*ಚಿನ್ನಾಭರಣ ನಿನ್ನ ಅಭಿಮಾನವಾಗದಿರಲಿ.*
*ತಂಗಿಗೊಂದು ಪತ್ರ.*
ಒಲವಿನ ತಂಗೀ,
" ಹೆಚ್ಚುವರಿ ಚಿನ್ನಕ್ಕಾಗಿ ಪೀಡನೆ ಯುವತಿ ಆತ್ಮಹತ್ಯೆಗೆ ಶರಣು"
"ಚಿನ್ನಾಭರಣ ಹೊಂದಿಸಲಾಗದೆ ಕುಟುಂಬ ಸಾಮೂಹಿಕ ಆತ್ಮಹತ್ಯೆ" ಇದೆಲ್ಲ ಕೇವಲ ಪತ್ರಿಕೆಗಳ ತಲೆಬರಹಗಳಾಗಿ ಮಾತ್ರ ನಾವು ಇತ್ತೀಚಿನ ದಿನಗಳಲ್ಲಿ ಕಾಣುತ್ತಿಲ್ಲ.
ನಮ್ಮ ಸಮಾಜದ ಆಸುಪಾಸಿನಲ್ಲಿ ದಿನನಿತ್ಯ ಇಂತಹ ಹತ್ತಲವಾರು ಪ್ರಕರಣಗಳನ್ನು ನಾವು ಗಮನಿಸುತ್ತಾ ಇದ್ದೇವೆ.
ಆದರೆ ಇದರ ಗಂಭೀರತೆಯನ್ನು ನಾನು ಸಹಿತ ನಿನ್ನಂತಹ ಸಹೋದರಿಯರು ಯಾರೂ ಚಿಂತಿಸಲೇ ಇಲ್ಲ ಅನ್ನುವುದು ವಿಪರ್ಯಾಸ.
ಇಂದು ಮದುವೆ ಆಲೋಚನೆಗಳು ಬರುವಾಗಲೇ ಹೆಣ್ಣಿನ ಗುಣ ,ನಡತೆಯನ್ನು ತಿಳಿಯುವುದರ ಬದಲು ಅದೆಷ್ಟು ಚಿನ್ನವನ್ನು ಹಾಕಲು ಅವರಿಂದ ಸಾಧ್ಯವಿದೆ ಅನ್ನುವಷ್ಟರ ಮಟ್ಟಿಗೆ ನಿನ್ನಂತಹ ಸಹೋದರಿಯರ ಪ್ರಶ್ನೆಗಳು ಮುಂದವರಿದು ನಿಂತ ಕಾರಣದಿಂದಾಗಿರುತ್ತದೆ ಸಮುದಾಯದ ನಡುವಿನ ವರದಕ್ಷಿಣೆ ಸಮಸ್ಯೆಯು ಮುಸ್ಲಿಂ ಸಮುದಾಯವನ್ನು ಬೆಂಬಿಡದೆ ಕಾಡುವಂತಾಗಲು ಕಾರಣ.
ತಂಗೀ,
ನಿನ್ನನ್ನು ಮಾತ್ರ ನಾನಿದಕ್ಕೆ ದೂಷಿಸಲು ಇಷ್ಟಪಡುವುದಿಲ್ಲ.
ಚಿನ್ನಾಭರಣವನ್ನು ಅಭಿಮಾನದ ಪ್ರತೀಕವಾಗಿ ಪ್ರದರ್ಶಿಸಲ್ಪಡಲು ಪೈಪೋಟಿ ನಡೆಸುವಂತಹ ಅಹಂಕಾರದ ಸ್ಪರ್ಧಾತ್ಮಕ ಪೈಪೋಟಿಯೊಂದನ್ನು ಇಲ್ಲಿ ಹುಟ್ಟುಹಾಕಿ ಸಮಯಗಳು ಹಲವು ಕಳೆದು ಹೋದವು.
ಕಳೆದ ಕೆಲ ತಿಂಗಳುಗಳ ಹಿಂದೆ ಪುತ್ತೂರು ಸಮೀಪದ ಮಹಿಳೆಯೊಬ್ಬರು ತನ್ನ ಕುಟುಂಬದಲ್ಲಿನ ಮದುವೆ ಕಾರ್ಯಕ್ರಮಕ್ಕೆ ತನ್ನ ನೆರೆಮನೆಯ ಮಹಿಳೆಯ ಎಂಟು ಪವನಿನಷ್ಟಿರುವ ಚಿನ್ನವನ್ನು ಪಡೆದುಕೊಂಡು ಧರಿಸಿಕೊಂಡು ಹೋದಾಗ , ಆ ಮದುವೆ ಮನೆಯಲ್ಲಿ ಅವರ ಬೇಜವಾಬ್ದಾರಿತನದಿಂದಲೋ ಅಥವಾ ಇನ್ಯಾವುದೋ ಕಾರಣಗಳಿಂದಲೋ ಅದು ಕಳೆದುಹೋದ ವಾರ್ತೆಯೊಂದು ಪತ್ರಿಕೆ ಹಾಗೂ ವಾಟ್ಸ್ ಅಪ್ ಮುಖಾಂತರ ನೀವೂ ಓದಿದವರಾಗಿರಬಹುದು.
ಇಲ್ಲಿ ನಾವು ಯಾರನ್ನು ದೂರಬೇಕು ಆ ಮಹಿಳೆಯನ್ನೋ ಅಥವಾ ಚಿನ್ನವನ್ನು ಪ್ರದರ್ಶನದ ವಸ್ತುವಾಗಿ ಬದಲಾಯಿಸಿದ ವ್ಯವಸ್ಥೆಗಳನ್ನೋ..?!
ವ್ಯವಸ್ಥೆಗಳನ್ನು ದೂರಬೇಕು ಅಂತಾಗಿರಬಹುದು ನಿನ್ನಂತಹ ಕೆಲವರ ವಾದವಾಗಿದ್ದರೂ , ಬಹುತೇಕರ ಪ್ರಶ್ನೆ ಅವರಿಗೆ ಯಾಕೆ ಮತ್ತೊಬ್ಬರ ಚಿನ್ನ ಧರಿಸಿಯೇ ಹೋಗಬೇಕಾಗಿತ್ತು ಅಂತಾಗಿತ್ತು.
ನಮ್ಮ ಸಮಾಜದಲ್ಲಿ ,ನಮ್ಮ ಸುತ್ತಮುತ್ತಲು ನಡೆಯುವ ಬಹುತೇಕ ಮದುವೆ ಕಾರ್ಯಕ್ರಮಗಳು ಚಿನ್ನಾಭರಣ ಪ್ರದರ್ಶನದ ವೇದಿಕೆಗಳಾಗಿ ಬದಲಾಗಿಬಿಟ್ಟಿದೆ.
ಅದಕ್ಕಾಗಿ ನಿನ್ನಂತಹ ಸಹೋದರಿಯರು ಕಂಡ ಕಂಡವರ ಕೈಕಾಲಿಗೆರೆದು ಚಿನ್ನವನ್ನು ಪಡೆದುಕೊಂಡು ಹೋಗಿ ಜನರ ಮುಂದೆ ಪ್ರದರ್ಶನದ ವಸ್ತುವಾಗಿ ಗೋಚರಿಸುತ್ತಿರುವುದು ಕಾಲಘಟ್ಟದ ದುರಂತವಾಗಿದೆ.
ಕೆಲವರು ಧರಿಸುವ ಚಿನ್ನಾಭರಣಗಳು ಬಡ ಕುಟುಂಬದ ಸಹೋದರಿಯರನ್ನು ನೋವಿನ ಕೂಪಕ್ಕೆ ತಳ್ಳಲ್ಪಡುವ ರೂಪದಲ್ಲಿರುತ್ತದೆ.
ಅವರ ಮನಸ್ಸಿಗೂ ಆಸೆಗಳನ್ನು ಹುಟ್ಟಿಸಿ , ಅದನ್ನು ಸಾಧಿಸಲಾಗದೆ ನಿರಾಸೆಗೊಳಗಾಗಿ ಕಣ್ಣೀರು ಸುರಿಸುವ ಸಹೋದರಿಯರು ಅದೆಷ್ಟಿರಬಹುದೇನೋ..!
ಪ್ರತಿಯೊಂದು ಮೊಹಲ್ಲಾ ವ್ಯಾಪ್ತಿಯಲ್ಲಿ ಅದೆಷ್ಟೋ ಹೆಣ್ಣು ಮಕ್ಕಳು ಮದುವೆಯ ಹೊಸ್ತಿಲು ದಾಟಿ , ವರದಕ್ಷಿಣೆಯನ್ನು ನೀಡಲಾಗದೆ ಚಡಪಡಿಸಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಕಣ್ಣೀರು ಸುರಿಸಿ ಜೀವನ ಕಳೆಯುವಾಗ ನೀನು ಪ್ರದರ್ಶನದ ವಸ್ತುವಾಗಿ ಚಿನ್ನಾಭರಣವನ್ನು ತೋರ್ಪಡಿಸುವಾಗ , ಆ ಬಡ ಸಹೋದರಿಯ ಭರವಸೆಯ ನೋಟಗಳ ಕಣ್ಣೀರಿಗೆ ನಿನ್ನ ಚಿನ್ನವನ್ನು ,ಭಸ್ಮವನ್ನಾಗಿಸುವ ಶಕ್ತಿಯಿದೆ ಅನ್ನುವುದನ್ನು ಮರೆಯದಿರು.
ಇನ್ನು ಇದ್ದವರು ಚಿನ್ನ ಧರಿಸುವಾಗ ನಾನು ಚಿನ್ನ ಧರಿಸದೆ ಹೋದರೆ ಅದು ಆ ಸಮಾರಂಭಕ್ಕೆ ಕಪ್ಪು ಚುಕ್ಕೆ ಅನ್ನುವ ರೀತಿಯಲ್ಲಿ ಯಾರದೋ ಚಿನ್ನ ಪಡೆದುಕೊಂಡು ಹೋಗುವ ನಿನ್ನಂತಹ ಸಹೋದರಿಯರ ಕುರಿತು ಏನು ಹೇಳಬೇಕು ಅಂತನೇ ಗೊತ್ತಾಗುತ್ತಿಲ್ಲ.
ಕೆಲವರಿಗೆ ನನ್ನ ಮಗಳಿಗೆ ಇಂತಿಷ್ಟು ಚಿನ್ನ ಹಾಕಲೇಬೇಕು ಅನ್ನುವ ಹಂಬಲ. ನೆರೆಯ ಯುವತಿಯ ಮದುವೆಗೆ ಅಷ್ಟು ಹಾಕಿದ್ದಾರಂತೆ , ನಮ್ಮ ಮಗಳಿಗೂ ಅಷ್ಟು ಹಾಕಲೇಬೇಕು ಅನ್ನುವ ಅವರ ಹಠತನದ ಕಾರಣಗಳಿಂದ ಅದೆಷ್ಟೋ ಮದುವೆ ಮನೆಗಳು ಸ್ಮಶಾನದಂತಾಗಿದ್ದರೆ, ಇನ್ನು ಕೆಲವು ಹೆಣ್ಣು ಹೆತ್ತ ಜೀವಗಳ ಮಾನವೀಯತೆಯಿಲ್ಲದ ನನ್ನ ಮಗಳಿಗೆ ಅಷ್ಟು ಚಿನ್ನ ಕೊಟ್ಟಿದ್ದೇವೆ, ನಮ್ಮ ಮಗನ ಹೆಂಡತಿಗೂ ಅಷ್ಟೇ ಸಿಗಬೇಕು ಅನ್ನುವ ಒತ್ತಾಯದ ಬೇಡಿಕೆಯು ಅದೆಷ್ಟೋ ಮನೆಯ ಬೆಳಕನ್ನು ಕಸಿದುಕೊಂಡ ಪರಿಣಾಮವಾಗಿ ಇಂದು ಮುಸ್ಲಿಂ ಸಮುದಾಯದಲ್ಲಿ ಮದುವೆಯಾಗದೆ ಮನೆಯಲ್ಲಿ ಉಳಿದ ಸಹೋದರಿಯರ ಸಂಖ್ಯೆ ದಿನಕಳೆದಂತೆ ಅಧಿಕವಾಗುತ್ತಲೇ ಹೋಗುತ್ತಿದೆ.
ತಂಗೀ,
ಚಿನ್ನಾಭರಣವನ್ನು ನೀನು ಅಭಿಮಾನದ ಪ್ರತೀಕವಾಗಿ ಪ್ರದರ್ಶಿಸಲ್ಪಡುತ್ತಿರುವಾಗ , ಹೆತ್ತವರು ಕಷ್ಟಪಟ್ಟು ಖರೀದಿಸಿಕೊಟ್ಟ ಅದೆಷ್ಟು ಸಹೋದರಿಯರ ಚಿನ್ನಾಭರಣಗಳು ಬ್ಯಾಂಕಿನ ಲಾಕರ್ ನೊಳಗೆ ಸೇರಿಕೊಂಡು ಹರಾಜಾಗುವ ಹಂತಕ್ಕೆ ಬಂದು ನಿಂತಿದೆ ಅನ್ನುವುದನ್ನು ನೀನೆಂದಾದರೂ ತಿಳಿಯುವ ಪ್ರಯತ್ನ ನಡೆಸಿದೆಯಾ..?
ಅದೇನಾದರೂ ಸಮಸ್ಯೆಗಳು ಎದುರಾದಾಗ ಚಿನ್ನವನ್ನು ಅಡವಿಡಲು ನೀಡುವ ಅದೆಷ್ಟು "ತ್ಯಾಗಮಯಿ" ನಿನ್ನಂತಹ ಹೆಂಡತಿಯರಿದ್ದಾರೆ ಅಲ್ವಾ..? ಅದು ನಿಮ್ಮ ಕ್ಷಣಿಕದ ಸಮಸ್ಯೆಗೆ ಮುಕ್ತಿ ನೀಡಿದರೂ ಮುಂದೆ ಅದರಿಂದ ನೀನು ಇನ್ನಷ್ಟು ಸಮಸ್ಯೆಗೆ ಸಿಲುಕುವ ಎಲ್ಲಾ ಸಾಧ್ಯತೆಗಳು ಇದೆ.
ಬ್ಯಾಂಕಿನಲ್ಲಿರಿಸಿದ ಚಿನ್ನವನ್ನು ಅತ್ತ ಬಿಡಿಸಲೂ ಆಗದೆ ,ಇತ್ತ ಅದರ ಬಡ್ಡಿಯನ್ನು ಕಟ್ಟಲೂ ಸಾಧ್ಯವಾಗದೆ ಕೊನೆಗೆ ಅದು ಹರಾಜಾಗುವ ಸನ್ನಿವೇಶ ಸೃಷ್ಟಿಯಾದಾಗ ಕಂಡವರ ಕೈಕಾಲಿಡಿದು ಹಣ ಹೊಂದಿಸಿ ಒಮ್ಮೆಗೆ ಅದನ್ನು ಬಿಡಿಸಿ ,ನಂತರ ಮತ್ತೊಮ್ಮೆ ಅದನ್ನೇ ಅಡವಿಡುವ ಮೂಲಕ ಜೀವನ ಪರ್ಯಂತ ಗಂಡನನ್ನು ಸಾಲಗಾರನ್ನಾಗಿಸುವ ನಿನ್ನಂತಹ ಸಹೋದರಿಯರು ಚಿನ್ನದಿಂದಾಗುವ ಸಮಸ್ಯೆಗಳ ಕುರಿತು ಅರ್ಥೈಸಿದರೆ ಖಂಡಿತವಾಗಿಯೂ ಈ ಸಮಸ್ಯೆಯಾಗಿ ಬದಲಾಗಿಬಿಟ್ಟ ಸಮಸ್ಯೆಯೊಂದಕ್ಕೆ ಮುಕ್ತಿ ನೀಡುವಂತಾಗಿಸಲು ಖಂಡಿತಾ ಸಾಧ್ಯವಿದೆ.
"ಲಜ್ಜೆಯಾಗಿದೆ ಹೆಣ್ಣಿನ ಅತೀ ದೊಡ್ಡ ಸೌಂದರ್ಯ" ಹೀಗಿರುವಾಗ ಬಾಹ್ಯವಾಗಿ ಅದೆಷ್ಟು ಸೌಂದರ್ಯವತಿಯಾಗಿ ಗುರುತಿಸಿಕೊಂಡರೂ ಅದರಿಂದ ಯಾವುದೇ ಪ್ರಯೋಜನವಾಗದು.
ತಂಗೀ,
ನಿನ್ನ ಒಂದು ದೃಢವಾದ ನಿರ್ಧಾರ ಸಮಾಜವನ್ನು ಬದಲಾಯಿಸಲು ಸಾಧ್ಯವಿದೆ. ನಿನ್ನೂರಿನಲ್ಲಿ ,ಕುಟುಂಬದಲ್ಲಿ ನಡೆಯುವ ಸಭೆ, ಸಮಾರಂಭಗಳಿಗೆ ಭಾಗವಹಿಸುವಾಗ ಚಿನ್ನ ನಿನಗೆ ಕಡ್ಡಾಯ ಅಂತ ಆಗದಿರಲಿ.
ಚಿನ್ನ ಧರಿಸಿದರೆ ಮಾತ್ರ ಅದು ನನ್ನ ಅಭಿಮಾನ ಅನ್ನುವ ಮೂರ್ಖತನದ ಪ್ರತಿಷ್ಠೆಗೆ ನಿನ್ನಿಂದಲೇ ತಿಲಾಂಜಲಿಯಿಡುವಂತಾಗಲಿ.
ನನ್ನ ಮದುವೆಯ ಸಂದರ್ಭದಲ್ಲಿ ಇಂತಿಷ್ಟು ಚಿನ್ನ ಹಾಕಲೇಬೇಕು ಅನ್ನುವ ನಿನ್ನ ಒತ್ತಾಯದ ಬೇಡಿಕೆಗೆ ಕಡಿವಾಣ ಬೀಳಲಿ. ನಿನ್ನಿಂದ ಪ್ರಾರಂಭಗೊಂಡ ಬದಲಾವಣೆಯ ಗಾಳಿ ನಿನ್ನ ಸ್ನೇಹಿತೆಯರ ಮಖಾಂತರ ಸಮಾಜದುದ್ದಕ್ಕೂ ಪಸರಿಸಿದರೆ ಸಮುದಾಯದೊಳಗಿನ ಚಿನ್ನದಿಂದ ಸೃಷ್ಟಿಯಾಗುವ ಸಮಸ್ಯೆಯೊಂದಕ್ಕೆ ಅಂತ್ಯವಾಗಿಸಲು ಖಂಡಿತ ಸಾಧ್ಯವಿದೆ.
ನಿನ್ನಿಂದ ಅದು ಸಾಧ್ಯವಿದೆ ಅನ್ನುವ ನಂಬಿಕೆಯೊಂದಿಗೆ..
ನಿನ್ನೊಲವಿನ ಅಣ್ಣ
ಸ್ನೇಹಜೀವಿ ಅಡ್ಕ
No comments:
Post a Comment