Sunday, September 22, 2019

*ಮೃತರ ಪಾರತ್ರಿಕ ಮೋಕ್ಷಕ್ಕಾಗಿ ತಹ್ಲೀಲ್ ಹೇಳುವ ಪರಿಪಾಠವನ್ನು ಬೆಳೆಸೋಣ..*

ಮೃತರ ಪಾರತ್ರಿಕ ಮೋಕ್ಷಕ್ಕಿರುವ ಪ್ರಯತ್ನ ವಾಗಿದೆ, ಅವರ ಹೆಸರಲ್ಲಿ ತಹ್ಲೀಲ್ ಹೇಳುವುದು, ಖುರ್ಆನ್ ಓದುವುದು, ದುಆ ಮಾಡುವುದು ಇತ್ಯಾದಿ. ಯಾರಾದರೂ ಸತ್ಯವಿಶ್ವಾಸಿಗಳು ಮರಣ ಹೊಂದಿದ ವಿವರ ಸಿಕ್ಕಿದರೆ ತಕ್ಷಣ ಅವರ ಮಗ್ಫಿರತ್ ಗಾಗಿ ದುಆಃ ಮಾಡುವುದು,  ಒಂದು ಸಂಖ್ಯೆ ತಹ್ಲೀಲ್ ಹೇಳಿ ಹದಿಯಾಮಾಡುವುದು ಉತ್ತಮ ಕಾರ್ಯವಾಗಿದೆ. ಇಂತಹ ಒಂದು ಒಳ್ಳೆಯ ಪರಿಪಾಠವನ್ನು ನಾವು ಬೆಳೆಸಿಕೊಳ್ಳುವವರಾಗಬೇಕು.

*"ತಾನು ಇಷ್ಟಪಡುವುದನ್ನು ತನ್ನ ಸಹೋದರನಿಗೂ ಇಷ್ಟಪಡುವ ತನಕ ಯಾರೂ ಕೂಡಾ ಪರಿಪೂರ್ಣ ಮುಸ್ಲಿಂ ಆಗಲಾರ"* ಎಂಬ ಪ್ರವಾದಿ   ﷺ ರ ವಚನ ಇನ್ನಷ್ಟು ತಹ್ಲೀಲ್ ಹೇಳಲು ನಮ್ಮನ್ನು ಪ್ರೇರೇಪಿಸುತ್ತದೆ.
 ನಮ್ಮ ಕುಟುಂಬದಲ್ಲಿ ಯಾರಾದರೂ ಮರಣಹೊಂದಿದರೆ,  ನಾವು ಅವರ ಮಗ್ಫಿರತ್ ಗಾಗಿ ಖುರಾನ್ ಓದುತ್ತೇವೆ,  ತಹ್ಲೀಲ್ ಹೇಳುತ್ತೇವೆ, ದುಆ ಮಾಡುತ್ತೇವೆ. ಯಾಕೆಂದರೆ,   ನಮ್ಮವರು  ಸ್ವರ್ಗಕ್ಕೆ ಹೋಗಬೇಕೆಂಬ ಉದ್ದೇಶದಿಂದ.
ಅದೇ ಸಮಯದಲ್ಲಿ,  ಇತರರ ಕುಟುಂಬದಲ್ಲಿ ಯಾರಾದರೂ ಮರಣಹೊಂದಿದರೆ, ಅವರ ಮಗ್ಫಿರತ್ ಗಾಗಿ ತಹ್ಲೀಲ್ ಹೇಳುವ,  ದುಆ ಮಾಡುವ ವಿಷಯದಲ್ಲಿ ನಿರ್ಲಕ್ಷ್ಯ ತೋರುವುದು ಖಂಡಿತಾ ಸಲ್ಲದು.
*ನಾವು ನಮಗೂ ನಮ್ಮ ಕುಟುಂಬಕ್ಕೂ ಬಯಸುವುದನ್ನು, ಇತರರಿಗೂ ಬಯಸಬೇಕು. ಹಾಗಾದರೆ ಮಾತ್ರ ನಾವು ಬಯಸಿದ್ದನ್ನು ಅಲ್ಲಾಹು ನಮಗೆ ಸುಲಭವಾಗಿ ಕರುಣಿಸುತ್ತಾನೆ.*

ಇತರರ ಪರಲೋಕ ವಿಜಯಕ್ಕಾಗಿ ನಾವು ಮಾಡುವ ಈ ಒಂದು ಸಣ್ಣ  ಪ್ರಯತ್ನ , ಅಲ್ಲಾಹು ನಮ್ಮನ್ನು  ಸ್ವರ್ಗಕ್ಕೆ ಕಳುಹಿಸಲು ಬಹುದೊಡ್ಡ ಕಾರಣವಾಗಬಹುದು. ಯಾರಾದರೂ ಮರಣ ಹೊಂದಿದ ವಾರ್ತೆ ಕೇಳಿದರೆ ತಕ್ಷಣ ಅವರ ಪಾಪಗಳನ್ನು ಕ್ಷಮಿಸಲು ಅಲ್ಲಾಹನಲ್ಲಿ ದುಆಃ ಮಾಡುವುದು, ಅವರಿಗಾಗಿ ಕನಿಷ್ಟ  ಫಾತಿಹಾ ಓದುವುದು, ತಹ್ಲೀಲ್ ಹೇಳುವುದು ಮಾಡಿದರೆ, ನಮ್ಮ ಮರಣಾನಂತರ ನಮ್ಮ ಪಾಪಗಳನ್ನು ಕ್ಷಮಿಸಲು ಮತ್ತು ನಮ್ಮ ಪರಲೋಕ ವಿಜಯಕ್ಕಾಗಿ ದುಆಃ ಮಾಡಲು ತಹ್ಲೀಲ್ ಹೇಳಲು, ಖುರ್ಆನ್ ಓದಲು ಸಾಕಷ್ಟು ಜನರನ್ನು ಅಲ್ಲಾಹು ಸೃಷ್ಟಿಸುತ್ತಾನೆ.

ಅದೇರೀತಿ,  ವಾಟ್ಸಪ್ ಅಥವಾ ಮೆಸೇಜ್ ಮೂಲಕ ಸಂಖ್ಯೆಯನ್ನು ಶೇಕರಿಸಿ ಮೃತರಿಗಾಗಿ ತಹ್ಲೀಲ್ ಹದಿಯಾ ಮಾಡುವುದು ಒಂದು ಅತ್ಯುತ್ತಮ ಕ್ರಮವಾಗಿದೆ. ಇಂತಹ ಕ್ರಮಗಳನ್ನು ಅನುಸರಿಸುವ ಮೂಲಕ ಮೃತರಿಗೆ ಸಾಕಷ್ಟು ತಹ್ಲೀಲ್ ಹದಿಯಾ ಆಗಿ ಅವರ ಪರಲೋಕ ವಿಜಯಕ್ಕೆ ಅದು ಕಾರಣವಾಗುವುದಾದರೆ,  ಇಂತಹ ಕಾರ್ಯವನ್ನು ಇನ್ನಷ್ಟು  ಅನುಸರಿಸುವು ಮತ್ತು ಪ್ರೋತ್ಸಾಹಿಸುವುದೇ ಒಳ್ಳೆಯದಲ್ಲವೇ.

*"ಯಾರಾದರೂ ಇಸ್ಲಾಮಿನಲ್ಲಿ ಒಂದು ಒಳ್ಳೆಯ ಕಾರ್ಯವನ್ನು ಬಳಕೆಗೆ ತಂದರೆ, ಅದನ್ನು ಅನುಸರಿಸಿದವರ ಪುಣ್ಯ ಕೂಡಾ ಆತನಿಗೆ ದೊರೆಯುವುದು. ಅನುಸರಿಸಿದವರ ಪುಣ್ಯ ದಲ್ಲಿ ಯಾವುದೇ ಕೊರತೆ ಇಲ್ಲದೆಯೇ" (ಮುಸ್ಲಿಂ)*
ಇಸ್ಲಾಮಿನಲ್ಲಿ ಒಂದು ಒಳ್ಳೆಯ ಕಾರ್ಯವನ್ನು ಬಳಕೆಗೆ ತರುವುದುಕೂಡಾ ಅನುವದನೀಯ ಎಂಬುದು ಈ ಹದೀಸ್ ನಿಂದ ಸ್ಪಷ್ಟವಾಗುತ್ತದೆ.

ಮೃತರಿಗಾಗಿ ತಹ್ಲೀಲ್ ಹೇಳುವುದಕ್ಕೆ ಲೆಕ್ಕ  ಕೊಡಲು ಹಿಂಜರಿಯುವಿಕೆ ಖಂಡಿತಾ ಸಲ್ಲದು. ನಮ್ಮಿಂದ ಮರಣಹೊಂದಿದವರ ಪರಲೋಕ ವಿಜಯಕ್ಕಾಗಿ ಕನಿಷ್ಟ 100 ತಹ್ಲೀಲ್ ಹೇಳುವುದು ನಮ್ಮಿಂದ ಸಾಧ್ಯವಾಗುವುದಿಲ್ಲವಾದರೆ, ನಾಳೆ ನಾವು ಮರಣ ಹೊಂದಿದ ನಂತರ,  ನಮ್ಮ ಪರಲೋಕ ವಿಜಯಕ್ಕಾಗಿ ತಹ್ಲೀಲ್ ಹೇಳಲು, ದುಆ ಮಾಡಲು ಜನರಿರುತ್ತಾರೆಯೇ? 
ನಮ್ಮ ಮರಣಾನಂತರ ನಮ್ಮ ಪಾಪಗಳನ್ನು ಕ್ಷಮಿಸಲು, ನಮ್ಮ ಪರಲೋಕ ವಿಜಯಕ್ಕಾಗಿ ದುಆಃ ಮಾಡುವ, ತಹ್ಲೀಲ್ ಹೇಳುವ, ಖುರ್ಆನ್ ಓದುವ ಒಂದು ಕೂಟ ಬೇಡವೇ? ಬೇಕಿದ್ದಲ್ಲಿ ಅದಕ್ಕಿರುವ ಪ್ರಯತ್ನ ನಮ್ಮಿಂದಲೇ ಆಗಬೇಕು.   ನಮ್ಮಿಂದ ಅಗಲಿದವರ ಪಾರತ್ರಿಕ ಮೋಕ್ಷಕ್ಕಾಗಿ ಒಂದು ಸಣ್ಣ ಪ್ರಯತ್ನವನ್ನು ನಾವು ಮಾಡಿದರೂ, ಅದಕ್ಕೆ ಬದಲಾಗಿ ನಮ್ಮ ಮರಣಾ ನಂತರ ನಮ್ಮ ಪಾರತ್ರಿಕ ಮೋಕ್ಷಕ್ಕಾಗಿ ಪ್ರಯತ್ನಿಸುವ ಒಂದು ದೊಡ್ಡ ಸಮೂಹವನ್ನು ಅಲ್ಲಾಹು ಸೃಷ್ಟಿಸುತ್ತಾನೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

 ನಾವೊಂದು ಸಂಖ್ಯೆ ತಹ್ಲೀಲ್ ಹೇಳುವುದನ್ನು ವಾಗ್ದಾನಮಾಡಿ  ಅದನ್ನು ನಾವೇ ಹೇಳಿ ತೀರಿಸಬೇಕೆಂದೇನೂ ಇಲ್ಲ.  ನಮ್ಮ ಮನೆಯ ಹೆಂಗಸರಲ್ಲೂ ಹೇಳಿಸಬಹುದು. ಅವರಿಗೂ ಈ ರೀತಿ ತಹ್ಲೀಲ್ ಹೇಳುವುದರ ಮಹತ್ವವನ್ನು ತಿಳಿಸಿ ಕೊಟ್ಟರೆ,  ಖಂಡಿತಾ ದೊಡ್ಡ ಸಂಖ್ಯೆಯ ತಹ್ಲೀಲ್ ಹೇಳುವುದಕ್ಕೆ ನಮ್ಮ  ಹೆಂಗಸರಾರೂ ಹಿಂಜರಿಯಲಾರರು.
*ಈ ರೀತಿ ಮೃತರಿಗಾಗಿ ಖುರ್ಆನ್ ಓದುವವರು,  ತಹ್ಲೀಲ್ ಹೇಳುವವರು, ತಾನು ಹೇಳಿದ/ಓದಿದ  ಖುರ್ಆನ್ ಮತ್ತು ತಹ್ಲೀಲನ್ನು ಇಂತಿಂತಹವರಿಗೆ ಹದಿಯಾ ಮಾಡಿದೆ ಎಂದು ಸಂಕಲ್ಪಿಸಿಕೊಳ್ಳುವುದು ಕಡ್ಡಾಯವಾಗಿದೆ.*

ನಮ್ಮ ಮರಣಾನಂತರ ನಮಗಾಗಿ ಖುರ್ಆನ್ ಓದುವ, ತಹ್ಲೀಲ್ ಹೇಳುವ, ದುಆ ಮಾಡುವ ಒಂದು ದೊಡ್ಡ ಕೂಟವನ್ನು ಅಲ್ಲಾಹು ಸೃಷ್ಟಿಸಲಿ...ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment