Sunday, September 22, 2019

*ಯಾರನ್ನೆಲ್ಲಾ ಸ್ವೀಕರಿಸಬೇಕು, ಯಾರನ್ನೆಲ್ಲಾ ತಿರಸ್ಕರಿಸಬೇಕು?*

ಯಾವುದೇ ವ್ಯಕ್ತಿಯನ್ನು  ಸ್ವೀಕರಿಸುವ ಅಥವಾ ತಿರಸ್ಕರಿಸುವುದರ ಮಾನದಂಡ *ಸತ್ಯವಿಶ್ವಾಸ* ಮಾತ್ರವಾಗಿದೆ.‌ ಅದಲ್ಲದೆ, ಅವರು ಮಾಡುವ ಉತ್ತಮ ಕಾರ್ಯವೋ, ಸಮಾಜ ಸೇವೆಯೋ, ಪರೋಪಕಾರವೋ ಇದ್ಯಾವುದೂ ಒಬ್ಬ ವ್ಯಕ್ತಿಯನ್ನು ಸ್ವೀಕರಿಸಲು ಮಾನದಂಡವಾಗಲಾರದು.
ಯಾಕೆಂದರೆ,
ಸತ್ಯ ವಿಶ್ವಾಸಿಯಲ್ಲದ ಯಾವ ವ್ಯಕ್ತಿಯನ್ನೂ ಅಲ್ಲಾಹು ಸ್ವೀಕರಿಸುವುದಿಲ್ಲ. ಆತ ಅದೆಷ್ಟು ದೊಡ್ಡ ಪರೋಪಕಾರಿಯೋ, ಸಮಾಜ ಸೇವಕನೋ ಅಥವಾ ಇನ್ಯಾರೋ ಆಗಿದ್ದರೂ ಸರಿ.

ಈ ಬಗ್ಗೆ ಪ್ರವಾದಿ ﷺ ರ ಒಂದು ಹದೀಸ್ ನೋಡಿ: 👇🏽
*ಯಾರಾದರು ನೂತನವಾದಿಯಾದರೆ, ಅಥವಾ ನೂತನವಾದಿಗೆ ಸಹಕರಿಸುವವನಾದರೆ, ಅವರೀರ್ವರ ಮೇಲೆ ಅಲ್ಲಾಹನ ಶಾಪವಿದೆ. ಅಲ್ಲಾಹನ ಮಲಕುಗಳ ಶಾಪವಿದೆ, ಮತ್ತು ಎಲ್ಲಾ ಪುಣ್ಯ ಪುರುಷರ ಶಾಪ ಕೂಡಾ ಇದೆ. ಅವರೀರ್ವರ ಯಾವುದೇ ಕಡ್ಡಾಯ ಮತ್ತು ಸುನ್ನತ್ ಆದ ಆರಾಧನೆಯನ್ನೂ ಅಲ್ಲಾಹು ಸ್ವೀಕರಿಸುವುದಿಲ್ಲ.* (ಹದೀಸ್).

ನೂತನವಾದಿ ಎಂದರೆ, ಸಲಪಿಯೋ ಜಮಾಹತೋ, ತಬ್ಲೀಗೋ ಅಥವಾ ಇನ್ನಿತರ ಹೆಸರಿನೊಂದಿಗೆ ಕರೆಯಲ್ಪಡುವವರು ಮಾತ್ರವಲ್ಲ. ಯಾರ ವಿಶ್ವಾಸದಲ್ಲಿ  ನ್ಯೂನತೆ ಇದೆಯೋ, ಚಂಚಲತೆ ಇದೆಯೋ, ಅದು ಒಂದು ಹಿಡಿಯಷ್ಟಾದರೂ ಸರಿ,  ಅಂತಹವರ ಯಾವುದೇ ಆರಾಧನೆಯನ್ನೂ ಅಲ್ಲಾಹು ಸ್ವೀಕರಿಸುವುದಿಲ್ಲ. ಮತ್ತು,  ನೂತನವಾದಿಗಳ ಸಹವಾಸ ಮಾಡುವವರ ಆರಾಧನೆ ಕೂಡಾ ಅಲ್ಲಾಹು ಸ್ವೀಕರಿಸುವುದಿಲ್ಲ.

ಒಬ್ಬ ಸತ್ಯ ವಿಶ್ವಾಸಿಯ ಕಡು ಗಾತ್ರದ ಆರಾಧನೆಗೂ ಅಲ್ಲಾಹನ ಬಳಿ ಅಪಾರ ಪುಣ್ಯ ವಿದೆ, ಮಹತ್ವವಿದೆ. ಅದೇ ಸಮಯದಲ್ಲಿ ಒಬ್ಬನ ವಿಶ್ವಾಸದಲ್ಲಿ ಒಂದು ಸಣ್ಣ ನ್ಯೂನತೆಯೇನಾದರು ಇದ್ದರೆ, ಆತನ ಭೂಮಿಯಾಕಾಶ ತುಂಬುವಂತಹ ಆರಾಧನೆಯಾದರೂ, ಅದಕ್ಕೆ ಅಲ್ಲಾಹನ ಬಳಿ ಕಡು ಗಾತ್ರದಷ್ಟು ಮಹತ್ವ ಕೂಡಾ ಇಲ್ಲ.
 ನಾಯಿಯ ಮೇಲೆ ಕೇವಲ ಕರುಣೆ ತೋರಿಸಿದ ಮಾತ್ರಕ್ಕೆ ಸ್ವರ್ಗ ಪ್ರವೇಶಿಸಿದವರ ಬಗ್ಗೆ ನಾವು ಕೇಳಿದ್ದೇವೆ. ಅದೇ ಸಮಯದಲ್ಲಿ ಒಂದು ಸ್ಥಳವೂ ಬಾಕಿಯಾಗದ ರೀತಿಯಲ್ಲಿ ಅಲ್ಲಾಹನಿಗೆ ಸುಜೂದ್ ಮಾಡಿದ *ಇಬ್ಲೀಸ್* ನರಕಕ್ಕೆ ಹೋದದ್ದನ್ನೂ ಕೇಳಿದ್ದೇವೆ.
ಇದರಿಂದಲೇ ನಮಗೆ ಅರ್ಥೈಸಬಹುದು,
*ಒಬ್ಬ ವ್ಯಕ್ತಿ ಅಲ್ಲಾಹನ ಬಳಿ ಸ್ವೀಕರಿಸಲ್ಪಡಬೇಕಾದರೆ,  ಅದರ ಮಾನದಂಡ ಆತನ ಆರಾಧನೆಯಂತೂ ಖಂಡಿತಾ ಅಲ್ಲ, ಬದಲಾಗಿ ಆತನ ವಿಶ್ವಾಸ ಮಾತ್ರವಾಗಿದೆ*  ಎಂದು. ಈ ಒಂದು ಮಾನದಂಡವನ್ನೇ ನಾವು ಕೂಡಾ ಅನುಸರಿಸಬೇಕು.

ಸುನ್ನತ್ ಜಮಾಹತ್ ತತ್ವ ಸಿದ್ದಾಂತಗಳನ್ನು ವಿರೋಧಿಸುವ  ಸಲಪಿ, ಜಮಾಹತ್, ತಬ್ಲೀಗ್ ಮುಂತಾದ ನೂತನವಾದಿಗಳಂತೆ,
ಆ ನೂತನವಾದಿಗಳ ಮಸೀದಿಗೆ ತೆರಳಿ ಅವರ ಹಿಂದೆ ನಮಾಝ್ ಮಾಡುವವರೂ, ಅವರೊಂದಿಗೆ ಸ್ನೇಹವನ್ನಿಟ್ಟುಕೊಳ್ಳುವವರೂ, ಅವರನ್ನು ತಮ್ಮ ಸಂಘಟನೆಯ ನಾಯಕತ್ವಕ್ಕೆ ಆಯ್ಕೆ ಮಾಡಿ ಗೌರವಿಸುವವರೂ, ಸಹೋದರರೆಂದು ಹೇಳಿ ಪ್ರೀತಿಸುವವರೂ, ಅವರೊಂದಿಗೆ ಹಸ್ತಲಾಘವ/ಸಲಾಂ ವಿನಿಮಯ ಮಾಡಿಕೊಳ್ಳುವವರೂ ಒಂದೇ ಸಮಾನರು.
*ಸುನ್ನತ್ ಜಮಾಹತ್ ವಿಶ್ವಾಸದಲ್ಲಿ ದೃಢವಾಗಿರುವ ಯಾವ ವ್ಯಕ್ತಿಯೂ ನೂತನವಾದಿಗಳ ಸಹವಾಸ ಮಾಡಲಾರ, ಅವರನ್ನು ಪ್ರೀತಿಸಲಾರ, ಅವರ ಹಿಂದೆ ನಮಾಝ್ ಮಾಡಲಾರ, ಅವರ ಸ್ನೇಹ ಬೆಳೆಸಲಾರ, ಅವರಿಗೆ ಸಲಾಂ ಹೇಳಲಾರ.*

ನೂತನವಾದಿಗಳು ಮತ್ತು ಅವರ ಸಹವಾಸ ಮಾಡುವವರ ಆರಾಧನೆ, ಸಮಾಜ ಸೇವೆ ಮುಂತಾದವುಗಳಿಗೆ ಅಲ್ಲಾಹನೇ ಮನ್ನಣೆ ಕೊಡುವುದಿಲ್ಲ ಅಂದಮೇಲೆ, ಅಲ್ಲಾಹು ಮತ್ತು ಅವನ ರಸೂಲ್  ﷺ ರನ್ನು  ಜೀವಕ್ಕಿಂತಲೂ ಮಿಗಿಲಾಗಿ ಪ್ರೀತಿಸುವ, ಅನುಸರಿಸುವ ನಾವುಗಳು ಯಾಕೆ ಮನ್ನಣೆ ಕೊಡಬೇಕು.
*ಅಲ್ಲಾಹನಿಗೆ ಬೇಕಾಗುವಂತದ್ದು ನಮಗೂ ಬೇಕಾಗಲಿ, ಅಲ್ಲಾಹನಿಗೆ ಬೇಡವಾದದ್ದು ನಮಗೂ ಬೇಡವಾಗಲಿ.*
ಇದಾಗಿದೆ ಅಲ್ಲಾಹು ಮತ್ತು ಪ್ರವಾದಿ ﷺ ರ ಮೇಲಿನ ನಮ್ಮ ಯಥಾವತ್ತಾದ ಪ್ರೇಮ.

ಅಲ್ಲಾಹು ಮತ್ತು ಪ್ರವಾದಿ ﷺ ರ ಸುನ್ನತ್ ಅನ್ನು ಅನುಸರಿಸಿ ನಡೆಯುವವರನ್ನು ನಾವು ಪ್ರೀತಿಸುವ. ಅಲ್ಲದವರನ್ನು ನಾವು ತಿರಸ್ಕರಿಸುವ. ನಮ್ಮ ಪ್ರೀತಿ ಮತ್ತು ದ್ವೇಷ ಅದು ಅಲ್ಲಾಹು ಮತ್ತು ಅವನ ರಸೂಲ್ ﷺ ರಿಗಾಗಿ ಮಾತ್ರವಾಗಿರಲಿ.
ಹಾಗಾದರೆ ಮಾತ್ರ ನಮ್ಮ ಪ್ರೀತಿ ದ್ವೇಷ ಒಂದು ಆರಾಧನೆಯಾಗಬಹುದು. ಮತ್ತು ಅದರಲ್ಲಿ ಅಲ್ಲಾಹು ಮತ್ತು ಅವನ ರಸೂಲ್ ﷺ ಸಂತೃಪ್ತಿ ಕೂಡಾ ಇರುತ್ತದೆ.
ನಮಗೆ ಸಹಾಯ ಮಾಡಿದ ಕಾರಣಕ್ಕೋ, ಸಮಾಜಕ್ಕೆ ಸಹಾಯ ಸಹಕಾರ ಮಾಡಿದ ಕಾರಣಕ್ಕೋ, ಅಥವಾ ಇನ್ನೇನು ಕಾರಣಕ್ಕೋ ನಾವೊಬ್ಬರನ್ನು ಪ್ರೀತಿಸುವುದಾದರೆ, ಗೌರವಿಸುವುದಾದರೆ, ಅದು ನಮ್ಮ ಸ್ವಾರ್ಥಕ್ಕೋಸ್ಕರ ಮಾಡಿದಂತಾಗುತ್ತದೆ.  ಅದರಿಂದ ಅಲ್ಲಾಹು ಮತ್ತು ಅವನ ರಸೂಲ್ ﷺ ರ ಸಂತೃಪ್ತಿಯನ್ನು ಗಳಿಸಲು ಖಂಡಿತಾ ನಮ್ಮಿಂದ ಸಾದ್ಯವಿಲ್ಲ.
*ಅಲ್ಲಾಹು ಮತ್ತು ಪ್ರವಾದಿ ﷺ ರ ಸಂತೃಪ್ತಿ ಗಳಿಸದ ಸ್ನೇಹ ನಮಗೆ ಅಗತ್ಯವಿದೆಯೇ?*

ಅಲ್ಲಾಹು ನಮ್ಮೆಲ್ಲರನ್ನು ಇಹಪರ ವಿಜಯಿಗಳ ಸಾಲಿನಲ್ಲಿ ಸೇರಿಸಲಿ, ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment