Thursday, October 5, 2017

ಉರೂಸ್ ಆಚರಣೆ ಇಸ್ಲಾಮಿನಲ್ಲಿ.

ಭಾಗ -2

📝 ಟಿ.ಎಂ ಮುಹ್ಯಿದ್ದೀನ್ ಖಾಮಿಲ್ ಸಖಾಫಿ, ತೋಕೆ.

 ಒಂದೊಂದು ಮದ್ರಸಾಕ್ಕೆ ಹಯಾತುಲ್ ಇಸ್ಲಾಮ್ ಮದ್ರಸ , ರೌಳತುಲ್ ಉಲೂಂ ಮದ್ರಸ ಮುಂತಾದ
ಬೇರೆ ಬೇರೆ ಹೆಸರುಗಳಿಂದ ತಿಳಿಯಲ್ಪಡುತ್ತದೆ. ಆದರೆ ಅಲ್ಲಿ ನಡೆಯುವ ಸುಪ್ರಧಾನವಾದ ಉದ್ದೇಶ ಇಲ್ಮ್ ಅಥವಾ ಧಾರ್ಮಿಕ ವಿಧ್ಯೆ ಕಲಿಸುವುದಾಗಿದೆ.ಧಾರ್ಮಿಕ ವಿಧ್ಯೆ ಕಲಿಸುವುದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಉತ್ತೇಜನ ನೀಡಿದ ಕಾರ್ಯವೂ ಅತ್ಯಂತ ಪುಣ್ಯದಾಯಕವಾದ ಸತ್ಕರ್ಮವೂ ಆಗಿದೆ.ಇದನ್ನು ಪ್ರತಿಯೊಂದು ಕಾಲಕ್ಕೆ ಅನುಯೋಜ್ಯವಾದ ವ್ಯವಸ್ಥೆಯಲ್ಲಿ ಕಲಿಸುವುದಕ್ಕೆ ಮದ್ರಸಾ ಎಂದೂ ಕರೆಯಲಾಗುತ್ತದೆ.ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಕಲಿಸಿದ ಒಂದು ಕಾರ್ಯವನ್ನು ನವೀನ ಮಾದರಿಯಲ್ಲಿ ನಡೆಸುವುದಕ್ಕೆ ಮದ್ರಸಾ ಎಂಬ ಹೊಸ ಹೆಸರನ್ನಿಡಲಾಗಿದೆ.
      ಅದೇ ರೀತಿ ಯತೀಂ ಖಾನಗಳೂ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದಲ್ಲಿರಲಿಲ್ಲ.ಅಂದರೆ ಒಂದು ಸಂಸ್ಥೆಯ ಅಧೀನದಲ್ಲಿ ಸಮಾಜದಲ್ಲಿರುವ ಅನಾಥ ಮಕ್ಕಳನ್ನು ಒಂದೇ ಸೂರಿನಲ್ಲಿ ಒಟ್ಟು ಸೇರಿಸಿ ಅವರಿಗೆ ಧಾರ್ಮಿಕ ಲೌಕಿಕ ಜ್ಞಾನವನ್ನು ನೀಡಿ ಅವರನ್ನು ಬೆಳೆಸುವ ಸಂಪ್ರದಾಯವು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿರಲಿಲ್ಲ.ಆದರೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿಲ್ಲದಿದ್ದರಿಂದ ಅದು ಅನಾಚಾರ ( ಬಿದ್ ಅತ್) ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಅನಾಥ ಮಕ್ಕಳನ್ನು ಪೋಷಿಸುವುದು ಹಾಗೂ ಸಂರಕ್ಷಿಸುವುದು ಅತ್ಯಂತ ಪುಣ್ಯ ಕಾರ್ಯವೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸ್ಪಷ್ಟಪಡಿಸಿದ್ದಾರೆ.ಈ ಮಾನದಂಡದಲ್ಲಿ ಯತೀಂ ಖಾನಗಳು ಸುನ್ನತ್ತಿನ ವ್ಯಾಪ್ತಿಯಲ್ಲಿ ಬರುತ್ತದೆ.
         ಅದೇ ರೀತಿ ದೀನೀ ಪತ್ರಿಕೆಗಳು.ಇಂದಿನ ರೀತಿಯಲ್ಲಿರುವ ವಾರ ಪತ್ರಿಕೆಗಳು , ಪಾಕ್ಷಿಕಗಳು, ಮಾಸಿಕಗಳು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ  ಕಾಲದಲ್ಲಿರಲಿಲ್ಲ.ಆದರೆ ಆ ಒಂದು ಕಾರಣದಿಂದ ಅದನ್ನು ಕೆಟ್ಟ ಬಿದ್ ಅತ್(ಅನಾಚಾರ) ಎಂದು ಕರೆಯಲು ಸಾಧ್ಯವಿಲ್ಲ.ಏಕೆಂದರೆ ಈ ಪತ್ರಿಕೆಗಳ ಉದ್ದೇಶ ಧಾರ್ಮಿಕ ಜ್ಞಾನ ನೀಡುವುದಾಗಿದೆ.ಆದ್ದರಿಂದ ಅದು ಸುನ್ನತ್ತಿನ ವ್ಯಾಪ್ತಿಯಲ್ಲಿ ಒಳಪಡುತ್ತದೆ.
     ಒಟ್ಟಿನಲ್ಲಿ ಮದ್ರಸಾಗಳು, ಯತೀಂ ಖಾನಗಳು, ಪತ್ರಿಕೆಗಳು , ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿಲ್ಲದಿದ್ದರೂ ಅದು ಸುನ್ನತ್ತಾದ ಸತ್ಕರ್ಮವಾಗಿದೆ.ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಪ್ರೋತ್ಸಾಹ ನೀಡಿದ ಕಾರ್ಯವೂ ಆಗಿದೆ.ಆದರೆ ನವೀನ ಮಾದರಿಯಲ್ಲಿ ನಡೆಯುವುದರಿಂದ ಹೊಸ ಹೆಸರುಗಳನ್ನು ಇಡಲಾಗಿದೆ ಅಷ್ಟೆ.
   ಅದೇ ರೀತಿ ಉರೂಸ್ ಎಂಬುವುದು ಇಂದಿನ ನವೀನ ಮಾದರಿಯಲ್ಲಿ ಹಾಗೂ ಶೈಲಿಯಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿಲ್ಲದಿದ್ದರೂ ಅದರಲ್ಲಿ ನಡೆಯುವ ಮರ್ಮ ಪ್ರಧಾನವಾದ ಕಾರ್ಯಗಳು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿದ್ದದ್ದೂ ಅವರು ಪ್ರೋತ್ಸಾಹ ನೀಡಿದ್ದೂ ಆಗಿದೆ.ಏಕೆಂದರೆ ಉರೂಸ್ ನಲ್ಲಿ ನಡೆಯುವ ಸುಪ್ರಧಾನವಾದ ಕಾರ್ಯವೇನೆಂದರೆ,
1. ಸಾಮೂಹಿಕ ಝಿಯಾರತ್.
2.ಅವರಿಗಾಗಿ ಖುರ್ ಆನ ಪಾರಾಯಣ.
3. ಅವರ ಹೆಸರಿನಲ್ಲಿ ದಾನ ನೀಡುವುದು.
4.ಮತ ಪ್ರವಚನ ನಡೆಸುವುದು.
5.ಅವರ ಹೆಸರಿನಲ್ಲಿ ಅನ್ನದಾನ ಮಾಡುವುದು.
ಇದೆಲ್ಲವೂ ಪ್ರವಾದಿ ಸಲ್ಲಲ್ಲಾಹು ಅಲಿಹಿವಸಲ್ಲಮರು ಕಲಿಸಿ ಕೊಟ್ಟ ಕಾರ್ಯವಾಗಿದೆ.ಆದರೆ ಇವೆಲ್ಲವುಗಳನ್ನು ಒಂದೇ ಸಮಯದಲ್ಲಿ ನವೀನ ಮಾದರಿಯಲ್ಲಿ ನಡೆಸುವುದಕ್ಕೆ ಉರೂಸ್ ಎಂದು ಕರೆಯಲಾಗುತ್ತದೆ.ಧಾರ್ಮಿಕ ವಿಧ್ಯೆಯನ್ನು ನವೀನ ಶೈಲಿಯಲ್ಲಿ ಕಲಿಸುವ ವಿಧ್ಯಾಲಯಗಳಿಗೆ ಹೊಸತಾಗಿ ಮದ್ರಸಾ ಎಂದು ಕರೆದಂತೆ  ಇದಕ್ಕೆ ಉರೂಸ್ ಎಂದು ಹೆಸರಿಸಲಾಗಿದೆ ಅಷ್ಟೆ.
ಇನ್ನು ಯಾರಾದರೂ ಉರೂಸ್ ಎಂಬುವುದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿತ್ತೇ ಎಂದು ಕೇಳುವುದಾದರೆ ಮದ್ರಸಾ, ಯತೀಂ ಖಾನ ಎಂಬುವುದು ಪ್ರವಾದಿ ಸಲ್ಲಲ್ಲಾಹು ಆಲೈಹಿ ವಸಲ್ಲಮರ ಕಾಲದಲ್ಲಿತ್ತೇ ಎಂದು ಅವರಲ್ಲಿ ಕೇಳಬೇಕಾಗುತ್ತೆ.ಇನ್ನು ಮದ್ರಸಾ ಎಂಬ ಹೆಸರು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿಲ್ಲದಿದ್ದರೂ ಅಲ್ಲಿ ನಡೆಯುವ ಸುಪ್ರಧಾನವಾದ ಕಾರ್ಯ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿತ್ತು ಎಂದು ಹೇಳುವುದಾದರೆ ಉರೂಸ್ ನಲ್ಲಿ ನಡೆಯುವ ಕಾರ್ಯವೂ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿತ್ತು ಎಂದು ಹೇಳಬಹುದಾಗಿದೆ.
ಒಟ್ಟಿನಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಪ್ರೋತ್ಸಾಹ ನೀಡಿದ ಹಾಗೂ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿದ್ದ ವಿಧ್ಯೆ ಕಲಿಸುವ ಕಾರ್ಯಕ್ಕೆ ಮದ್ರಸಾ ಎಂಬ ಹೊಸ ಹೆಸರನ್ನು ಆಯ್ದುಕೊಂಡಂತೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದಲ್ಲಿಯೇ ಇದ್ದ ಕೆಲವು ಕಾರ್ಯಗಳನ್ನು ಒಟ್ಟಾಗಿ ನಡೆಸುವುದಕ್ಕೆ ಉರೂಸ್ ಎಂಬ ಹೊಸ ಹೆಸರನ್ನು ಇಡಲಾಗಿದೆ.ಇನ್ನು ಉರೂಸ್ ನಲ್ಲಿ ನಡೆಯುವ ಮುಖ್ಯವಾದ ಕಾರ್ಯಗಳೇನೆಂದೂ ಅದಕ್ಕಿರುವ ಪುರಾವೆಯೇನೆಂದೂ ನೋಡೋಣ.

ಮುಂದುವರಿಯುವುದು...

No comments:

Post a Comment