ಬದುಕು- ಗ್ಯಾರಂಟಿ..
---------------------------
ನಾಲ್ಕೈದು ಆಡುಗಳನ್ನು ಕಟ್ಟಲಾಗಿತ್ತು ಹಟ್ಟಿಯಲ್ಲಿ ಕುರ್ಬಾನಿಗಾಗಿ..
ಪರಸ್ಪರ ಕಾದಾಡುತ್ತಿತ್ತು ಮುಂದಿಟ್ಟಿದ್ದ ಎಲೆಸೊಪ್ಪು ತಿನ್ನಲಿಕ್ಕಾಗಿ...
ಜಟ್ಟಿ ಆಡು ಪದೇ ಪದೇ ಹೋರಾಡುತ್ತಿತ್ತು
ಶರೀರ ದಪ್ಪ ಪುಷ್ಠಿಯಾಗಲೆಂದು
ಅಬಲೆ ಆಡು ದೂರ ಸರಿಯಿತು ತನ್ನಿಂದ ಕಾದಾಟ ಅಸಾಧ್ಯವೆಂದು...
ಪಾಪ ಅವುಗಳಿರಿಯದು ತಮ್ಮ ಬದುಕಿನ ಕೊನೆ ಘಳಿಗೆ ಇಂದಿಗೆ ಮುಗಿಯಿತೆಂದು.
ಈದ್-ಈದ್ಗಾ ಮುಗಿಯಿತು, ಕೊಯ್ದೇ ಬಿಟ್ಟರು ಮುಕ್ರಿಕ ಎಲ್ಲವುಗಳ ಕತ್ತುಗಳನ್ನು!
ಜಟ್ಟಿ ಅಬಲೆ ವ್ಯತ್ಯಾಸವಿಲ್ಲದೆ ಬಾಕಿ ಇಟ್ಟದ್ದು ಮಾತ್ರ ರಕ್ತ ಕಲೆಗಳನ್ನು!
ಮುಂದಿನ ಸರದಿ ಮನುಷ್ಯನದು ಮೇಕೆಯ ಮಾಂಸದಲಿ...
ಆರಂಭವಾಯಿತು ಜಟಾಪಟಿ ಮಾಂಸ ಹಂಚಿಕೆಯಲಿ
ಕೊಂಡೊಯ್ಯುವ ರಭಸದಲ್ಲಿ
ಸ್ಕಿಡ್ ಆಯಿತು ಬೈಕ್ ರಸ್ತೆ ಮದ್ಯದಲ್ಲಿ.
ರಕ್ತಮಡುವಿನಲ್ಲಿ ಬಿದ್ದು ವಿಲವಿಲನೆ ಒದ್ದಾಡಿದಾಗಲೇ ತಿಳಿದದ್ದು ತನ್ನ ಬದುಕಿಗೂ ಕೂಡಾ ಗ್ಯಾರಂಟಿ ಇಲ್ಲವೆಂದು!
ನಶ್ವರ ಬದುಕಿನ ಗುದ್ದಾಟ ಕಾದಾಟ ಎಲ್ಲವೂ ವ್ಯರ್ಥವೆಂದು..!
-ಅಬೂಶಝ
No comments:
Post a Comment