ಉರೂಸ್ ಆಚರಣೆ ಇಸ್ಲಾಮಿನಲ್ಲಿ.
ಭಾಗ -11
📝 ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ , ತೋಕೆ.
ಖುರ್ ಆನಿನ ದೃಷ್ಟಿಯಲ್ಲಿ.........
ಸಜ್ಜನರ ಖಬರ್ ಗಳನ್ನು ಎತ್ತರಿಸಿ ಕಟ್ಟುವುದು ನಿಷಿದ್ಧವೆಂದು ಪವಿತ್ರ ಖುರ್ ಆನಿನಲ್ಲಿ ಎಲ್ಲೂ ಕಾಣಲು ಸಾಧ್ಯವಿಲ್ಲವೆಂದು ಈಗಾಗಲೇ ಸ್ಪಷ್ಟಪಡಿಸಲಾಯಿತು.
ಇನ್ನು ಪವಿತ್ರ ಖುರ್ ಆನಿನಲ್ಲಿ ಇದನ್ನು ಅನುಮತಿಸಲಾಗಿದೆಯೇ ಎಂಬುವುದನ್ನು ನೋಡೋಣ. ಅಲ್ಲಾಹು ಹೇಳುತ್ತಾನೆ,
" ಅವರ ಮೇಲೆ ಆಧಿಪತ್ಯವಿರುವವರು ನಾವು ಅವರ ಗುಹೆಯ ಮೇಲೆ ಮಸೀದಿಯನ್ನು ನಿರ್ಮಿಸುತ್ತೇವೆ ಎಂದು ಹೇಳಿದರು." ( ಅಲ್ ಕಹ್ಫ್ 21)
ಗುಹೆ ನಿವಾಸಿಗಳು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಆಗಮನಕ್ಕಿಂತ ಮುಂಚೆ ದಖ್ ಯಾನೂಸ್ ಎಂಬ ಅರಸನ ಕಾಲದಲ್ಲಿ ಅಲ್ಲಾಹನನ್ನು ಮಾತ್ರ ಆರಾಧಿಸಿದ ಏಳು ಯುವಕರು) ವಾಸಿಸಿದ ಗುಹೆಯ ಮೇಲೆ ಅಂದಿನ ಮುಸ್ಲಿಮರು ಮಸೀದಿ ನಿರ್ಮಿಸಲು ತೀರ್ಮಾನಿಸಿದುದರ ಕುರಿತಾಗಿದೆ ಅಲ್ಲಾಹನು ಇಲ್ಲಿ ತಿಳಿಸಿದ್ದು ಇದರ ವ್ಯಾಖ್ಯಾನದಲ್ಲಿ ಕುರ್ ಆನ್ ವ್ಯಾಖ್ಯಾನಗಾರರು ಹೇಳುವುದನ್ನು ನೋಡಿ.
ಬಹು ! ಇಮಾಮ್ ಇಸ್ಮಾಯಿಲ್ ಹಿಖ್ಖಿ ( ರ) ರವರು ಹೇಳುತ್ತಾರೆ.
( ಅದರ ಮೇಲೆ ನಾವು ಮಸೀದಿ ನಿರ್ಮಿಸುತ್ತೇವೆ ಎಂಬುವುದರ ತಾತ್ಪರ್ಯ ) ಅವರ ಗುಹೆಯ ದ್ವಾರದ ಮೇಲೆ ಮುಸ್ಲಿಮರು ನಮಾಜು ಮಾಡಲಿಕ್ಕೂ , ಗುಹೆ ನಿವಾಸಿಗಳು ವಾಸಿಸಿದ ಸ್ಥಳದಿಂದ ಬರ್ಕತ್ ಪಡೆಯಲಿಕ್ಕೂ ನಾವು ಮಸೀದಿ ನಿರ್ಮಿಸುತ್ತೇವೆ ಎಂದಾಗಿದೆ.
( ರೂಹುಲ್ ಬಯಾನ್ 232/ 5)
ಇಮಾಮ್ ನಸಫೀ ರಳಿಯಲ್ಲಾಹು ಅನ್ಹು ಹೇಳುತ್ತಾರೆ,
"ಮುಸ್ಲಿಮರು ನಮಾಝ್ ಮಾಡುವ ಹಾಗೂ ಗುಹೆ ನಿವಾಸಿಗಳು ವಾಸಿಸಿದ ಸ್ಥಳದ ಬರ್ಕತ್ ಪಡೆಯುವ ಮಸೀದಿಯನ್ನು ನಿರ್ಮಿಸಿದರು."( ತಪ್ಸೀರುನ್ನಸಫೀ 284/2)
ಇಮಾಮ್ ರಾಝಿ ಹೇಳುತ್ತಾರೆ,
" ನಾವು ಅದರಲ್ಲಿ ಆರಾಧಿಸುತ್ತೇವೆ ಹಾಗೂ ಗುಹೆ ನಿವಾಸಿಗಳ ಗುರುತು ಅವಶೇಷಿಸುವಂತೆ ಮಾಸುತ್ತೇವೆ ಎಂದು ಅಂದಿನ ಮುಸ್ಲಿಮರು ಹೇಳಿದರು." ( ರಾಝಿ 106/ 21)
ಅಲ್ಲಾಮಾ ಮಲ್ ಹರೀ ರಳಿಯಲ್ಲಾಹು ಅನ್ಹು ಹೇಳುತ್ತಾರೆ,
ಅದರಲ್ಲಿ ಮುಸ್ಲಿಮರು ನಮಾಝು ಮಾಡುತ್ತಾರೆ ಹಾಗೂ ಗುಹೆ ನಿವಾಸಿಗಳಿಂದ ಬರ್ಕತ್ ಪಡೆಯುತ್ತಾರೆ".
( ತಫ್ಸೀರುಲ್ ಮಲ್ ಹರೀ 23 / 6 )
ಇಮಾಮ್ ಶಿಹಾಬ್ ರಲಿಯಲ್ಲಾಹು ಅನ್ಹು ಹೇಳುತ್ತಾರೆ ,
ಅಲ್ಲಿ ಮಸ್ಜಿದ್ ನಿರ್ಮಿಸುವುದು , ಸಜ್ಜನರ ಖಬರ್ ಗಳ ಮೇಲೆ ಕಟ್ಟಡ ನಿರ್ಮಿಸುವುದು ಅನುವದನೀಯ ಎಂಬುವುದನ್ನು ತಿಳಿಸುತ್ತದೆ" .
( ಹಾಶಿಯತುಶ್ಶಿಹಾಬ್ 87/ 6)
ಬಹು ! ಇಮಾಮ್ ಶೈಖ್ ಝಾದ ರಳಿಯಲ್ಲಾಹು ಅನ್ಹು ಹೇಳುತ್ತಾರೆ ,
ಅಂದಿನ ರಾಜರು ಗುಹೆಯ ದ್ವಾರದಲ್ಲಿ ಮಸ್ಜಿದ್ ನಿರ್ಮಿಸಿ ಅಲ್ಲಿ ಬೃಹತ್ ಸಮಾರಂಭಗಳನ್ನು ನಡೆಸಲೂ , ಪ್ರತೀ ವರ್ಷ ಅಲ್ಲಿ ಜನರು ಒಟ್ಟು ಸೇರಲೂ ಆದೇಶಿದ್ದರು."
(ಶೈಖ್ ಝಾದ 254 / 3 )
ಇಮಾಮ್ ಇಬ್ನ್ ಜರೀರ್ ಆತ್ತಿಬ್ ರೀ ರಳಿಯಲ್ಲಾಹು ಅನ್ಹು ಹೇಳುತ್ತಾರೆ,
"ಅಂದಿನ ರಾಜರು ಅವರ ಗುಹೆಯನ್ನು ನಮಾಝು ಮಾಡಲ್ಪಡುವ ಮಸೀದಿಯಾಗಿ ನಿರ್ಮಿಸಿದರಲ್ಲದೇ ಅಲ್ಲಿ ಬೃಹತ್ ಸಮಾರಂಭಗಳನ್ನು ನಡೆಸಿದರು. ಮಾತ್ರವಲ್ಲ ಪ್ರತೀ ವರ್ಷ ಜನರೆಲ್ಲರೂ ಅಲ್ಲಿ ಒಟ್ಟು ಸೇರಲೂ ಆದೇಶಿಸಿದ್ದರು."( ಜಾಮಿಉಲ್ ಬಯಾನ್ 147/ 15)
ಮುಂದುವರಿಯುವುದು...
No comments:
Post a Comment