*ಹುತಾತ್ಮ ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಕರ್ನಾಟಕದ ಹರಿಕಾರ*
*_✍🏻ಲಾಸ್ಟ್ ಬೆಂಚ್ ಜಲೀ..._*
*_ಸ್ವಾತಂತ್ರ್ಯ ಸಮರದ ಮಹಾ ದಂಡನಾಯಕ_*
*ಟೇಬಲ್ ನಂ:3*
ಬ್ರಿಟಿಷರನ್ನು ಈ ದೇಶದ ಪ್ರಥಮ ಶತ್ರುಗಳೆಂದು ಪರಿಗಣಿಸಿದ.
ಹೈದರ್, ಬ್ರಿಟಿಷರನ್ನು ಮೀರಿಸುವ ರಾಜತಾಂತ್ರಿಕ ನೈಪುಣ್ಯದಿಂದ ಅವರ ವಿರುದ್ಧ ಮರಾಠರು, ನಿಜಾಮ ಹಾಗೂ ಫ್ರೆಂಚರೊಡನೆ ಸೈನಿಕ ಒಕ್ಕೂಟ ಸ್ಥಾಪಿಸಿಕೊಂಡು 1767-69ರ ಮೊದಲ ಆಂಗ್ಲ-ಮೈಸೂರು ಯುದ್ಧವನ್ನು ಎದುರಿಸಿದ. ಹೈದರನ ಈ ಎಲ್ಲ ರಾಜತಾಂತ್ರಿಕ ಹಾಗೂ ಸೈನಿಕ ಕ್ರಮಗಳಲ್ಲಿ ಸರಿಸಾಟಿಯಾಗಿ ಭಾಗವಹಿಸಿದ ಹದಿಹರೆಯದ ಟಿಪ್ಪು ಈ ಯುದ್ಧದಲ್ಲೂ ಪ್ರಮುಖ ಪಾತ್ರ ವಹಿಸಿದ. ಪರಿಣಾಮವಾಗಿ ಮೈಸೂರಿನ ಸೈನ್ಯ ಬ್ರಿಟಿಷರ ಕೇಂದ್ರವಾಗಿದ್ದ ಮದ್ರಾಸಿಗೆ ಕೇವಲ ಹತ್ತು ಕಿ.ಮೀ. ದೂರದಲ್ಲಿ ಬಿಡಾರಹೂಡಿ ಸವಾಲೊಡ್ಡಿ ನಿಂತಿತು. ಕೇವಲ ಹನ್ನೆರಡು ವರ್ಷಗಳ ಹಿಂದೆ 1757ರ ಪ್ಲಾಸಿ ಕದನದಲ್ಲಿ ವಿಜಯಿಗಳಾಗಿ, ಭಾರತವನ್ನೇ ನುಂಗುವ ಯೋಜನೆ ರೂಪಿಸಿದ್ದ ಬ್ರಿಟಿಷ್ ವಸಾಹತುಶಾಹಿ, 12 ವರ್ಷಗಳ ನಂತರ 1769ರಲ್ಲಿ ಹೈದರ್ ನೇತೃತ್ವದ ಮೈಸೂರು ಸೈನ್ಯದ ಮುಂದೆ ಶರಣಾಗಿ ನಿಂತಿತು.
ಸೆಂಟ್‍ಥೋಮ್, ಆರಣಿ, ಕಾವೇರಿಪಾಕ್, ಮಚಲಿಪಟ್ಟಣ, ಬಕ್ಸರ್ ಮುಂತಾದ ಕಡೆಗಳಲ್ಲಿ ಸರಣಿ ವಿಜಯ ಪಡೆದ ಬ್ರಿಟಿಷ್ ವಸಾಹತು ನೌಕೆ ಹೈದರನ ಮೈಸೂರು ಸೈನ್ಯದ ಮುಂದೆ ತಲೆಬಾಗಿ ನಿಂತು 1769ರ ಏಪ್ರಿಲ್ 2 ರಂದು ಶಾಂತಿ ಒಪ್ಪಂದಕ್ಕೆ ಮುಂದಾಯಿತು.ಈ ಪ್ರಥಮ ವಸಾಹತುಶಾಹಿ ವಿರೋಧಿ ಯುದ್ಧದಲ್ಲಿ ಮೈಸೂರು ಪಡೆದ ವಿಜಯವು ಬ್ರಿಟಿಷರ ವಿರುದ್ಧ ಭಾರತೀಯ ಶಕ್ತಿಯೊಂದರ ಪ್ರಪ್ರಥಮ ವಿಜಯವೇ ಆಗಿತ್ತು.
ಈ ಯುದ್ಧದಲ್ಲಿ ಹೈದರ್ ಹಾಗೂ ಟಿಪ್ಪು ಸ್ಪಷ್ಟವಾಗಿ ಗ್ರಹಿಸಿದ್ದ ಸಮಕಾಲೀನ ಸತ್ಯವೊಂದಿತ್ತು. ಬ್ರಿಟಿಷ್ ವಸಾಹತುಶಾಹಿಗಳು ಭಾರತದ ಶಕ್ತಿಗಳ ನಡುವೆ ತೂರಿ ಇಡೀ ಭಾರತವನ್ನು ನುಂಗುತ್ತಿರುವುದನ್ನು ಅವರು ಮನಗಂಡರು. ಬ್ರಿಟಿಷ್ ವಸಾಹತುಶಾಹಿಗಳು ಎಲ್ಲಾ ಭಾರತೀಯ ಶಕ್ತಿಗಳ ಪ್ರಥಮ ಶತ್ರುಗಳು ಹಾಗೂ ಅವರ ವಿರುದ್ಧ ಭಾರತದ ಶಕ್ತಿಗಳು ತಮ್ಮ ನಡುವಿನ ಕಚ್ಚಾಟವನ್ನು ನಿಲ್ಲಿಸಿ ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂಬ ಐತಿಹಾಸಿಕ ಅಗತ್ಯವನ್ನು ಅರಿತುಕೊಂಡಿದ್ದರು.
ಹೈದರ್-ಟಿಪ್ಪು ಕೂಡಲೇ ಈ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗಿದ್ದರು. ಮೈಸೂರು ಸಂಸ್ಥಾನದ ಪಾರಂಪರಿಕ ಶತೃಗಳಾದ ಮರಾಠರೊಡನೆ, ಹೈದ್ರಾಬಾದಿನ ನಿಜಾಮನೊಡನೆ ಶಾಂತಿ ಸಂಧಾನ ಮಾಡಿಕೊಂಡು ಬಲವಾದ ಬ್ರಿಟಿಷ್ ವಿರೋಧಿ ಸೈನಿಕ ಒಕ್ಕೂಟ ಸ್ಥಾಪಿಸಿಕೊಂಡರು. ಬ್ರಿಟಿಷ್ ವಿರೋಧಿ ಸಂಗ್ರಾಮದಲ್ಲಿ ಅವರೊಡನೆ ವೈರುಧ್ಯ ಹೊಂದಿದ್ದ ಮತ್ತೊಂದು ಐರೋಪ್ಯ ಶಕ್ತಿಯಾದ ಫ್ರೆಂಚರ ಸಹಾಯವನ್ನೂ ಪಡೆದುಕೊಂಡರು. ಈ ಎಲ್ಲಾ ಸಮರ ಸಿದ್ಧತೆಗಳ ನಂತರ ಬ್ರಟಿಷರನ್ನು ಒದ್ದೋಡಿಸುವ ಉದ್ದೇಶದಿಂದ ಎರಡನೇ ಆಂಗ್ಲೋ-ಮೈಸೂರು ಯುದ್ಧ 1780 ರಲ್ಲಿ ಪ್ರಾರಂಭವಾಯಿತು.
ಇದಕ್ಕಾಗಿ ಹೈದರ್ ಮೈಸೂರು ಸಂಸ್ಥಾನ ಒಂದರಿಂದಲೇ ಒಂದು ಲಕ್ಷದಷ್ಟು ಸೈನ್ಯವನ್ನು ಜಮಾಯಿಸಿದ್ದ. ಈ ಯುದ್ಧದುದ್ದಕ್ಕೂ ಮೈಸೂರಿನ ಪಡೆಗಳು ಪ್ರದರ್ಶಿಸಿದ್ದ ಶೌರ್ಯ-ಸಾಮಥ್ರ್ಯಗಳನ್ನು ಬ್ರಿಟಿಷರು-ಫ್ರೆಂಚರು ಸಹ ಗುರುತಿಸಬೇಕಾಯಿತು. ಉದಾಹರಣೆಗೆ ಹೈದರನ ಸೈನ್ಯಗಳು ಪೂರ್ವ ಕರಾವಳಿಯ ಕಾಂಜೀವರಂ ಮುಂತಾದವುಗಳನ್ನೆಲ್ಲಾ ವಶಪಡಿಸಿಕೊಂಡು ಬ್ರಿಟಿಷ್ ಕೋಟೆಯಾದ ಫೋರ್ಟೋನೋವೋದ ತನಕ ಬಂದಿದ್ದವು. ಪೊಲಿಯೂರು ಎಂಬಲ್ಲಿ ಕರ್ನಲ್ ಬೈಲಿಯೊಡನೆ ಸಂಭವಿಸಿದ ಕಾಳಗದಲ್ಲಿ ಆತನನ್ನು ಸಂಪೂರ್ಣವಾಗಿ ಸೋಲಿಸಲಾಯಿತು. ಬಕ್ಸರ್ ಕದನದ ಬ್ರಿಟೀಷ್ ಹೀರೋ ಎಂಬ ಪದಕ ಧರಿಸಿ ಬಂದಿದ್ದ ಹೆಕ್ಟರ್ ಮನ್ರೋ ಹಾಡುಹಗಲೇ ಮದ್ರಾಸಿಗೆ ಪಲಾಯನ ಮಾಡುವಂತಾಯಿತು. ಇತಿಹಾಸ ತಜ್ಞರಪ್ರಕಾರ ಆ ಸಂದರ್ಭದಲ್ಲಿ ಹೈದರನ ಸೈನ್ಯ ಇನ್ನಷ್ಟು ಮುಂದುವರೆದಿದ್ದೇ ಆಗಿದ್ದಲ್ಲಿ ಮದ್ರಾಸ್ ಹೈದರನ ಕೈವಶವಾಗುತ್ತಿತ್ತು!
ನೇರಕಾಳಗ ಹಾಗೂ ಸಮರಗಳಿಂದ ಮೈಸೂರನ್ನು ಗೆಲ್ಲಲು ಅಸಾಧ್ಯವೆಂದು ಮನಗಂಡ ಬ್ರಿಟಿಷರು ತಮ್ಮ ವಸಾಹತುಶಾಹಿ ಆಯುಧಗಳಾದ ಕುತಂತ್ರ, ದ್ರೋಹ ಹಾಗೂ ಒಡೆದಾಳುವ ನೀತಿಗಳ ಮೊರೆಹೋದರು. ಬ್ರಿಟಿಷರ ವಿರುದ್ಧ ಹೈದರನ ನೇತ್ರತ್ವದಲ್ಲಿ ಸೈನಿಕ ಒಕ್ಕೂಟ ಸ್ಥಾಪನೆಯಾಗಿದ್ದರೂ, ಇವರಿಗಿದ್ದ ದೇಶಪ್ರೇಮ, ದೂರದೃಷ್ಥಿ, ಉಳಿದ ರಾಜರಿಗೆ ಇರಲಿಲ್ಲ. ಮರಾಠರು, ನಿಜಾಮರು ತಮ್ಮ ತಮ್ಮ ಸಂಕುಚಿತ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಈ ಒಕ್ಕೂಟ ಸೇರಿದ್ದರು. ಇದನ್ನು ಗ್ರಹಿಸಿದ ವಸಾಹತುಶಾಹಿಗಳು ನಿಜಾಮ ಹಾಗೂ ಮರಾಠರೊಡನೆ ಪ್ರತ್ಯೇಕವಾಗಿ “ಸಾಲ್‍ಬಾಯ್ “ ಒಪ್ಪಂದವನ್ನು ಮಾಡಿಕೊಂಡು ಬ್ರಿಟಿಷ್ ವಿರೋಧಿ ಭಾರತೀಯ ಒಕ್ಕೂಟವನ್ನು ಮುರಿದರು. ಪರಿಣಾಮವಾಗಿ ಮರಾಠರು ಯುದ್ಧದಿಂದ ಹಿಂದೆ ಸರಿದರು. ನಿಜಾಮನ ಪಡೆ ಒಂದು ಗುಂಡನ್ನೂ ಹಾರಿಸಲಿಲ್ಲ. ಇದೇ ಹೊತ್ತಿನಲ್ಲಿ ಯುರೋಪಿನಲ್ಲಿ ಬ್ರಿಟಿಷ್-ಫ್ರೆಂಚರ ನಡುವೆ ಶಾತಿಸ್ಥಾಪನೆಯಾಗಿದ್ದರಿಂದ ಫ್ರೆಂಚರೂ ಈ ಒಕ್ಕೂಟಕ್ಕೆ ಬೆಂಬಲ ಹಿಂತೆಗೆದುಕೊಂಡರು.
ಬ್ರಿಟಿಷ್ ಸಾಮ್ರಾಜ್ಯವನ್ನು ಬಗ್ಗುಬಡಿಯಬೇಕೆಂಬ ಮಹಾ ಉದ್ದೇಶವನ್ನು ಮರಾಠರು, ನಿಜಾಮರು ಸ್ವಾರ್ಥಕ್ಕಾಗಿ ಭಗ್ನಗೊಳಿಸಿ ದ್ರೋಹಗೈದ ವಿಷಾದದ ಸಂದರ್ಭದಲ್ಲಿಯೇ ಹೈದರಾಲಿಯು ಕೊನೆಯುಸಿರೆಳೆದಿದ್ದು. ಆತ ರಣರಂಗದಲ್ಲಿ ಪ್ರಾಣಬಿಟ್ಟನೇ ಹೊರತು ಮೈಸೂರು ಸಂಸ್ಥಾನದ ಸ್ವಾತಂತ್ರ್ಯವನ್ನುಬಿಟ್ಟುಕೊಡಲಿಲ್ಲ. ಮಾತ್ರವಲ್ಲ, ತನ್ನ ಮಗನಾದ ಟಿಪ್ಪುವಿನಲ್ಲೂ ಬ್ರಿಟಿಷ್ ವಿರೋಧಿ ಯುದ್ಧವನ್ನು ಮುನ್ನಡೆಸುವ ಸಂಕಲ್ಪ ಮತ್ತು ಸಾಮಥ್ರ್ಯವನ್ನು ಸಿದ್ಧಗೊಳಿಸಿದ್ದ.
*_Continues..._*
ಪ್ರಿಯರೇ ಪರ-ವಿರೋಧಗಳಿಂದ ಹೊರತಾದ ಟಿಪ್ಪು ಸುಲ್ತಾನ್ ಕುರಿತ ವಾಸ್ತವ ಸಂಗತಿಗಳನ್ನು ತಿಳಿಸುವ ಬರೆಹ ಇದಾಗಿದೆ. ಟಿಪ್ಪುಸುಲ್ತಾನ್ ಜಯಂತಿಯನ್ನು ಮತೀಯ ನೆಲೆಯಲ್ಲಿ ವಿರೋಧಿಸಲಾಗುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಮುನ್ನೆಲೆಗೆ ತರಲು ಬಯಸುವ
ಚರ್ಚೆಯಲ್ಲಿ ನೆರವಾಗುವ ಉದ್ದೇಶದಿಂದ ಈ ಬರೆಹವನ್ನು ಕಳುಹಿಸುತ್ತಿದ್ದೇವೆ.
ಸಹಕಾರ: ಸಮಾಜವಿಜ್ಞಾನ ಅಧ್ಯಯನ ಸಂಸ್ಥೆ
*_ಲಾಸ್ಟ್ ಬೆಂಚ್ ಜಲೀ...._*
No comments:
Post a Comment