರ್ಘವಾಗುವುದರಿಂದ ಕೆಲವೊಂದನ್ನು ಮಾತ್ರ ನೀಡುತ್ತಿದ್ದೇನೆ.
ಅಬೂ ಹುರೈರಾ(ರ) ವರದಿ ನಾನು ಆದಂ ಸಂತತಿಗಳ ನಾಯಕನಾಗಿರುವೆ. ಪ್ರಥಮವಾಗಿ ಕಬ್‍ರ್ ತೆರೆಯಲ್ಪಡುವುದು ನನ್ನದೇ. ಪ್ರಥಮಮಾಗಿ ಶಫಾಅತ್ ಗೈಯ್ಯುವವನೂ, ಶಫಾಅತ್ ಸ್ವೀಕರಿಸಲ್ಪಡುವವನೂ ನಾನೇ.(ಅಬೂದಾವುದು 4-218, ಮುಸ್ಲಿಂ 2-245)
ಆದಂ ಸಂತತಿಗಳ ಪೈಕಿ ಅಲ್ಲಾಹನ ಬಳಿ ಅತ್ಯಂತ ಹೆಚ್ಚು ಗೌರವಾನ್ವಿತ ವ್ಯಕ್ತಿ ನಾನಾಗಿದ್ದೇನೆ. ಇದು ಅಹಂಭಾವದ ಮಾತಲ್ಲ.(ತಿರ್ಮುದ್ಸಿ 5-245)
ಇದೇ ರೀತಿ “ಅಂತ್ಯ ದಿನದಲ್ಲಿ ಲಿವಾವುಲ್ ಹಮ್ದ್ ಹಿಡಿಯುವವನು ನಾನಾಗಿದ್ದೇನೆ. ಆದಂ(ಅ) ಹಾಗೂ ಇನ್ನಿತರ ಪ್ರವಾದಿಗಳು ನಾನು ಹಿಡಿದ ಪತಾಕೆಯಡಿ ಒಂದುಗೂಡುವರು...” (ತಿರ್ಮುದ್ಸಿ 2-247) ಎಂದೂ ಹದೀಸ್‍ನಲ್ಲಿ ಕಾಣಬಹುದು.
ಇದನ್ನೆಲ್ಲಾ ಇಲ್ಲಿ ಯಾಕೆ ಹೇಳಿದನೆಂದರೆ, ನಬಿ(ಸ.ಅ)ರವರು ಸ್ವತಃ ಮದ್‍ಹ್ ಹೇಳುವ ಮೂಲಕ ನಮಗೆ ಮಾದರಿಯಾಗಿರುವಾಗ ಸುನ್ನಿಗಳು ಒಟ್ಟು ಸೇರಿ ಪ್ರವಾದಿ(ಸ.ಅ)ರವರ ಮದ್‍ಹ್ ಹೇಳುವಾಗ, ಅದಕ್ಕೆ ಮೌಲಿದ್, ಮಾಲೆ, ಬುರ್ದಾ ಎಂದು ಹೆಸರಿಟ್ಟರು ಎಂಬ ಕಾರಣಕ್ಕಾಗಿ ಅದನ್ನು ನಿನ್ನಂತವರು ಶಿರ್ಕ್, ಬಿದ್‍ಅತ್, ಅನಿಸ್ಲಾಮಿಕ ಎಂದು ಕರೆಯುತ್ತಾರಲ್ಲಾ...!!. ನಿಜಕ್ಕೂ ಇದು ಅಜ್ಞಾನವಲ್ಲದೆ ಮತ್ತೇನು?. ನಬಿ(ಸ.ಅ)ರವರು ಸ್ವತಃ ಮೌಲಿದ್(ಮದ್‍ಹ್) ಹೇಳಿದ್ದನ್ನು ನೀನೀಗ ತಿಳಿದೆ. ಇನ್ನು ನೆಬಿ(ಸ.ಅ)ರು ಇತರರ ಮೌಲಿದ್(ಮದ್‍ಹ್) ಹೇಳಿ ನಮಗೆ ಮಾದರಿ ತೋರಿಸಿದ್ದನ್ನು ನಿನಗೆ ತಿಳಿಯಬೇಕೆ.. ಇಲ್ಲೊಂದು ಹದೀಸ್ ನೋಡು...
ಅಬೂ ಹುರೈರಾ(ರ) ವರದಿ: ನೆಬಿ(ಸ.ಅ) ಹೇಳಿದರು “ಅಬೂಬಕರ್(ರ) ಉತ್ತಮ ವ್ಯಕ್ತಿ, ಉಮರ್(ರ) ಉತ್ತಮ ವ್ಯಕ್ತಿ, ಅಬೀ ಉಬೈದ ಉತ್ತಮ ವ್ಯಕ್ತಿ, ಸಾಬಿತ್ ಬಿನ್ ಕೈಸ್ ಉತ್ತಮ ವ್ಯಕ್ತಿ.(ಮುಸ್ತದ್‍ರಕ್ 3-233)
ಈ ಹದೀಸ್ ಏನನ್ನು ತಿಳಿಸಿತು ಗೊತ್ತಾಯಿತೇ... ನೆಬಿ(ಸ.ಅ)ರವರು ತನ್ನ ಸ್ವಹಾಬಿಗಳ ಮದ್‍ಹನ್ನು ಹೇಳಿದರು ಎಂದಲ್ಲವೇ?. ಈ ರೀತಿ ಮಹಾತ್ಮರ ಬಗ್ಗೆ ಒಳ್ಳೆಯ ಮಾತುಗಳನ್ನಾಡುವುದಕ್ಕೆ ಮೌಲಿದ್ ಎಂದು ಸುನ್ನಿಗಳು ಹೇಳುತ್ತಾರೆ. ಅದು ಕಡಿಮೆಯಾದರೂ, ಜಾಸ್ತಿಯಾದರೂ, ಪದ್ಯ-ಗದ್ಯವಾದರೂ ಸರಿ. ಹೀಗೆ ನೆಬಿ(ಸ.ಅ)ರವರು ಸ್ವತಃ ಕೀರ್ತನೆ ಹೇಳಿ, ಸ್ವಹಾಬಿಗಳ ಮದ್‍ಹನ್ನೂ ಹೇಳಿ ನಮಗೆ ಮಾದರಿಯಾಗುವಾಗ ನಿನೇಕೆ ಅದನ್ನು ಶಿರ್ಕ್ ಎಂದು ಕರೆಯುವ ಧೈರ್ಯ ತೋರಿಸುತ್ತಿ?. ಇದು ಬೆಳಕಿಗೆ ಬೆನ್ನು ತಿರುಗಿಸುವ ಜಾಯಮಾನವಲ್ಲವೇ?.
ಮಾತ್ರವಲ್ಲ ಇಂದು ನಾಡಿನೆಲ್ಲೆಡೆ ವ್ಯಾಪಕವಾಗಿ ಕಾಣುವ ಬುರ್ದಾ, ಮಾಲೆ, ನಅïತೇಗಳೆಂಬ ಕಾವ್ಯ ರೂಪದ ಕೀರ್ತನೆಗಳ ಬಗ್ಗೆಯೂ ನಿನ್ನಂತವರು ಏನೆಲ್ಲಾ ಹೇಳಿಯಾಗಿದೆ. ಸುನ್ನಿಗಳು ಇವುಗಳನ್ನೆಲ್ಲಾ ನಡೆಸುವಾಗ ಅವರು ಉದ್ಧರಿಸುವ ಪುರಾವೆಗಳಾದರೂ ಏನು ಎಂದು ಕಲಿಯುವ ಗೋಜಿಗೆ ನೀನ್ಯಾಕೆ ಇಳಿಯಲಿಲ್ಲ. ನಾನು ಈ ಮೊದಲೇ ತಿಳಿಸಿದಂತೆ ನಿನ್ನ ನೇತಾರರು ಸುನ್ನಿಗಳೆಂದರೆ ಕುರಾಫಿಗಳು, ಬಿದ್‍ಅತ್‍ಗಾರರು, ಅನಿಸ್ಲಾಮಿಕ ಕಾರ್ಯಗಳನ್ನು ಗೈಯ್ಯುವವರು ಎಂಬಿತ್ಯಾದಿ ಸುಳ್ಳುಗಳನ್ನು ತಮ್ಮ ಅನುಯಾಯಿಗಳ ತಲೆಗೆ ತುಂಬಿಸಿ ಬಿಟ್ಟಿದ್ದಾರೆ. ಆದ್ದರಿಂದಲೇ ಸುನ್ನಿಗಳು ಏನು ಮಾಡಿದರೂ ಆ ಕೂಡಲೇ ಶಿರ್ಕ್‍ನ ಮುದ್ರೆಯನ್ನು ನೀವು ಒತ್ತುತ್ತಿರುವುದು.
ನಿಜ ಹೇಳಬೇಕೆಂದರೆ ಕಾವ್ಯ ರೂಪದ ಕೀರ್ತನೆಗೂ ನೆಬಿ(ಸ.ಅ)ರವರೇ ಪ್ರೋತ್ಸಾಹ ಕೊಟ್ಟಿದ್ದಾರೆ. ಅಬೂಬಕ್ಕರ್ ಸಿದ್ದೀಕ್(ರ)ರವರ ಕುರಿತು ಪ್ರವಾದಿ ಪ್ರೇಮಿ ಹಸ್ಸಾನುಬ್‍ನ್ ಸಾಬಿತ್(ರ) ಕಾವ್ಯ ರೂಪದಲ್ಲಿ ಕೀರ್ತಿಸಿದ್ದನ್ನು ತಿಳಿದ ನೆಬಿ(ಸ.ಅ)ರವರು ಅದನ್ನು ಪುನಃ ಹೇಳುವಂತೆ ಪ್ರೋತ್ಸಾಹಿಸಿದ್ದರೆಂದರೆ ಕಾವ್ಯರೂಪದ ಕೀರ್ತನೆಗೂ ನೆಬಿ(ಸ.ಅ)ರವರೇ ಮಾದರಿ ಎಂದಾಯಿತು. ಈ ಕೆಳಗಿನ ಹದೀಸನ್ನು ಗಮನವಿಟ್ಟು ಓದಿ ನೋಡು.
ಹುಬೈಬ್(ರ)ರು ಹೇಳುತ್ತಾರೆ. ನಾನು ನಬಿ(ಸ.ಅ)ರವರ ಸಮೀಪವಿದ್ದಾಗ ನೆಬಿ(ಸ.ಅ)ರು ಹಸ್ಸಾನ್(ರ)ರೊಂದಿಗೆ ಈ ರೀತಿ ಕೇಳಿದರು. “ನೀವು ಅಬೂಬಕರ್(ರ)ರವರ ಬಗ್ಗೆ ಏನಾದರೂ (ಕಾವ್ಯ ಕೀರ್ತನೆ) ಹೇಳಿರುವಿರಾ?. “ಹೌದು” ಎಂದು ಹಸ್ಸಾನ್(ರ) ಉತ್ತರಿಸಿದಾಗ, ಹಾಗಾದರೆ ಅದನ್ನು ಇನ್ನೊಮ್ಮೆ ಹೇಳಿರಿ. ನಾನು ಕೇಳುವೆನು ಎಂದು ನೆಬಿ(ಸ.ಅ)ರು ನುಡಿದಾಗ ಹಸ್ಸಾನ್(ರ) ಈ ರೀತಿ ಹಾಡಿದರು. ‘ಶತ್ರುಗಳು ಗುಹೆಗೆ ಹತ್ತಿ ಸುತ್ತಲೂ ನಡೆದಾಗ, ಗುಹೆಯಲ್ಲಿದ್ದ ಇಬ್ಬರಲ್ಲಿ ಎರಡನೆಯವರು(ಅಬೂಬಕರ್(ರ)) ಸರಿಸಾಟಿಯಿಲ್ಲದೆ, ಸೃಷ್ಟಿಗಳಲ್ಲಿ ಅತ್ಯಂತ ಹೆಚ್ಚು ನೆಬಿ(ಸ.ಅ)ರನ್ನು ಅವರು ಪ್ರೀತಿಸಿದ್ದರು” ಇದನ್ನು ಕೇಳಿದ ನೆಬಿ(ಸ.ಅ)ರವರು ಮುಗುಳ್ನಕ್ಕರು.
ತನ್ನ ಪ್ರಿಯ ಮಿತ್ರನ ಬಗ್ಗೆ ಹಸ್ಸಾನ್ ಕೀರ್ತಿಸಿದಾಗ ನೆಬಿ(ಸ.ಅ)ರು ಸಂತೋಷದಿಂದ ನಕ್ಕು ತನ್ನ ಸಮ್ಮತಿ ಸೂಚಿಸಿದರೆಂದಲ್ಲವೇ ಈ ಮೇಲಿನ ಘಟನೆ ನಮಗೆ ತಿಳಿಸಿ ಕೊಡುವುದು. ಮತ್ತೇಕೆ ನೀನು ಇಂತದ್ದನೆಲ್ಲಾ ಶಿರ್ಕ್ ಎನ್ನುತ್ತೀ?. ನೆಬಿ(ಸ.ಅ)ರಿಗೆ ತಿಳಿಯದ ಶಿರ್ಕ್ ನಿನಗೆ ತಿಳಿಯಿತು ಎಂದಲ್ಲವೇ ನಿನ್ನ ವಾದದ ಅರ್ಥ?.
ಇನ್ನು, ನಿನಗೊಂದು ಸಂಶಯವಿರಬಹುದು. ಮೀಲಾದ್ ದಿನದಂದು ರ್ಯಾಲಿ ನಡೆಸುವುದು ಯಾಕೆ?. ಅದು ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡುವ ಕಾರ್ಯವಲ್ಲವೇ?. ನೆಬಿ(ಸ.ಅ)ರವರು ರ್ಯಾಲಿ ನಡೆಸಿದ್ದಾರಾ?. ಹೀಗೆ ಮುಂದುವರಿಯುತ್ತಿದೆ. ನಿನ್ನ ಪ್ರಶ್ನೆಗಳು. ಹೀಗೆ ಕೇಳುವಾಗ ನೀನೊಂದು ಸತ್ಯವನ್ನು ಮುಚ್ಚಿಡುತ್ತೀ. ನೀವು ನಡೆಸುವ ಸಮ್ಮೇಳನ, ವಸ್ತು ಪ್ರದರ್ಶನ, ಹಾಗೂ ಇನ್ನಿತರ ಕಾರ್ಯಕ್ರಮಗಳ ವೇಳೆ ರಸ್ತ ತಡೆಯುಂಟಾದರೆ ನಿಮಗದು ದೊಡ್ಡ ವಿಷಯವಾಗಿ ಕಾಣುತ್ತಿಲ್ಲ. ಆದರೆ ಸುನ್ನಿಗಳು ಮೀಲಾದ್‍ನಂದು ರಸ್ತೆಯ ಬದಿಯಲ್ಲಿ, ಯಾರಿಗೂ ತೊಂದರೆಯಾಗದ ರೀತಿಯಲ್ಲಿ ರ್ಯಾಲಿ ನಡೆಸಿದರೆ ಅದು ನಿನಗೆ ತಪ್ಪಾಗಿ ಕಾಣುತ್ತದೆ. ಛೆ!... ಎಂತಹಾ ವೈರುದ್ಧ್ಯವಿದು!. ನಿನಗೆ ತಿಳಿದಿದೆಯೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೂ ಹೇಳುತ್ತಿದ್ದೇನೆ. ಹಝ್ರತ್ ಉಮರ್(ರ.ಅ)ರವರು ಇಸ್ಲಾಂ ಸ್ವೀಕರಿಸಿದ ಕೂಡಲೇ ನೆಬಿ(ಸ.ಅ)ರವರಲ್ಲಿ ಕೇಳಿದ ಮಾತು ನಿನಗೆ ಗೊತ್ತಾ?. “ಪ್ರವಾದಿ(ಸ.ಅ)ಯವರೇ ನಾವು ಸತ್ಯ ಪಥದಲ್ಲಿರುವವರಲ್ಲವೇ?” ನೆಬಿ(ಸ.ಅ)ರು ಹೌದೆಂದರು. ಹಾಗಾದರೆ ನಾವೇಕೆ ರಹಸ್ಯವಾಗಿ ದೀನೀ ಪ್ರಚಾರ ನಿರ್ವಹಿಸುವುದು?. ಬನ್ನಿ ನಾವು ಬಹಿರಂಗವಾಗಿಯೇ ಧರ್ಮ ಪ್ರಚಾರ ಮಾಡೋಣ” ಎನ್ನುತ್ತಾ ಕಅïಬಾದ ಬಳಿಗೆ ರ್ಯಾಲಿ ಬಂದ ಘಟನೆಯನ್ನು ಗ್ರಂಥಗಳಲ್ಲಿ ಕಾಣಬಹುದು. ಕಂಡೂ ಕಾಣದಂತೆ ನಟಿಸುವ ಅಥವಾ ಕಂಡದ್ದನ್ನು ಮುಚ್ಚಿಡುವ ನಿನ್ನ ಈ ಸ್ವಬಾವವು ಒಳ್ಳೆಯೆಂದು ನಿನಗೆ ತೋರುತ್ತಿದೆಯೇ?
ನೆಬಿ(ಸ.ಅ)ರು ಮದೀನಾ ತಲುಪುವುದಕ್ಕಿಂತ ಮುಂಚೆ ದಾರಿ ಮಧ್ಯೆ ಕಾಣಸಿಕ್ಕ ಬನೂ ಸಹ್‍ಮ್ ಗೋತ್ರದ ನಾಯಕ ಬುರೈದತುಲ್ ಅಸ್ಲಮಿಯ ಇಸ್ಲಾಂ ಸ್ವೀಕಾರದ ಬಳಿಕ ನೆಬಿ(ಸ.ಅ) ರೊಂದಿಗೆ ಹೇಳಿದ ಮಾತು “ಓ ಪ್ರವಾದಿಯವರೇ ತಾವು ಪತಾಕೆಯಿಲ್ಲದೆ ಮದೀನಾ ಪ್ರವೇಶಿಸದಿರಿ” ಎನ್ನುತ್ತಾ ತನ್ನ ಶಿರವಸ್ತ್ರವನ್ನು ತೆಗೆದು ಬೆತ್ತವೊಂದಕ್ಕೆ ಕಟ್ಟಿ ಬಾವುಟವನ್ನಾಗಿಸಿ ನೆಬಿ(ಸ.ಅ)ರೊಂದಿಗೆ ಮದೀನಾ ಪ್ರವೇಶಿಸಿದರು. ಇದಕ್ಕೆ ನೆಬಿ(ಸ.ಅ)ರು ಯಾವುದೇ ವಿರೋಧವನ್ನು ವ್ಯಕ್ತಪಡಿಸಲಿಲ್ಲ. “ವಫಾಉಲ್ ವಫಾ” ಎಂಬ ಗ್ರಂಥದ 1-243ರಲ್ಲಿ ಈ ಘಟನೆಯನ್ನು ಕಾಣಬಹುದು. ಅಂದರೆ ರ್ಯಾಲಿ ನಡೆಸುವುದು, ಪತಾಕೆ ಹಿಡಿಯುವುದು ತಪ್ಪಲ್ಲ ಎಂದಾಗಿದೆ ಇದರರ್ಥ.
ಇನ್ನು ಅನ್ನದಾನ ಬಗ್ಗೆ ನಿನಗೆ ಸಂಶಯವಿರಲಾರದು ಎಂದು ಭಾವಿಸುತ್ತೇನೆ. ಕಾರಣ ನಿನ್ನ ಮನೆಯಲ್ಲಿ ಮದುವೆ ಅಥವಾ ಇನ್ನಿತರ ಸಮಾರಂಭದ ವೇಳೆ ಜನರನ್ನು ಕರೆದು ಅನ್ನ ನೀಡುವ ನೀನು ಅನ್ನದಾನವನ್ನು ವಿರೋಧಿಸುವೆ ಎಂದು ನಾನು ಭಾವಿಸುವುದಿಲ್ಲ. ನಿಮ್ಮ ಸಮ್ಮೇಳನಗಳಲ್ಲಿ ಎರಡು ದಿನಗಳ ಕಾಲದ ತಂಗುವ ಸ್ತ್ರೀ-ಪುರುಷರಿಗೆ ಅನ್ನ ಪಾನೀಯಗಳನ್ನು ನೀವು ದಾನವಾಗಿ ನೀಡುತ್ತಿರುವ ಸಂಗತಿಯನ್ನು ಒಮ್ಮೆ ನೆನಪಿಸಿಕೋ. ಅಂತೆಯೇ ನೆಬಿ ಜನ್ಮದಿನದಂದು ಸಂತೋಷಗೊಂಡು ಸ್ವಲಾತ್ ಹೇಳಲು, ಮದ್‍ಹ್ ಹೇಳಲು ಬಂದು ಸೇರಿದ ಜನರಿಗೆ ಅನ್ನ ಪಾನೀಯಗಳನ್ನು ದಾನ ನೀಡಿದರೆ ಅದು ತಪ್ಪಲ್ಲವೆಂದು ಭಾವಿಸಿದರೆ ಸಾಕು.
ಮೀಲಾದ್ ದಿನದಂದು ಸುನ್ನಿಗಳು ಮಾಡುವ ಇನ್ನೊಂದು ಕಾರ್ಯವಾಗಿದೆ ದಫ್ ಬಾರಿಸುವುದು ಹಾಗೂ ನೆಬಿ ಮದ್‍ಹ್ ಹೇಳಿದ ವಿಧ್ಯಾರ್ಥಿಗಳಿಗೆ ಬಹುಮಾನ ನೀಡುವುದು.
ದಫ್ ಬಾರಿಸುವುದರ ಬಗ್ಗೆ ಸ್ವಹಾಬಿಗಳ ಮಾತಿನಲ್ಲೇ ಕೇಳೋಣ. ಮುಅವ್ವಿದರ ಪುತ್ರಿ ರುಬಯ್ಯಿಅï(ರ) ಹೇಳುತ್ತಾರೆ. “ನನ್ನ ವಿವಾಹ ದಿನ ನಬಿ(ಸ.ಅ)ರು ನನ್ನ ಮನೆಗೆ ಬೇಟಿಯಿತ್ತರು. ನಬಿ(ಸ.ಅ)ರು ಕುಳಿತಿದ್ದಾಗ ಬದ್‍ರ್ ಶುಹದಾಗಳ ಕೀರ್ತನೆಯನ್ನು ಹೇಳುತ್ತಾ ದಫ್ ಬಾರಿಸುತ್ತಿದ್ದ ಬಾಲಿಕೆಯರನ್ನು ಕಂಡರು. ಇನ್ನೂ ಹಾಡುವಂತೆ ಪ್ರೋತ್ಸಾಹಿಸಿದರು” ಹೀಗೇ ದಫ್ ಬಾರಿಸುವುದಕ್ಕೆ ನೆಬಿ(ಸ.ಅ) ಪ್ರೋತ್ಸಾಹವನ್ನು ನೀಡಿದ್ದಾಗಿ ಈ ಹದೀಸ್‍ನಲ್ಲಿ ಕಾಣಬಹುದು(ಬುಖಾರಿ 2-570).
ಇನ್ನು ಬಹುಮಾನ ಕೊಡುವ ಬಗ್ಗೆ,
ನೆಬಿ(ಸ.ಅ)ರವರನ್ನು ಧಾರಾಳವಾಗಿ ಕೀರ್ತಿಸಿದ ಕಅಬ್(ರ)ರಿಗೆ ತನ್ನ ಶಾಲನ್ನು ಬಹುಮಾನವಾಗಿ ನೀಡಿದ್ದು, ಹಸ್ಸಾನುಬ್‍ನ್ ಸಾಬಿತ್(ರ)ರವರಿಗೆ ನೆಬಿ(ಸ.ಅ)ರವರ ಬಗ್ಗೆ ಮದ್‍ಹ್ ಹೇಳಲಿಕ್ಕಾಗಿ ಮಾತ್ರ ವೇದಿಕೆಯೊಂದನ್ನು ನಿರ್ಮಿಸಿ ಕೊಟ್ಟು, “ಅಲ್ಲಾಹನೇ ನಿನ್ನ ಮಲಕ್‍ಗಳ ಮೂಲಕ ಹಸ್ಸಾನರಿಗೆ ಶಕ್ತಿ ನೀಡು” ಎಂದು ಪ್ರಾರ್ಥಿಸಿದ್ದು ನೆಬಿ(ಸ.ಅ)ರ ಮದ್‍ಹ್ ಹೇಳುವುದಕ್ಕೆ ಸಿಕ್ಕ ಬಹುಮಾನವಾಗಿದೆ.
ಇನ್ನು ಹೇಳು.. ಈ ಮೀಲಾದ್ ದಿನದಂದು ಸುನ್ನಿಗಳು ಮಾಡುವ ಈ ಕಾರ್ಯಗಳ ಪೈಕಿ ಯಾವುದು ಶಿರ್ಕ್?, ಯಾವುದು ಅನಿಸ್ಲಾಮಿಕ?, ಯಾವುದು ಕಂದಾಚಾರ?, ಯಾವುದು ನರಕಕ್ಕೆ ಹೋಗುವ ಕಾರ್ಯಗಳು?.
ಇಲ್ಲ... ಉತ್ತರವಿಲ್ಲ ಅಲ್ಲವೇ...? ಅದಕ್ಕೆ ನಾನು ಹೇಳಿದ್ದು, ನಿನ್ನ ನೇತಾರರು ನಿನಗೆ ಕಲಿಸಿ ಕೊಟ್ಟರು ಮೀಲಾದುನ್ನಬಿ ಅನಿಸ್ಲಾಮಿಕವೆಂದು. ಆದರೆ ಯಾಕೆ ಅನಿಸ್ಲಾಮಿಕವೆಂದು ಕೇಳುವ ಧೈರ್ಯ ನಿನಗಿಲ್ಲವಾದದ್ದು ಖೇದಕರ.
ನನಗೊತ್ತು... ಇಷ್ಟೆಲ್ಲಾ ಹೇಳಿದ ಬಳಿಕ ನೀನು ಕೇಳುವ ಪ್ರಶ್ನೆಯೊಂದಿದೆ ಅದೇನೆಂದರೆ, “ಎಲ್ಲಾ ಸರಿ.. ಮೀಲಾದುನ್ನಬಿ ಎಂಬ ಒಂದು ಆಚರಣೆ ಇಸ್ಲಾಮಿನಲ್ಲಿದೆಯೇ? ಮೊದಲು ಅದನ್ನು ತಿಳಿಸಿ ನಂತರ ಈ ಕಾರ್ಯಗಳನ್ನು ಸಾಬೀತು ಪಡಿಸಿದರೆ ಸಾಕು” ಎಂದಾಗಿದೆ ನಿನ್ನಂತವರ ಪ್ರಶ್ನೆ. ಇದಕ್ಕೆ ಹೇಳುವುದು ಅಜ್ಞಾನವೆಂದು. ಯಾಕೆಂದರೆ ರಬೀಉಲ್ ಅವ್ವಲ್ ಹನ್ನೆರಡರ ದಿನಕ್ಕೆ ಸುನ್ನಿಗಳು ಮಹತ್ವ ಕೊಡುವುದರ ಕಾರಣ ಆ ದಿನದಂದು ನೆಬಿ(ಸ.ಅ) ಜನಿಸಿದರು ಎಂದಾಗಿದೆ. “ನೆಬಿ(ಸ.ಅ)ರಿಂದಾಗಿ ನೀವು ಸಂತೋಷ ಪಡಿರಿ” ಎಂದು ಕುರ್‍ಆನ್ ಹೇಳುವಾಗ ಸತ್ಯವಿಶ್ವಾಸಿ ಸಂತೋಷ ಪಡದಿರಲು ಸಾಧ್ಯವೇ? ನೆಬಿ(ಸ.ಅ)ರ ಮೇಲೆ ಪ್ರೀತಿಯಿರುವವರಿಗೆ ಪ್ರತೀ ದಿನವೂ ನೆಬಿಯವರ ಬಗ್ಗೆ ಹೇಳುವುದು, ಹಾಡುವುದು, ಬರೆಯುವುದು ಎಲ್ಲವೂ ಸಂತೋಷದ ಸಂಗತಿಯಾಗಿದೆ. ಈ ಎಲ್ಲಾ ಸಂತೋಷಕ್ಕೂ ಕಾರಣವಾದ ನಬಿ(ಸ.ಅ)ರ ಜನ್ಮ ದಿನದಂದು ಸಂತೋಷ ಪಡದಿರಲು ಹೇಗೆ ಸಾಧ್ಯ?. ಆದ್ದರಿಂದಲೇ ಆ ದಿನದ ಮಹತ್ವದ ಬಗ್ಗೆ ಪೂರ್ವಿಕ ಮಹಾತ್ಮರುಗಳಾದ ಪಂಡಿತರು ಹಲವಾರು ಗ್ರಂಥಗಳನ್ನು ಬರೆದು ಮೀಲಾದುನ್ನಬಿಗೆ ಮಹತ್ವವಿರುವುದನ್ನು ತಿಳಿಸಿದರು.
ಖಂಡಿತವಾಗಿಯೂ ನಮಗೆ ತಿಳಿದಿದೆ, ತನ್ನ ಸಹೋದರನಿಗೆ ಒಂದು ಪುತ್ರ ಜನಿಸಿತು ಎಂದು ಸಂತೋಷಪಟ್ಟ ಕಾರಣಕ್ಕಾಗಿ ಅಬೂಲಹಬನಿಗೆ ಪ್ರತೀ ಸೋಮವಾರ ಕುಡಿಯಲು ಪಾನೀಯ ಲಭಿಸುತ್ತಿದೆಯಾದರೆ ನೆಬಿ(ಸ.ಅ)ರವರಲ್ಲಿ ವಿಶ್ವಾಸವಿಟ್ಟು, ಪ್ರೀತಿಸುವ ನಮಗೆ ಖಂಡಿತವಾಗಿಯೂ ಪ್ರತಿಫಲ ಇದ್ದೇ ಇದೆ. ಇಮಾಂ ನವವೀ(ರ)ರವರ ಗುರುವರ್ಯರಾದ ಇಮಾಂ ಅಬೂಶಾಮ (ರ)ರವರ ಮಾತು ಇದಕ್ಕೆ ಹೆಚ್ಚು ಪುಷ್ಠಿ ನೀಡುತ್ತಿದೆ.
ಅವರು ಏನು ಹೇಳಿದರು ಗೊತ್ತೇ..? “ನೆಬಿ(ಸ.ಅ)ರವರ ಮೌಲಿದ್‍ನ ಕಾರಣದಿಂದ ಸಂತೋಷಗೊಳ್ಳುವುದು ಸ್ವದಖಗೈಯ್ಯುವುದು, ಸತ್ಕರ್ಮಗೈಯ್ಯುವುದು, ಅಲಂಕಾರಗೊಳಿಸುವುದು, ಅನ್ನದಾನಗಳಂತಹ ಸಹಾಯ ಕಾರ್ಯಗಳನ್ನು ಮಾಡುವುದು ನೆಬಿ(ಸ.ಅ)ರವರ ಸ್ನೇಹದ ಲಕ್ಷಣವಾಗಿದೆ ಹಾಗೂ ನೆಬಿ(ಸ.ಅ)ರವರ ಮೌಲಿದಾಚರಣೆಯು ಸುನ್ನತ್ತಾಗಿದೆ”.
ಅರೆ.. ಇಂತಹ ಜಗದ್ವಿಖ್ಯಾತ ವಿದ್ವಾಂಸರು ಮೌಲಿದಾಚರಣೆಯನ್ನು ಪುಣ್ಯಕರ್ಮವೆಂದು ಹೇಳುವಾಗ ನೀನ್ಯಾಕಯ್ಯಾ ಅದನ್ನು ಬಿದ್‍ಅತ್ ಎಂದು ಕರೆದೆ? ಇದು ನಿನ್ನ ಜ್ಞಾನದ ಕೊರತೆಯಲ್ಲವೇ..? ಈ ಇಮಾಂ ಅಬೂಶಾಮ(ರ)ರವರು ಯಾರೆಂದು ಗೊತ್ತೇ..? ಕೇವಲ ನಲವತ್ತು ವರ್ಷಮಾತ್ರ ಜೀವಿಸಿ ಖುರ್‍ಆನ್ ವ್ಯಾಖ್ಯಾನ, ಹದೀಸ್, ಫಿಕ್ಹೀ ವಿಷಯಗಳಲ್ಲಿ ಹಲವಾರು ಗ್ರಂಥಗಳನ್ನು ರಚಿಸಿದ, ಪ್ರತೀ ದಿನ ಹದಿನಾರು ಪುಟಗಳಷ್ಟು ಕಿತಾಬ್ ರಚಿಸುತ್ತಿದ್ದ, ದೀನೀ ಸೇವೆಯ ಗುಂಗಿನಲ್ಲಿ ವಿವಾಹವಾಗುವುದನ್ನೇ ಮರೆತ ಇಮಾಂ ನವವೀ(ರ)ರವರ ಉಸ್ತಾದರಾಗಿದ್ದಾರೆ ಈ ಅಬೂ ಶಾಮ(ರ). ಜಗತ್ತಿನಲ್ಲಿ ಇಮಾಂ ನವವೀ(ರ)ರವರ ಗ್ರಂಥ ಪಾರಾಯಣಗೈಯ್ಯದ ಒಂದೇ ಒಂದು ದಿನಗಳಿಲ್ಲ. ಅಂತಹ ಶ್ರೇಷ್ಠ ಪಂಡಿತರ ಉಸ್ತಾದ್ ಹೇಳುವುದನ್ನು ಅಂಗೀಕರಿಸುವುದು ಬಿಟ್ಟು ಈ ಹುಚ್ಚು ವಾದವನ್ನು ನೀನೇಕೆ ಹರಿಯಬಿಟ್ಟೆ..?
ಅದೇ ರೀತಿ 7ನೇ ಶತಮಾನದಲ್ಲಿ ಜೀವಿಸಿದ ಇಮಾಂ ಯಾಫೀ(ರ)ರವರು ಮೌಲಿದ್‍ನ ಬಗ್ಗೆ ಏನೆಂದರು ಗೊತ್ತೇ..?
“ನೆಬಿ(ಸ.ಅ)ರವರ ಮೌಲಿದ್‍ಗಾಗಿ ಯಾರಾದರೊಬ್ಬರು ಸ್ಥಳ ಸೌಕರ್ಯವೇರ್ಪಡಿಸಿ ಜನರನ್ನು ಆಹ್ವಾನಿಸಿ, ಅನ್ನದಾನದಂತಹ ಸತ್ಕರ್ಮ ಮಾಡಿದರೆ ಅಲ್ಲಾಹು ಆತನನ್ನು ಸಿದ್ಧೀಖ್‍ಗಳು, ಶುಹದಾಗಳು, ಹಾಗೂ ಸ್ವಾಲಿಹ್‍ಗಳೊಂದಿಗೆ ಸ್ವರ್ಗದಲ್ಲಿ ಒಂದು ಗೂಡಿಸುವನು”.
ನೋಡು ಮಕ್ಕಾದಲ್ಲಿ ಜನಿಸಿ ಅಲ್ಲೇ ದೀನಿ ಸೇವೆಗೈದು ಮಕ್ಕಾದಲ್ಲೇ ವಫಾತಾದ ಇಮಾಂ ಯಾಫೀ(ರ)ರವರು ಹೇಳುವುದು ಮೌಲಿದ್‍ನ ಕಾರಣದಿಂದ ಆತ ಸ್ವರ್ಗ ಪ್ರವೇಶಿಸುವನೆಂದು. ಆದರೆ.... ಕೇರಳದ ನಿನ್ನ ವಹ್ಹಾಬಿ ನೇತಾರ ಬಾಲುಶ್ಯೇರಿ ಹೇಳಿದ ಮಾತು ನಿನಗೆ ನೆನಪಿರಬಹುದು, “ಮೌಲಿದ್‍ಗೆ ಪುರಾವೆಯಿಲ್ಲವೆಂದು ಮಾತ್ರವಲ್ಲ, ರಸ್ತೆಯಲ್ಲಿದ್ದ ಕಲ್ಲನ್ನು ಬದಿಗೆ ಸರಿಸಿದರೆ, ಮುಸ್ಲಿಮನೊಬ್ಬನಿಗೆ ಸಲಾಂ ಹೇಳಿದರೆ, ಅಥವಾ ಪರಸ್ಪರ ಮುಗುಳ್ನಕ್ಕರೆ, ಹೆಚ್ಚೇಕೆ ಒಂದು ಅಣುಗಾತ್ರದಷ್ಟು ಸತ್ಕರ್ಮಗೈದರೆ ಸಿಗುವ ಪುಣ್ಯ ಸಹ ಮೌಲಿದಾಚರಣೆ ಗೆ ಲಭಿಸಲಾರದು” ನೋಡು ಎಂತಹಾ ಅಜ್ಞಾನ..!! ಪುರಾವೆ ಉದ್ದರಿಸಿ ಪುಣ್ಯ ಕರ್ಮವೆಂದು ಹೇಳುವಾಗ ಇಂತಹ ಲೋಕಲ್ ವ್ಯಕ್ತಿಗಳು ಅದಕ್ಕೆದುರಾಗಿ ಹೇಳಿಕೆ ನೀಡುತ್ತಾರೆ.! ಇನ್ನಾದರೂ ನೀನು ಚಿಂತಿಸು ಕೇವಲ ಅಂಧವಾಗಿ ನಿರಾಕರಿಸುವುದರ ಬದಲು ವಿಷಯವನ್ನು ಆಳವಾಗಿ ಕಲಿಯಲು ತಯಾರಾಗು.
ಒಟ್ಟಿನಲ್ಲಿ ಮೀಲಾದುನ್ನಬೀ ಬಿದ್‍ಅತ್ ಎಂದು ಒಂದೇ ಮಾತಿನಲ್ಲಿ ತಳ್ಳಿ ಹಾಕುವುದಕ್ಕಿಂತ ಮೊದಲು ಈ ಮೀಲಾದುನ್ನಬೀ ಎಂಬ ಹೆಸರಲ್ಲಿ ಸುನ್ನಿಗಳು ಆಚರಿಸುವ ಆಚರಣೆಗಳಾವು ಎಂದು ಪ್ರತ್ಯೇಕವಾಗಿ ನೋಡಿ ಕಲಿ. ಆ ಬಗ್ಗೆ ಸಂಶಯಗಳಿದ್ದರೆ ಕಿತಾಬ್ ತಿಳಿದವರೊಂದಿಗೆ ಚರ್ಚಿಸು. ಅದು ಬಿಟ್ಟು ಒಂದೆರಡು ನೋಟೀಸು ಮುದ್ರಿಸಿ ಹಂಚಿದರೆ, ಫೇಸ್‍ಬುಕ್ ಅಥವಾ ವಾಟ್ಸಪ್‍ಗಳಲ್ಲಿ ನಾಲ್ಕೈದು ಪೋಸ್ಟ್‍ಗಳನ್ನು ಕಳುಹಿಸಿದರೆ ಏನೂ ಪ್ರಯೋಜನವಿಲ್ಲ.
ನೋಡು... ನಾನು ಅತ್ಯಂತ ಸೌಮ್ಯವಾಗಿಯೇ ವಿಷಯಗಳನ್ನು ಪ್ರತಿಪಾದಿಸಿದ್ದೇನೆ. ಆವೇಶ ಹೆಚ್ಚಾಗಿ ನಿಂದಿಸುವ ಮಾತುಗಳನ್ನು ಎಲ್ಲೂ ಬಳಸಿಲ್ಲ. ನನ್ನ ಉದ್ದೇಶವೊಂದೇ... ನೀನು ಒಳ್ಳೆಯವನಾಗಬೇಕು. ಪರಲೋಕದಲ್ಲಿ ಜಯಶಾಲಿಯಾಗಬೇಕು. ಸಜ್ಜನರ ಸರಣಿಯಲ್ಲಿ ಸಾಗುತ್ತಿರುವುದರಿಂದ ಮಾತ್ರ ಅದು ಸಾಧ್ಯ. ಆದ್ದರಿಂದ ಸಜ್ಜನರ ಅಭಿಪ್ರಾಯಗಳನ್ನು ನಾನಿಲ್ಲಿ ತಿಳಿಸಿದ್ದೇನೆ. ಉಳಿದದ್ದು ನಿನಗೆ ಬಿಟ್ಟ ವಿಷಯ. ಅಲ್ಲಾಹು ನಮಗೆಲ್ಲರಿಗೂ ಸನ್ಮಾರ್ಗವನ್ನು ಕರುಣಿಸಲಿ ಆಮೀನ್.
No comments:
Post a Comment