*ಶೈಖುನಾ ಮುಹ್ಯಿಸ್ಸುನ್ನ ಪೊನ್ಮಳ ಉಸ್ತಾದ್; ಜ್ಞಾನ ಜಗತ್ತಿನ ಅತುಲ್ಯ ಪ್ರತಿಭೆ*
✍🏻 🖋
*ಲೇ; ಜುನೈದ್ ಸಖಾಫಿ ಜೀರ್ಮುಕ್ಕಿ*
ತುಂಬಿ ನಿಂತ ಸಭಾಂಗಣ. ಲಕ್ಷಕ್ಕಿಂತಲೂ ಜಾಸ್ತಿ ಘಟಾನುಘಟಿ ವಿದ್ವಾಂಸರು ವೇದಿಕೆಯಲ್ಲೂ, ಕೆಳಗೂ ಆಸೀನರಾಗಿದ್ದಾರೆ. ಕೇರಳದ ಸಾಂಸ್ಕ್ರತಿಕ ರಾಜಧಾನಿಯೆಂದು ಗುರುತಿಸಲ್ಪಡುವ ತ್ರಿಶ್ಶೂರಿನಲ್ಲಿ ನಡೆದ ಮೂರು ದಿನಗಳ ಸಮಸ್ತ ಉಲಮಾ ಕಾನ್ಫರೆನ್ಸಿನ ಸಮಾರೋಪ ಸಮಾರಂಭವದು. ಶೈಖುನಾ ಪೊನ್ಮಳ ಉಸ್ತಾದರು ಭಾಷಣಗೈಯ್ಯುವುದಕ್ಕಾಗಿ ಭಾಷಣ ಪೀಠದತ್ತ ಹೆಜ್ಜೆ ಹಾಕುತ್ತಿದ್ದಾಗ ಅದೊಂದು ಚಾರಿತ್ರಿಕ ನಿಮಿಷಕ್ಕೆ ಸಾಕ್ಷಿಯಾಗುತ್ತದೆಂದು ಯಾರೂ ಊಹಿಸಿರಲಿಲ್ಲ. ಅಲ್ಲಿ ಒಂದು ಗೂಡಿದ ಲಕ್ಷಾಂತರ ವಿದ್ವಾಂಸರು ಆ ಐತಿಹಾಸಿಕ ನಿಮಿಷಕ್ಕೆ ನೇರ ನೇತ್ರ ಸಾಕ್ಷಿಗಳಾದರು.
ತಟ್ಟನೆ ವೇದಿಕೆಯ ಮೇಲೆ ಎದ್ದು ನಿಂತು ಜಾಗತಿಕ ಮುಸ್ಲಿಮರ ಪರಮೋಚ್ಚ ನಾಯಕರೂ, ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರ.ಕಾರ್ಯದರ್ಶಿಯವರೂ ಆದ ಶೈಖುನಾ ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದರು ಘೋಷಿಸಿಯೇ ಬಿಟ್ಟರು. 'ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್ ರವರಿಗೆ ನಾನು "ಮುಹ್ಯಿಸ್ಸುನ್ನ" ಎಂಬ ಗೌರವ ನಾಮವನ್ನು ನೀಡುತ್ತಿದ್ದೇನೆ". ಅಲೆಗಡಲಿನಂತೆ ಕಣ್ಣೆಟುಕದ ದೂರದವರೆಗೆ ಶುಭ್ರ ವಸ್ತ್ರಧಾರಿಗಳು ತುಂಬಿ ನಿಂತಿದ್ದ ಆ ಬ್ರಹತ್ ಸಂಗಮವು ಸಮಕಾಲೀನ ಜಗತ್ತಿನ ಅಪ್ರತಿಮ ವಿದ್ವತ್ಜ್ಯೋತಿಗೆ ಸಿಕ್ಕಿದ ಆ ಗೌರವವನ್ನು ಮುಗಿಲು ಮುಟ್ಟುವ ತಕ್ಬೀರ್ ಧ್ವನಿಗಳ ನಿನಾದಗಳ ಮೂಲಕ ಸ್ವೀಕರಿಸಿತು.
ಅಲ್ಲಾಹು ಅಕ್ಬರ್....
ಅದನ್ನು ಜಗತ್ತೂ ಅಂಗೀಕರಿಸಿತು. ಮುಹ್ಯಿಸ್ಸುನ್ನ ಎಂದರೆ ಸುನ್ನತ್ತನ್ನು ಜೀವಂತ ಗೊಳಿಸಿದವರು ಎಂದರ್ಥ. ಹಿಜರಿ ಐದನೇ ಶತಮಾನದಲ್ಲಿ ಬದುಕಿದ್ದ ಇಮಾಂ ಬಗವೀ (ರ)ರವರಿಗಿದ್ದ ಅದೇ ಗೌರವನಾಮ. ಅಗಾಧ ಜ್ಞಾನದ ಒಡೆಯರೂ, ಅಸಂಖ್ಯಾತ ಘಟಾನುಘಟಿ ಶಿಷ್ಯಂದಿರನ್ನು ಹೊಂದಿದ್ದ, ಅಪಾರ ಪ್ರಮಾಣದ ಗ್ರಂಥಗಳನ್ನು ರಚಿಸಿದ್ದ ಇಮಾಂ ಬಗವೀ(ರ)ರವರನ್ನು ಜಗತ್ತು ಗುರುತಿಸುವುದು ಮುಹ್ಯಿಸ್ಸುನ್ನ ಎಂಬ ನಾಮದಿಂದಾಗಿದೆ.
ನಿಜಕ್ಕೂ ಆ ಹೆಗ್ಗಳಿಕೆ ಈಗ ಶೈಖುನಾ ಪೊನ್ಮಳ ಉಸ್ತಾದರಿಗೇ ಸಲ್ಲಬೇಕಾದದ್ದು. ಕಳೆದ ನಲ್ವತ್ತು ವರ್ಷಗಳ ದೀನೀ ಕೈಂಕರ್ಯದಲ್ಲಿ ಅವರು ಮಾಡಿ ಮುಗಿಸಿದ ಸಾಧನೆಗಳನ್ನು ನೋಡಿದವರಿಗದು ಅರ್ಥವಾಗಬಹುದು. ಅದು ಅದನ್ನು ಬಲಗೊಳಿಸುತ್ತದೆ ಕೂಡಾ.
ಇವತ್ತು ದಕ್ಷಿಣ ಭಾರತದ ದೀನೀ ಚಟುವಟಿಕೆಗಳ ನಾಯಕತ್ವ ವಹಿಸುತ್ತಿರುವ ವಿದ್ವಾಂಸರಲ್ಲಿ ದೊಡ್ಡದೊಂದು ವಿಭಾಗ ಶೈಖುನಾರ ಶಿಷ್ಯ ಸಂಪತ್ತು. ಸುನ್ನತ್ ಜಮಾ ಅತ್ತಿನ ಆದರ್ಶ ರಂಗದಲ್ಲಿ ಪ್ರಶೋಭಿಸುತ್ತಿರುವ ಅಲವಿ ಸಖಾಫಿ ಕೊಳತ್ತೂರು, ಮಾಳಿಯೇಕ್ಕಲ್ ಸುಲೈಮಾನ್ ಸಖಾಫಿ, ಪಲ್ಲಾರ್ ಹಸನ್ ಬಾಖವಿ, ಶೈಖುನಾ ಸುಲ್ತಾನುಲ್ ಉಲಮಾರ ಸುಪುತ್ರ,ಜಾಗತಿಕ ಮಟ್ಟದಲ್ಲಿ ಮುಸ್ಲಿಂ ನಾಯಕರುಗಳ ಸಾಲಲ್ಲಿ ಗುರುತಿಸಲ್ಪಡುವ ಡಾ. ಎ.ಪಿ. ಮುಹಮ್ಮದ್ ಅಬ್ದುಲ್ ಹಕೀಂ ಅಝ್ಹರಿ ಕಾಂತಪುರಂ, ವರ್ಷಂಪ್ರತಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಿ ನೂರಕ್ಕಿಂತಲೂ ಅಧಿಕ ಬಡ ನಿರ್ಗತಿಕ ಯುವತಿಯರ ಬಾಳನ್ನು ಬೆಳಗುತ್ತಿರುವ ಡಾ. ದೇವರ್ಶೋಲ ಅಬ್ದುಸ್ಸಲಾಂ ಮುಸ್ಲಿಯಾರ್, ಸರ್ವ ಧರ್ಮಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಭಾಷಣ ಮತ್ತು ಬರಹಗಳ ಮೂಲಕ ಇಸ್ಲಾಮಿನ ಸಮಗ್ರತೆಯನ್ನು ಪಸರಿಸುತ್ತಿರುವ ಸುನ್ನೀ ವೋಯ್ಸ್ ಪತ್ರಿಕೆಯ ಸಂಪಾದಕರಾದ ಇಬ್ರಾಹಿಂ ಸಖಾಫಿ ಪುಝಕ್ಕಾಟ್ಟಿರಿ ಮುಂತಾದ ಸಾವಿರಕ್ಕಿಂತಲೂ ಮಿಕ್ಕ ಅಗ್ರಗಣ್ಯ ಶಿಷ್ಯಂದಿರನ್ನು ಹೊಂದಿರುವುದರ ಜೊತೆಗೆ ಕರ್ನಾಟಕದಲ್ಲೂ ನೂರಾರು ವಿದ್ವಾಂಸರ ಗುರುವರ್ಯರಾಗಿದ್ದಾರೆ ಶೈಖುನಾ ಮುಹ್ಯಿಸ್ಸುನ್ನ . ಅದನ್ನಿಲ್ಲಿ ಹೆಸರಿಸುತ್ತಾ ಹೋದರೆ ಆ ಪಟ್ಟಿ ಉದ್ದವಾಗಬಹುದೆಂಬ ಹೆದರಿಕೆಯಿದೆ. ಆದರೂ....
ಕರ್ನಾಟಕ ರಾಜ್ಯ ಎಸ್.ಎಸ್.ಎಫ್ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಉಡುಪಿ ಜಿಲ್ಲಾ ಸುನ್ನೀ ಉಲಮಾ ಒಕ್ಕೂಟದ ಅಧ್ಯಕ್ಷರಾದ ಅಶ್ರಫ್ ಸಖಾಫಿ ಕಿನ್ಯ, ಎಸ್.ಎಸ್.ಎಫ್ ದ.ಕ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ, ಕಾಸರಗೋಡು ಜಿಲ್ಲಾಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು, ಕೇರಳ ಕರ್ನಾಟಕಗಳ ಭಾಷಣ ವೇದಿಕೆಗಳ ಸೌಂದರ್ಯವಾಗಿರುವ ಯುವ ವಾಗ್ಮಿ ನೌಫಲ್ ಸಖಾಫಿ ಕಳಸ, ಮಜ್ಲಿಸ್ ಗಾಣೆಮಾರ್ ಇದರ ಚೆಯರ್ಮೇನ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಕಾಮಿಲ್ ಸಖಾಫಿ ಬಡಕಬೈಲ್, ಬದ್ರುದ್ದೀನ್ ಅಝ್ಹರಿ ಬಡಕಬೈಲ್, ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಉಕ್ಕುಡ, ಎಸ್.ಎಸ್.ಎಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ, ಕರ್ನಾಟಕದ ಉಲಮಾಗಳ ಪರಮೋಚ್ಚ ನಾಯಕರುಗಳಾದ ಶೈಖುನಾ ಶರಫುಲ್ ಉಲಮಾ ಮಂಜನಾಡಿ ಉಸ್ತಾದರ ಸುಪುತ್ರ ಮುಹಮ್ಮದ್ ನಿಝಾಮಿ, ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರ ಸುಪುತ್ರ ಸ್ವದಖತುಲ್ಲಾ ನದ್ವಿ, ಮಂಗಳೂರಿನ ಪ್ರಖ್ಯಾತ ಪಂಪ್ ವೆಲ್ ಮಸ್ಜಿದು ತ್ತಖ್ವಾದ ಖತೀಬರಾದ ಹಾಫಿಳ್ ಅಬ್ದುರಹ್ಮಾನ್ ಸಖಾಫಿ ಚಿಯ್ಯೂರು, ಮಹಾರಾಷ್ಟ್ರ ರತ್ನಗಿರಿಯಲ್ಲಿ ದಾರುಲ್ ಹಬೀಬ್ ಎಂಬ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಮುಹಮ್ಮದ್ ಶರೀಫ್ ನಿಝಾಮಿ ಬೆಳ್ತಂಗಡಿ, ಸುರಿಬೈಲು ಅಶ್ ಅರಿಯ್ಯ ದಾರುಲ್ ಹುನಫಾ ಅರೇಬಿಕ್ ಕಾಲೇಜಿನ ಪ್ರಿನ್ಸಿಪಾಲ್ ಶೈಖುನಾ ಪಿ.ಎ ಅಬ್ದುರಹ್ಮಾನ್ ಬಾಖವಿ ಉಸ್ತಾದರ ಸುಪುತ್ರ, ಬನ್ನೂರು ಮುದರ್ರಿಸರಾಗಿರುವ ಅಸ್ ಅದ್ ಸಖಾಫಿ ತಿರುವಟ್ಟೂರು,.....
ಹೀಗೆ ಆ ಪಟ್ಟಿ ಉದ್ದಕ್ಕೆ ಮುಂದುವರಿಯುತ್ತಾ ಸಾಗುತ್ತದೆ.
ಶೈಖುನಾರ ಅಗಾಧ ವಿಜ್ಞಾನವನ್ನು ವಿವರಿಸಲು ವಾಕ್ಯಗಳಿಗಾಗಿ ತಡಕಾಡುತ್ತಿದ್ದೇನೆ. ಅದು ಅಷ್ಟೊಂದು ಆಳವಾಗಿದೆ. ಅದನ್ನು ಮನವರಿಕೆ ಮಾಡಬೇಕಾದರೆ ಶೈಖುನಾರ ತರಗತಿಗಳಲ್ಲಿ ಭಾಗವಹಿಸಲೇಬೇಕು. ಆಗಲೇ ಅದು ಗೊತ್ತಾಗಬಹುದಷ್ಟೆ. ಸಂಚರಿಸುವ "ಗ್ರಂಥ ಭಂಡಾರ" ವೆಂದರೆ ಅದು ತಪ್ಪಾಗದು. ಅಷ್ಟೂ ಪ್ರಮಾಣ ಬದ್ಧ ಆಳ ಅರಿವಿನ ಮಹಾ ಸಾಗರವದು. ಸಮಕಾಲೀನ ಜಗತ್ತು ಎದುರಿಸುವ ಎಷ್ಟೇ ಕ್ಲಿಷ್ಟಕರವಾದ ವಿಷಯವಾದರೂ ಕೂಡಾ ಅದನ್ನು ಎಳೆ ಎಳೆಯಾಗಿ ಬಿಚ್ಚಿ ಅದರ ಪ್ರಮಾಣಬದ್ಧ ತೀರ್ಪುಗಳನ್ನು ಸರಳ ಮತ್ತು ಸರಾಗವಾಗಿ ವಿವರಿಸುವುದನ್ನು ನೋಡುವಾಗ ನಾವೊಮ್ಮೆ ದಂಗಾಗಿ ಬಿಡುತ್ತೇವೆ. ಸಾವಿರಾರು ಗ್ರಂಥಗಳು, ಅದರ ಉಲ್ಲೇಖಗಳು, ಪುಟ ಸಂಖ್ಯೆ,ಭಾಗ ಎಲ್ಲವನ್ನೂ ಸವಿವರವಾಗಿ ಸಾಧಾರ ಸಾಕ್ಷ್ಯಗಳ ಸಹಿತ ವಿವರಿಸುವ ಆ ತರಗತಿಗಳು ವಿದ್ಯಾದಾಹಿಗಳ ಪಾಲಿಗೆ ವರದಾನದಂತಿರುತ್ತದೆ. ಆದ್ದರಿಂದಲೇ ಆಗಿರಬೇಕು ಏನಾದರೊಂದು ಸಮಸ್ಯೆ ತಲೆ ದೋರಿದಾಗ ಆ ಬಗ್ಗೆ ಶೈಖುನಾ ಮುಹ್ಯಿಸ್ಸುನ್ನ ಪೊನ್ಮಳ ಉಸ್ತಾದರ ನಿಲುವೇನು? ಎಂಬುದರತ್ತ ಎಲ್ಲರ ಚಿತ್ತವೂ ಹಾದು ಹೋಗುವುದು. ಶೈಖುನಾರು ಅಂಗೀಕರಿಸಿದರೆ ಮತ್ತೆ ಆ ವಿಷಯದಲ್ಲಿ ಮತ್ತೆ ಎರಡು ಮಾತಿಲ್ಲ. ಅವರು ತೀರ್ಪಿತ್ತ ಯಾವುದೇ ವಿಷಯಗಳಲ್ಲೂ ಪುನರ್ಚಿಂತನೆ ನಡೆಸಬೇಕಾದ ಅಗತ್ಯತೆ ಇದುವರೆಗೆ ಬಂದಿಲ್ಲ. ಅಷ್ಟೂ ಪ್ರಮಾಣಬದ್ಧವೂ, ಸ್ಪಷ್ಟವೂ ಆಗಿರುತ್ತದೆ ಶೈಖುನಾರ ನಿಲುವುಗಳು.
ಶೈಖುನಾರ ಆಳ ಅರಿವಿಗೆ ಅವರ ನೇತ್ರತ್ವದಲ್ಲಿ ನಡೆಯುವ ತರಗತಿಗಳೇ ಸಾಕ್ಷಿ. ಮಲಪ್ಪುರಂ ಪಟ್ಟಣದ ಹ್ರದಯ ಭಾಗದಲ್ಲಿರುವ ಕೋಟ್ಟಪ್ಪಡಿಯಲ್ಲಿ ಕಳೆದ ಹತ್ತು ವರ್ಷಗಳಿಂದ ವಾರಂಪ್ರತಿ ನಡೆದು ಬರುತ್ತಿರುವ ವಿಶ್ವವಿಖ್ಯಾತ ಫತ್ಹುಲ್ ಮುಈನ್ ಗ್ರಂಥದ ಉಲಮಾ ದರ್ಸ್, ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟ ಮತ ಭೌತಿಕ ರಂಗದ ಪ್ರತಿಷ್ಟಿತ ಸಂಸ್ತೆಯಾಗಿರುವ ಮಅ್ ದಿನು ಸ್ಸಖಾಫತಿಸ್ಸುನ್ನಿಯ್ಯ ದಲ್ಲಿ ಎರಡು ವಾರಕ್ಕೊಮ್ಮೆ ನಡೆಯುವ ವಿದ್ವತ್ ಜಗತ್ತಿನ ಅತುಲ್ಯ ಗ್ರಂಥ ಮಿನ್ ಹಾಜ್ ನ ವಿದ್ವಾಂಸ ದರ್ಸ್ ಗಳೆಲ್ಲವೂ ಅದಕ್ಕೊಂದು ನಿದರ್ಶನ. ಆ ತರಗತಿಯಲ್ಲಿ ಪಾಲ್ಗೊಳ್ಳಲು ದೂರ ದೂರುಗಳಿಂದ ನೂರಾರ ಕಿ.ಮೀ ಗಳನ್ನು ದಾಟಿ ಉಲಮಾ ನಾಯಕರು ಹರಿದು ಬರುತ್ತಿರುವುದೇ ಶೈಖುನಾರಿಗಿರುವ ಆಳ ಜ್ಞಾನವನ್ನು ಗುರುತಿಸಿರುವುದರಿಂದ.
ಹಲವಾರು ಗ್ರಂಥಗಳೂ ಶೈಖುನಾರಿಂದ ವಿರಚಿತಗೊಂಡಿದೆ. ಅರಬಿ ಭಾಷೆಯಲ್ಲಿರುವ ತಹ್ಖೀಖುಲ್ ಮತ್ ಲಬ್ ಬಿ ತಅ್ ರೀಫಿ ಮುಸ್ತಲಹಿಲ್ ಮದ್ಹಬ್, ಶಾಫಿಈ ಫತ್ವಾಗಳ ಬ್ರಹತ್ ಸಂಗ್ರಹವಾದ ಫತಾವಾ ದ್ಸಹಬಿಯ್ಯ, ಅಲ್ ಮಿನ್ ಹಾಜುಸ್ವಹೀಹ್ ಮಲಯಾಳಂ ಭಾಷೆಯಲ್ಲಿರುವ ಶಾಫಿಈ ಮದ್ಹಬ್, ತ್ವರೀಖತ್; ಒಂದು ಸಮಗ್ರ ಅಧ್ಯಯನ, ಫತಾವಾ ಮುಹ್ಯಿಸ್ಸುನ್ನ, ಲೋಕಾನುಗ್ರಹಿ, ಅಧ್ಯಯನಗಳು ಮತ್ತು ಪ್ರಬಂಧಗಳು...... ಹೀಗೆ ಅದರ ಪಟ್ಟಿಯೂ ದೀರ್ಘವಾಗಬಹುದು. ಪ್ರತೀ ಗ್ರಂಥಗಳ, ಅದರ ಒಳಹರಿವಿನ ಬಗ್ಗೆ ಬರೆಯುತ್ತಾ ಹೋದರೆ ಅದೆಷ್ಟೋ ಹೊತ್ತಗೆಗಳು ಬಿಡುಗಡೆಗೊಳ್ಳಬಹುದು. ಆ ಗ್ರಂಥಗಳನ್ನು ಓದಿದ ಪ್ರತಿಯೊಬ್ಬರೂ ಕೂಡಾ ಅದರಲ್ಲಿರುವ ಜ್ಞಾನದ ಆಳವನ್ನರಿತು ಬೆಚ್ಚಿಬಿದ್ದಿದ್ದಾರೆ. ಆ ರಚನೆಗಳೆಲ್ಲವೂ ಕಾಟಾಚಾರದ ಪುಸ್ತಕಗಳಾಗದೆ ಮುಸ್ಲಿಂ ಜಗತ್ತು ರೆಫರನ್ಸ್ ಆಗಿ ಬಳಸುವ ಪ್ರಮುಖ ಗ್ರಂಥಗಳಾಗಿರುವುದು ಕೂಡಾ ಅದರಿಂದಲೇ.
ತರಗತಿ, ಅಧ್ಯಯನ, ರಚನೆಗಳಿಗೆ ಮಾತ್ರ ಆ ಬದುಕು ಸೀಮಿತಗೊಳ್ಳದೆ ಸಾಂಘಿಕ ರಂಗದಲ್ಲೂ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸುಮಾರು ಒಂದೂವರೆ ದಶಕಗಳ ಕಾಲ ಕೇರಳದ ಯುವ ಜನತೆಯ ನಾಡಿಮಿಡಿತವಾಗಿರುವ ಎಸ್.ವೈ.ಎಸ್ ನ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಹಲವು ಕ್ರಾಂತಿಗಳನ್ನು ಸ್ರಷ್ಟಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಅದೇ ರೀತಿ ಹಲವು ಮೊಹಲ್ಲಾಗಳ ಗೌರವಾಧ್ಯಕ್ಷರಾಗಿ, ಅಧ್ಯಕ್ಷರಾಗಿ, ಖಾಝಿಯಾಗಿರುವ ಶೈಖುನಾ ರವರು ಇದೀಗ ಕೇರಳ ರಾಜ್ಯದ ಭರವಸೆಯಾಗಿ ಉದಯಗೊಂಡಿರುವ ಮುಸ್ಲಿಂ ಜಮಾ ಅತ್ತಿನ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು, ಹಲವು ವರ್ಷಗಳಿಂದ ಸಮಸ್ತದ ಕಾರ್ಯದರ್ಶಿ, ಸಮಸ್ತ ಫತ್ವಾ ಸಮಿತಿಯ ಸುಪ್ರಧಾನ ನೇತ್ರತ್ವ, ಮಲಪ್ಪುರಂ ಜಾಮಿಅ ಹಿಕಮಿಯ್ಯ ಎಂಬ ವಿಖ್ಯಾತ ವಿದ್ಯಾಕೇಂದ್ರದ ಪ್ರ. ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರಾಗಿರುವುದೆಲ್ಲವೂ ಅವರ ಸಾಧನೆಗೆ ದೊರಕಿದ ಗೌರವಗಳು.
ಕಳೆದ ವರ್ಷ ಎರಡು ಪ್ರಮುಖ ಸಂಸ್ತೆಗಳು ಇಸ್ಲಾಮೀ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಲ್ಪಡುವ ವಿದ್ವಾಂಸರಿಗೆ ನೀಡುವ ಗೌರವ ಪ್ರಶಸ್ತಿಯನ್ನು ಶೈಖುನಾರಿಗೆ ನೀಡಿ ಗೌರವಿಸಿರುವುದು ಅವರ ಹಿರಿಮೆಯನ್ನು ಎತ್ತಿ ತೋರಿಸುತ್ತದೆ. ಒಂದು ಸಯ್ಯಿದ್ ಖಲೀಲುಲ್ ಬುಖಾರಿ ಕಂಡಲುಂಡಿ ತಂಙಳ್ ಸಾರಥ್ಯದ ಮಅ್ ದಿನ್ ನೀಡುವ "ಸಯ್ಯಿದ್ ಅಹ್ಮದುಲ್ ಬುಖಾರಿ ಅವಾರ್ಡ್" ಹಾಗೂ ಮತ್ತೊಂದು ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ರವರ ಸಂಸ್ತೆಯ ವತಿಯಿಂದ ನೀಡಲ್ಪಡುವ "ಸಯ್ಯಿದ್ ಪಝಮಳ್ಳೂರ್ ತಂಙಳ್ ಅವಾರ್ಡ್". ಈ ಎರಡೂ ಪ್ರಶಸ್ತಿಗಳೂ ಶೈಖುನಾರಿಗೆ ಲಭಿಸಿತ್ತು.
ಇಸ್ಲಾಮೀ ಚಟುವಟಿಕೆಗಳಲ್ಲಿ ಅನರ್ಘವಾದ ಸೇವೆಗೈದವರಿಗೆ ನೀಡಲ್ಪಡುವ "ಇಮಾಂ ಗಝಾಲಿ ಅವಾರ್ಡ್ "ಕೂಡಾ ಶೈಖುನಾರನ್ನು 2003ರಲ್ಲಿ ಅರಸಿ ಬಂದಿದೆ.
ಹಲವು ಬಾರಿ ದೇಶ ವಿದೇಶಗಳಲ್ಲಿ ಅತಿಥಿಯಾಗಿ ಭಾಗವಹಿಸಿ,ಇಸ್ಲಾಮಿನ ಅಧ್ಯಯನ ವಿಷಯಗಳಲ್ಲಿ ಪ್ರಬಂಧವನ್ನು ಮಂಡಿಸಿರುವ ಶೈಖುನಾರ ಅರ್ಥ ಗರ್ಭಿತ ಮತ್ತು ಸಂಪುಷ್ಠವಾದ ವಿವರಣಾ ಶೈಲಿಯನ್ನು ಕಂಡು ಅರಬಿಗಳೂ ಕೂಡಾ ದಂಗಾಗಿದ್ದಾರೆ. ಈಜಿಪ್ಟ್, ಯು.ಎ.ಇ, ಸೌದಿ, ಜೋರ್ಡಾನ್, ಕುವೈತ್, ಒಮಾನ್, ಫಲಸ್ತೀನ್, ಖತರ್, ಇರಾನ್ ಸಹಿತ ಹಲವು ದೇಶಗಳಿಗೆ ಭೇಟಿ ನೀಡಿದ್ದಾರೆ.
ಅಲ್ಲಾಹು ಶೈಖುನಾರಿಗೆ ಆಫಿಯತ್, ದೀರ್ಘಾಯುಷ್ಯವನ್ನು ನೀಡಲಿ...

No comments:
Post a Comment