Sunday, December 10, 2017

*ಮುಸ್ಲಿಂ ವಿದ್ವಾಂಸರು ಮತ್ತು ಶಿಕ್ಷಣ ಚಿಂತನೆಗಳು*
=============================
*ಎಂಎಂಎ ಸಿದ್ದೀಖ್ ಸಅದಿ ಮಿತ್ತೂರು*
                  =========

*ಇ*ಸ್ಲಾಂ ಶಿಕ್ಷಣಕ್ಕೆ ಮಹತ್ವ ನೀಡಿದೆ.ಮುಸ್ಲಿಂ ವಿದ್ವಾಂಸರ ಬಗ್ಗೆ ಕಲಿತರೆ ಈ ವಿಚಾರ ನಮಗೆ ತಿಳಿಯಬಹುದು. ಶಿಕ್ಷಣಕ್ಕಾಗಿಯೇ ಜೀವನ ಸವೆಸಿದ ಹಲವಾರು ವಿದ್ವಾಂಸರ ದೊಡ್ಡ ಪಟ್ಟಿ ಇತಿಹಾಸ ಪುಟಗಳಲ್ಲಿ ಕಾಣಬಹುದು.ಕಲಿಕೆ,ಕಲಿಸುವುದು,ಗ್ರಂಥ ರಚನೆ,ಶಿಕ್ಷಣ ಸಂಸ್ಥೆಗಳ ನಿರ್ಮಾಣ ಸೇರಿದಂತೆ ವಿದ್ಯಾಭ್ಯಾಸ ಸಂಬಂಧಿತ ಕಾರ್ಯಗಳಿಗಾಗಿಯೇ ಅವರು ಜೀವನ ವಿನಿಯೋಗಿಸಿದರು.
ಜತೆಗೆ ವಿದ್ಯಾಭ್ಯಾಸ ಪ್ರಕ್ರಿಯೆಗಳ ಬಗ್ಗೆಯೂ ಅವರು ಚಿಂತನೆ ನಡೆಸಿದ್ದಾರೆ.  ಖುರ್ಆನ್ ಹದೀಸ್             ವ್ಯಾಖ್ಯಾನ,ಕರ್ಮಶಾಸ್ತ್ರ,ಆಧ್ಯಾತ್ಮಿಕತೆ, ಮೊದಲಾದ ಇಸ್ಲಾಮಿಕ್ ಗ್ರಂಥಗಳಲ್ಲಿ ಮುಸ್ಲಿಂ ವಿದ್ವಾಂಸರ ಶಿಕ್ಷಣ ಸಂಬಂಧಿತ ಚಿಂತನೆಗಳು ಕಾಣಬಹುದು.
ಕೆಲವರು ಈ ಬಗ್ಗೆ ಪ್ರತ್ಯೇಕ ಗ್ರಂಥ ರಚಿಸಿದರೆ ಕೆಲವರು ತಮ್ಮ ಗ್ರಂಥಗಳ ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಮಹಾನ್ ವಿದ್ವಾಂಸರುಗಳ ಪೈಕಿ ಕೆಲವರ ಚಿಂತನೆಯ ಬಗ್ಗೆ ಸ್ವಲ್ಪ ತಿಳಿಯೋಣ.

*ಖತೀಬುಲ್ ಬಗ್ದಾದಿ(ರ)*
==================

ಹಿಜರಿ 463 ರಲ್ಲಿ ನಿಧನರಾದ ಖತೀಬುಲ್ ಬಗ್ದಾದಿ ಓರ್ವ ಹಿರಿಯ ಶಿಕ್ಷಣ ಚಿಂತಕರಾಗಿದ್ದರು.ಇತಿಹಾಸ,ಹದೀಸ್,ಮೊದಲಾದ ಜ್ಞಾನ ಶಾಖೆಗಳಲ್ಲಿ ಅತೀವ ಪಾಂಡಿತ್ಯ ಹೊಂದಿರುವ ಅಲ್ ಬಗ್ದಾದಿಯವರ ನಿಜನಾಮ ಅಹ್ಮದ್ ಬಿನ್ ಅಲೀ ಎಂದಾಗಿದೆ.ಅರವತ್ತಕ್ಕಿಂತಲೂ ಅಧಿಕ ಗ್ರಂಥಗಳನ್ನು ಅವರು ಬರೆದಿದ್ದಾರೆ.ಅವುಗಳಲ್ಲಿ ಕೆಲವು ವಿದ್ಯಾಬ್ಯಾಸದ ಬಗ್ಗೆಯಾಗಿತ್ತು.
ಅಲ್ ಜಾಮಿಉ ಲಿಅಖ್ಲಾಖಿ ರಾವೀ ವ ಅದಾಬಿಸ್ಸಾಮಿಅ್, ಅರ್ರಿಹ್ಲತು ಫೀ ತ್ವಲಬಿಲ್ ಹದೀಸ್,ಅಲ್ ಫಖೀಹ್ ವಲ್ ಮುಫಖ್ಖಿಹ್ ಮೊದಲಾದವುಗಳು ಇವುಗಳಲ್ಲಿ ಪ್ರಮುಖ ಗ್ರಂಥಗಳು.ಕೊನೆಯಲ್ಲಿ ಹೇಳಲಾದ ಗ್ರಂಥದ ಹೆಸರು ಅಧ್ಯಾಪಕ,ವಿಧ್ಯಾರ್ಥಿ ಎಂದಾಗಿದೆ.

ಪ್ರಸ್ತುತ ಗ್ರಂಥದಲ್ಲಿ ಅಧ್ಯಾಪನೆಯ ಶಿಷ್ಟಾಚಾರಗಳ ಬಗ್ಗೆ ಅವರು ಈ ರೀತಿ ಬರೆದಿದ್ದಾರೆ. ಕಲಿಸಲು ತೆರಳುವ ಮುನ್ನ ಸಿದ್ಧತೆ ಮಾಡಿ ಕೊಳ್ಳಬೇಕು.
ಮಲಮೂತ್ರ ವಿಸರ್ಜನೆ,ಹಸಿವು,ಮೊದಲಾದವುಗಳಿಂದ ಮುಕ್ತವಾಗಿ ಶುದ್ಧ ಮನಸ್ಸಿನೊಂದಿಗೆ ಅಧ್ಯಾಪನ ನಡೆಸಲು ಹೊರಡಬೇಕು.ಅಧ್ಯಾಪಕನ ಮುಖ ಎಲ್ಲಾ ವಿಧ್ಯಾರ್ಥಿಗಳು ಕಾಣುವಂತೆ ತರಗತಿಯ ಮುಂಬಾಗದ ಮಧ್ಯೆ ಕುಳಿತು ಕೊಳ್ಳಬೇಕು.
ಅವಸರ ಅವಸರ ಮಾಡದೇ ಶಾಂತ ಸಮಾಧಾನ ಚಿತ್ತದೊಂದಿಗೆ ತರಗತಿ ನಡೆಸಬೇಕು.ಅನಗತ್ಯ ವಿಳಂಬ ಮಾಡಬಾರದು.ಅದು ಮಕ್ಕಳಿಗೆ ಉದಾಸೀನತೆಯನ್ನುಂಟು ಮಾಡುತ್ತದೆ.ವಿದ್ಯಾರ್ಥಿಗಳು ವಿಷಯ ಮನದಟ್ಟು ಮಾಡಲು ಅಗತ್ಯ ಉದಾಹರಣೆಗಳು ಮತ್ತು ವಿವರಣೆ ನೀಡಬೇಕು.

      *ಇಮಾಂ ಗಝ್ಝಾಲಿ (ರ)*
====================
ಹುಜ್ಜತುಲ್ ಇಸ್ಲಾಂ ಅಬೂ ಹಾಮಿದಿಲ್ ಗಝ್ಝಾಲಿ(ರ) ಸುಪರಿಚಿತ ಮುಸ್ಲಿಂ ವಿದ್ವಾಂಸರು ಮತ್ತು ದಾರ್ಶನಿಕರು.ಹಿಜರಿ 505 ರಲ್ಲಿ ನಿಧನರಾದ ಮಹಾನುಬಾವರು ಜ್ಞಾನ ಲೋಕದ ಪ್ರಶೋಭಿತ ಸೂರ್ಯ.ಇನ್ನೂರಕ್ಕಿಂತಲೂ ಹೆಚ್ಚು ಪ್ರಮುಖ ಗ್ರಂಥಗಳ ಕರ್ತೃರಾದ ಅವರು ಶಿಕ್ಷಣ ಸಂಬಂಧಿತ ಮೌಲ್ಯಯುತ ಚಿಂತನೆಗಳು ನಡೆಸಿರುವರು.
ಇಹ್ಯಾಉಲೂಮುದ್ಧೀನ್ ಎಂಬ ಅವರ ಜಗತ್ಪ್ರಸಿದ್ಧ ಗ್ರಂಥದಲ್ಲಿ ಜ್ಞಾನದ ಬಗ್ಗೆ ವಿವರಿಸಲು ಒಂದು ಅಧ್ಯಾಯವನ್ನೇ ಮೀಸಲಿಟ್ಟಿದ್ದಾರೆ. ಮಕ್ಕಳನ್ನು ಬೆಳೆಸಬೇಕಾದ ಇನ್ನಿತರ ತತ್ಸಂಬಂಧಿತ ವಿಷಯಗಳು ಈ ಗ್ರಂಥದ ವಿವಿಧ ಭಾಗಗಳಲ್ಲಿ ಕಾಣಬಹುದು.
ಮಿಅ್ ಯಾರುಲ್ ಉಲೂಂ,ಅಯ್ಯುಹಲ್ ವಲದ್,ಮೊದಲಾದ ಅವರ ಕೃತಿಗಳಲ್ಲೂ ವಿದ್ಯಾಭ್ಯಾಸ ಚಿಂತನೆಗಳು ಕಾಣಬಹುದು.

ಮಕ್ಕಳ ಜೀವನದಲ್ಲಿ ಆಟದ ಪ್ರಾಮುಖ್ಯತೆಯ ಬಗ್ಗೆ ಗಝ್ಝಾಲಿ ಇಮಾಂ ಒತ್ತಿ ಹೇಳಿದ್ದಾರೆ. ಪಾಠದ ನಂತರ ಆಯಾಸ ನೀಗಿಸಲು ಮತ್ತು ಮಾನಸಿಕ ಉಲ್ಲಾಸಕ್ಕೆ ಆಟ ಅಗತ್ಯ ಎಂದು ಹೇಳಿದ್ದಾರೆ.ಆಟಕ್ಕೆ ಅನುಮತಿ ಕೊಡದಿದ್ದರೆ ಮನಸ್ಸು ಸತ್ತು ಹೋಗಬಹುದು,ಬುದ್ಧಿಗೆ ವಿಕಸನ ದೊರೆಯದು ಮತ್ತು ಜೀವನ ಎಂಬುವುದು ಮಕ್ಕಳಿಗೆ ಭಾರ ಎನಿಸಬಹುದು ಎಂದು ಅವರು ವಿವರಿಸಿದ್ದಾರೆ.

ವಿದ್ಯಾಭ್ಯಾಸ ರಂಗದಲ್ಲಿ ಪ್ರಚೋದನೆಗೂ ಪ್ರಾಧಾನ್ಯತೆ ಇದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ. ಉತ್ತಮ ವರ್ತನೆಗಳಿಗೆ ಬಹುಮಾನ ನೀಡಿ,ಅಭಿನಂದಿಸಿ ಪ್ರೋತ್ಸಾಹಿಸಬೇಕೆಂದೂ ಯಾವಾಗಲೊಮ್ಮೆ ಮಕ್ಕಳಿಂದ ಉಂಟಾಗುವ ತಪ್ಪುಗಳನ್ನು ಅವಗಣಿಸಬೇಕು ಅಥವಾ ಸೂಚ್ಯವಾಗಿ ತಿದ್ದಬೇಕು ಎಂದು ಅವರು ನಿರ್ದೇಶಿಸಿದ್ದಾರೆ.

ಗಝ್ಝಾಲಿ ಇಮಾಮರ ವೀಕ್ಷಣೆ ಪ್ರಕಾರ ಶಿಕ್ಷಣ ಕಡ್ಡಾಯ ಎಂದಾಗಿದೆ. ಕೆಲವು ಐಚ್ಛಿಕವಾಗಿಯೂ ಕೆಲವು ಸಾಮೂಹಿಕವಾಗಿಯೂ ಕಡ್ಡಾಯವಾಗಿದೆ.
ಎಲ್ಲಾ ಜ್ಞಾನ ಶಾಖೆಗಳನ್ನು ಈ ರೀತಿ ಎರಡು ಭಾಗಗಳಾಗಿ ಅವರು ವಿಂಗಡಿಸಿದ್ದಾರೆ.
ಅಂದರೆ ಧಾರ್ಮಿಕ,ವೈದ್ಯಕೀಯ,ಇಂಜನಿಯರಿಂಗ್ ಇನ್ನಿತರ ಎಲ್ಲಾ ವಿಧದ ಜ್ಞಾನ ಶಾಖೆಗಳನ್ನು ಅವರು ಇದರಲ್ಲಿ ಸೇರಿಸಿದ್ದಾರೆ.

*ಬುರ್ಹಾನುದ್ದೀನ್ ಸರ್ನೂಜೀ (ರ)*
========================

ದೊಡ್ಡ ಶಿಕ್ಷಣ ಚಿಂತಕರಾಗಿದ್ದರು ಬುರ್ಹಾನುದ್ದೀನ್ ಸರ್ನೂಜಿ (ರ). ಅವರ ತಅ್ ಲೀಮುಲ್ ಮುತಅಲ್ಲಿಂ(ವಿಧ್ಯಾರ್ಥಿ ತಿಳಿದಿರಬೇಕಾದ ವಿಚಾರಗಳು)  ಎಂಬ ಅರಬಿ ಗ್ರಂಥವು ಪೂರ್ವ ಪಶ್ಚಿಮ ದಾದ್ಯಂತ ಪ್ರಚಾರ ಪಡೆದಿದೆ. ಈ ಏಕ ಕೃತಿ ಮಾತ್ರ ಅವರು ಬರೆದಿರುವುದು. ಲಾಟಿನ್,ಫ್ರೆಂಚ್,ಇಂಗ್ಲಿಷ್,ಉರ್ದು,ಮೊದಲಾದ ಅನೇಕ ಭಾಷೆಗಳಿಗೆ ಪ್ರಸ್ತುತ ಕೃತಿ ಭಾಷಾಂತರ ಗೊಂಡಿದೆ.
ಕಲಿಕೆಯ ಬಗ್ಗೆ ಹದಿಮೂರು ಅಧ್ಯಾಯಗಳ ಮೂಲಕ ಈ ಕೃತಿಯಲ್ಲಿ ಅಧ್ಯಯನಾರ್ಹ ರೀತಿಯಲ್ಲಿ ವಿವರಿಸಿದ್ದಾರೆ. ಜ್ಞಾನಾರ್ಜನೆ ಮತ್ತು ಅದರ ಮಹತ್ವ,ಅಧ್ಯಯನ ವಿಷಯ ಮತ್ತು ಅಧ್ಯಾಪಕನ ಆಯ್ಕೆ,ಕಲಿಕೆಯ ಪ್ರಾರಂಭ,ಕಂಠಪಾಠ ಸುಲಭವಾಗಲು ಮಾರ್ಗದರ್ಶನ,ಮರೆವು ಉಂಟಾಗಲು ಕಾರಣಗಳು,ಹೀಗೆ ಅನೇಕ ವಿಷಯಗಳ ಬಗ್ಗೆ ಅವರು ಅದರಲ್ಲಿ ವಿವರಿಸಿದ್ದಾರೆ.

ಕಲಿಕೆ ಜೀವನದ ಪ್ರಧಾನ ಭಾಗವಾಗಿರಬೇಕು ಮತ್ತು ಶಿಕ್ಷಣ ಪಡೆಯುವುದು ಪ್ರತಿಯೊಬ್ಬರಿಗೂ ಅನಿವಾರ್ಯ ಎಂದು ಅವರು ಪ್ರತಿಪಾಸಿದ್ದಾರೆ.
ಶಿಕ್ಷಣಾಭಿವೃದ್ದಿ ಗೊಳ್ಳಲು ಶಿಕ್ಷಕ ರಕ್ಷಕ ಸಹಕಾರ ಅಗತ್ಯವೆಂದು ಅವರು ಹೇಳಿದ್ದಾರೆ.

ಕೌನ್ಸಿಲಿಂಗ್,ಸಮಾಲೋಚನೆ,ಚರ್ಚೆ,ಡಿಬೇಟ್,ಪುನರಾವರ್ತನೆ,ಸಂಶೋಧನೆ ಮೊದಲಾದವುಗಳು ಶಿಕ್ಷಣ ರಂಗದ ಅನಿವಾರ್ಯ ಪ್ರಕ್ರಿಯೆಗಳು ಎಂದು ಅವರು ಪ್ರತಿಪಾದಿಸಿದ್ದಾರೆ.ಆದರೆ ಕೆಲವರು ಇವುಗಳನ್ನು ಆಧುನಿಕ ಕಲಿಕಾ  ವಿಧಾನ ಎನ್ನುತ್ತಿರುವುದು ವಿಪರ್ಯಾಸ.

ತುರ್ಕಿಸ್ಥಾನದ ಸರ್ನೂಜೀ ಎಂಬಲ್ಲಿ ಜನಿಸಿದ ಮಹಾನುಬಾವರು ಹಿಜರಿ 597 ರಲ್ಲಿ ವಫಾತಾದರು.

*ಇಮಾಂ ನವವೀ (ರ)*
================

ಹಿಜರಿ 631 ರಲ್ಲಿ ವಫಾತಾದ ಇಮಾಂ ನವವೀ (ರ) ಮಹಾ ವಿದ್ವಾಂಸರೂ ಕರ್ಮಶಾಸ್ತ್ರ ಗುರುವೂ ಆಗಿದ್ದರು.ಕೇವಲ 45 ವರ್ಷಗಳ ಕಾಲ ಜೀವಿಸಿದ ಮಹಾನುಭಾವರು ಈ ಕಾಲಾವಧಿಯಲ್ಲಿ ಬರೆದ ಮಹಾ ಗ್ರಂಥಗಳು ಇಂದೂ ಇಸ್ಲಾಮಿಕ್ ಗ್ರಂಥಾಲಯಗಳನ್ನು ಸಂಪನ್ನ ಗೊಳಿಸಿದೆ.
ಇಸ್ಲಾಮಿಕ್ ಅಧ್ಯಯನ ನಡೆಸುವವರು ಅವುಗಳನ್ನು ಅವಗಣಿಸಲು ಸಾಧ್ಯವೇ ಇಲ್ಲದಂತಾಗಿದೆ.ಕರ್ಮಶಾಸ್ತ್ರ,ಖುರ್ಆನ್ ಶಾಸ್ತ್ರ ,ಹದೀಸ್ ಶಾಸ್ತ್ರ,ಇತಿಹಾಸ ಮೊದಲಾದ ಸರ್ವ ಶಾಸ್ತ್ರಗಳಲ್ಲೂ ಅವರಿಗೆ ಅಗಾಧ ಪಾಂಡಿತ್ಯವಿತ್ತು.

   ತನ್ನ ಶರಹುಲ್ ಮುಹದ್ಸಬ್ ಎಂಬ ಕರ್ಮಶಾಸ್ತ್ರ ಗ್ರಂಥದ ಮುನ್ನುಡಿಯಲ್ಲಿ ಅವರು ಶಿಕ್ಷಣದ ಬಗ್ಗೆ ಆಳವಾಗಿ ವಿವರಿಸಿದ್ದಾರೆ.ಅತ್ತಿಬ್ ಯಾನ್ ಏಂಬ ಗ್ರಂಥದಲ್ಲೂ ವಿದ್ಯಾಭ್ಯಾಸ ಚಿಂತನೆಗಳು ಕಾಣಬಹುದು.

ಅಧ್ಯಾಪನೆ,ಅಧ್ಯಯನ,ಅಧ್ಯಾಪಕನ ಗುಣಗಳು,ವಿಧ್ಯಾರ್ಥಿಯ ಗುಣಗಳು,ಕಲಿಕಾ ರೀತಿಗಳು ಮೊದಲಾದವುಗಳನ್ನು ಪ್ರಮಾಣ ಬದ್ಧವಾಗಿ ವಿವರಿಸಿದ್ಧಾರೆ.ಅಧ್ಯಾಪನೆ ಮತ್ತು ಅಧ್ಯಯನದ ವಿಧಿ ನಿಷೇಧಗಳು,ಮಹತ್ವ,ಮೊದಲಾದವುಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ

  ಶಿಕ್ಷಕ ವಿಧ್ಯಾರ್ಥಿಗಳೊಂದಿಗೆ ಪ್ರೀತಿ,ಕರುಣೆ ಹೊಂದಿದವನಾಗಿರಬೇಕು.ಅವರ ಹಿತ ಚಿಂತಕನಾಗಿರಬೇಕು,ಕಲಿಸುವ ವಿಚಾರದಲ್ಲಿ ಪ್ರಮಾದ ಉಂಟಾಗದಂತೆ ಎಚ್ಚರ ವಹಿಸಬೇಕು.ಕ್ಲಾಸ್ ರೂಂ ವಿಶಾಲವಾಗಿರಬೇಕು.ಅನ್ವೇಶನಾತ್ಮಕ ಕಲಿಕಾ ರೀತಿ ಅವಲಂಬಿಸಬೇಕು.ಮಕ್ಕಳಿಗೆ ವಿಚಾರಗಳು ಅರ್ಥೈಸಲು ಪ್ರಯತ್ನಿಸಬೇಕು.ಮಕ್ಕಳ ಬೌದ್ಧಿಕ ಗುಣಮಟ್ಟ ಪರಿಗಣಿಸಬೇಕು.ಅವರ ಜೀವನ ಪರಿಸ್ಥಿತಿ ಅರಿಯಬೇಕು. ಹೀಗೆ ಹಲವಾರು ವಿಚಾರಗಳನ್ನು ಅವರು ಮಂಡಿಸಿದ್ದಾರೆ.

*ಇಬ್ನ್ ಖಲ್ದೂನ್(ರ)*
================
ಪ್ರಮುಖ ಇತಿಹಾಸಗಾರ ಇಬ್ನ್ ಖಲ್ದೂನ್ ಆಫ್ರಿಕಾ ಖಂಡದವರು. ಹಿಜರಿ 808 ರಲ್ಲಿ ವಫಾತಾದ ಈ ಮಹಾನುಭಾವರಾಗಿದ್ದಾರೆ ಇತಿಹಾಸ ಅಧ್ಯಯನಕ್ಕೆ ವೈಜ್ಞಾನಿಕ ಮಾನದಂಡ ನೀಡಿದವರು. ಎಲ್ಲೋ
ಕಂಡದ್ದು,ಕೇಳಿದ್ದು ಯಾವುದೇ ನೈಜತೆ ಇಲ್ಲದೇ ಇತಿಹಾಸ ದಾಖಲಿಸಿಡುವುದನ್ನು ಅವರು ಖಡಾ ತುಂಡವಾಗಿ ವಿರೋಧಿಸಿದ್ದಾರೆ.ವೈಜ್ಞಾನಿಕವಾಗಿ ಚರಿತ್ರೆ ಗಳನ್ನು ಅಧ್ಯಯನ ನಡೆಸಲು ಪೂರಕವಾದ ಮಾನದಂಡಗಳನ್ನು ಅವರು ಮಂಡಿಸಿದ್ದಾರೆ.ಇತಿಹಾಸದ ಜತೆಗೆ ಸೋಶಿಯೋಲಜಿ ಕೂಡಾ ಅವರು ಕರಗತ ಮಾಡಿದ್ದಾರೆ.ಈ ಎರಡು ಜ್ಞಾನಶಾಖೆಯ ಪಿತೃ ಸ್ಥಾನಕ್ಕೆ ಅವರು ಅರ್ಹರೆನಿಸಿದರು.

  "ಇಬರ್" ಎಂಬ ಹೆಸರಿನಲ್ಲಿ ಪ್ರಸಿದ್ಧವಾದ ತನ್ನ ಗ್ರಂಥದ ಮುನ್ನುಡಿಯಲ್ಲಿ ಶಿಕ್ಷಣದ ಬಗ್ಗೆ ಅರ್ಥಪೂರ್ಣವಾದ ಕೆಲವು ಚಿಂತನೆಗಳನ್ನು ಉಲ್ಲೇಖಿಸಿದ್ದಾರೆ. ಈ ಗ್ರಂಥದ ಆರನೇ ಅಧ್ಯಾಯದಲ್ಲಿ ಶಿಕ್ಷಣ ಸಂಬಂಧಿತ ಮೌಲ್ಯಯುತ ಮಾರ್ಗದರ್ಶನಗಳು ಕಾಣಬಹುದು.

ಮಕ್ಕಳನ್ನು ವಿಶೇಷವಾಗಿ ಸಣ್ಣ ಮಕ್ಕಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸದರೆ ಅವರ ಸ್ವಬಾವ ಗುಣಗಳು ಕೆಟ್ಟು ಹೋಗುವ ಸಾಧ್ಯತೆ ಇದೆ ಎಂದು ಮಾತ್ರವಲ್ಲ ಅವರಲ್ಲಿ ಅಮಾನವೀಯ ಪ್ರವೃತ್ತಿ ಬೆಳೆಯಲು ಹೇತುವಾಗ ಬಹುದೆಂದು ಅವರು ಹೇಳಿದ್ದಾರೆ.
ಕಲಿಕೆ ಯಶಸ್ವಿಯಾಗಲು ಪರವೂರಿಗೆ ಹೋಗಬೇಕು,ಮಕ್ಕಳ ಪಕ್ವತೆ,ಸನ್ನದ್ಧತೆ, ಪರಿಗಣಿಸಿ ಪಠ್ಯ ಪದ್ಧತಿ ತಯಾರು ಮಾಡಬೇಕು ಮೊದಲಾದ ನಿರ್ದೆಶನಗಳನ್ನು ಅವರು ನೀಡಿದ್ದಾರೆ.

*ಇಬ್ನ್ ಹಜರುಲ್ ಹೈತಮೀ (ರ)*
===================
  ಪ್ರಸಿದ್ಧ ಕರ್ಮಶಾಸ್ತ್ರ ವಿದ್ವಾಂಸರಾದ ಇಬ್ನ್ ಹಜರುಲ್ ಹೈತಮಿಯವರ ನಿಜನಾಮ ಶಿಹಾಬುದ್ದೀನ್ ಅಹ್ಮದುಲ್ ಹೈತಮೀ ಎಂದಾಗಿದೆ.
ಹಲವಾರು ಗ್ರಂಥಗಳ ಕರ್ತರಾದ ಅವರ ತುಹ್ಫತುಲ್ ಮುಹ್ತಾಜ್ ಶಾಫೀ ಮದ್ಸ್ ಹಬ್ ನ ಪ್ರಮುಖ ಅವಲಂಬವಾಗಿದೆ. ಶಿಕ್ಷಣ ಸಂಬಂಧಿತ ಕೃತಿಯೊಂದು ಅವರು ರಚಿಸಿದ್ದಾರೆ. "ತಹ್ರೀರುಲ್ ಮಖಾಲ್ ಫೀ ಆದಾಬಿ ವಅಹ್ಕಾಮಿ ವ ಫವಾಇದ ಯಹ್ತಾಜು ಇಲೈಹಾ ಮುಅದ್ದಿಬುಲ್ ಅತ್ಫಾಲ್" ಎಂದಾಗಿದೆ ಅದರ ಹೆಸರು.

     ಅಧ್ಯಾಪಕರ ಗುಣಗಳು ಮತ್ತು ಶಿಕ್ಷಣ ಸಂಬಂಧಿತ ಕೆಲವು ಪ್ರಮುಖ ವಿಷಯಗಳು ಅವರು ಈ ಗ್ರಂಥದಲ್ಲಿ ಮಂಡಿಸಿದ್ದಾರೆ.ಅಧ್ಯಾಪಕ ಪ್ರತಿಫಲ ಪಡೆಯಬಹುದೇ? ಕಲಿಸುವುದಕ್ಕಾಗಿ ಹೊಡೆಯಬಹುದೇ? ಮಕ್ಕಳೊಂದಿಗೆ ಬೆರೆಯುವಾಗ ಗಮನಿಸಬೇಕಾದ ಕಾರ್ಯಗಳು,ಮಕ್ಕಳೊಂದಿಗೆ ಕರುಣೆ,ಪ್ರೀತಿ,ತೋರಿಸುವುದರ ಅನಿವಾರ್ಯತೆ,ಮೊದಲಾದವುಗಳ ಬಗ್ಗೆ ಧಾರಾಳ ಪುರಾವೆಗಳನ್ನು ಮಂಡಿಸುತ್ತಾ ಪರ-ವಿರೋಧ ಚರ್ಚೆಗಳನ್ನು ಬಹಳ ವಿಸ್ತಾರವಾಗಿ  ನಡೆಸಿದ್ದಾರೆ.ಖುರ್ಆನ್ ಕಲಿಯುವುದು ಮತ್ತು ಕಲಿಸುವುದರ ಮಹತ್ವದ ಬಗ್ಗೆ ಪ್ರಾರಂಭಗೊಳ್ಳುವ ಈ ಗ್ರಂಥವು ಮಕ್ಕಳೊಂದಿಗೆ ಕರುಣೆ ತೋರಿರಿ,ಅವರಿಗೆ ಒಳಿತು ಮಾಡಿರಿ,ಸಾಧ್ಯವಾದಷ್ಟೂ ಅವರ ಹಿತಕ್ಕಾಗಿ ಗಮನ ಹರಿಸಿರಿ ಎಂದು ಹೇಳುತ್ತಾ ಕೊನೆ ಗೊಳಿಸಲಾಗಿದೆ.

No comments:

Post a Comment