Saturday, October 14, 2017

*ಸಮಸ್ತ ಉಲಮಾ ಸಮ್ಮೇಳನ*

*----------------------------*

ಹೌದು; ಸಮಸ್ತ, ಉಲಮಾಗಳ ಸಂಘಟನೆಯಾಗಿದೆ. ಹಾಗಾಗಿಯೇ ಅದು ಉಲಮಾ ಸಮ್ಮೇಳನವನ್ನು ಸಂಘಟಿಸುತ್ತದೆ. ಬರೇ ಬೆರಳೆಣಿಕೆಯ ಉಲಮಾಗಳಲ್ಲ.
ಬರೋಬ್ಬರಿ 25 ಸಾವಿರ ವಿದ್ವಾಂಸರು ಸಮ್ಮೇಳಿಸುವ ಮಹಾ ಸಂಗಮ!

ಅಂತಹ capacity ಸಮಸ್ತಕ್ಕಿದೆ.
90 ವರ್ಷ ಕಳೆದು ಶತಕ ಪೂರೈಸುವ ಸಂಭ್ರಮದಲ್ಲಿರುವ ಸಮಸ್ತಕ್ಕೆ ಅಷ್ಟೂ ಉಲಮಾಗಳನ್ನು ಸೇರಿಸಲು  ಸಾಧ್ಯವಿಲ್ಲ ಅಂದ್ರೆ ಅದು ಸಮಸ್ತವೇ ಅಲ್ಲ, ಅದಿರಲಿ...

ಹಿಜರಿ ಒಂದನೇ ಮತ್ತು ಎರಡನೇ ಶತಮಾನಗಳಲ್ಲೇ ಇಸ್ಲಾಮಿನ ಕಂಪು ಭಾರತದೆಲ್ಲೆಡೆ ಪಸರಿಸಿತ್ತು. ವಿಶೇಷತಃ ಕೇರಳದಲ್ಲಿ.
ಆಡಳಿತ ವರ್ಗಗಳು ಬದಲಾಗುತ್ತಿತ್ತು, ಅಧಿಕಾರ ವಿವಿಧ ವಿಭಾಗಗಳಲ್ಲಿ  ಹರಿಹಂಚಾಗುತ್ತಿತ್ತು.ಆದರೆ ಮುಸ್ಲಿಮರೆಡೆಯಲ್ಲಿರುವ ವಿಶ್ವಾಸ, ಆದರ್ಶಗಳಿಗೆ ಯಾವುದೇ ಚ್ಯುತಿ ಬಂದಿರಲಿಲ್ಲ. ಎಲ್ಲರೂ ಒಗ್ಗಟ್ಟಿನ ಬದುಕು ನಡೆಸುತ್ತಿದ್ದರು.

ಇಸವಿ 1900 ರ ನಂತರ ಬ್ರಿಟಿಷರ ಕುಮ್ಮಕ್ಕಿನಿಂದ ಕಾದಿಯಾನಿಸಂ ಬೆಳೆಯಿತು. ವಿವಿಧ ಸ್ಥಳಗಳಲ್ಲಿ ಅಣಬೆಗಳಂತೆ ಕಳ್ಳ ತರೀಖತ್ ಗಳು ಹುಟ್ಟಿದವು. ಇಸವಿ 1921 ತಲುಪುವಾಗ ಈಜಿಪ್ಟಿನಿಂದ ವಹ್ಹಾಬಿಸಂ(ಸಳಪಿಸಂ) ಎಂಟ್ರಿ ಕೊಟ್ಟಿತು.
ಎಲ್ಲಾ ವಿತಂಡವಾದಿಗಳು ಜತೆಸೇರಿದಾಗ ಹದಿನಾಲ್ಕು ಶತಮಾನಗಳ ಕಾಲ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಸುಸೂತ್ರವಾಗಿ ನಡೆದಿದ್ದ ದೀನ್ ಕಾರ್ಯ ಚಟುವಟಿಕೆಗಳಲ್ಲಿ ಮತ್ತು ವಿಶ್ವಾಸ ಸರಣಿಯಲ್ಲಿ ಬಿರುಕು ಮೂಡಿತು.
ನವೀನವಾದದ ವಿಷಗಾಳಿ ಕೇರಳವನ್ನು ಆವರಿಸಿ ಆಕ್ರಮಿಸಲು ಪ್ರಾರಂಭಿಸಿತು. ದೂರದೃಷ್ಟಿಯ ಅಲ್ಲಾಹನ ಔಲಿಯಾಗಳಲ್ಲೊಬ್ಬರಾದ ಪುದಿಯಂಙಾಡಿ ವರಕ್ಕಲ್ ಮುಲ್ಲಕ್ಕೋಯ ತಂಙಳ್ ಅಂದಿನ ಉಲಮಾ ದಿಗ್ಗಜರುಗಳನ್ನು ಒಟ್ಟು ಸೇರಿಸಿ, ನೂತನವಾದದ ವಿಷಬಾಧೆಯಿಂದ ತತ್ತರಿಸಿ, ಶಿಥಿಲವಾದ ಸಮುದಾಯವನ್ನು ರಕ್ಷಿಸಲು ಮುಂದಾದರು.

ಇಸವಿ 1925 ರಲ್ಲಿ ಮೊತ್ತಮೊದಲನೆ ಪಂಡಿತ ಸಂಘಟನೆಯೊಂದಕ್ಕೆ ಕ್ಯಾಲಿಕಟ್ ಜುಮಾ ಮಸೀದಿಯಲ್ಲಿ ರೂಪುಕೊಡಲಾಯಿತು.

ಇಸವಿ 1926 ರಲ್ಲಿ ಕೇರಳದ ವಿವಿಧ ಭಾಗಗಳಲ್ಲಿರುವ ಪ್ರಮುಖ ವಿದ್ವಾಂಸರನ್ನು ಒಟ್ಟು ಸೇರಿಸಿ ಕೋಝಿಕ್ಕೋಡ್ ಟೌನ್ ಹಾಲಿನಲ್ಲಿ ಕನ್ವೆನ್ಷನ್ ನಡೆಸಿ ವರಕ್ಕಲ್ ಮುಲ್ಲಕ್ಕೋಯ ತಂಙಳ್ ರವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಪದಾಧಿಕಾರಿಗಳನ್ನು ಆರಿಸಲಾಯಿತು.
'ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ' ಎಂದು ನಾಮಕರಣ ಮಾಡಲಾಯಿತು.

ಸದರಿ ಕನ್ವೆನ್ಷನ್ ನಲ್ಲಿ ಪಾಂಙಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್, ವಾಳಕ್ಕುಳಂ ಅಬ್ದುಲ್ ಬಾರಿ ಮುಸ್ಲಿಯಾರ್...ಇವರಂತಹ ಪರ್ವತ ಸಮಾನರಾದ ವಿದ್ವಾಂಸ ಪ್ರತಿಭೆಗಳೊಳಗೊಂಡ ನಲ್ವತ್ತು ಉಲಮಾಗಳ ಮುಶಾವರ ಕಮಿಟಿ ಅಸ್ತಿತ್ವಕ್ಕೆ ಬಂತು.

ಖಿಲಾಫತ್ ಚಳವಳಿಗೆ ನೇತೃತ್ವ ವಹಿಸುವವರೆಂದು ಜನರನ್ನು ನಂಬಿಸಿ ಮುಸ್ಲಿಮರನ್ನು ಗಲಭೆಗೆ ಪ್ರಚೋದಿಸಿ ಕೊನೆಗೆ ದಂಗೆ ಆರಂಭವಾದಾಗ ಹೇಡಿಗಳಂತೆ ತಿರುವಿದಾಂಕೂರಿಗೆ ಪಲಾಯನ ಮಾಡಿ ಭೂಗತರಾದ ಕೆ.ಎಂ.ಮೌಲವಿಯಂತವರು ರೂಪೀಕರಿಸಿದ 'ಐಕ್ಯ ಸಂಘ' ಇಬ್ನ್ ಅಬ್ದುಲ್ ವಹ್ಹಾಬನ
ವಿತಂಡವಾದಗಳನ್ನು ಜನರ ಮೇಲೆ ಹೇರಿ ಭಿನ್ನತೆ ಸೃಷ್ಟಿಸಿದಾಗ ಸಮಸ್ತ ಉಲಮಾ ಸಂಘಟನೆ ಅದರ ವಿರುದ್ದ ಸೆಟೆದೆದ್ದು ನಿಂತು ಹೋರಾಡಿತು.
ಸಮಸ್ತದ ಮುಖ್ಯ ಗುರಿ ಜನರು ನವೀನವಾದಗಳ ವಂಚನೆಯಲ್ಲಿ ಸಿಲುಕದಂತೆ ಜಾಗೃತಿ ಮೂಡಿಸುವುದಾಗಿತ್ತು.

ಸಮುದಾಯದ ಧಾರ್ಮಿಕ ಮತ್ತು ಸಾಮೂಹಿಕ ಶಿಕ್ಷಣದ ಸಂರಕ್ಷಣೆ,
ಧಾರ್ಮಿಕ ವಿದ್ಯಾಭ್ಯಾಸಕ್ಕೆ ಒತ್ತು ನೀಡುವುದು ಜೊತೆಗೆ ಲೌಕಿಕ ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸುವುದು, ಅನೈಕ್ಯ,
ಮೂಢನಂಬಿಕೆ, ಅಧಾರ್ಮಿಕತೆಯಿಂದ ಜನರನ್ನು ಸಂರಕ್ಷಿಸುವುದು ಮುಂತಾದ ಸ್ಪಷ್ಟವಾದ ಗುರಿಗಳೊಂದಿಗೆ ಕಾರ್ಯಾಚರಣೆ ಆರಂಭಿಸಿದ ಸಮಸ್ತ ಮತ್ತೆ ಹಿಂದಿರುಗಿ ನೋಡಲಿಲ್ಲ.
ಸಮಾಜ ಎದುರಿಸುವ ಪ್ರತಿಯೊಂದು ಸಮಸ್ಯೆಗಳಿಗೂ ಸಮಸ್ತ ಪರಿಹಾರವಾಗುತ್ತಿತ್ತು. ಸಮಸ್ತ ತೀರ್ಮಾನಗಳಿಗೆ ತಿದ್ದುಪಡಿಯ ಅಗತ್ಯ ಬಂದಿಲ್ಲ. ಅಷ್ಟೊಂದು ಕರಾರುವಕ್ಕಾಗಿತ್ತು ಸಮಸ್ತದ ಫತ್ವಗಳು.
ಈ ಮಧ್ಯೆ ಕೆಲವೊಂದು ರಾಜಕೀಯ ಪ್ರೇರಿತ ಶಕ್ತಿಗಳು ಸಮಸ್ತದ ಹಿಡಿತವನ್ನು ತನ್ನ ಸುಪರ್ದಿಗೆ ತರಲು ಪ್ರಯತ್ನಿಸಿತು. ಪರಿಣಾಮ ಸಮಸ್ತ ಇಬ್ಭಾಗವಾಯಿತು. ನಂತರ ತಾಜುಲ್ ಉಲಮಾ ಮತ್ತು ಸುಲ್ತಾನುಲ್ ಉಲಮಾರವರ ನೇತೃತ್ವದಲ್ಲಿ ಸಮಸ್ತವನ್ನು ಪುನಸಂಘಟಿಸಲಾಯಿತು.
ಸುನ್ನಿ ವಿದ್ಯಾರ್ಥಿ ಸಂಘಟನೆ ಎಸ್ಸೆಸ್ಸೆಫ್, ಎಸ್ ವೈ ಎಸ್, ಮತ್ತು ಸುನ್ನಿಗಳ ಮುಖವಾಣಿ ಸುನ್ನಿ ವಾಯ್ಸ್ ಎಲ್ಲವೂ ಪುನಸಂಘಟಿತ ಸಮಸ್ತದ ಹಿಂದೆ ಗಟ್ಟಿಯಾಗಿ ಬೇರೂರಿ ನಿಂತವು.

ಸಮಸ್ತದ ಮೂಲಗುರಿಗೆ ಚ್ಯುತಿ ಬಾರದಂತೆ 89 ರ ನಂತರ ಇಂದಿನವರೆಗೆ ಎಪಿ ಉಸ್ತಾದರು ನೇತೃತ್ವ ಕೊಡುವ ಸಮಸ್ತ ಅಧಿಕಾರಿಯುತವಾಗಿ ಮುನ್ನೇರುತ್ತಿದೆ.
ಸಮಸ್ತದ ದ್ವನಿಯನ್ನು ಜಗತ್ತಿನಾದ್ಯಂತ ತಲುಪಿಸಲು ಎಪಿ ಸಮಸ್ತಕ್ಕೆ ಸಾಧ್ಯವಾಯಿತು.
ಉಲಮಾಗಳನ್ನು ಸೃಷ್ಟಿ ಮಾಡುವ ಮರ್ಕಝ್,ಸಅದಿಯ್ಯದಂತಹ ಬೃಹತ್ ಇಸ್ಲಾಮಿಕ್ ಯುನಿವರ್ಸಿಟಿಗಳನ್ನು ಕಟ್ಟಿ ದೀನಿನ ನಾಡಿಮಿಡಿತಗಳಾದ ಧಾರಾಳ ಉಲಮಾಗಳನ್ನು ಸೃಷ್ಟಿ ಮಾಡಿದವು. ಜೊತೆಗೆ ಧಾರ್ಮಿಕ, ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಗಳನ್ನು ನಾಡಿನುದ್ದಕ್ಕೂ ಕಟ್ಟಿ ಬೆಳೆಸಿ ಶಿಕ್ಷಣ ಕ್ರಾಂತಿ ಮೊಳಗಿಸಿದರು.
ಎಲ್ಲೆಲ್ಲೂ ಆಶ್ಚರ್ಯಕರವಾದ ಬೆಳವಣಿಗೆಗಳು ಎದ್ದು ನಿಂತವು.

ನೀವೊಮ್ಮೆ ಹಿಂದಿರುಗಿ ನೋಡಿ. ಬರೇ 28 ವರ್ಷಗಳಲ್ಲಿ 280 ವರ್ಷಗಳ ಪ್ರಗತಿಯನ್ನು ಸಾಧಿಸಿ, ತೋರಿಸಿ ಕೊಡುವಲ್ಲಿ ಎಪಿ ಸಮಸ್ತ ಯಶಸ್ವಿಯಾಗಿದೆ.
ಎಪಿ ಸಮಸ್ತದ ವಿಶೇಷತೆ ಏನೆಂದರೆ ಅದು ವಿನೂತನ ಯೋಜನೆಗಳನ್ನು ಸಮುದಾಯದ ಮುಂದಿಟ್ಟು, ಕರಾರುವಕ್ಕಾಗಿ ಅದನ್ನು ಜಾರಿಗೊಳಿಸಿ, ಕೆಳಸ್ತರದ ಜನರಿಗೂ ತಲುಪುವಂತೆ ನೋಡಿಕೊಳ್ಳುತ್ತದೆ.
ಅದರ ಸ್ಪಷ್ಟವಾದ ಉದಾಹರಣೆಯಾಗಿದೆ ನಾಡಿದ್ದು ಮಾರ್ಚ್ 3,4,5 ದಿನಾಂಕಗಳಲ್ಲಿ ತ್ರಿಶೂರಿನಲ್ಲಿ ನಡೆಯುವ ಇಪ್ಪತ್ತೈದು ಸಾವಿರ ಉಲಮಾಗಳ ಸಂಗಮ.

ಅಂದು ಒಬ್ಬ ಖತೀಬ್ ಉಸ್ತಾದರನ್ನು ಶುಕ್ರವಾರ ಮಿಂಬರ್'ಗೆ ಹತ್ತಲು ಬಿಡದೆ ಹೊರಗಟ್ಟಿ ಬಹಿಷ್ಕರಿಸಿದಾಗ ಆ ಖತೀಬ್ ಮಸೀದಿಯ ಹೊರಗೆ ನಿಂತು ಹೇಳಿದ ಒಂದು ಮಾತಿತ್ತು.

"ವಾರಕ್ಕೊಂದು ಪಳ್ಳಿಯಂತೆ ಸೇವೆಗೈಯಬೇಕಾಗಿ ಬಂದರೂ ಈ ಆದರ್ಶದಿಂದ ನಾನು ಕಿಂಚಿತ್ತಾದರೂ ಹಿಂದೆ ಸರಿಯುವೆನೆಂದು ನೀವು ಕನಸಿನಲ್ಲೂ ಎಣಿಸಬೇಡಿ"

ಆ ಖತೀಬ್ ಉಸ್ತಾದ್ ಮಾಡಿದ ಘೋರ ಪಾಪ ಅವರು ಎಪಿ ವಿಭಾಗವನ್ನು ಅಪ್ಪಿಕೊಂಡದ್ದಾಗಿತ್ತು!

ಇಷ್ಟೊಂದು ತೀಕ್ಷ್ಣ ವಿರೋಧಗಳ ಮತ್ತು ವಿರೋಧಿಗಳ ಮಧ್ಯೆ ಜೀವಿಸುವಾಗಲೂ ನಮ್ಮ ಉಲಮಾಗಳು  ಆದರ್ಶವನ್ನು ಬಿಟ್ಟುಕೊಡಲಿಲ್ಲ.
ಉಲಮಾಗಳನ್ನು ರಾಜಕೀಯ ಪುಡಾರಿಗಳನ್ನೊಳಗೊಂಡ ಸಂಪನ್ನರು ಕಾಲಿನಡಿಯ ಕಸದಂತೆ ಕಂಡಿದ್ದರು. ಆದರೆ ನಮ್ಮ ಉಲಮಾಗಳು ಅದ್ಯಾವುದನ್ನು ಲೆಕ್ಕಿಸಲೇ ಇಲ್ಲ. ಸಮನ್ವಯ ಶಿಕ್ಷಣ ಸಮುಚ್ಚಯಗಳನ್ನು ಕಟ್ಟುತ್ತಲೇ ಹೋದರು. ಉಲಮಾಗಳ ಸೃಷ್ಟಿ ನಡೆಯುತ್ತಲೇ ಇತ್ತು. *ಸಮಸ್ತ* ಎಂಬ ಪಂಡಿತ ಸಭೆಯ ಹೆಸರಿಗೆ ತಕ್ಕಂತೆ ಉಲಮಾಗಳ ಸಾಗರವೇ ಸೃಷ್ಟಿಯಾದವು. ದೀನೀ ದಾವತಿಗೆ ಆನೆ ಬಲ ಬಂತು.

ಉಲಮಾಗಳನ್ನು ಹಗುರವಾಗಿ ಕಂಡಿದ್ದವರ ಕಣ್ಣು ತೆರೆಸಿತು.
ಉಲಮಾಗಳನ್ನು ತಮ್ಮ ಸುಪರ್ದಿಗೆ ತರಲು ಇನ್ನಿಲ್ಲದ ಪ್ರಯತ್ನ ನಡೆಸಿದವರು, ಕಾಲಿನಡಿಯ ಕಸಗಳಾಗಿ ಕಂಡಿದ್ದವರು
ಗತ್ಯಂತರವಿಲ್ಲದೆ ಬಂದಾಗ ಆಲಿಮ್ ಗಳ ಕಾಲಿಗೆರಗಬೇಕಾಗಿ ಬಂತು!

ಬದಲಾವಣೆ ಅಂದ್ರೆ ಇದೇ ತಾನೇ?

ಹೌದು... ತಾಜುಲ್ ಉಲಮಾ ಮತ್ತು ಸುಲ್ತಾನುಲ್ ಉಲಮಾರ ನೇತೃತ್ವ ಅದಾಗಿತ್ತು!

ಇಪ್ಪತೈದು ಸಾವಿರ ಪ್ಯೂರ್ ಉಲಮಾಗಳನ್ನು ಮಾತ್ರ ಸೇರಿಸಿ ಇಂತಹ ಉಲಮಾ ಸಂಗಮ ನಡೆಸಲು ಎಪಿ ಸಮಸ್ತಕ್ಕೆ ಮಾತ್ರ ಸಾಧ್ಯ ಎಂಬುದು ಕೂಡಾ ಇಲ್ಲಿ ಗಮನಾರ್ಹ.

(ಇದು ಯಾರನ್ನೂ ಸಣ್ಣದಾಗಿ ಚಿತ್ರೀಕರಿಸಲು ಹೇಳಿದ್ದಲ್ಲ, ವಾಸ್ತವ)

ಅಂದ್ರೆ ಎಪಿ ಸಮಸ್ತದ ಗುರಿ ಸ್ಪಷ್ಟವಾಗಿತ್ತು. ಜೊತೆಗೆ ಕ್ರಮಿಸುವ ದಾರಿಯೂ ಶುದ್ಧವಾಗಿತ್ತು. ಆಧ್ಯಾತ್ಮಿಕತೆ ತುಂಬಿ ತುಳುಕುತ್ತಿತ್ತು.
ಅವರದ್ದು ಪ್ರಹಸನವಾಗಿರಲಿಲ್ಲ.
ಎಲ್ಲವೂ ಗುರಿಮುಟ್ಟುವ ಯೋಜನೆಗಳಾಗಿದ್ದವು. ಅದರಲ್ಲಿ ಅವರು ಸಂಪೂರ್ಣವಾಗಿ ಸಕ್ಸಸ್ ಆದರು.

ಮುಸ್ಲಿಯಾರ್'ಗಳೇ ತುಂಬಿದ ಸಂಘಟನೆ ಎಂದು ಕೆಲವರಾದರೂ ಎಪಿ ಸಮಸ್ತವನ್ನು ಹಾಸ್ಯ ರೂಪದಲ್ಲಿ ಮೂದಲಿಸುತ್ತಿದ್ದರು.
ನಿಜವಾಗಿಯೂ ಸಮಸ್ತ ಅಂದರೆ ಉಲಮಾ ಸಂಘಟನೆ ತಾನೇ?
ಅದರಲ್ಲಿ ಮುಸ್ಲಿಯಾರ್ ಗಳಾದ ಉಲಮಾಗಳೇ ತುಂಬಿರಬೇಕೆಂಬುದು ಬೇರೆ ಹೇಳಬೇಕಾಗಿಲ್ಲ.
ಆದರೆ, ಕೇವಲ ಮುಸ್ಲಿಯಾರ್ ಗಳು ಮಾತ್ರ ಇದ್ದರೆ ಸಾಲದು. ಹಾಗಾಗಿ  ಅವರೊಂದಿಗೆ ಡಾಕ್ಟರ್ ಇಂಜಿನಿಯರ್, ಲಾಯರ್, ಜನಸಾಮಾನ್ಯರು, ವಿದ್ಯಾರ್ಥಿಗಳನ್ನೆಲ್ಲಾ ಸೇರಿಸಿ ಅವರಿಗೆ SBS, SSF, SYS, ಮುಸ್ಲಿಮ್ ಜಮಾಅತ್ ಎಂಬ ಸಂಘಟನೆಗಳ ಅಧೀನದಲ್ಲಿ ಕಾರ್ಯಾಚರಿಸಲು ಅನುವು ಮಾಡಿಕೊಡಲಾಯಿತು.
ಅವರೆಲ್ಲರೂ ಸುನ್ನತ್ತಾದ ಟೋಪಿ ಧರಿಸಿಯೇ ತಮ್ಮ ಕಾರ್ಯಕ್ಷೇತ್ರದಲ್ಲಿ ಕಾರ್ಯಾಚರಿಸಲು ಮೋಟಿವೇಶನ್ ಕೊಡಲಾಯಿತು.
ಆದರೆ ಇವರೆಲ್ಲರನ್ನು ಮುಸ್ಲಿಯಾರ್ ಗಳಂತೆ ಕಂಡರೂ ಇವರಲ್ಲಿ ಧಾರ್ಮಿಕ ವಿದ್ಯಾಭ್ಯಾಸ ಆಳವಾಗಿ ಅಭ್ಯಸಿಸಿದ ಆಲಿಂಗಳಿಗೆ ಮಾತ್ರ ನಾಡಿದ್ದು ಉಲಮಾ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವೆಂಬ ರೀತಿಯಲ್ಲಾಗಿದೆ ರಿಜಿಸ್ಟ್ರೇಶನ್ ನಡೆಯುತ್ತಿರುವುದು.

ಉಲಮಾ ಸಮ್ಮೇಳನ ನಡೆಸಲು ಆಯ್ಕೆ ಮಾಡಿದ ಪ್ರದೇಶದ  ವಿಸ್ತೀರ್ಣ ಬರೋಬ್ಬರಿ ಹನ್ನೆರಡು ಎಕರೆ!

ಉಲಮಾ ಸಮ್ಮೇಳನದಲ್ಲಿ ಭಾಗವಹಿಸುವ 25,000 ವಿದ್ವಾಂಸರಲ್ಲಿ ಪ್ರತಿಯೊಬ್ಬರೂ ಕನಿಷ್ಟ ಇನ್ನೂರು ಮಂದಿಯ ಪ್ರತಿನಿಧಿಯಾಗಿ ಭಾಗವಹಿಸುವರು. ಹಾಗೆ ಲಕ್ಷಾಂತರ ಜನರ ಹೃದಯಗಳಿಗೆ ದೀನೀ ದಾವತ್ತಿನ ಕಂಪು ಮುಟ್ಟಿಸಲು ಸಾಧ್ಯವಾಗುವ ರೀತಿಯಲ್ಲಾಗಿದೆ ಸೆಟಪ್.

ಕಾಲಿಕ ಪ್ರಸಕ್ತವಾದ ವಿಷಯಗಳಿಂದ ತುಂಬಿದ ವೈಜ್ಞಾನಿಕ ಮುನ್ನಡೆಯ ಹೊಸಚರಿತ್ರೆಯನ್ನು  ಉಲಮಾ ಸಮ್ಮೇಳನದ ವಿವಿಧ ಸೆಷನುಗಳು ಅನಾವರಣಗೊಳಿಸಲಿವೆ.
ಕೇರಳ ಕರಾವಳಿಯ ಮಾದರಿಯುತ ದೀನೀ ಶೈಲಿಯನ್ನು ಭಾರತದಾದ್ಯಂತ ಅಳವಡಿಸಲು ಬೇಕಾದ ಯೋಜನೆಗಳೊಂದಿಗೆ ನಮ್ಮ ಉಲಮಾಗಳು ಕಾರ್ಯಪ್ರವರ್ತರಾಗಿದ್ದಾರೆ.
ಮಾರ್ಚ್ 3,4,5 ದಿನಾಂಕಗಳಲ್ಲಿ ನಡೆಯುವ ಉಲಮಾ ಸಂಗಮದಲ್ಲಿ ಶಿಕ್ಷಣ ರಂಗವನ್ನು ಮತ್ತಷ್ಟು ಬಲಪಡಿಸುವ ವಿನೂತನ ಸೆಟ್ಟಪ್ ಗಳು ಮತ್ತು ಅದನ್ನು ಕಾರ್ಯರೂಪಕ್ಕಿಳಿಸುವ ಆಳವಾದ ಚರ್ಚಾಗೋಷ್ಠಿಗಳು, ಸೆಮಿನಾರ್ ಗಳು ನಡೆಯಲಿವೆ.
ಅಲ್ಲಾಹು ನಮ್ಮ ಉಲಮಾ ನಾಯಕರಿಗೆ ಧೀರ್ಘಾಯುಷ್ಯ, ಆಫಿಯತ್ ನೀಡಿ ಅನುಗ್ರಹಿಸಲಿ, ಆಮೀನ್.
ಇಸ್ಲಾಮಿಕ್ ದಾಈಗಳಾದ ಮಾಲಿಕ್ ಬಿನ್ ದೀನಾರ್(ರ) ಮತ್ತು ಸಂಘವನ್ನು ಹೃದಯಸ್ಪರ್ಶಿಯಾಗಿ ಸ್ವೀಕರಿಸಿ ಮಾದರಿಯಾದ ತೃಶೂರು ಜಿಲ್ಲೆಯಲ್ಲೇ ಅವರ ಉತ್ತರಾಧಿಕಾರಿಗಳಾದ ಸಮಸ್ತ ಆಲಿಮ್ ಗಳು ಮಗದೊಂದು ಚರಿತ್ರೆ ನಿರ್ಮಿಸಲು ಸಜ್ಜಾಗಿ ನಿಂತಿದ್ದಾರೆ.
ಅಲ್ಲಾಹು ಪರಿಪೂರ್ಣ ವಿಜಯ ನೀಡಿ ಅನುಗ್ರಹಿಸಲಿ ಆಮೀನ್.

- ಅಬೂಶಝ

No comments:

Post a Comment