ಉರೂಸ್ ಆಚರಣೆ ಇಸ್ಲಾಮಿನಲ್ಲಿ
-----------------------------------
ಭಾಗ -18
📝 ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ , ತೋಕೆ.
ಪ್ರಷ್ಣೆ :2
-----------
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೋ ಸ್ವಹಾಬಿಗಳೋ ಯಾರಾದರೂ ಉರೂಸ್ ಆಚರಿಸಿದ್ದಾರೆಯೇ?
ಉ
-----
ಹೌದು ಆಚರಿಸಿದ್ದಾರೆ.ಬಹು! ಉಹ್ದ್ ಶುಹದಾಗಳ ಉರೂಸನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೂ ಸ್ವಹಾಬಿಗಳು ಆಚರಿಸಿದ್ದಾರೆಂದು ಬಹು ಹಾಫಿಲ್ ಅಬ್ದುರ್ರಝ್ಝಾಕ್ ತನ್ನ ಮುಸನ್ನಫ್ ನಲ್ಲೂ ಇಮಾಮ್ ರಾಝಿ ತನ್ನ ತಫ್ಸೀರುಲ್ ಕಬೀರ್ ನಲ್ಲೂ, ಇಬ್ನ್ ಕಸೀರ್ ತನ್ನ ತಫ್ಸೀರ್ ನಲ್ಲೂ ಉಲ್ಲೇಖಿಸಿದ್ದಾರೆ.
ಪ್ರಶ್ನೆ:3
---------
ಅನ್ಯ ಪುರುಷರು ಪರಸ್ಪರ ಬೆರೆಯುವುದು ಹರಾಂ ಅಲ್ಲವೇ? ಉರೂಸ್ ನಲ್ಲಿ ಹಲವು ಅನಾಚಾರಗಳು ನಡೆಯುದಿಲ್ಲವೇ? ಆದ್ದರಿಂದ ಉರೂಸ್ ಆಚರಣೆಗಯನ್ನು ಸ್ಥಗಿತಗೊಳಿಸುವುದು ಸೂಕ್ತವಲ್ಲವೇ?
ಉ:
-----
ಅನ್ಯ ಪುರುಷರು ಪರಸ್ಪರ ಬೆರೆಯುವುದು ಹರಾಮ್ ಆಗಿದೆ.ಅದು ಉರೂಸ್ ನ ಸಂದರ್ಭದಲ್ಲೂ , ಕುಟುಂಬಸ್ಥರನ್ನು ಸಂದರ್ಶಿಸುವ ಸಂದರ್ಭದಲ್ಲೂ , ಹೆಚ್ಚೇಕೆ ತನ್ನ ಸ್ವಂತ ಮನೆಯಲ್ಲೇ ಅನ್ಯ ಪುರುಷರೊಂದಿಗೆ ಬೆರೆಯುವುದು ನಿಷಿದ್ಧವಾಗಿದೆ.
ಉರೂಸಿನ ಸಂದರ್ಭದಲ್ಲೂ ಅಲ್ಲದ ಸಂದರ್ಭದಲ್ಲೂ ಅನ್ಯರೊಂದಿಗೆ ಬೆರೆಯದೆ , ತನ್ನ ಶರೀರ ಪೂರ್ಣವಾಗಿ ಮುಚ್ಚುವ ವಸ್ತ್ರದೊಂದಿಗೆ ಮಾತ್ರವೇ ಸ್ತ್ರೀ ಹೊರಡಬೇಕೆಂದು ಸುನ್ನೀ ವಿದ್ವಾಂಸರು ಹೇಳುತ್ತಲೇ ಬಂದಿದ್ದಾರೆ ಹಾಗೂ ಬರುತ್ತಿದ್ದಾರೆ.ಈ ನಿಟ್ಟಿನಲ್ಲಿ ದರ್ಗಾ ಕಮಿಟಿಗಳೂ ಕಠಿಣವಾದ ಕ್ರಮವನ್ನು ಜರಗಿಸಬೇಕಾಗಿದೆ.
ಮಾತ್ರವಲ್ಲ ಪ್ರಮಾಣಿಕರೂ , ಶೀಲವತಿಯರೂ ಮರ್ಯಾದಸ್ಥರೂ ಆದ ಸ್ತ್ರೀಗಳೂ ಯಾವತ್ತೂ ಇಂತಹ ಕೆಡುಕುಗಳಿಗೆ ನಿಲ್ಲುವುದಿಲ್ಲ.ಅವರು ಇಸ್ಲಾಮ್ ನಿರ್ದೇಶಿಸಿದ ರೀತಿಯಲ್ಲಿಯೇ ಝಿಯಾರತ್ ನಡೆಸುತ್ತಿದ್ದಾರೆ ಎಂಬುವುದು ನಮ್ಮೆಲ್ಲರ ಅನುಭವವಾಗಿದೆ.ಕೆಲವು ಮರ್ಯಾದಸ್ಥರಲ್ಲದ ಸ್ತ್ರೀಗಳು ಮಾತ್ರ ತಮ್ಮ ದೇಹ ಸೌಂದರ್ಯವನ್ನು ತೋರಿಸಲಿಕ್ಕಾಗಿ ಕೆಟ್ಟ ಉದ್ದೇಶದಿಂದ ಹೊರಡುತ್ತಾರೆ.ಇದು ಕೇವಲ ಉರೂಸಿನ ಸಂದರ್ಭದಲ್ಲಿ ಮಾತ್ರವಲ್ಲ ,ಮದುವೆ , ಔತಣ ಮುಂತಾದ ಸಂದರ್ಭಗಳಲ್ಲೂ ಅವರು ಈ ರೀತಿಯೇ ಹೊರಡುತ್ತಾರೆ.
ಆದ್ದರಿಂದ ಕೆಲವು ಸ್ತ್ರೀಯರು ಕೆಟ್ಟ ಉದ್ದೇಶದಿಂದ ಬರುತ್ತಾರೆ ಅಥವಾ ಅನಾಚಾರವನ್ನುಂಟು ಮಾಡುತ್ತಾರೆ ಎಂಬ ಕಾರಣಕ್ಕಾಗಿ ಉರೂಸನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ.ಹಾಗಾದರೆ ಮದುವೆ , ಔತಣ , ವೈದ್ಯರ ಬಳಿಗೆ ಹೋಗುವುದು , ಕುಟುಂಬಸ್ಥರ ಬಳಿ ಹೋಗುವುದು ಮುಂತಾದವುಗಳನ್ನೆಲ್ಲಾ ನಿಷೇಧಿಸಬೇಕಾದೀತು.ಆದುದರಿಂದ ಅನಾಚಾರಗಳು ಎಲ್ಲಿಯಾದರೂ ನಡೆಯುತ್ತಿದ್ದರೆ ಅದಕ್ಕೆ ಕಡಿವಾಣ ಹಾಕಿ ಇಸ್ಲಾಮೀ ಶಿಷ್ಟಾಚಾರದಿಂದ ಉರೂಸ್ ಹಾಗೂ ಝಿಯಾರತ್ ನಡೆಯುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.
ಪ್ರಶ್ನೆ: 4
---------
ಸ್ತ್ರೀಯರು ಮಸೀದಿಗೆ ಹೋಗಬಾರದೆಂದು ಅದೂ ಹರಾಮ್ ಎಂದೂ ಹೇಳುವ ಸುನ್ನಿಗಳು ಸ್ತ್ರೀಯರನ್ನು ಉರೂಸ್ ಗೆ ಕೊಂಡುಯ್ಯುತ್ತಿದ್ದಾರೆ ಅದು ಹರಾಂ ಅಲ್ಲವೇ ?
ಉ:
ಸ್ತ್ರೀಯರು ಮಸೀದಿಗೆ ಹೋಗಬಾರದೆಂದು ಹೇಳಿದ್ದು ಇಂದಿನ ಸುನ್ನೀ ವಿದ್ವಾಂಸರಲ್ಲ.ಹೊರತು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಾಗಿದ್ದಾರೆ.ಸ್ತ್ರೀಯರು ಮಸೀದಿಗೆ ಹೋಗದೆ ಮನೆಯಲ್ಲೇ ನಮಾಝ್ ಮಾಡುವುದು ಅತ್ಯಂತ ಶ್ರೇಷ್ಟವೆಂದು ಅವರು ತಿಳಿಸಿದ್ದಾರೆ.ಆ ತಳಹದಿಯಲ್ಲಿ ಸ್ತ್ರೀಯರು ಮಸೀದಿಗೆ ಹೋಗಬಾರದೆಂದು ಸುನ್ನಿಗಳು ಹೇಳುತ್ತಾರೆ.
ಅದೇ ಸಂದರ್ಭದಲ್ಲಿ ಅಂಬಿಯಾಗಳ , ಔಲಿಯಾಗಳ ಹಾಗೂ ಸಜ್ಜನರ ಖಬರ್ ಝಿಯಾರತ್ ಸ್ತ್ರೀಯರಿಗೆ ಸುನ್ನತ್ತಾಗಿದೆಯೆಂದು ತುಹ್ಫಾ , ನಿಹಾಯ , ಮುಗ್ನೀ ಮುಂತಾದ ಸರ್ವ ಗ್ರಂಥಗಳಲ್ಲೂ ಕಾಣಬಹುದು.ಖಬರ್ ಝಿಯಾರತ್ ಮಾಡಬೇಕಾದರೆ ಖಬರಿನ ಬಳಿಗೆ ನಾವು ಹೋಗಬೇಕೇ ವಿನಃ ಖಬರ್ ಈಚೆ ಬರಲಾರದು ಎಂದು ಎಲ್ಲರಿಗೂ ತಿಳಿಯುವ ವಿಚಾರ.ಆದ್ದರಿಂದ ಸ್ತ್ರೀಯರು ಅವರ ಖಬರನ್ನು ಸಂದರ್ಶಿಸುತ್ತಾರೆ.
ಪ್ರಶ್ನೆ:5
----------
ಉರೂಸನ್ನು ವಿಜೃಂಭಣೆಯಿಂದ ಆಚರಿಸುವುದಾದರೂ ಏಕೆ? ಸರಳವಾಗಿ ನಡೆಸಬಾರದೆ?
ಉ:
------
ಇಂದು ನಡೆಯುವ ಉರೂಸುಗಳಲ್ಲಿ ನಿಷಿದ್ಧವಾದ ವಿಜೃಂಭಣೆಗಳೋ, ಆಡಂಬರಗಳೋ ಕಂಡು ಬರುವುದಿಲ್ಲ ಎಂಬುವುದು ಒಂದು ವಾಸ್ತವಿಕತೆಯಾಗಿದೆ.ಇನ್ನು ಅಲ್ಲಿ ಹಾಕುವ ಟ್ಯೂಬ್ ಗಳು,ಮೈಕ್ ಗಳೂ ಅದೆಲ್ಲವೂ ಅಗತ್ಯವೇ ಆಗಿದೆ.ಲಕ್ಷಾಂತರ ಜನರು ಸೇರುವ ಸ್ಥಳದಲ್ಲಿ ಕೇವಲ ಹತ್ತು ಟ್ಯೂಬ್ ಗಳು ಹಾಕಿದರೆ ಸಾಕೇ? ಅಥವಾ ಒಂದೆರಡು ಮೈಕ್ ಬಾಕ್ಸ್ ಗಳನ್ನು ಕಟ್ಟಿದರೆ ಸಾಕೇ? ಉರೂಸ್ ನ ಸಂದರ್ಭದಲ್ಲಿ ಸೇರುವ ಜನಸಂಖ್ಯೆಗೆ ಅನುಗುಣವಾಗಿ ಟ್ಯೂಬ್ ಗಳು ಹಾಕುವುದು ಅಗತ್ಯವಾಗಿದೆ.
ಇನ್ನು ಮಿನಿಯೇಚರ್ ಗಳು ಹಾಕುವುದಾದರೂ ಏಕೆ ಎಂದು ಕೇಳುವವರಿದ್ದಾರೆ.ಸಾಮನ್ಯವಾಗಿ ಉರೂಸ್ ಸಂದರ್ಭದಲ್ಲಿ ದರ್ಗಾಕಿಂತಲೂ ಮಿಗಿಲಾಗಿ ಮಸೀದಿಗೆ ಮಿನಿಯೇಚರ್ ಗಳನ್ನು ಹಾಕಲಾಗುತ್ತದೆ.ಇದನ್ನು ಆಡಂಬರವೆಂದೂ ನಿಷಿದ್ಧವೆಂದೂ ಹೇಳಲು ಸಾಧ್ಯವಿಲ್ಲ.ಏಕೆಂದರೆ ಅಲ್ಲಾಹನ ಮಸೀದಿಯನ್ನು ಅಲಂಕರಿಸುವುದು ಅಲ್ಲಾಹನ ಮಸೀದಿಗೆ ನೀಡುವ ಗೌರವವಾಗಿದೆ.ಅಲ್ಲಾಹು ಗೌರವಿಸಿದ ವಸ್ತುವನ್ನು ಗೌರವಿಸುವುದು ಮುಸ್ಲಿಮರ ಕರ್ತವ್ಯವಾಗಿದೆ.ಅಲ್ಲಾಹನ ಭವನವಾದ ಕ ಅಬಾ ಶರೀಫ್ ಗೆ ಅತೀ ಸುಂದರವೂ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ರತ್ನ ಕಂಬಳಿಯನ್ನು ಇಂದಿಗೂ ಹೊದಿಸಲಾಗುತ್ತದೆ.ಇದನ್ನು ಯಾವುದೇ ಒಬ್ಬ ವಿದ್ವಾಂಸನೂ ವಿರೊಧಿಸಿಲ್ಲ.ಮಾತ್ರವಲ್ಲ ವಹ್ಹಾಬಿಗಳ ಆಡಳುತವಿರುವ ಸೌದಿ ಸರಕಾರವೇ ಇದನ್ನು ನಿರ್ವಹಿಸುತ್ತಿದೆ.ಆದುದರಿಂದ ಅಲ್ಲಾಹನ ಮಸೀದಿಯನ್ನು ಗೌರವಿಸಿ ಮಿಯೇಚರ್ ಹಾಕುವುದು ಉತ್ತಮವೇ ಆಗಿದೆ.
ಅದೇ ರೀತಿ ಔಲಿಯಾಗಳ ಮಖ ಬರಗಳನ್ನು ಮಿಯೇಚರ್ ಮೂಲಕ ಅಲಂಕರಿಸುವುದು ಉತ್ತಮವೇ ಆಗಿದೆ.ಅಲ್ಲಾಹನು ಸೌಂದರ್ಯವುಳ್ಳವನೂ ಸೌಂದರ್ಯವನ್ನು ಇಷ್ಟಪಡುವವನೂ ಆಗಿದ್ದಾನೆ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ತಿಳಿಸಿದ್ದಾರೆ.ಆದುದರಿಂದ ಅವರ ಮಖಬರಗಳಿಗೆ ಸೌಂದರ್ಯವನ್ನುಂಟು ಮಾಡುವುದು ಈ ಹದೀಸಿಗೆ ಅನುಯೋಜ್ಯವಾಗಿದೆ.
ಅಲ್ಲದೆ ಉರೂಸ್ ಕಾರ್ಯಕ್ರಮದಲ್ಲಿ ನಡೆಯುವ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಬೇರೆ ಬೇರೆ ಪ್ರದೇಶದ ವಿದ್ವಾಂಸರೂ ಸೂಫಿವರ್ಯರೂ ಬರುತ್ತಾರೆ.ಆ ಸಂದರ್ಭದಲ್ಲಿ ಮಸೀದಿ ಮತ್ತು ಪರಿಸರ ವನ್ನು ಅಲಂಕರಿಸುವುದು ಆವಶ್ಯವಾಗಿದೆ.ಸಾಮಾನ್ಯವಾಗಿ ನಮ್ಮ ಮನೆಗೆ ವಿದೂರದ ಗೌರವಾನ್ವಿತರಾದ ಅತಿಥಿಗಳು ಬರುವಾಗ ನಮ್ಮ ಮನೆಯನ್ನು ಅಲಂಕರಿಸುವುದು ಸ್ವಾಭಾವಿಕವಲ್ಲವೇ?
ಅದೇ ರೀತಿ ನಮ್ಮ ಊರಿಗೆ ವಿದೂರದ ವಿದ್ವಾಂಸರು ಅತಿಥಿಗಳಾಗಿ ಬರುವಾಗ ಮಸೀದಿ ಹಾಗೂ ಪರಿಸರವನ್ನು ಅಲಂಕರಿಸುವುದು ಸರ್ವೋತ್ತಮವಾಗಿದೆ.ಇದ್ಯಾವುದೂ ಆಡಂಭರ ಹಾಗೂ ಅನಾಚಾರವಲ್ಲ.
ಸಲ್ಲಲ್ಲಾಹು ಅಲಾ ಮುಹಮ್ಮದ್ ......
ಸಲ್ಲಲ್ಲಾಹು ಅಲೈಹಿ ವಸಲ್ಲಮ್
ಮುಗಿಯಿತು...
No comments:
Post a Comment