ಮೀಲಾದಾಚರಣೆ ಮತ್ತು ಸಲಫಿಗಳ ಕೂಚುಪುಡಿ ನೃತ್ಯ !!
ಸಹಾಬಿಗಳು ಈಗಿನ ಕ್ರಮದಲ್ಲಿ ಮೀಲಾದ್ ಆಚರಿಸಿರಲಿಲ್ಲ.
ಆದರೆ ಅವರಲ್ಲಿ ನಬಿ ಸ್ನೇಹ ಇತ್ತು.
ಸ್ನೇಹದ ಪ್ರಕಟಣೆಗೆ ಹೀಗೇ ಆಗಬೇಕು ಎಂದು ಇಸ್ಲಾಮ್ ಪರಿಮಿತಿ ಇಡಲಿಲ್ಲ. ಪ್ರಮಾಣಗಳಿಗೆ ವಿರುದ್ಧವಾಗದ ಯಾವ ವಿಧದಲ್ಲೂ ಅದನ್ನು ಪ್ರಕಟಿಸಬಹುದು.
ನಬಿಯವರು (ಸ) ಹೇಳದೆಯೇ ಸಹಾಬಿಗಳ ಇಷ್ಟದಂತೆ ನಬಿ ಸ್ನೇಹ ಪ್ರಕಟಿಸಿದ್ದೂ ಇದೆ.
ನಬಿಯವರು ( ಸ) ಮದೀನಾಕ್ಕೆ ಹಿಜ್ ರಾ ಹೋಗಿ ಮುಟ್ಟಿದಾಗ ಸಹಾಬಿಗಳು " ತಲ ಅಲ್ ಬದ್ ರು ಅಲೈನಾ " ಎಂದು ಮದ್ಹ್ ಗೀತೆ ಹಾಡಿ ಸ್ವಾಗತ ನೀಡಿದ್ದಾರೆ.
ಆ ಗೀತೆ ಯಾರು ರಚಿಸಿದ್ದು? ಅದನ್ನು ಹಾಡಲು ನಾನು ಹೇಳಿದೆನಾ? ನನ್ನನ್ನು ಬದ್ ರ್ ( ಪೌರ್ಣಮಿ) ಎಂದು ಉಪಮಿಸುದು ಯಾಕೆ? ನಾನು ಪೂರ್ಣ ಚಂದ್ರನಾ? ನಾನು ನಿಮ್ಮಂತೆ ಒಬ್ಬ ಮನುಷ್ಯನಲ್ಲವೇ? ಅದೂ ಪಬ್ಲಿಕ್ ನಲ್ಲಿ ನೀವು ಹೀಗೆಲ್ಲಾ ಹಾಡುವುದಾ ?
ಹೀಗೆ ಏನೂ ನಬಿಯವರು ( ಸ) ಪ್ರಶ್ನಿಸಲಿಲ್ಲ. ಪೌರ್ಣಮಿಯ ಪ್ರಭಾನಿಲವನ್ನೂ ಮೀರಿಸುವ ಆ ಪಾವನ ವದಾನರವಿಂದದಿಂದ ಮುತ್ತುಗಳನ್ನು ಪೋಣಿಸಿಟ್ಟಂತಹ ಪವಿತ್ರ ದಂತಪಕ್ತಿಗಳಿಂದ ಬೆಳ್ಳಂಬೆಳಗುವ ಪ್ರಭಾರಶ್ಮಿಗಳನ್ನು ಹೊರಸೂಸುತ್ತಾ ಮಂದಸ್ಮಿತ ವದನರಾಗಿ ಮೌನಾನುಮತಿ ನೀಡಿದರು!
ಮೀಲಾದಾಚರಣೆ ಈಗಿನ ವಿಧಾನಗಳಲ್ಲಿ ನಬಿ - ಸಹಾಬಿಗಳು ಮಾಡಿಲ್ಲ ಎಂಬ ದೃಷ್ಟಿಕೋನದಲ್ಲಿ ಈ ಕ್ರಮವನ್ನು ಬಿದ್ ಅತ್ ಎಂದು ಹೇಳಬಹುದು. ಆದರೆ ಒಂದು ಹೊಸ ಆವಿಷ್ಕಾರಕ್ರಮ ಎಂಬ ಬರೀ ಭಾಷಾರ್ಥದ ಬಿದ್ ಅತ್.
ನಬಿ ಸ್ನೇಹ ಬಿದ್ ಅತಲ್ಲ. ಅದರ ಪ್ರಕಟಣೆಯ ಈ ಕ್ರಮ ಮಾತ್ರ ಬಿದ್ ಅತ್ ಆದುದರಿಂದ ಅದು ಸುನ್ನತಾದ ಬಿದ್ ಅತ್.
ನಬಿಸ್ನೇಹ ಪ್ರಕಟಣೆಗೆ ನಬಿ- ಸಹಾಬಿಗಳ ತದ್ರೂಪಿ ಮಾದರಿ ಬೇಕೆಂದಿಲ್ಲ. ವಿರೋಧವಿಲ್ಲದ ಯಾವ ವಿಧದಲ್ಲೂ ಅದನ್ನು ಮಾಡಬಹುದು.
ಮೀಲಾದುನ್ನಬಿಯಲ್ಲಿ ನಡೆಯುತ್ತಿರುವುದು ಏನು?
1. ನಬಿಮದ್ಹ್ .
ಇದು ನಬಿಸುನ್ನತ್. ನಬಿಮದ್ ಹ್ ಹಾಡಲೆಂದೇ ಕವಿ ಹಸ್ಸಾನ್ ಬಿನ್ ಸಾಬಿತ್ ರವರಿಗೆ ಮದೀನಾ ಮಸ್ಜಿದಲ್ಲಿ ನಬಿಯವರು( ಸ) ಮಿನ್ಬರ್ ಕೊಟ್ಟಿದ್ದರು. ತಲ ಅಲ್ ಬದರು.. ಎಂಬ " ರಸೂಲ್ ಮಾಲೆ " ಪಬ್ಲಿಕಲ್ಲಿ ಹಾಡಿದ್ದನ್ನೂ ಅನುಮೋದಿಸಿದ್ದ ನಬಿಯವರು ಮಸ್ಜಿದಲ್ಲೂ ಅದಕ್ಕೆ ಪ್ರೋತ್ಸಾಹ ನೀಡಿ ಒಳ- ಹೊರಗಡೆ ಎಲ್ಲೆಲ್ಲೂ ನಬಿಮದ್ ಹ್ ಹೇಳಲು, ಹಾಡಲು ಪ್ರೋತ್ಸಾಹ ಕೊಟ್ಟಿದ್ದಾರೆ.
2. ಮಕ್ಕಳ ಪ್ರತಿಭಾ ಸ್ಪರ್ಧೆ.
ಮನುಷ್ಯನನ್ನು ಹೋಲುವ ಒಂದು ಮರ ಯಾವುದು?
ನ
ಒಂದು ದಿನ ನಬಿಯವರ ಪ್ರಶ್ನೆ.
ಯಾರೂ ಉತ್ತರಿಸಲಿಲ್ಲ.
ನಬಿಯವರೇ ( ಸ) ಹೇಳಿದರು ;
ಖರ್ಜೂರ ವೃಕ್ಷ.
ಅಬ್ದುಲ್ಲಾಹಿ ಬಿನ್ ಉಮರ್ ( ರ) ಮನೆಗೆ ಹೋದ ಬಳಿಕ ತಂದೆಯವರಾದ ಉಮರ್ (ರ) ರವರಲ್ಲಿ ಹೇಳಿದರು;
ನಬಿಯವರ ( ಸ) ಆ ಪ್ರಶ್ನೆಗೆ ನನಗೆ ಉತ್ತರ ಗೊತ್ತಿತ್ತು. ನಾನು ನಿಮ್ಮ ಹಿಂದೆ ಕೂತಿದ್ದೆ. ಆದರೆ ಹಿರಿಯರಾದ ನೀವು ಉತ್ತರ ಹೇಳದೆ ಇರುವಾಗ ನಾನು ಹೇಗೆ ಹೇಳುವುದು ಎಂಬ ಸಂಕೋಚದಿಂದ ನಾನು ಉತ್ತರ ಹೇಳಲಿಲ್ಲ.
ಆಗ ಉಮರ್ ( ರ) ಹೇಳಿದರು:
" ಮಗನೇ! ನೀನು ಉತ್ತರ ಹೇಳಬೇಕಿತ್ತು. ಹೇಳಿದ್ದಿದ್ದರೆ ನನಗೆ ಎಷ್ಟು ಸಂತೋಷವಾಗುತ್ತಿತ್ತು " !!
ಮಕ್ಕಳ ಪ್ರತಿಭೆಗೆ ತಂದೆಯರ ಅಭಿಮಾನವನ್ನು ನಾವಿಲ್ಲಿ ಕಾಣಬಹುದು. ಮೀಲಾದ್ ಸಮಾರಂಭದಲ್ಲಿ ಇದುವೇ ನಡೆಯುವುದು. ಅವರವರ ಮಕ್ಕಳ ಪ್ರತಿಭೆ ಕಂಡು ಆನಂದಿಸಲು ಹೆತ್ತವರಿಗೆ ಅವಕಾಶ.
ಜಿಬ್ ರೀಲ್ ಮನುಷ್ಯ ರೂಪದಲ್ಲಿ ಬಂದು ಪ್ರಶ್ನೋತ್ತರ ನಡೆಸಿ ಹೊರಟು ಹೋದರು. ಹೋದ ಬಳಿಕ ನಬಿಯವರು ಹೇಳಿದರು ; " ಅದು ಜಿಬ್ ರೀಲ್. ಅವರು ಬಂದಿದ್ದುದು ನಿಮಗೆ ದೀನ್
ಕಲಿಸಲಿಕ್ಕಾಗಿತ್ತು "
ಜಿಬ್ ರೀಲರಿಗೆ ತಿಳಿಯದ್ದನ್ನು ಕೇಳಿ ಕಲಿಯಲಿಕ್ಕೆ ಬಂದುದಲ್ಲ. ಅದನ್ನು ಜಿಬ್ ರೀಲರು ಸಂಭಾಷಣೆಯ ವೇಳೆಯಲ್ಲೇ ಸೂಚಿಸಿದ್ದರು. ನಬಿಯವರು ಒಂದೊಂದು ಉತ್ತರ ಹೇಳಿದಾಗಲೂ
" ಕರೆಕ್ಟ್ ಉತ್ತರ " ಎಂದಿದ್ದರು.
ಮೀಲಾದಲ್ಲಿ ಇದೂ ನಡೆಯುತ್ತದೆ. ಮಕ್ಕಳ ಸಂಭಾಷಣೆಯ ಮೂಲಕ ಸಭಿಕರಿಗೆ ದೀನ್ ಕಲಿಸುವ ಕ್ರಮ ನಡೆಯುತ್ತದೆ. ಇದೂ ನಬಿಸುನ್ನತ್.
3. ಮೆರವಣಿಗೆ.
ಉಮರ್ ಬಿನ್ ಖತ್ತಾಬ್ (ರ) ಇಸ್ಲಾಮಿನ ನಲ್ವತ್ತನೆಯ ಮೆಂಬರಾಗಿ ಇಸ್ಲಾಮಿಗೆ ದಾಟಿ ಬಂದ ತಕ್ಷಣ " ಸತ್ಯ ಧರ್ಮವನ್ನು ಈ ರೀತಿ ದಾರುಲ್ ಅರ್ಕಮ್ ಎಂಬ ಅಡಗುತಾಣದಲ್ಲಿ ಗುಪ್ತವಾಗಿ ನಡೆಸುವ ಅಗತ್ಯವಿಲ್ಲ. ಬನ್ನಿರೋ ಎಂದು ಹೇಳಿ ನಲ್ವತ್ತು ಮಂದಿಯನ್ನೂ ಕರಕೊಂಡು ಹೋಗಿ ಮೆರವಣಿಗೆ ನಡೆಸಿದರು. ನಬಿಯವರು ವಿರೋಧಿಸಲಿಲ್ಲ .
ಆದ್ದರಿಂದ ಮೆರವಣಿಗೆಯೂ ನಬಿ ಸುನ್ನತ್.
4. ಅನ್ನದಾನ, ಸಿಹಿ ಹಂಚಿಕೆ.
ಇದು ನಬಿಸುನ್ನತ್ ಎಂಬುದಕ್ಕೆ ಪುರಾವೆನೇ ಹೇಳಬೇಕಾದ ಅಗತ್ಯವಿಲ್ಲ.
5. ನಬಿಯವರ ( ಸ) ಚರಿತ್ರೆ ಹೇಳುವುದು.
6. ಸಲಾತ್ ಹೇಳುವುದು.
ಇದೂ ಬಿದ್ ಅತ್ತಾ ?
ಮೀಲಾದಾಚರಣೆಯಲ್ಲಿ ಯಾವುದು ತಪ್ಪು?
ಸೋಮವಾರ ಉಪವಾಸ ಸುನ್ನತ್ತಾಗಲು ಕಾರಣ ಅದು ನಾನು ಜನಿಸಿದ ದಿನವಾದುದರಿಂದ ಎಂದಿದ್ದಾರೆ ನಬಿಯವರು( ಸ)
ಹಾಗಾದರೆ ಉಪವಾಸ ಮಾಡದೆ ಸಿಹಿ ತಿನ್ನುವುದಾ ಎಂದು ಕೇಳಬೇಡಿ. ವರ್ಷದಲ್ಲೊಮ್ಮೆ ರಬೀಉಲ್ ಅವ್ವಲ್ ತಿಂಗಳ ಸೋಮವಾರ ಮಾತ್ರವಲ್ಲ ಉಪವಾಸ ಸುನ್ನತ್ ಇರುವುದು. ವರ್ಷದ ಎಲ್ಲಾ ಸೋಮವಾರವೂ ಇದೆ. ನಬಿಜನ್ಮ ದಿನದಂದು ಉಪವಾಸ ಸುನ್ನತ್ ಮಾಡುವ ಮೂಲಕ ನಬಿಜನ್ಮ ದಿನಕ್ಕೆ ಅಲ್ಲಾಹು ಒಂದು ವಿಶೇಷತೆ ಕೊಟ್ಟಿದ್ದಾನೆ ಎಂಬ ಅಂಶ ಇರುವುದು ವಾಸ್ತವ ತಾನೇ?
ಬಿದ್ ಅತ್ ಬಿದ್ ಅತ್ ಎಂದು ಲಾಗ ಹಾಕಬೇಡಿ.
ನೀವು ಎಷ್ಟೇ ಕೂಚುಪುಡಿ ನೃತ್ಯ ಮಾಡಿದರೂ ಕವಡೆ ಕಾಸಿನ ಕಿಮ್ಮತ್ತಿಲ್ಲ . ವರ್ಷ ಕಳೆದಂತೆ ನಬಿದಿನಾಚರಣೆ ವೈಭವ, ವೈವಿದ್ಯತೆ ಏರಿಸಿಕೊಂಡು ವಿಜೃಂಭಿಸುತ್ತಲೇ ಬರುತ್ತದೆ.
ನಬಿಸ್ನೇಹ ಅಂದರೆ ಹಾಗೆ.
ಅದಕ್ಕೆ ಕಟ್ಟುಪಾಡು ಇಲ್ಲ. ಅದು ಯಾವ ವಿಧ ಬಹಿರ್ಗಳಿಸುವುದೆಂದು ಹೇಳಲಾಗುವುದಿಲ್ಲ . ನಿಯಮದ ಮೇರೆ ಮೀರದಂತೆ ಅದು ಹೇಗೆ ಪ್ರಕಟವಾದರೂ ಅದು ನಬಿಸ್ನೇಹ.
ಅದು ಅದಮ್ಯ ಸ್ನೇಹ. ಮನದಾಳದಲ್ಲಿ ಅಚ್ಚೊತ್ತಿದ ಸ್ನೇಹ. ಈಮಾನ್ ಇರುವವನು ಜೀವ ಬೇಕಾದರೆ ಬಿಟ್ಟಾನು, ನಬಿಸ್ನೇಹ ಬಿಟ್ಟುಬಿಡಲಾರನು. ಯಾರೇ , ಏನೇ ಹೇಳಿದರೂ ಸರಿ.
ನಬಿಯವರು ( ಸ) ವಫಾತ್ ಆದ ಸುದ್ಧಿ ತಿಳಿದ ತಕ್ಷಣ ಓರ್ವ ಸಹಾಬಿ ; " ಅಲ್ಲಾಹ್ ! ಪರಲೋಕದಲ್ಲಿ ಮುತ್ತು ಹಬೀಬರನ್ನು ನಾನು ಕಾಣುವ ತನಕ ನನಗೆ ಕಣ್ಣುಗಳೇ ಬೇಡ " ಎಂದು ಪ್ರಾರ್ಥಿಸಿದರು . ಆಗಲೇ ಅವರ ದೃಕ್ಶಕ್ತಿ ಹೊರಟು ಹೋಯಿತು.
ನಾನು ಮರಣಹೊಂದಿದರೆ ನೀನು ಹೀಗೆ ಪ್ರಾರ್ಥಿಸಬೇಕು ಎಂದು ನಬಿಯವರು ( ಸ) ಆ ಸಹಾಬಿಯೊಡನೆ ಹೇಳಿರಲಿಲ್ಲ. ಆದರೂ ಸಹಾಬಿ ಹಾಗೆ ಪ್ರಾರ್ಥಿಸಿದರು ಎಂದು ಮಾತ್ರವಲ್ಲ , ಅಲ್ಲಾಹು ಅದನ್ನು ಮಾನ್ಯ ಮಾಡಿದನು. ಆದ್ದರಿಂದಲೇ ತಾನೇ ಅವರ ದೃಷ್ಟಿಯನ್ನು ಅಲ್ಲಾಹು ಆಗಲೇ ತೆಗೆದು ಹಾಕಿದ್ದು.
ಇದು ನಬಿಸ್ನೇಹವಾಗಿತ್ತು. ಭಾವುಕತೆಯಾಗಿತ್ತು. ಅದಕ್ಕೆ ನಬಿಯವರಿಂದ ( ಸ) ಮಾದರಿ ಇಲ್ಲದಿದ್ದರೂ ಅಲ್ಲಾಹು ಅಂಗೀಕರಿಸಿದನು.
-
No comments:
Post a Comment