Sunday, September 22, 2019

*ಶ್ರೀಮಂತರ ಮುಂದೆ ದೀನ್  ಮುಚ್ಚಿಡುತ್ತಾರೆಯೇ ಉಲಮಾಗಳು?*

ಬಡವರ ಮುಂದೆ ಮುಲಾಜಿಲ್ಲದೆ ದೀನ್ ಹೇಳುವ ಉಲಮಾಗಳು, ಶ್ರೀಮಂತರ ಮುಂದೆ ದೀನ್ ಹೇಳಲು ಹಿಂಜರಿಯುತ್ತಿದ್ದಾರೆ ಎಂಬುದು ಕೆಲವರ ಆರೋಪ.
ವಾಸ್ತವದಲ್ಲಿ ಇಂತಹ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ.

*ಮದುವೆ ಮನೆಯಲ್ಲಿ ನಡೆದ ಅನಿಸ್ಲಾಮಿಕ ಕಾರ್ಯಕ್ಕೂ ಉಲಮಾಗಳಿಗೂ ಸಂಭಂಧವಿದೆಯಾ ?*
ಎಪಿ ಉಸ್ತಾದ್ ಸಹಿತ ಇತರ ಉಲಮಾಗಳೆಲ್ಲರೂ ನಿಕಾಹ್ ನಡೆಸುವ ಸಲುವಾಗಿ ಮದುವೆ ಮನೆಗೆ ಬಂದಿದ್ದರು. ನಂತರ ಅವರು ನಿಕಾಹ್ ನೆರವೇರಿಸಿ ಅಲ್ಲಿಂದ ಹೊರಟಿದ್ದಾರೆ. ಅವರು ಬರುವುದಕ್ಕಿಂತ ಮುಂಚೆಯೋ, ನಂತರವೋ ಅಲ್ಲಿ ಕೆಲವೊಂದು ಅನಿಸ್ಲಾಮಿಕ ಕಾರ್ಯ ನಡೆದಿದೆ ಎಂಬುದು ನಿಜ. ಆದರೆ, ಅದಕ್ಕೆ ಉಲಮಾಗಳನ್ನೇಕೆ ಹೊಣೆಗಾರರನ್ನಾಗಿಸಬೇಕು ಎಂಬುದು ಮಾತ್ರ ಅರ್ಥವಾಗದ ಪ್ರಶ್ನೆ. 
ಒಂದು ಮನೆಯಲ್ಲಿ ಅನಿಸ್ಲಾಮಿಕ ಕಾರ್ಯ ನಡೆದ ಮಾತ್ರಕ್ಕೆ ಅಂತಹವರ ಮನೆಯಲ್ಲಿ ನಡೆಯುವ ನಿಕಾಹ್ ಕಾರ್ಯಕ್ರಮದಲ್ಲಿ  ಉಲಮಾಗಳು ಭಾಗವಹಿಸಬಾರದೆಂದಿದೆಯಾ. ಅಥವಾ, ಅಂತಹವರ ಮನೆಯನ್ನು ಉಲಮಾಗಳು ಸಂದರ್ಶಿಸ ಬಾರದೆಂದಿದೆಯಾ. ಹಾಗೆ ಸಂದರ್ಶಿಸುವುದು ಅಪರಾಧವೇ. ಒಂದೂ ಅರ್ಥವಾಗದ ಅಸಂಬದ್ಧ ವಾದಗಳಾಗಿವೆ ಇವುಗಳು.

ಉಲಮಾಗಳು ಭಾಗವಹಿಸಿದ್ದು ನಿಕಾಹ್ ಕಾರ್ಯಕ್ರಮಕ್ಕೆ. ಅಲ್ಲಿ ಅನಿಸ್ಲಾಮಿಕ ಕಾರ್ಯ ನಡೆದಿದೆ ಎಂದ ಮಾತ್ರಕ್ಕೆ ಉಲಮಾಗಳು ನಿಕಾಹ್ ಕಾರ್ಯಕ್ರಮವನ್ನು ಬಹಿಷ್ಕರಿಸುವಂತಿಲ್ಲ.  ಗಂಡು ಮತ್ತು ಹೆಣ್ಣಿನ ದಾಂಪತ್ಯ ಜೀವನವನ್ನು ಹಲಾಲ್ ಮಾಡಿ ಕೊಡುವ ಸಲುವಾಗಿ ನಿಕಾಹ್ ನೆರವೇರಿಸಿ ಕೊಡುವುದು ಉಲಮಾಗಳ ಮೇಲೆ ಕಡ್ಡಾಯವಾಗಿದೆ.

*ಶ್ರೀಮಂತರ ಮುಂದೆ ದೀನ್ ಮುಚ್ಚಿಡಲಾಗಿದೆಯೇ?*
ಮ್ಯೂಸಿಕ್ ಹಾಡು, ಡ್ಯಾನ್ಸ್ ಗಳು, ಇತ್ಯಾದಿ  ಅನಿಸ್ಲಾಮಿಕ ಕಾರ್ಯ ಎಂದು ಇಲ್ಲಿ ಗೊತ್ತಿರದವರು ಯಾರಾದರೂ ಇದ್ದಾರೆಯೇ?
 ಸಣ್ಣ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಅದರ ವಿಧಿ ಗೊತ್ತು.
ನನ್ನ ಪ್ರಶ್ನೆ ಏನೆಂದರೆ, ಮುಸ್ಲಿಂ ಸಮಾಜಕ್ಕೆ ಇದು ಅನಿಸ್ಲಾಮಿಕ ಕಾರ್ಯ ಎಂದು ಹೇಳಿಕೊಟ್ಟವರಾರು.? ನೇರ ಆಕಾಶದಿಂದ ಯಾರಿಗೂ ದೀನ್ ಬಂದು ತಲುಪಿದ್ದಲ್ಲ ಎಂಬುದು ಖಚಿತ ತಾನೇ.. 
ಅಂದರೆ, ಧರ್ಮದ ಪ್ರತಿಯೊಂದು ಕಾನೂನನ್ನು ಪ್ರತಿಯೊಬ್ಬರೂ ಇಲ್ಲಿ ಉಲಮಾಗಳಿಂದಲೇ ಕಲಿತುಕೊಂಡದ್ದಾಗಿದೆ.‌ ಇವರಿಗೆಲ್ಲಾ ಧರ್ಮದ ಕಾನೂನನ್ನು ಕಲಿಸಿ ಕೊಟ್ಟ ಉಲಮಾಗಳು, ಅದೇ ಸಮಯದಲ್ಲಿ ಶ್ರೀಮಂತರಿಗೂ  ಕಲಿಸಿಕೊಟ್ಟಿದ್ದಾರೆ ಎಂಬುದು ಅಷ್ಟೇ ಸತ್ಯ.

*ಸಹಜವಾಗಿ ಉಲಮಾಗಳು ವಿದ್ಯೆ ಕಲಿಸಿಕೊಡುವುದು ಮದರಸದಲ್ಲಿ,  ಮಸೀದಿಯಲ್ಲಿ.  ಮತ್ತೊಂದು ವಾಲ್ ಕಾರ್ಯಕ್ರಮದಲ್ಲಿ. ಇಲ್ಲೆಲ್ಲಾ ಉಲಮಾಗಳು ಧರ್ಮದ ಕಾನೂನನ್ನು ವಿವರಿಸುವಾಗ ಅಲ್ಲಿ ಶ್ರೀಮಂತರು ಇರುವುದಿಲ್ಲವೇ. ಅಥವಾ ಶ್ರೀಮಂತರನ್ನು ವಾಲ್ ಹೇಳುವಾಗ ಹೊರಗೆ ಕಳುಹಿಸಲಾಗುತ್ತದೆಯಾ. ಇಲ್ಲವಲ್ಲ. ಅಂದಮೇಲೆ, ಬಡವರ ಮುಂದೆ ಮಾತ್ರ ದೀನ್ ಹೇಳಿ ಶ್ರೀಮಂತರ ಮುಂದೆ ದೀನ್ ಹೇಳುವುದಿಲ್ಲ ಎಂಬ ಕೆಲವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕೆಲವೊಮ್ಮೆ,  ಧಾರ್ಮಿಕ ವೇದಿಕೆಗಳಲ್ಲಿ ಬಡವರಿಗಿಂತಲೂ ಶ್ರೀಮಂತರೇ ಮುಂದಿರುತ್ತಾರೆ.*
ಇನ್ನು ಕಾರ್ಯಕ್ರಮ ನಡೆದ ಸ್ಥಳದಲ್ಲೇ ಹೇಳಲಿಲ್ಲ ಎಂದು ಹೇಳುವುದಾದರೆ, ಆ ರೀತಿ ಬಡವರ ಮನೆಯಲ್ಲಿ ಅನಾಚಾರ ನಡೆದರೂ, ಅವರ ಮನೆಗೆ ಹೋಗಿ ಅದನ್ನು ವಿರೋಧಿಸುವಂತಹ ಕಾರ್ಯವನ್ನು ಉಲಮಾಗಳು ಎಲ್ಲೂ ಮಾಡುವುದಿಲ್ಲ.  ಶ್ರೀಮಂತ ಬಡವ ಎಂಬ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಒಂದೇರೀತಿ ಒಂದೇ ವೇದಿಕೆಯಲ್ಲಾಗಿದೆ ಉಲಮಾಗಳು ದೀನ್ ಹೇಳುವುದು.

*ಉಲಮಾಗಳ ಬಂಧ ದಿಂದ  ಶ್ರೀಮಂತರಲ್ಲಾಗಿರುವ ಬದಲಾವಣೆಗಳು.*
‌ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ವರೆಗೆ, ಬಡವರಿಂದ ಶ್ರೀಮಂತ ರವರೆಗೆ ಯಾವುದೇ ವ್ಯತ್ಯಾಸವಿಲ್ಲದೆ, ಇಸ್ಲಾಂ ನಿಷಿದ್ಧ ಗೊಳಿಸಿದಂತಹ ಕಾರ್ಯಗಳಾದ ಸಿನಿಮಾ ನೋಡುವುದು, ಮ್ಯೂಸಿಕ್ ಹಾಡು ಕೇಳುವುದು, ಮದ್ಯ ಗಾಂಜದ ದಾಸರಾಗುವುದು, ತಂಙಳ್ ಗಳನ್ನು,  ವಿದ್ಯೆ ಕಲಿಸಿದ ಉಲಮಾಗಳನ್ನೇ ಧಿಕ್ಕರಿಸಿ ನಡೆಯುವಂತಹ ಧಿಕ್ಕಾರಿಗಳಾಗಿ ಇಂದಿನ ಯುವ ಸಮೂಹ ಜೀವಿಸುತ್ತಿರುವಾಗ, ಇವರೆಲ್ಲರಿಗೂ ಭಿನ್ನವಾಗಿ ಸಮಾಜದಲ್ಲಿ ಆಗರ್ಭ ಶ್ರೀಮಂತರೆನಿಸಿಕೊಂಡವರು, ಉಲಮಾಗಳನ್ನು ತಂಙಳ್ ಗಳನ್ನು ಗೌರವಿಸುವವರಾಗಿ, ಅನುಸರಿಸುವವರಾಗಿ, ಹೆಚ್ಚಿನ ವಿಷಯದಲ್ಲೆಲ್ಲಾ  ಧಾರ್ಮಿಕ ಚೌಕಟ್ಟಿನಲ್ಲಿ  ಬದುಕುವಂತಾಗಿದ್ದರೆ, ಅದಕ್ಕೆಲ್ಲಾ  ಉಲಮಾಗಳೇ ಕಾರಣ ಕರ್ತರಾಗಿದ್ದಾರೆ. ಅದೂ ಅಲ್ಲದೇ ಇವರ ಸಂಪತ್ತಿನ ಒಂದು ಭಾಗ ಧಾರ್ಮಿಕ ಕಾರ್ಯಗಳಿಗೆ ಬಳಕೆ ಯಾಗುವಂತಾಗಿದ್ದು ಕೂಡಾ ಉಲಮಾಗಳ ಬಂಧದಿಂದ ಆದ  ಅತೀದೊಡ್ಡ ಬದಲಾವಣೆ ಎಂದರೂ ತಪ್ಪಾಗಲಾರದು.

*ತಪ್ಪುಗಳನ್ನು ತಿದ್ದಿಸುವ ರೀತಿ ಹೇಗೆ.?*
ಒಮ್ಮೆ ಪ್ರವಾದಿ ﷺ ರಲ್ಲಿ ಓರ್ವ ವ್ಯಕ್ತಿ ಬಂದು ಹೇಳಿದರು, ಪ್ರವಾದಿ ಯವರೇ, ನನ್ನಲ್ಲಿ ಎಲ್ಲಾ ತರಹದ ಕೆಟ್ಟ ಕಾರ್ಯಗಳು ಇವೆ. ಅದೆಲ್ಲವನ್ನೂ ಬಿಡಲು ನನ್ನಿಂದ ಸಾದ್ಯವಾಗುತ್ತಿಲ್ಲ ಎಂದಾಗ, ಪ್ರವಾದಿ ﷺ ರು ಹೇಳಿದ್ದೇನೆಂದರೆ, ನೀನು  ಏನು ಮಾಡಿದರೂ ಸುಳ್ಳೊಂದನ್ನು ಮಾತ್ರ ಹೇಳಬಾರದು ಎಂದಾಗಿತ್ತು. ಪ್ರವಾದಿ ﷺ ರು  ಆತನಲ್ಲಿ ಒಮ್ಮೆಲೆ  ಎಲ್ಲಾ ಪಾಪಗಳನ್ನು ನಿಲ್ಲಿಸಬೇಕೆಂದು ಕಲ್ಪಿಸದೆ, ಹಿಕ್ಮತನ್ನು ಪ್ರಯೋಗಿಸಿದರು. ಕೆಲವೊಂದು ಜನರ ಮುಂದೆ ಅವರ ತಪ್ಪುಗಳನ್ನು ತಿದ್ದಿಸುವ ರೀತಿ ಇದಾಗಿದೆ. ಪ್ರವಾದಿ  ﷺ ರ ಈ ನಡೆಯೇ ನಮ್ಮ ಉಲಮಾಗಳಿಗೆ ಮಾದರಿ. .

ಅಲ್ಲಾಹು ನಮ್ಮೆಲ್ಲರನ್ನು ಇಹಪರ ವಿಜಯಿಗಳ ಸಾಲಿನಲ್ಲಿ ಸೇರಿಸಲಿ, ಆಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment