Tuesday, November 14, 2017

*ಸ್ವಲಾತ್ ಹೇಳಲು ಪ್ರೇರಣೆಯಾಗುವ "ಸ್ವಲಾತ್ ಸಮರ್ಪಣೆ" ಕಾರ್ಯಕ್ರಮಗಳು.!*

ಸ್ವಲಾತ್ ಸಮರ್ಪಣೆ, ಸ್ವಲಾತ್ ಮಜ್ಲಿಸ್ ಹಾಗೂ ಸ್ವಲಾತ್ ಗ್ರೂಪ್ ಗಳು, ನಿರಂತರ ಮತ್ತು ಯಥೇಚ್ಛವಾಗಿ ಸ್ವಲಾತ್ ಹೇಳಲು ಸಹಕಾರಿ.
ಯಥೇಚ್ಛ ಸ್ವಲಾತ್ ಸಲಾಮನ್ನು ಹೇಳುವುದು, ಇಹ-ಪರ ವಿಜಯಕ್ಕಿರುವ ಮೆಟ್ಟಿಲಾಗಿದೆ.
*"ನಿತ್ಯ ಐವತ್ತು ಸ್ವಲಾತ್ ಹೇಳುವವರಿಗೆ ನನ್ನ ಶಫಾಹತ್ ನಿಶ್ಚಿತ, ಮತ್ತು ನಾಳೆ ಮಹಶರಾದಲ್ಲಿ ಅವರೊಂದಿಗೆ ನಾನು ಮುಸಾಫಹತ್ (ಹಸ್ತಲಾಘವ) ಮಾಡುವೆ" (ತ್ವಬ್ರಾನಿ)*
*"ಅಂತ್ಯ ದಿನದ ಭಯಾನಕತೆಯಿಂದ ಸುಲಭದಲ್ಲಿ ಪಾರಾಗುವವರು ಯಾರೆಂದರೆ, ಇಹದಲ್ಲಿ ನನ್ನ ಮೇಲೆ ಅತೀ ಹೆಚ್ಚು ಸ್ವಲಾತ್ ಹೇಳುವವರಾಗಿರುತ್ತಾರೆ" (ಬೈಹಕಿ (ರ))*

ಎಲ್ಲಾ ಸಮಸ್ಯೆಗಳಿಗೂ ಪರಿಹಾರವಾಗಿದೆ ಸ್ವಲಾತ್. ಯಥೇಚ್ಛವಾಗಿ ಸ್ವಲಾತ್-ಸಲಾಮ್ ಹೇಳಬೇಕೆಂಬ ಉದ್ದೇಶ ನಮಗಿದ್ದರೂ, ಕೆಲವೊಮ್ಮೆ ನಮ್ಮ ಉದಾಸೀನತೆ ಕಾರಣದಿಂದ ಉದ್ದೇಶಿಸಿದಷ್ಟು ಸ್ವಲಾತ್ ಹೇಳಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅದಕ್ಕಿರುವ ಪರಿಹಾರವೆಂದರೆ, ಸ್ವಲಾತ್ ಸಮರ್ಪಣೆ, ಸ್ವಲಾತ್ ಮಜ್ಲಿಸ್ ನಲ್ಲಿ ಭಾಗಿಯಾಗುವುದು ಮತ್ತು ಸ್ವಲಾತ್ ಗ್ರೂಪ್ ನಲ್ಲಿ ಸೇರಿಕೊಳ್ಳುವುದಾಗಿದೆ.

ಸ್ವಲಾತ್ ಸಮರ್ಪಣೆ ಮತ್ತು ಸ್ವಲಾತ್ ಗ್ರೂಪ್ ಗಳು ಒಂತರಾ ಒತ್ತಡವಿದ್ದಂತೆ. ಯಾವುದೇ ಕಾರ್ಯಕ್ಕೆ ಒತ್ತಡಗಳಿದ್ದರೆ, ಆ ಕಾರ್ಯವು ಸುಲಭವಾಗಿ ನೆರವೇರಿಸಲು ಸಾದ್ಯವಾಗುತ್ತದೆ.

ಉದಾಹರಣೆಗೆ: ರಮಲಾನ್ ತಿಂಗಳಲ್ಲಿ ನಾವು ನಿರಂತರ ಮೂವತ್ತು ದಿನ ಉಪವಾಸ ಹಿಡಿಯುತ್ತೇವೆ. ದಿನಂಪ್ರತೀ 20+3 ರಕಹತ್ ಸುನ್ನತ್ ನಮಾಝ್ ಮಾಡುತ್ತೇವೆ. ಅದೇ ನಮಗೆ ಬೇರೆ ತಿಂಗಳಲ್ಲಿ ಒಂದೆರಡು ಸುನ್ನತ್ ಉಪವಾಸ ಹಿಡಿಯಲು ಮತ್ತು ಹತ್ತಿಪ್ಪತ್ತು ರಕಹತ್ ಸುನ್ನತ್ ನಮಾಝ್ ಮಾಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ, ರಮಲಾನ್ ನಲ್ಲಿ ನಮ್ಮ ಮೇಲೆ ಒತ್ತಡ ಇರುವುದರಿಂದ ನಿರಂತರ ಮೂವತ್ತು ದಿನ ಉಪವಾಸ ಹಿಡಿಯಲು ಸಾದ್ಯವಾಗುತ್ತದೆ.

ದಿನಕ್ಕೆ ಐವತ್ತು ಸ್ವಲಾತ್ ಹೇಳಲು ಸಾದ್ಯವಾಗದವರು ಸ್ವಲಾತ್ ಸಮರ್ಪಣೆಯಲ್ಲಿ ಭಾಗಿಯಾದಾಗ ನಿರ್ದಿಷ್ಟ ಸಮಯದಲ್ಲಿ ಐವತ್ತು ಸಾವಿರ-ಒಂದು ಲಕ್ಷ ಸ್ವಲಾತ್ ಹೇಳಬಲ್ಲರು. ಅಂದರೆ, ಸ್ವಲಾತ್ ಸಮರ್ಪಣಾ ಕಾರ್ಯಕ್ರಮವು ಅವರನ್ನು ಸ್ವಲಾತ್ ಹೇಳಲು ಪ್ರೇರೇಪಿಸುತ್ತದೆ. ಹೀಗೆ ಒಂದು ಅವಧಿಯಲ್ಲಿ ಒಂದು ಲಕ್ಷ ಸ್ವಲಾತ್ ಹೇಳಿ ಮುಗಿಸುವಾಗ, ವರ್ಷಪೂರ್ತಿ ದಿನವೊಂದಕ್ಕೆ 275 ರಷ್ಟು ಸ್ವಲಾತ್ ಹೇಳಿದಂತಾಗುತ್ತದೆ. ಅದೇ, ಸ್ವಲಾತ್ ಸಮರ್ಪಣಾ ಕಾರ್ಯಕ್ರಮ ಇಲ್ಲದಿದ್ದರೆ, ದಿನಕ್ಕೆ ಐವತ್ತರಷ್ಟು ಸ್ವಲಾತ್ ಹೇಳುವುದು ಕೂಡಾ ನಮ್ಮಿಂದ ಸಾಧ್ಯವಾಗುವುದಿಲ್ಲ. ಮಹಿಳೆಯರು ಕೂಡಾ ಇಂತಹ ಸ್ವಲಾತ್ ಸಮರ್ಪಣಾ ಕಾರ್ಯಕ್ರಮದಿಂದ ಯಥೇಚ್ಛ ಸ್ವಲಾತ್ ಹೇಳುತ್ತಾರೆ.  ಯಾವ ರೀತಿಯಲ್ಲಿ ಸ್ವಲಾತ್ ಹೇಳಿದರೂ ಸ್ವಲಾತ್ ಹೇಳಿದುದರ ಪುಣ್ಯ ಲಭ್ಯ ತಾನೇ. ಅಂದಮೇಲೆ, ಸ್ವಲಾತ್ ವೃದ್ಧಿಸಲು ಸಹಕಾರಿಯಾಗುವ ಇಂತಹ ದಾರಿಗಳನ್ನು ಹೆಚ್ಚು ಹೆಚ್ಚು ಅನುಸರಿಸುವುದೇ ಒಳ್ಳೆಯದು.
*ಸ್ವಲಾತ್ ಹೇಳಲು ಇಂತಹ ಸಮರ್ಪಣೆಗಳ ಅವಶ್ಯಕತೆ ಇಲ್ಲ ಎಂದು ವಾದಿಸುವವರು, ಸ್ವಲಾತ್ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾದವರು ಮತ್ತು ಭಾಗಿಯಾಗದವರನ್ನು ತುಲನೆಮಾಡಿ ನೋಡಲಿ. ಯಾರಿಂದ ಹೆಚ್ಚು ಹೆಚ್ಚು ಸ್ವಲಾತ್ ಗಳು ಹೇಳಲ್ಪಡುತ್ತವೆ ಎಂದು. ಅವಾಗ ಸ್ವಲಾತ್ ಸಮರ್ಪಣೆಗಳ ಮಹತ್ವ ಅರಿವಾಗುತ್ತದೆ.*

*ಪ್ರವಾದಿ ಪ್ರೇಮಿಗಳಿಂದ ಯಥೇಚ್ಛ-ನಿರಂತರ ಸ್ವಲಾತ್ ಹೇಳಿಸುವ ಉದ್ದೇಶದಿಂದ SSF ಇಂತಹ ಸ್ವಲಾತ್ ಸಮರ್ಪಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತದೆ.*
ಪ್ರವಾದಿ ﷺ ರ ಮೇಲೆ ಯಥೇಚ್ಛವಾಗಿ ಸ್ವಲಾತ್ ಹೇಳಲು ಉದ್ದೇಶಿಸುವ ಪ್ರವಾದಿ ಪ್ರೇಮಿಗಳು ಈ ಒಂದು ಅವಕಾಶದ ಸದುಪಯೋಗವನ್ನು ಪಡೆಯುವರು.

ಯಾವಯಾವ ರೀತಿಯಲ್ಲೆಲ್ಲಾ ಸ್ವಲಾತ್ ವೃದ್ಧಿಸಲು ಸಾದ್ಯವೋ, ಆ ದಾರಿಗಳನ್ನೆಲ್ಲಾ ಅನುಸರಿಸಿ, ಯಥೇಚ್ಛ ಸ್ವಲಾತ್ ಹೇಳುವ ಪ್ರವಾದಿ ಪ್ರೇಮಿಗಳಾಗೋಣ. ಅಲ್ಲಾಹು ಅನುಗ್ರಹಿಸಲಿ, ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment