Tuesday, September 24, 2019

ಝಿಯಾರತ್ತ್ ಕೇಂದ್ರ 75. ಇಚ್ಚಾ ಮಸ್ತಾನ್ (ನ:ಮ) ಕಣ್ಣೂರು

*ಝಿಯಾರತ್ತ್ ಕೇಂದ್ರ​​​*
👉🏻👉🏻 7⃣5⃣
➖➖➖➖➖➖➖➖
*ಅಬ್ದುಲ್ ಖಾದರ್ ಅಥವಾ "ಇಚ್ಚ" ಮಸ್ತಾನ್ (ಖ:ಸಿ) ಕಣ್ಣೂರು ಸಿಟಿ ಮಖಾಂ, ಕಣ್ಣೂರು*
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
**********************

ಇಸ್ಲಾಮಿನ ಸಂದೇಶಗಳನ್ನು ಕವನದ ಮೂಲಕ ರಚಿಸಿ ಆಧ್ಯಾತ್ಮಿಕ ಕಂಪಿನೊಂದಿಗೆ ಇಂಪಾಗಿ ಹಾಡುತ್ತಾ  ಇಸ್ಲಾಮಿನ ಆದರ್ಶವನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾದ ಪ್ರಮುಖ ಸೂಫಿವರ್ಯರಾಗಿದ್ದರು ಅಬ್ದುಲ್ ಖಾದರ್ ಅಥವಾ ಇಚ್ಚ ಮಸ್ತಾನ್ (ಖ‌.ಸಿ) ರವರು.

ದಕ್ಷಿಣ ಮಲಬಾರಿನ ಕಣ್ಣೂರು ಸಿಟಿ ಜುಮಾ ಮಸೀದಿಯ ಸಮೀಪದ ವೆಳುತ್ತ ಕಂಡಿ ಎಂಬ ಶ್ರೀಮಂತ ಮನೆತನದಲ್ಲಿ 1871ರಲ್ಲಿ ಜನಿಸಿದ ಇಚ್ಚ ಮಸ್ತಾನ್ (ಖ.‌ಸಿ) ರವರು, ತಮ್ಮಕವನಗಳ ಮೂಲಕ ಕೇರಳದ ಉಮರ್ ಖಯ್ಯೂಮ್ (ರ)‌ ಎಂದೇ ಕರೆಯಲ್ಪಡುತ್ತಿದ್ದರು.

ಕುಟುಂಬದ ಪಾರಂಪರ್ಯ ಕಸುಬಾದ ತಾಮ್ರದ ಪಾತ್ರೆ ವ್ಯಾಪಾರವನ್ನೇ ಮುಂದುವರಿಸಿದ್ದ ಮಹಾನರಿಗೆ ಒಮ್ಮೆ ಒಂದೆಡೆ ಕೆಲವು ತಾಳೆಗರಿಗಳು ಸಿಕ್ಕಿತು. ಅರಬಿಕ್ ಮತ್ತು ತಮಿಳು ಭಾಷೆಯಲ್ಲಿ ಬರೆಯಲ್ಪಟ್ಟಿದ್ದ ಆ ತಾಳೆಗರಿಯ ಸಂದೇಶವೇನೆಂದು ತಿಳಿಯುವ ಸಲುವಾಗಿ ಹಲವರನ್ನು ಭೇಟಿಯಾದರಾದರೂ ಯಾರಿಗೂ ಅದೇನೆಂದು ತಿಳಿಯಲಿಲ್ಲ. ಕೊನೆಗೆ ಕೊಂಡೊಟ್ಟಿಯ ಇಖ್‌ತಿಯಾಹ್‌ ಷಾ ಎಂಬ ವಿದ್ವಾಂಸರನ್ನು ಭೇಟಿಯಾಗುವಂತೆ ಕೆಲವರು ಸಲಹೆ ನೀಡಿದರು. ಅದರಂತೆ ಇಚ್ಚ ಮಸ್ತಾನ್ (ಖ‌.ಸಿ) ರವರು ಕೊಂಡೋಟ್ಟಿಗೆ ತೆರಳಿ ಇಖ್‌ತಿಯಾಹ್ ಷಾರನ್ನು ಭೇಟಿಯಾಗಿ ತಮ್ಮಲ್ಲಿರುವ ತಾಳೆಗರಿಯನ್ನು ತೋರಿಸಿದಾಗ ಮಹಾನರು ಆ ತಾಳೆಗರಿಯನ್ನು ಓದಿ, ಇದು *"ಅಲ್ಲಫಲ್ ಅಲಿಫ್‌"* ಎಂಬ ಸುಪ್ರಸಿದ್ಧ ಅರೆಬಿಕ್ ಕಾವ್ಯವಾಗಿದೆ ಮತ್ತು ಅದನ್ನೇ ತಮಿಳಿಗೆ ಭಾಷಾಂತರಿಸಲಾಗಿದೆ ಎಂದು ವಿವರಿಸಿದರಲ್ಲದೆ ಇದನ್ನು ಬರೆದವರು ತಮಿಳುನಾಡಿನ ಕಾಯಲ್ ಪಟ್ಟಣದಲ್ಲಿರುವ ಉಮರುಲ್ ಖಾಹಿರಿ (ರ) ಎಂಬ ಸೂಫಿವರ್ಯರಾಗಿದ್ದಾರೆ ಎಂದರು.

ತದನಂತರ ಉಮರುಲ್ ಖಾಹಿರಿ (ರ) ರನ್ನು ಭೇಟಿಯಾಗಬೇಕೆಂಬ ಆಕಾಂಕ್ಷೆಯಿಂದ ತಮಿಳು ತಮಿಳುನಾಡಿನತ್ತ ಪ್ರಯಾಣ ಬೆಳೆಸಿದ ಮಹಾನರು ಉಮರುಲ್ ಖಾಹಿರಿ (ರ)ರನ್ನು ಭೇಟಿಯಾದ ನಂತರ ಸೂಫಿಸಂನತ್ತ ಆಕರ್ಷಿತರಾಗಿ "ಇಚ್ಚ" ಎಂಬ ಕಾವ್ಯನಾಮದಿಂದ ಅಲ್ಲಾಹನ ಸ್ತುತಿ ಕೀರ್ತನೆಗಳೊಂದಿಗೆ ಪ್ರವಾದಿ ﷺِ ಪ್ರೇಮದ ಮದ್‌‌ಹ್‌ ಗೀತೆ ಮತ್ತು ಮುಹಿಯುದ್ದೀನ್ ಶೈಖ್ (ರ) ರವರ ಮದ್‌ಹ್ ಗಾನಗಳನ್ನು ರಚಿಸಿ ವ್ಯಾಪಾರ ನಿಮಿತ್ತ ಸಂಚರಿಸಿದ
ಸ್ಥಳಗಳಲ್ಲೆಲ್ಲ ಮಧುರ ಮನೋಹರವಾಗಿ ಹಾಡುತ್ತಾ ಇಚ್ಚ ಮಸ್ತಾನ್ (ಖ.ಸಿ) ಎಂದೇ ಪ್ರಸಿದ್ಧರಾದರು.

ಆಧ್ಯಾತ್ಮಿಕ ರಚನೆಗಳಿಗಷ್ಟೇ ಸೀಮಿತವಾಗಿರದ ಮಹಾನರ ಕವನಗಳು ಗಿಡ-ಮರ, ಹಣ್ಣು-ಹೂವು, ಮತ್ತು ಪಕ್ಷಿಗಳನ್ನು ಕಥಾ ವಸ್ತುವನ್ನಾಗಿಸಿಕೊಂಡು *'ಪೂ ಚೆಪ್ಪುಗಳ್'* ಎಂಬ ಶೀರ್ಷಿಕೆಯಡಿ ಒಂದು ಕವನ ಸಂಕಲನವನ್ನೇ ರಚಿಸಿದ್ದರು. ಅದನ್ನು ಮಾಪ್ಪಿಳ ಹಾಡಿನ ಶೈಲಿಯಲ್ಲಿ ಮಾತ್ರವಲ್ಲದೆ, ಹಿಂದುಸ್ತಾನಿ ದರ್ಬಾರ್ ಮತ್ತು ಸಿಂಧು ಭೈರವಿ ರಾಗಗಳಲ್ಲೂ  ಆಲಾಪಿಸಬಹುದಾಂತಹ ಕಾವ್ಯಗಳಾಗಿವೆ.

ಮಹಾನರು ತಾಮ್ರದ ಪಾತ್ರೆ ವ್ಯಾಪಾರ ಮಾಡುತ್ತಿದ್ದ ಕೊಂಡೋಟ್ಟಿ, ಅರಿಕ್ಕೋಡ್, ಪೆರುಂದಲ್ಮಣ್ಣ, ಪಾಲಕ್ಕಾಡ್ ಮನ್ನಾರ್ ಕಾಡ್ ಮುಂತಾದ ಸ್ಥಳಗಳಲ್ಲೆಲ್ಲಾ ಸಂಚರಿಸುವಾಗ ತಮ್ಮ ಕಾವ್ಯಗಳನ್ನು ಸುಶ್ರಾವ್ಯವಾಗಿ ಹಾಡುತ್ತಾ ಸಂಚರಿಸುತ್ತಿದ್ದುದರಿಂದ ಅವರ ಆಲಾಪನೆಗಳನ್ನು ಆಲಿಸಲು ಅವರ ಸುತ್ತ ಜನ ಜಾತ್ರೆಯೇ ನೆರೆಯುತ್ತಿತ್ತು. ಹಾಗಾಗಿ ಮಹಾನರ ಕಾವ್ಯಗಳು ನಾಡಿನೆಲ್ಲೆಡೆ ಮನೆಮಾತಾಗಿತ್ತು.

ಅರೆಬಿಕ್ ಮಲಯಾಳಂನಲ್ಲಿ ಮಹಾನರು ಸುಮಾರು ಹತ್ತು ಸಾವಿರಕ್ಕಿಂತಲೂ ಹೆಚ್ಚು ಕಾವ್ಯಗಳನ್ನು ರಚಿಸಿದ್ದಾರಾದರೂ ಇಂದು ಕೇವಲ ಒಂದು ಸಾವಿರದಷ್ಟು ಕಾವ್ಯಗಳು ಮಾತ್ರ ಲಭ್ಯವಿದೆ ಎನ್ನಲಾಗುತ್ತದೆ.

1953ರಲ್ಲಿ ಒ. ಅಬು ಎಂಬುವವರು ಮಲಯಾಳಂನಲ್ಲಿ *ಇಚ್ಛಯುಡೆ ಕೃತಿಗಳ್* ಎಂಬ ಹೆಸರಿನಲ್ಲಿ ಹೊರತಂದ ಕೃತಿಯು   ಪ್ರಕಾಶನಗೊಂಡ ಇಚ್ಚ ಮಸ್ತಾನ್ (ಖ.ಸಿ) ರವರ ಪ್ರಪ್ರಥಮ ಕೃತಿಯಾಗಿದೆ. ಅನಂತರ ಬ್ರಿಟಿಷರಿಂದ ಪ್ರಕಾಶನಗೊಂಡ *ಇಂಡಿಯನ್ ಆಂಟಿ ಕ್ಯೂಟರಿಯನ್* ಎಂಬ ಕೃತಿಯಲ್ಲಿ ಇಚ್ಚ‌ ಮಸ್ತಾನ್ (ಖ‌.ಸಿ)ರವರ ಹತ್ತು ಕವನಗಳು ಪ್ರಕಟವಾಗಿದೆ.

1980 ರಲ್ಲಿ ತ್ರಿಶೂರ್ ನ ಜೋಸೆಫ್ ಕೊಳತ್ತಾಡನ್ ಎಂಬುವವರು ಇರಾಕಿನ ಬಸರಾದ ವಿಶ್ವವಿದ್ಯಾನಿಲಯವೊಂದರಲ್ಲಿ ಇಚ್ಚ‌ ಮಸ್ತಾನ್ (ಖ‌.ಸಿ)ರವರ ಕುರಿತಾದ ತೀಸಸ್ ಇಚ್ಚ‌ ಮಸ್ತಾನ್ (ಖ:ಸಿ) ಎಂಬ ಪ್ರಬಂಧ ಮಂಡಿಸಿದ್ದಾರೆ.

ಇದರ ಹೊರತು ಇಚ್ಚ‌ ಮಸ್ತಾನ್ (ಖ.ಸಿ) ರವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ನಮ್ಮ ಹಿಂದಿನ ತಲೆಮಾರಿನವರಿಗೆ ಇಚ್ಚ ಮಸ್ತಾನ್ (ಖ.ಸಿ)ರವರ ಕವನಗಳು ಇಂದಿಗೂ ಕಂಠಪಾಠವಿದೆಯಾದರೂ ಅದರ ಬಗೆಗಿನ ಅಧಿಕೃತ ಮಾಹಿತಿ ಅವರಿಂದಲೂ ಲಭ್ಯವಿಲ್ಲ.

ಹೀಗೆ ತಮ್ಮ ಸ್ವರಚಿತ ಕವನಗಳನ್ನು ಹಾಡುತ್ತಾ ಮಲಬಾರಿನಾದ್ಯಂತ ಮನೆಮಾತಾಗಿದ್ದ ಇಚ್ಚ ಮಸ್ತಾನ್ (ಖ‌.ಸಿ)ರವರು 1933 ರಲ್ಲಿ ಇಹಲೋಕಕ್ಕೆ ವಿದಾಯ ಹೇಳಿದರು.

 ಕಣ್ಣೂರು ಸಿಟಿ ಎಂಬಲ್ಲಿ ಖುತುಬು ಸಯ್ಯದ್ ಮುಹಮ್ಮದ್ ಮೌಲಲ್ ಬುಖಾರಿ (ರ)‌ರವರ ಮಖಾಮಿನ ಪಕ್ಕದಲ್ಲೇ ಮಹಾನರು ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
✳✳✳✳✳✳✳

No comments:

Post a Comment