Saturday, November 4, 2017

*ನನ್ನ ಪ್ರವಾದಿ (ಸ.ಅ.ವ)*
🍂🍂🍂🍂🍂🍂🍂

ಶಾಂತಿ-ಸೌಹಾರ್ದತೆಯ ಪ್ರತೀಕ,
ಸರ್ವ ಬಾಂಧವರ ಹೃದಯ ಮಿಡಿತ,
ಪ್ರತಿ ಮನಸ್ಸುಗಳು ಆಶಿಸುವ ವ್ಯಕ್ತಿತ್ವ..
ಸರ್ವ ಮುಸಲ್ಮಾನರ ನೇತಾರ,
ಸತ್ಯಸಂದತೆಯ *ಅಲ್ ಅಮೀನ್*ನಾಮಾಂಕಿತ,
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..*

ಹೆಣ್ಣುಮಗಳಿಗೆ ಬದುಕಲು ಸ್ವಾತಂತ್ರ್ಯವಿಲ್ಲದ
ಅತೀ ನೀಚ ಕಾಲಘಟ್ಟ..
ಪ್ರತಿ ಹೆಣ್ಣು ಶಿಶುವಿನ ಜೀವಂತವಾಗಿ
ಮಣ್ಣಿನೊಂದಿಗೆ ವಿಲೀನಗೊಳಿಸುವ ಸಂಪ್ರದಾಯ..
ಹೆತ್ತವರ ಕಣ್ಣೀರಿಗೆ ಸಾಂತ್ವನವಾಗಿ
ಹೆಣ್ಣಿನ ಬಾಳಿಗೆ ಬೆಳಕಾಗಿ ಜಗ ಬೆಳಗಿದ
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!!*

ನಾಡಿನ ಉದ್ದಗಲೇ ಅನೀತಿ-ಅನಾಚಾರ,
ಅಕ್ರಮ, ಜೂಜಾಟ, ರಹಸ್ಯ-ಪರಸ್ಯ
ವ್ಯಭಿಚಾರದಿಂದ ಕಂಗೆಟ್ಟ ಕಾಲ...
ನಾಡಿಗೆ ಬೆಳಕಾಗಿ, ಸಂತ್ರಸ್ತರಿಗೆ ಸಹಾಯಕರಾಗಿ,
ಅನಾಚಾರಗಳಿಗೆ ತಡೆಯಾಗಿ ಉದಯಿಸಿದ
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!!*

ಶ್ರೀಮಂತ ಕುಲಗಳ ಕೈಯಡಿಯಲಿ
ಗಹಗಹಿಸುತ್ತಿದ್ದ ಗುಲಾಮತನ...
ಕ್ರೂರ ಹುಲಿ-ಸಿಂಹಗಳೊಂದಿಗೆ
ಗುಲಾಮರ ಕಾದಾಡಿಸಿ ಮನೋರಂಜಿಸುವ
ಅತೀ ನೀಚ ಅಮಾನವೀಯ ಕಾಲ..
ಗುಲಾಮರನ್ನು ಬಂಧಮುಕ್ತಗೊಳಿಸಿ,
ಗುಲಾಮರ ವಿಮೋಚನೆಗೆ ಕರೆ ನೀಡಿದ
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!*

ಕುಲ-ಜಾತಿ-ವರ್ಣಗಳ ತಾರತಮ್ಯ,
ಕರ್ರಗಿನವನು ಬದುಕಲು ಹೇಸುವ ಕಾಲಘಟ್ಟ..
ಕಪ್ಪು ಕರ್ರಗಿನ ಬಿಲಾಲ್(ರ.ಅ)ರನ್ನು
ಹೆಗಲಲ್ಲಿ ಕೂರಿಸಿ ಆಝಾನ್ ಕರೆಯಲೇಳಿ ವರ್ಣ ತಾರತಮ್ಯ ಕೊನೆಗಾಣಿಸಿದ
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..*

ವಿಧವೆಯರಿಗೆ ಬಾಳು ನಿಷೇದಿಸಿ,
ಕ್ರೂರಿ ಮನುಷ್ಯರೆದುರು ಅಮಾನುಷವಾಗಿ
ವ್ಯಭಿಚಾರಕ್ಕೆಸೆಯಲ್ಪಡುವ ಸಮಯ..
ವಿಧವೆಯರಿಗೆ ಬಾಳಲು ಅವಕಾಶ ಕಲ್ಪಿಸಿ
ತನಗಿಂತ ವರುಷಗಳಷ್ಟು ಹಿರಿಯ
ವಿಧವೆ ಖದೀಜಾ(ರ.ಅ)ರನ್ನು ವರಿಸಿದ
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!!*

ಧರ್ಮ - ಧರ್ಮಗಳ ಮಧ್ಯೆ ಕಲಹ,
ಜಾತಿ-ಕುಲಗಳ ಮಧ್ಯೆ ಅಟ್ಟಹಾಸ..
ಪರರೊಂದಿಗಿನ ನೀಚ ವೈರತ್ವದ ಮಧ್ಯೆ,
ಯಹೂದಿಯ ಶವಯಾತ್ರೆಯಲ್ಲಿ
ಎದ್ದು ನಿಂತು ಗೌರವ ಸೂಚಿಸಿ
ಪರಧರ್ಮ ಸೌಹಾರ್ದತೆಯ ಸಾರಿದ,
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!!*

ತ್ವಾಹಿಫ್ ಶಿಖರಗಳ ನಡುವೆ ಸತ್ಯ ನಿಷೇಧಿಗಳಿಂದ
ಕಲ್ಲುತೂರಾಟಕ್ಕೆ ಬಲಿಯಾದಾಗಲೂ..
ಲಅ್'ನತ್ ಅಬೂಜಹಲ್ ಬಳಗ
ಒಂಟೆಯ ಹಸಿ ಕರುಳುಗಳ
ನಮಾಝಿನ ಸಾಷ್ಟಾಂಗದ ಸಮಯದಿ
ಹೆಗಲ ಮೇಲೆ ಇರಿಸಿದಾಗಲೂ
ಅವರಿಗಾಗಿ ದುವಾಗೈದ ಶಾಂತಿಯ ಪ್ರತಿರೂಪ...
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!!*

ಜ್ವರಬಾಧಿತರಾಗಿ ಮಲಗಿರುವಾಗ..
ಅಝ್ರಾಹಿಲ್(ಅ.ಸ)ರು ರೂಹ್ ಹಿಡಿಯಲು
ಅಸೀನರಾದ ಮರಣಶಯ್ಯೆಯಲ್ಲಿ ಕೂಡ
ತನ್ನ ಉಮ್ಮತ್ತಿಗಾಗಿ, ತನ್ನ ಸಮುದಾಯಕ್ಕಾಗಿ,
ಅರ್ಥಾತ್ ನಮಗಾಗಿ ಕಣ್ಣೀರಿಟ್ಟು ದುವಾಃಗೈದ ...
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ...*

*✍🏻ತಾಝ್ ಲೀ ಪುತ್ತೂರ್*

No comments:

Post a Comment