Sunday, December 3, 2017

*ಚಿನ್ನದ ಮೊಟ್ಟೆಯಿಡುತ್ತಿದ್ದ ಕೋಳಿಯ ಕರುಣಾಜನಕ ಕಥೆ::*
✍ಎಸ್.ಎ.ರಹಿಮಾನ್ ಮಿತ್ತೂರು

ಪ್ರತಿ ದಿನವು ಚಿನ್ನದ ಮೊಟ್ಟೆಯಿಡುತ್ತಿದ್ದ ಕೋಳಿಯೊಂದು ರಾತ್ರಿ ಬೆಳಗಾಗುವುದರೊಳಗೆ ತಾನು ಮೊಟ್ಟೆಯಿಡುವುದನ್ನೇ ನಿಲ್ಲಿಸಿಬಿಟ್ಟರೆ ಆ ಕೋಳಿಗೂ ಆ ಕೋಳಿಯನ್ನು ನಂಬಿಕೊಂಡು ಬದುಕುತ್ತಿದ್ದವರ ಪರಿಸ್ಥಿತಿ ಏನಾಗಬಹುದು?. ಹೌದು ಇದೇ ರೀತಿಯಾದ ಪರಿಸ್ಥಿತಿಯಾಗಿದೆ ಕುಟುಂಬದವರ ಮಟ್ಟಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿದ್ದ ಗಲ್ಫ್ ಪ್ರವಾಸಿ ಹಾಗೂ ಆ ಚಿನ್ನದ ಮೊಟ್ಟೆಯನ್ನು ಆಶ್ರಯಿಸಿಕೊಂಡು ಬದುಕುತ್ತಿದ್ದ ಆತನ ಕುಟುಂಬಸ್ಥರದ್ದು.
ಅದೊಂದು ಕಾಲವಿತ್ತು. ಮುಸ್ಲಿಮ್ ಸಮುದಾಯದ ಯುವಕರು ಹತ್ತನೆ ತರಗತಿ ಪಾಸಾಗಿ ಕಾಣುತ್ತಿದ್ದ ಕನಸೇ ಗಲ್ಫ್ ಎಂಬ ಮಾಯಾ ಲೋಕದ್ದು. ಮೆಟ್ರಿಕ್ ಪಾಸಾದ ಪ್ರಮಾಣ ಪತ್ರಕ್ಕಿಂತ ಹೆಚ್ಚಾಗಿ ಪಾಸ್ ಪೋರ್ಟ್'ಗೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದ ಯುವಕರು. ನಮ್ಮೂರಿನ ಏರ್ಪೋರ್ಟುಗಳಲ್ಲಿ ಘಮಘಮಿಸುವ ಪರಿಮಳದೊಂದಿಗೆ ಬಂದಿಳಿಯುತ್ತಿದ್ದ ಗಲ್ಫ್ ಪ್ರವಾಸಿಗಳನ್ನು ನೋಡಿ ಜನಸಾಮಾನ್ಯರು ಗಲ್ಫಿನತ್ತ ಆಕರ್ಷಿತರಾಗುತ್ತಿದ್ದರು. ಆದರೆ ವಾಸ್ತವ ಬೇರೆಯೇ ಆಗಿತ್ತು. ತಾನು ಕುಟುಂಬಕ್ಕೆ ಬೇಕಾಗಿ ಎಷ್ಟೇ ಕಷ್ಟಗಳನ್ನು ಸಹಿಸಿಕೊಂಡರೂ ತನ್ನ ಕಷ್ಟವು ತನ್ನ ಕುಟುಂಬದವರಿಗೆ ಗೊತ್ತಾಗದಿರಲೆನ್ನುವ ಉದ್ದೇಶದಿಂದ ಅಚ್ಚುಕಟ್ಟಾದ ಸೂಟು ಬೂಟು , ಹೊಸ ವಿನ್ಯಾಸದ ಮೊಬೈಲ್ ಹಾಗೂ ಬೆಲೆ ಬಾಲುವ ಸುಗಂಧ ಭರಿತ ದ್ರವ್ಯಗಳನ್ನು ಹಚ್ಚಿಕೊಂಡು ಊರಿಗೆ ಹೊರಡುತ್ತಾರೆ ಪ್ರವಾಸಿಗಳೆಂಬ ಎಲ್ಲೂ ಸಲ್ಲದ ಜೀವಿಗಳು. ಅವರು ಎರಡೋ ಮೂರೋ ಹೆಚ್ಚೆಂದರೆ ಆರು ತಿಂಗಳು ಊರಿನಲ್ಲಿ ನಡೆಸುವ ಆಡಂಬರದ ಜೀವನವನ್ನು ನೋಡಿ ಇದನ್ನೇ ಗಲ್ಫ್ ಜೀವನವೆಂದು ತಿಳಿದುಕೊಂಡ ಪ್ರವಾಸಿಯ ಕುಟುಂಬಿಕರು ಹಾಗೂ ಗೆಳೆಯರು ತಾವು ಕೂಡ ಇದೇ ತರಹದ ಶೋಕಿ ಜೀವನವನ್ನು ನಡೆಸಬೇಕು ಎಂಬ ಕನಸಿನೊಂದಿಗೆ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಗಲ್ಫ್'ಗೆ ಹೊರಡಲು ಅನುವಾಗುತ್ತಾರೆ. ಆದರೆ ಪ್ರವಾಸಿಯೊಬ್ಬ ತನ್ನ ರಜಾ ದಿನಗಳನ್ನು ಊರಿನಲ್ಲಿ ಕಳೆಯಲು ಪಡುವ ಪಾಡು ಅಷ್ಟಿಷ್ಟಲ್ಲ. ತನ್ನ ಗೆಳೆಯರಲ್ಲಿ ಸಾಲಗೀಲ ಮಾಡಿಕೊಂಡು ತನ್ನ ಕಷ್ಟವನ್ನು ಇತರರಿಂದ ಮರೆಮಾಚಲು ಶ್ರಮಿಸುತ್ತಾನೆ. ಇದು ನನ್ನ ಬಹುತೇಕ ಪ್ರವಾಸಿ ಗೆಳೆಯರ ವೇದನಾಯುಕ್ತ ಅನುಭವವಾಗಿದೆ. ತನ್ನ ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರೂ ತನ್ನ ಬಳಿ ಸಹಾಯ ಯಾಚಿಸಿ ಬಂದವರನ್ನು ಎಂದೂ ಬರಿಗೈಯಲ್ಲಿ ಕಳಿಸದ ಓರ್ವ ಪರೋಪಕಾರಿ ಜೀವಿಯಾಗಿದ್ದಾನೆ ಗಲ್ಫ್ ಪ್ರವಾಸಿ. ತನ್ನ ಕುಟುಂಬದ ಜೀವನ ನಿರ್ವಹಣೆ, ಸಹೋದರಿಯ ಮದುವೆ, ತಂದೆ ತಾಯಿಯ  ಔಷದೋಪಚಾರದ ಖರ್ಚು, ತನ್ನ ಮಕ್ಕಳ ವಿದ್ಯಾಭ್ಯಾಸದ ಖರ್ಚು ಮುಂತಾದ ಸಮಸ್ಯೆಗಳ ಗಂಟುಮೂಟೆಯನ್ನೇ ತನ್ನ ತಲೆಯಲ್ಲಿ ಹೊತ್ತುಕೊಂಡು ಗಲ್ಫ್ ದೇಶಕ್ಕೆ ಹೊರಡುವ ಪ್ರವಾಸಿ ತನ್ನ ಬಿಡುವಿಲ್ಲದ ದುಡಿಮೆಯ ಫಲವಾಗಿ ಈ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಾನೆ. ಈ ಪ್ರಯತ್ನದಲ್ಲಿ ಕೆಲವರು ಅದರಲ್ಲಿ ಯಶಸ್ವಿಯಾದರೆ ಮತ್ತೆ ಕೆಲವರು ಮುಗ್ಗರಿಸುತ್ತಾರೆ. ಆದರೆ ತನಗೆ ನೂರಾರು ಆರ್ಥಿಕ ಸಮಸ್ಯೆಗಳಿದ್ದರೂ ಅದನ್ನು ತೋರ್ಪಡಿಸದೆ ಇತರರ ಆರ್ಥಿಕ ಸಂಕಷ್ಟಗಳಿಗೆ ಆಸರೆಯಾಗಲು ಮನತುಡಿತವಿರುವ ಪರೋಪಕಾರಿಯಾಗಿದ್ದಾನೆ ಗಲ್ಫ್ ಪ್ರವಾಸಿ.

ಆದರೆ ತನಗೆ ಕೈತುಂಬಾ ದುಡಿಮೆಯಿದ್ದಾಗ  ತನ್ನವರನ್ನು ಊರವರನ್ನೂ ಇತರರನ್ನೂ ಮರೆಯದೆ ಸಹಕರಿಸುತ್ತಿದ್ದ ಅದೇ ಗಲ್ಫ್ ಪ್ರವಾಸಿ ಇದೀಗ ಬಹುದೊಡ್ಡ ಸತ್ವಪರೀಕ್ಷೆಗೆ ಒಳಪಟ್ಟಿದ್ದಾನೆ. ಗಲ್ಫ್ ರಾಷ್ಟ್ರಗಳು ನಂಬಿಕೊಂಡಿದ್ದ ತೈಲ ಸಂಪನ್ಮೂಲದ ಬೆಲೆಯು ಅಂತರಾಷ್ರೀಯ ಮಾರುಕಟ್ಟೆಯಲ್ಲಿ ಪಾತಾಳಕ್ಕಿಳಿದಿದ್ದು, ಇದರಿಂದಾಗಿ ಬಹುತೇಕ ಗಲ್ಫ್ ರಾಷ್ಟ್ರಗಳು ಆತಂಕಕ್ಕೀಡಾಗುವುದರ ಜೊತೆಗೆ ತೀವೃ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಈ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಲು ಹೆಚ್ಚಿನ ಗಲ್ಫ್ ರಾಷ್ಟ್ರಗಳು ವಿದೇಶಿಗಳ ದುಡಿಮೆಯ ಮೇಲೆ ಕಣ್ಣಿಟ್ಟಿದೆ. ವಿದೇಶಿಗಳ ದುಡಿಮೆಯ ಒಂದಂಶವನ್ನು ತೆರಿಗೆಯ ರೂಪದಲ್ಲಿ ಸಂಗ್ರಹಿಸುವ ನಿರ್ಧಾರವು ಪ್ರವಾಸಿಗಳನ್ನು ನಿದ್ದೆಗೆಡಿಸಿದೆ. ಮೊದಲೇ ತೀವೃ ಆರ್ಥಿಕ ಅಡಚಣೆಯಿಂದ ಬಳಲುತ್ತಿರುವ ಪ್ರವಾಸಿಗಳ ಪಾಲಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಇವೆಲ್ಲಾ ವಿದ್ಯಾಮಾನಗಳು ಅನಿವಾರ್ಯವಾಗಿ ಪ್ರವಾಸಿಗಳನ್ನು ತಮ್ಮ ಊರಿನತ್ತ ಮುಖಮಾಡುವಂತೆ ಪ್ರೇರೇಪಿಸುತ್ತಿದೆ.

ನಾನು ಮೊದಲೇ ಹೇಳಿದಂತೆ ಪ್ರವಾಸಿಯು ಎಲ್ಲೂ ಸಲ್ಲದ ಒಂದು ಜೀವಿಯಾಗಿದ್ದಾನೆ. ತನ್ನವರ ಕಷ್ಟವನ್ನು ನೋಡಲಾರದೆ ದೂರದ ಮರುಭೂಮಿಗೆ ಉದ್ಯೋಗವನ್ನರಸಿ ಬರುವ ಪ್ರವಾಸಿಯು ಎದುರಿಸುವ ಸಮಸ್ಯೆಗಳು ನೂರಾರು. ಉದ್ಯೋಗದಾತನ ಉಪಟಲ, ಬದಲಾಗುತ್ತಿರುವ ಗಲ್ಫ್ ರಾಷ್ಟ್ರಗಳ ಕಾನೂನಿನ ಕಿರಿಕಿರಿ  ಹಾಗೂ ಹವಾಮಾನ ವೈಪರೀತ್ಯದಿಂದ ಮೊದಲೇ ಕಂಗಾಲಾಗಿರುವ ಪ್ರವಾಸಿಯು ಈಗೀಗ ಸ್ಪೋನ್ಸರ್ ಫೀಸ್, ಸರಕಾರಕ್ಕೆ ನೀಡಬೇಕಾದ ತೆರಿಗೆ,ಇನ್ಸುರೆನ್ಸ್ ಹಣ, ಊರಿನಲ್ಲಿ ರಜಾದಿನಗಳನ್ನು ಕಳೆಯಲು ಕಟ್ಟಬೇಕಾದ ಹಣ ಹಾಗೂ ಇಕಾಮ ನವೀಕರಣದ ಹಣ ದುಪ್ಪಟ್ಟಾಗಿರುವುದರಿಂದ ರೋಸಿಹೋಗಿದ್ದಾನೆ. ಇದರಿಂದ ಬೇಸತ್ತು ತವರಿನ ಕಡೆ ಮುಖ ಮಾಡಿದರೆ ಮನೆಯವರ ವಿಲಾಸಿ ಜೀವನದ ಶೋಕಿ, ಐಶಾರಾಮಿ ಬದುಕಿನ ಕನಸುಗಳು ಪ್ರವಾಸಿಯ ಮಾನಸಿಕವಾಗಿ ಜರ್ಜರಿತವಾದ ಮನಸ್ಸನ್ನು ಮತ್ತಷ್ಟು ದುಸ್ತರಗೊಳಿಸುತ್ತಿದೆ. ಆದುದರಿಂದ  ಇನ್ನೊಬ್ಬರಿಗೆ ಬೆಳಕು ನೀಡುವ ಸಲುವಾಗಿ ತಾನಾಗಿಯೇ ಕರಗಿ ಹೋಗುವ ಮೇಣದ ಬತ್ತಿಯ ರೀತಿಯಲ್ಲಿ ತನ್ನ ಬದುಕನ್ನು ಸವೆಸುತ್ತಿರುವ ಪ್ರವಾಸಿಯ ಬದುಕಿನ ಕುರಿತು ನಮಗೆ ಕಿಂಚಿತ್ತಾದರೂ ಕನಿಕರವಿರಲಿ. ಬದಲಾಗುತ್ತಿರುವ ಗಲ್ಫ್ ರಾಷ್ಟ್ರದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನರಳುತ್ತಿರುವ ಪ್ರವಾಸಿಯು  ರಾತ್ರೋ ರಾತ್ರಿ ಬರಿಗೈಯಲ್ಲಿ ಊರಿಗೆ ಮರಳಬೇಕಾದ ಪರಿಸ್ಥಿತಿ ಎದುರಾಗಲೂ ಬಹುದು. ಹಾಗಾಗದಿರಲೆಂದು ಸರ್ವಶಕ್ತನಲ್ಲಿ ನಾವು ಹಗಲಿರುಲು ಪ್ರಾರ್ಥಿಸೋಣ. ಒಂದು ವೇಳೆ ಜಗದೊಡೆಯನ ಅಣತಿಯಂತೆ ಆ ಪರಿಸ್ಥಿತಿ ಎದುರಾದಲ್ಲಿ ಶ್ರಮ ಜೀವಿಯಾದ ಪ್ರವಾಸಿಯನ್ನು ಯಾರೂ ನಮ್ಮ ಕೊಂಕು ನುಡಿಗಳಿಂದ ಅವಮಾನಿಸದಿರೋಣ. ಎಲ್ಲರಂತೆ ನಮ್ಮ ಓರ್ವ ಸಹೋದರ ಎಂಬ ಭಾವನೆಯಿಂದ ನಮ್ಮಲ್ಲಾಗುವ ಸಹಾಯ ಸಹಕಾರಗಳನ್ನು ಒದಗಿಸುವ ಮೂಲಕ ಹಿಂದೆ ನಮಗಾಗಿ ಪ್ರವಾಸಿಯು ಮಾಡಿದ ತ್ಯಾಗಕ್ಕೆ ಕೃತಜ್ಞರಾಗೋಣ..!!!

-ಎಸ್.ಎ.ರಹಿಮಾನ್ ಮಿತ್ತೂರು

No comments:

Post a Comment