*ವುಲೂಹ್ ನಲ್ಲಿ (ಅಂಗಸ್ನಾನದಲ್ಲಿ) ತಲೆ ಸವರುವುದರ ಸಂಪೂರ್ಣ ರೂಪ..!*
ಅಂಗಸ್ನಾನದಲ್ಲಿ (ಉಲೂಹ್ ನಲ್ಲಿ) ಕಡ್ಡಾಯವಾದ ಒಂದು ಭಾಗವಾಗಿದೆ ತಲೆ ಸವರುವಿಕೆ.
ಈ ತಲೆ ಸವರುವಿಕೆಯ ಬಗ್ಗೆ ವಿವಿಧ ಮಝ್ಜಬ್ ನಲ್ಲಿ ವ್ಯತ್ಯಸ್ಥವಾದ ಅಭಿಪ್ರಾಯಗಳಿವೆ.
ನಾವು ಅನುಸರಿಸುವಂತಹ ಶಾಫಿ ಮಝ್ಹಬ್ ನಲ್ಲಿ, ತಲೆಯ ಭಾಗದಿಂದ ಸ್ವಲ್ಪ ಸವರಿದರೂ ಸಾಕಾಗುವುದು. ಹನಫೀ ಮಝ್'ಹಬ್ ನಲ್ಲಿ ತಲೆಯ ಭಾಗದ ನಾಲ್ಕರಲ್ಲಿ ಒಂದು ಭಾಗವನ್ನು ಸವರುವುದು ಕಡ್ಡಾಯವಾಗಿದೆ. ಅದೇರೀತಿ, ಮಾಲಿಕಿ ಮತ್ತು ಹಂಬಲೀ ಮಝ್'ಹಬ್ ನಲ್ಲಿ ತಲೆ ಸಂಪೂರ್ಣ ಸವರುವುದು ಕಡ್ಡಾಯ.
ಶಾಫಿ ಮಝ್'ಹಬ್ ಪ್ರಕಾರ, ತಲೆಯ ಭಾಗದಿಂದ ಸ್ವಲ್ಪ ಸವರಿದರೆ ಫರಲ್ (ಕಡ್ಡಾಯ) ಸಂದಾಯವಾಗುತ್ತದೆಯಾದರೂ, ಸಂಪೂರ್ಣವಾಗಿ ಸವರುವುದು ಪ್ರಮುಖ ಸುನ್ನತ್ ಆಗಿದೆ.
"ತಲೆ ಸಂಪೂರ್ಣ ಸವರುವುದು ಕಡ್ಡಾಯ ಎಂದು ಹೇಳಿದ ಇಮಾಮರುಗಳನ್ನು ಪರಿಗಣಿಸಿ, ತಲೆ ಸಂಪೂರ್ಣ ಸವರಬೇಕು" ಎಂದು ಶಾಫಿ ಮಝ್'ಹಬ್ ನ ಪ್ರಮುಖ ಗ್ರಂಥವಾದ ಫತ್'ಹುಲ್ ಮುಈನ್ ನಲ್ಲಿ ವಿವರಿಸಲಾಗಿದೆ.
ತಲೆ ಸಂಪೂರ್ಣ ಸವರಬೇಕು ಎಂಬ ವಿಷಯದಲ್ಲಿ ಇಮಾಮರುಗಳ ಮಧ್ಯೆ ಯಾವುದೇ ಅಭಿಪ್ರಾಯ ವ್ಯತ್ಯಾಸವಿಲ್ಲ. ಅಭಿಪ್ರಾಯ ವ್ಯತ್ಯಾಸ ವಿರುವುದು ಕಡ್ಡಾಯವಾದ ಭಾಗ ಎಷ್ಟು ಎಂಬ ವಿಷಯದಲ್ಲಿ ಮಾತ್ರ.
ಈ ವಿಷಯವಾಗಿ ಪೇರೋಡ್ ಉಸ್ತಾದರ ಭಾಷಣದ ತುಣುಕೊಂದಕ್ಕೆ, *"ಸ್ವಲ್ಪ ತಡವಾದರೂ, ಸತ್ಯವು ಸ್ವಲ್ಪ ಸ್ವಲ್ಪವಾಗಿ ಹೊರಬರುತ್ತಿದೆ"* ಎಂಬ ಟೈಟಲ್ ಹಾಕಿ ಕೆಲವರು ಪ್ರಚಾರ ಮಾಡುತ್ತಿದ್ದಾರೆ.
ಇವರು ಹೇಳುವ ಪ್ರಕಾರದ ಅದೇನು ಸತ್ಯ ಹೊರಬಂತೋ ಅಲ್ಲಾಹು ಅಹ್'ಲಂ...
ಬಹುಶಃ, ತಲೆಯನ್ನು ಸಂಪೂರ್ಣ ಸವರಬೇಕು ಎಂದು ಹೇಳಿದ್ದು ಆಗಿರಬಹುದೇನೋ.
ತಲೆ ಸಂಪೂರ್ಣ ಸವರಬೇಕು ಎಂದು ಶಾಫಿ ಮಝ್'ಹಬ್ ನ ಎಲ್ಲಾ ಫಿಕ್ಹ್ ಗ್ರಂಥಗಳಲ್ಲಿಯೂ ಇದೆ. ಅದನ್ನು ಇಂದೋ ನಿನ್ನೆಯೋ ಸೇರಿಸಿದ್ದಲ್ಲ. ಅದನ್ನು ಯಾರೂ ವಿರೋಧಿಸಿಯೂ ಇಲ್ಲ.
ಆದರೆ, ಕಡ್ಡಾಯವಾದದ್ದು ತಲೆಯ ಭಾಗದಿಂದ ಸ್ವಲ್ಪ ಸವರಿದರೆ ಸಾಕು ಎಂದಾಗಿದೆ.
ಸ್ವಲ್ಪ ಸವರಿದರೆ ಕಡ್ಡಾಯ ಸಂದಾಯವಾಗುತ್ತದೆ ಎಂದಿರುವುದರಿಂದ ಕೆಲವರು ಸ್ವಲ್ಪ ಮಾತ್ರ ಸವರುತ್ತಾರೆ, ಅದು ತಪ್ಪು. ಆ ರೀತಿ ಸ್ವಲ್ಪ ಸವರಿದರೆ ಶಾಫಿ ಮಝ್'ಹಬ್ ನ ಪ್ರಕಾರ ಉಲೂಹ್ (ಅಂಗಸ್ನಾನ) ಸ್ವಹೀಹ್ (ಸಿಂಧು) ಆಗುತ್ತದೆಯಾದರೂ, ಸುನ್ನತ್ ಅನ್ನು ಪರಿಗಣಿಸಿ ಸಂಪೂರ್ಣ ಸವರಬೇಕು ಎಂದಾಗಿದೆ ಪೇರೋಡ್ ಉಸ್ತಾದ್ ಹೇಳಿದ್ದು. ಫತುಹುಲ್ ಮುಈನ್ ನಲ್ಲಿರುವ ಈ ನಿಯಮವನ್ನು ಕೆಲವರು ಪ್ರಪ್ರಥಮವಾಗಿ ಕೇಳಿದ್ದರಿಂದ ವಾಗಿರಬಹುದು, ಪೇರೋಡ್ ಉಸ್ತಾದರ ಭಾಷಣಕ್ಕೆ *"ಸ್ವಲ್ಪ ತಡವಾದರೂ ಸತ್ಯವು ಸ್ವಲ್ಪ ಸ್ವಲ್ಪವಾಗಿ ಹೊರಬರುತ್ತಿದೆ"* ಎಂದು ಟೈಟಲ್ ಕೊಟ್ಟು ಪ್ರಚಾರಮಾಡುತ್ತಿರುವುದು.
ಏನೇ ಇರಲಿ, ಶಾಫಿ ಮಝ್'ಹಬ್ ನಲ್ಲಿ ತಲೆ ಸಂಪೂರ್ಣ ಸವರಬೇಕು ಎಂಬ ನಿಯಮವಿದೆ ಎಂದು ಇವಾಗಲಾದರೂ ತಿಳಿಯಿತಲ್ವ. ಅದಕ್ಕೆ ಸಹಕರಿಸಿದವರಿಗೆ ಅಭಿನಂದನೆಗಳು.
*ಅಲ್ಲಾಹು ನಮ್ಮೆಲ್ಲರನ್ನು ಇಹಪರ ವಿಜಯಿಗಳ ಸಾಲಿನಲ್ಲಿ ಸೇರಿಸಲಿ, ಆಮೀನ್.*
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
No comments:
Post a Comment