Monday, October 30, 2017

*ಹಿಂದೂ ಕಾರ್ಯಕರ್ತರ ಹತ್ಯೆ ಮತ್ತು ಖುರ್ಆನಿಗೂ ಸಂಬಂಧವಿದೆಯಾ?*
(ಅನ್ಯ ಧರ್ಮೀಯ ಸಹೋದರನ ಸಂದೇಹಕ್ಕೆ ಪ್ರತ್ಯುತ್ತರ.)

ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಗೂ ಖುರ್ಆನಿಗೂ ಸಂಬಂಧವಿದೆ ಎಂದು ಅನ್ಯ ಧರ್ಮೀಯ ಸಹೋದರನೊಬ್ಬ ಸಂದೇಹ ವ್ಯಕ್ತಪಡಿಸಿದ್ದಾನೆ. ಅದಕ್ಕೆ ಆತ ಕೊಟ್ಟ ಆಧಾರ ಈ ಕೆಳಗೆ ಕೊಟ್ಟ ಖುರ್ಆನ್ ಆಯತ್ (ಸೂಕ್ತ) ಆಗಿದೆ.

*ನಿಷಿದ್ಧ (ನಾಲ್ಕು) ಮಾಸಗಳು ಮುಗಿದರೆ (ಒಪ್ಪಂದವನ್ನು ಮುರಿದ) ಆ ಮಶ್ರಿಕರನ್ನು ಕಂಡಲ್ಲಿ ವಧಿಸಿರಿ. ಅವರನ್ನು ಸೆರೆ ಹಿಡಿಯಿರಿ. ಅವರನ್ನು ಸುತ್ತುವರೆಯಿರಿ. ಎಲ್ಲಾ ಕಾವಲು ಸ್ಥಳಗಳಲ್ಲಿ ಅವರಿಗೆ ಹೊಂಚು ಹಾಕಿ ಕುಳಿತುಕೊಳ್ಳಿ. ಇನ್ನು ಅವರು ಪಶ್ಚಾತ್ತಾಪಪಟ್ಟು ಮರಳಿದರೆ, ನಮಾಝನ್ನು ನೆಲೆಗೊಳಿಸಿದರೆ, ಝಕಾತ್ ನೀಡಿದರೆ ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿರಿ. ಅಲ್ಲಾಹನು ಪರಮ ಕ್ಷಮಾಶೀಲನೂ ಪರಮ ದಯಾಳುವೂ ಆಗಿರುವನು"* (ಅತ್ತೌಬ: 5)

ಈ ಆಯತ್ ನ ವ್ಯಾಖ್ಯಾನವೇನೆಂದರೆ, ಅಂದು ಮುಶ್ರಿಕರಿಗೆ ವೈರತ್ವವನ್ನು ಬಿಟ್ಟು ನಿಲ್ಲಲು ನಾಲ್ಕು ತಿಂಗಳ ಕಾಲಾವಕಾಶವನ್ನು ನೀಡಲಾಗಿತ್ತು. ಆ ಅವಧಿಯಲ್ಲಿ ಯುದ್ಧವನ್ನು ನಿಷೇಧಿಸಲಾಗಿತ್ತು. ಈ ಒಪ್ಪಂದವನ್ನು ಮುರಿಯುವ (ಮುರಿದರೆ) ಮುಶ್ರಿಕರೊಂದಿಗೆ ಹೋರಾಡುವ ಕುರಿತಾಗಿದೆ ಈ ಸೂಕ್ತ. ಇದು ಒಂದು ಸಂಧರ್ಬಕ್ಕೆ ಸೀಮಿತವಾದ ಸೂಕ್ತ ವಾಗಿದೆಯೇ ಹೊರತು ಎಲ್ಲಾ ಕಾಲಕ್ಕೂ ಅನ್ವಯವಾಗುವಂತಹದ್ದಲ್ಲ.

ಉದಾ: ಭಾರತ ದೇಶ ತನ್ನ ನೆರೆ ರಾಷ್ಟ್ರದೊಂದಿಗೆ ನಿರ್ದಿಷ್ಟ ಸಮಯದ ಗಡಿ ಒಪ್ಪಂದವನ್ನು ಮಾಡಿಕೊಳ್ಳುತ್ತದೆ. ಗಡಿ ಒಪ್ಪಂದವನ್ನು ನೆರೆ ರಾಷ್ಟ್ರವೇನಾದರು ಉಲ್ಲಂಘಿಸಿದರೆ, ಅದರ ಮೇಲೆ ದಾಳಿ ಮಾಡಲು ಭಾರತ ಸರಕಾರ ಸೂಚಿಸುತ್ತದೆ ಎಂದಿಟ್ಟುಕೊಳ್ಳಿ. ಇದೊಂದು ಸಾಂದರ್ಭಿಕವಾದ ಆಜ್ಞೆ. ಇನ್ನೊಂದು ಐವತ್ತು ವರ್ಷ ಬಿಟ್ಟು, ಈ ವಿಷಯದಲ್ಲಿ ನೆರೆ ರಾಷ್ಟ್ರ ಭಾರತದೊಂದಿಗೆ ತಗಾದೆ ತೆಗೆಯುವುದರಲ್ಲಿ ಅರ್ಥವಿದೆಯಾ? ಇಲ್ಲ. ಯಾಕೆಂದರೆ, ಅದೊಂದು ಸಾಂದರ್ಭಿಕವಾದ ಆಜ್ಙೆ ಮಾತ್ರವಾಗಿದೆ. ಇನ್ನು ಐವತ್ತು ವರ್ಷ ಕಳೆದ ನಂತರ ನೆರೆ ರಾಷ್ಟ್ರದ ಮೇಲೆ ದಾಳಿಯಾದರೆ, ಅದಕ್ಕೆ ಐವತ್ತು ವರ್ಷದ ಮುಂಚಿನ ಈ ಆಜ್ಞೆ ಕಾರಣವಲ್ಲ ಎಂದು ನೆರೆ ರಾಷ್ಟಕ್ಕೂ ಗೊತ್ತಿರುತ್ತದೆ. ಇಂತಹ ಒಂದು ಸಾಂದರ್ಭಿಕವಾದ ನಿರ್ದೇಶನವಾಗಿದೆ ಆ ಖುರ್ಆನಿನ ಸೂಕ್ತ.

ಖುರ್ಆನಿನಲ್ಲಿ ಹಲವು ತರಹದ ಸೂಕ್ತ ಗಳಿವೆ. ಕೆಲವೊಂದು ವರ್ತಮಾನ ಕಾಲದ ಬಗ್ಗೆಗಿನ ವಿವರಣೆ ಗಳಾದರೆ, ಕೆಲವೊಂದು ಭವಿಷ್ಯತ್ ಕಾಲದ ಬಗ್ಗೆಗಿನ ವಿವರಣೆ ಗಳಾಗಿವೆ. ಕೆಲವೊಂದು ಸಲಹೆಗಳಿವೆ. ಕೆಲವೊಂದು ಸಾಂದರ್ಭಿಕ ಸಮಯಕ್ಕಗುಣವಾಗಿ ಇಳಿಸಲ್ಪಟ್ಟ ಸೂಕ್ತಗಳೂ ಇವೆ.

ಒಂದುವೇಳೆ ಈ ಮೇಲಿನ ಸೂಕ್ತ ಎಲ್ಲಾ ಕಾಲಕ್ಕೂ ಅನ್ವಯವಾಗುವುದಾದರೆ, ಇಸ್ಲಾಮಿನಲ್ಲಿ ಯುದ್ಧ ನಿರಂತರವಾಗಿರಬೇಕಿತ್ತು. ಆದರೆ, ಇಸ್ಲಾಮಿನ ಚರಿತ್ರೆಯನ್ನು ತೆಗೆದು ನೋಡಿದರೆ, ಯುದ್ಧ ನಡೆದ ಸಂದರ್ಭಗಳು ಕೇವಲ ಬೆರಳಿನಿಕೆಯದ್ದು ಮಾತ್ರ. ಅದೂ ಕಾಲ್ಕೆರೆದು ಯುದ್ಧ ಮಾಡಿದ್ದಲ್ಲ. ಬದಲಾಗಿ, ಅನಿವಾರ್ಯವಾದಾಗ, ಶತ್ರುಗಳು ಇತ್ತಕಡೆ ಯುದ್ಧಕ್ಕೆ ಬಂದಾಗ, ಅದನ್ನು ತಡೆಯುವ ಎಲ್ಲಾ ಸಂಧಾನದ ಪ್ರಯತ್ನಗಳೂ ವಿಫಲವಾದಾಗ ನಡೆದವುಗಲಾಗಿವೆ.

ಇಸ್ಲಾಂ ಶಾಂತಿಯ ಧರ್ಮವಾಗಿದೆ. ಅದು ಎಂದೂ ಯುದ್ಧವನ್ನು ಬಯಸುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಜೀವ ಸಂರಕ್ಷಣೆಗಾಗಿ ಮಾತ್ರ ಯುದ್ಧ ಮಾಡುವುದನ್ನು ಅನುಮೋದಿಸುತ್ತದೆ. ಅದಕ್ಕೂ ಹಲವಾರು ಶರತ್ತು ಗಳಿವೆ. ಒಬ್ಬಂಟಿಗನ ಮೇಲೆ, ಮಹಿಳೆಯರ ಮೇಲೆ, ಮಕ್ಕಳ ಮೇಲೆ, ವೃದ್ಧರ ಮೇಲೆ, ನಿರಾಯುಧರ ಮೇಲೆ, ಹಿಂಬದಿಯಿಂದ ಯುದ್ಧ ಮಾಡುವುದನ್ನು ಇಸ್ಲಾಂ ಕಠಿಣವಾಗಿ ವಿರೋಧಿಸುತ್ತದೆ. ಯುದ್ಧಕ್ಕೆ ಇಷ್ಟೊಂದು ಕಠಿಣವಾದ ಶರತ್ತು ವಿಧಿಸುವ ಇಸ್ಲಾಂ, ಅನ್ಯ ಧರ್ಮೀಯರನ್ನು ಕಂಡಲ್ಲಿ ವಧಿಸಲು ಆಜ್ಙಾಪಿಸುತ್ತದೆಯೇ? ಖಂಡಿತಾ ಸಾದ್ಯವಿಲ್ಲ. ಅದು ಖುರ್ಆನ್ ಬಗ್ಗೆಗಿನ ತಪ್ಪು ಕಲ್ಪನೆಯಾಗಿದೆ. "ಒಬ್ಬ ಮನುಷ್ಯನನ್ನು ಕೊಂದರೆ, ಅದು ಇಡೀ ಮನುಕುಲವನ್ನೇ ಕೊದಂತೆ" ಎನ್ನುವ ಇಸ್ಲಾಂ, ಕೊಲೆ ಮಾಡುವುದನ್ನು ಈ ರೀತಿ ಬಣ್ಣಿಸಿದೆ.

ಒಂದು ವೇಳೆ, ಅನ್ಯ ಧರ್ಮೀಯರನ್ನು ಕೊಲ್ಲಲು ಇಸ್ಲಾಮಿನಲ್ಲಿ ಆಜ್ಙೆ ಏನಾದರೂ ಇದ್ದಿದ್ದರೆ, ಅದನ್ನು ಅನುಸರಿಸಲು ಮುಸ್ಲಿಮರು ಭಾದ್ಯಸ್ಥರು ತಾನೇ. ಆದರೆ, ಇಂತಹ ಒಂದು ಆಜ್ಞೆ ಇಸ್ಲಾಮಿನಲ್ಲಿ ಇದೆ ಎಂದು ಹೇಳಿ, ಅದನ್ನು ಪಾಲಿಸುವ ಒಬ್ಬನೇ ಒಬ್ಬ ವ್ಯಕ್ತಿಯನ್ನು ಈ ಭೂಮಿ ಮೇಲೆ ತೋರಿಸಲು ಸಾದ್ಯವಿಲ್ಲ.

ಇಸ್ಲಾಂ ಆಜ್ಞಾಪಿಸಿದ ಕಾರ್ಯವನ್ನು ನೂರು ಶೇಕಡ ಪಾಲಿಸುವವರು, ಮತ್ತು ಇಸ್ಲಾಂ ವಿರೋಧಿಸಿದ ಕಾರ್ಯವನ್ನು ನೂರು ಶೇಕಡಾ ತ್ಯಜಿಸುವವರನ್ನು ಪುಣ್ಯ ಪುರುಷರು ಅಂತ ನಾವು ಕರೆಯುತ್ತೇವೆ. ಅವರುಗಳೆಂದರೆ, ಉಲಮಾಗಳು, ಸೈಯ್ಯಿದ್-ಸಾದಾತು ಗಳು, ವಲಿಯ್ಯ್ ಗಳು, ಸೂಫಿ ಸಂತರು ಗಳು. ಅನ್ಯ ಧರ್ಮೀಯರನ್ನು ಕಂಡಲ್ಲಿ ಕೊಲ್ಲಿ ಎಂಬ ಆಜ್ಙೆ ಇಸ್ಲಾಮಿನಲ್ಲಿ ಚಾಲ್ತಿಯಲ್ಲಿದ್ದಿದ್ದರೆ, ಈ ಮೇಲೆ ತಿಳಿಸಿದ ಪುಣ್ಯ ಪುರುಷರು ಅದನ್ನು ನೂರು ಶೇಕಡಾ ಪಾಲಿಸುವವರಾಗಬೇಕಿತ್ತು. ಆದರೆ, ಎಲ್ಲೂ ಇಂತಹ ಒಂದು ಆಜ್ಞೆಯನ್ನು ಪಾಲಿಸುವ ಪುಣ್ಯ ಪುರುಷರನ್ನು ಕಾಣಲು ಸಾದ್ಯವಿಲ್ಲ. ಕನಿಷ್ಠ ಪಕ್ಷ (ಪ್ರವಾದಿ ಸ.ಅ ರ ಕಾಲದ ನಂತರ ಸಾವಿರದ ನಾಲ್ಕುನೂರು ವರ್ಷಗಳ ಇತಿಹಾಸದಲ್ಲಿ) ಯಾವೊಬ್ಬ ಉಲಮಾ ಕೂಡಾ ಈ ಬಗ್ಗೆ ಆಜ್ಞೆಯನ್ನು ಕೊಟ್ಟ, ಒಂದು ದಾಖಲೆಯನ್ನು ತೋರಿಸಲೂ ಸಾದ್ಯವಿಲ್ಲ.

*ಇಸ್ಲಾಮಿನ ಚರಿತ್ರೆಯಲ್ಲಿ ಮಹತ್ವವಿರುವ ಒಂದು ಯುದ್ಧವಾಗಿದೆ "ಬದರ್ ಯುದ್ಧ". ಈ ಯುದ್ಧದ ವಿಜಯವನ್ನು ವರ್ಷಂಪ್ರತೀ ಮುಸ್ಲಿಮರು ಸ್ಮರಿಸುತ್ತಾ ಬರುತ್ತಿದ್ದಾರೆ. ಅಂತಹ ಒಂದು ಯುದ್ಧದಲ್ಲಿ ಶತ್ರು ಪಾಲಯದಿಂದ ಕೊಲ್ಲಲ್ಪಟ್ಟವರ ಸಂಖ್ಯೆ ತೀರ ಕಡಿಮೆಯಾಗಿದೆ. ನಮ್ಮ ನಡುವೆ ಕೋಮು ಗಲಭೆಯಲ್ಲಿ ನಡೆಯುವಷ್ಟು ಹತ್ಯೆ ಕೂಡಾ ಆ ಪ್ರಮುಖ ಯುದ್ಧದಲ್ಲಿ ನಡೆದಿಲ್ಲ. ಯುದ್ಧದಲ್ಲಿ ಸೆರೆ ಹಿಡಿಯಲ್ಪಟ್ಟವರನ್ನು, ಶರಣಾದವರನ್ನು ಹಿಂಸಿಸಿದ, ಅಥವಾ ಕೊಂದು ಹಾಕಿದ ಚರಿತ್ರೆ ಇಸ್ಲಾಮಿನಲ್ಲಿ ಇಲ್ಲವೇ ಇಲ್ಲ. ಒಂದುವೇಳೆ ಇಸ್ಲಾಂ ಮಾನವ ಹತ್ಯೆಯನ್ನು ಪ್ರೋತ್ಸಾಹಿಸುವುದಾಗಿದ್ದರೆ, ಯುದ್ಧದಲ್ಲಿ ಮತ್ತು ಸೆರೆ ಹಿಡಿಯಲ್ಪಟ್ಟವರಲ್ಲಿ ಹೀಗೆ ಸಾವಿರಾರು ಶತ್ರುಗಳ ಕೊಲೆಯಾಗಬೇಕಿತ್ತು. ಆದರೆ, ಅಂತಹ ಒಂದು ಮಾನವ ಸಮೂಹದ ಹತ್ಯೆ ಇಸ್ಲಾಮಿನ ಚರಿತ್ರೆಯಲ್ಲೇ ದಾಖಲಾಗಿಲ್ಲ.  ಅಂದರೆ, ಇಸ್ಲಾಂ ಮಾನವ ಹತ್ಯೆಯನ್ನು ನಿರುತ್ಸಾಹಪಡಿಸುತ್ತದೆ ಎಂದೇ ಅರ್ಥ.*

ಭಾರತದ ಮುಸ್ಲಿಮರು ಅಲ್ಪಸಂಖ್ಯಾತರು ಅದಕ್ಕಾಗಿ ಈ ಆಜ್ಞೆಯನ್ನು ಪಾಲಿಸುತ್ತಿಲ್ಲ ಎಂಬ ನ್ಯಾಯೀಕರಣವನ್ನು ಕೊಟ್ಟರೂ, ವಿಶ್ವದಲ್ಲಿ ಅರವತ್ತಕ್ಕೂ ಮಿಕ್ಕ ಮುಸ್ಲಿಂ ರಾಷ್ಟ್ರಗಳಿವೆ. ಯಾವೊಂದು ರಾಷ್ಟ್ರದ ಧಾರ್ಮಿಕ ನಾಯಕ ಇಂತಹ ಒಂದು ಆಜ್ಞೆ ಇಸ್ಲಾಮಿನಲ್ಲಿ ಇದೆ ಎಂದು ಹೇಳಿದವರಿಲ್ಲ. ಅದರರ್ಥ, ಇಸ್ಲಾಮಿನಲ್ಲಿ ಇಂತಹ ಒಂದು ಆಜ್ಞೆ ಚಾಲ್ತಿಯಲ್ಲಿ ಇಲ್ಲ ಎಂದೇ ಅರ್ಥ.

ವಿಶ್ವದ ನೂರೈವತ್ತು ಕೋಟಿ ಮುಸ್ಲಿಮರು ನಮಾಝ್ ಮಾಡುತ್ತಾರೆ, ಉಪವಾಸ ಹಿಡಿಯುತ್ತಾರೆ, (ಫಿತರ್) ಝಕಾತ್ ಕೊಡುತ್ತಾರೆ, (ಸಾದ್ಯವಿರುವವರು) ಹಜ್ ಕರ್ಮ ನಿರ್ವಹಿಸುತ್ತಾರೆ. ಯಾಕೆಂದರೆ, ಇದೆಲ್ಲವೂ ಅಲ್ಲಾಹನ (ಖುರ್ಆನಿನಲ್ಲಿರುವ) ಆಜ್ಞೆಗಳಾಗಿವೆ. ಒಂದು ವೇಳೆ ಅನ್ಯ ಧರ್ಮೀಯರನ್ನು ಕೊಲ್ಲಲು ಖುರ್ಆನಿನಲ್ಲಿ (ಅಲ್ಲಾಹನ) ಆಜ್ಞೆ ಇದ್ದಿದ್ದರೆ, ಅದನ್ನು ಕೂಡಾ ವಿಶ್ವದ ಮುಸ್ಲಿಮರು ಅನುಸರಿಸಲೇ ಬೇಕು ತಾನೇ. ಆದರೆ, ಎಲ್ಲೂ, ಇಂತಹ ಒಂದು ಆಜ್ಞೆ ಇಸ್ಲಾಮಿನಲ್ಲಿ ಇದೆ ಎಂದು ಹೇಳಿ ಪಾಲಿಸಲಾಗುವ ಒಬ್ಬನೇ ಒಬ್ಬ ವ್ಯಕ್ತಿಯನ್ನು ತೋರಿಸಲು ಸಾದ್ಯವಿಲ್ಲ. ಇಸ್ಲಾಮಿಕ್ ಶರೀಹತ್ ಕಾನೂನನ್ನು ನೂರು ಶೇಕಡಾ ಪಾಲಿಸುವ ಸೌದಿ ಅರೇಬಿಯಾದಂತಹ ಮುಸ್ಲಿಂ ರಾಷ್ಟ್ರಗಳಲ್ಲೂ ಇಂತಹ ಒಂದು ಆಜ್ಞೆಯನ್ನು ಪಾಲಿಸಲಾಗುತ್ತಿಲ್ಲ. ಮುಸ್ಲಿಂ ರಾಷ್ಟ್ರಗಳಲ್ಲಿ ಅಲ್ಲಿನ ಪೌರತ್ವವನ್ನು ಪಡೆದು ವಾಸಿಸುವ ಅನ್ಯ ಧರ್ಮೀಯರಿದ್ದಾರೆ, ಅದೂ ಅಲ್ಲದೆ, ಭಾರತ (ಸೇರಿದಂತೆ ಬೇರೆ) ದೇಶದಿಂದ ಉದ್ಯೋಗಕ್ಕೆ ಬೇಕಾಗಿ ಹೋದವರೂ ಇದ್ದಾರೆ. ಇದುವರೆಗೆ ಒಬ್ಬನೇ ಒಬ್ಬ ಅನ್ಯ ಧರ್ಮೀಯನ ಶವ ಕೊಲೆಯಾಗಿ ಭಾರತಕ್ಕೆ ಬಂದದ್ದಿದೆಯಾ? ಅಥವಾ ಅಲ್ಲಿ ವಾಸಿಸುವವರನ್ನು ಈ ಕಾರಣ ಹೇಳಿ ಕೊಂದು ಹಾಕಿದ ಉದಾಹರಣೆಯನ್ನು ತೋರಿಸಲು ಸಾದ್ಯವಿದೆಯಾ? ಖಂಡಿತಾ ಸಾದ್ಯವಿಲ್ಲ. ಅಂದರೆ, ಇಸ್ಲಾಮಿನಲ್ಲಿ ಅಂತಹ ಒಂದು ಆಜ್ಞೆ ಇಲ್ಲ ಎಂದು ಅರ್ಥ ಮಾಡಿಕೊಳ್ಳಲು ಇದಕ್ಕಿಂತ ಬೇರೆ ಉದಾಹರಣೆ ಬೇಕಾಗಿಲ್ಲ.

ಇನ್ನು ಯಾವುದೋ ಮುಸ್ಲಿಂ ಹೆಸರಿನ ವ್ಯಕ್ತಿ ಕೊಲೆ, ಅನ್ಯಾಯ-ಆಕ್ರಮಣಗಳಲ್ಲಿ ಭಾಗಿಯಾಗಿದ್ದರೆ, ಅದಕ್ಕೆ ಧರ್ಮ ಎಂದೂ ಹೊಣೆಯಾಗುವುದಿಲ್ಲ. ಅಕ್ರಮ-ಅನ್ಯಾಯಗಳಿಗೆ ಎಂದೂ ಧರ್ಮವಿಲ್ಲ. ಕರ್ಣಾಟಕ-ತಮಿಳು ನಾಡು ಸರಕಾರವನ್ನು ಸಂಕಷ್ಟಕ್ಕೀಡು ಮಾಡಿದ್ದ ಮಹಾ ಅಕ್ರಮಿ ವೀರಪ್ಪನ್ ಗೂ ಒಂದು ಧರ್ಮವಿದೆ. ಭಾರತ ದೇಶದಾದ್ಯಂತ ರಕ್ತದ ಓಕುಳಿ ಹರಡಿಸಿದ ನಕ್ಸಲರಿಗೂ ಒಂದು ಧರ್ಮವಿದೆ.ಗೋವಿನ ಹೆಸರಲ್ಲಿ ದೇಶಾದ್ಯಂತ ಮನುಷ್ಯರ ಮಾರಣಹೋಮ ನಡೆಸುವ ಅಕ್ರಮಿಗಳಿಗೂ ಒಂದು ಧರ್ಮವಿದೆ. ಫೆಲಸ್ತೀನ್ ನಲ್ಲಿ ಪುಟ್ಟ ಕಂದಮ್ಮಗಳನ್ನು, ಮಹಿಳೆಯರನ್ನು ಹತ್ಯೆ ಮಾಡಿದ ಇಸ್ರೇಲಿಗೂ ಒಂದು ಧರ್ಮ ಇದೆ. ಇರಾಕ್, ಅಫ್ಘಾನ್, ಸಿರಿಯಾ ಮುಂತಾದ ಕಡೆ ಬಾಂಬ್ ಸುರಿದು ಲಕ್ಷಾಂತರ ಅಮಾಯಕರ ಮಾರಣಹೋಮ ನಡೆಸಿದ ಅಮೆರಿಕಕ್ಕೂ ಒಂದು ಧರ್ಮವಿದೆ. ಆದರೆ, ಇವರ್ಯಾರ ಅಕ್ರಮವನ್ನೂ ಅವರವರಿಗೆ ಸಂಬಂಧಪಡುವ ಧರ್ಮಕ್ಕೆ ನಂಟು ಕಲ್ಪಿಸಲಾಗುತ್ತಿಲ್ಲ. ಅವರ ಅಕ್ರಮಗಳಿಗೆ ಅವರು ಅನುಸರಿಸುವ ಧರ್ಮವೇ ಪ್ರೋತ್ಸಾಹಕ ಎಂದು ಆರೋಪಿಸಲಾಗುತ್ತಿಲ್ಲ. ಆದರೆ, ಮುಸ್ಲಿಂ ಹೆಸರಿನ ವ್ಯಕ್ತಿಗಳು ಮಾಡುವ ಅನ್ಯಾಯಗಳಿಗೆ ಇಸ್ಲಾಂ ಧರ್ಮವನ್ನು ಎಳೆದು ತರಲಾಗುತ್ತಿರುವುದು ಮಾತ್ರ ಬೇಸರದ ಸಂಗತಿ. ಯಾವ ಧರ್ಮ ಕೂಡಾ ಅಕ್ರಮ-ಅನ್ಯಾಯ ಗಳನ್ನು ಪ್ರೋತ್ಸಾಹಿಸುವುದಿಲ್ಲ. ಅಂದಮೇಲೆ, ಅಕ್ರಮ-ಅನ್ಯಾಯಗಳಿಗೆ ಧರ್ಮದ ಲೇಪ ಹಚ್ಚುವುದು ಖಂಡನೀಯ. ಧರ್ಮವನ್ನು ನೋಡಬೇಕಾದರೆ, ಅದರಲ್ಲಿರುವ ಆಕ್ರಮಿಗಳ ಕಡೆಗೆ ನೋಡದೆ, ಧಾರ್ಮಿಕ ನಾಯಕರ, ಸಾತ್ವಿಕ ಪುರುಷರ ಕಡೆಗೆ ನೋಡುವುದಾಗಿದೆ ಉತ್ತಮ.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment