Saturday, October 14, 2017

ಸೂಲಿಬೆಲೆಯ ಮಾತು ಅಭಿಮಾನಕ್ಕೆ ದಕ್ಕೆ! ಮೌಲ್ವಿಯ ಭಿಕ್ಷಾಟನೆ ❓
———————————

ಸೂಲಿಬೆಲೆ ಎಂಬ ಕಟ್ಟರ್'ವಾದಿಯನ್ನು ಎಸ್ಸೆಸ್ಸೆಫ್ ನವರು ಕರೆತಂದು ವಿಚಾರಗೋಷ್ಠಿ ನಡೆಸಿದರು. ಅದೆಷ್ಟು ಎಫಕ್ಟು ಆಗುತ್ತದೋ ಅಂತೂ ನಂಗೊತ್ತಿಲ್ಲ.
ಆದರೆ ಒಂದು ವಿಷಯ ನನಗೆ ಅರ್ಥವಾಯಿತು. ಸೂಲಿಬೆಲೆಯವರು ಮುಸ್ಲಿಮರ ಬಗ್ಗೆ ನಿನ್ನೆ ಹೇಳಿದ ಕೆಲವೊಂದು ಮಾತುಗಳು ಅದು ಅವರು ಮಾತ್ರ ಹೇಳಿದ್ದಲ್ಲ ವರ್ಷಗಳ ಮುಂಚೆ ಸಾಚಾರ್ ವರದಿ ಇದಕ್ಕಿಂತಲೂ ಕೀಳುಮಟ್ಟದ ಮುಸಲ್ಮಾನನ್ನು ಅವತರಿಸಿದೆ.ಅದನ್ನೇ ಕಟ್ಟರ್ ವಾದಿ ಸೂಲಿಬೆಲೆ ರಿಪೀಟ್ ಮಾಡಿದಾಗ ನಮಗದು ಅಸಹ್ಯವಾಯಿತು! ನಮ್ಮಅಭಿಮಾನದ ವಿಷಯವಾಯಿತು!
ದಿನಾಪೂರ್ತಿ ಅದೇ ಚರ್ಚೆಯಾಯಿತು! ಆರೋಪ ಪ್ರತ್ಯಾರೋಪದ ಸುರಿಮಳೆಯೇ ಹರಿಯಿತು!
ಹಲವರು ಹಲವು ರೀತಿಯಲ್ಲಿ ತಮ್ಮ ಕಮಂಟ್ಸ್'ನ ಕವಾಯತು ನಡೆಸಿದರು!
ಬೇಸರದ ಸಂಗತಿ ಏನೆಂದರೆ ಮುಸ್ಲಿಮರ ಏಳಿಗೆಗಾಗಿ ನಾವೇನು ಮಾಡಬೇಕು ಎಂಬ ಸೆಲ್ಯೂಷನ್ ಬರೆಯಲು ಯಾವೊಬ್ಬನ ಕೈಗೂ ತಾಕತ್ತು ಇರಲಿಲ್ಲ!

ಸೂಲಿಬೆಲೆಯವರ ಎಲ್ಲಾ ಮಾತುಗಳನ್ನು ನಾನು ಒಪ್ಕೊಳ್ಳಲಿಕ್ಕೆ ತಯ್ಯಾರಿಲ್ಲ ಅವರು ಆಳವಾದ ತಪ್ಪುಧಾರಣೆಯಲ್ಲಿ ಸಿಲುಕಿದ್ದಾರೆ. ಆದರೆ ಅವರು ಬೊಟ್ಡು ಮಾಡಿದ ಕೆಲವೊಂದು ವಿಚಾರಗಳನ್ನು ನಮಗೆ ಅವಮಾನವಾಗಿದ್ದರೆ, ಮಂಗ್ಳೂರು ಬಿಟ್ಟರೆ ಬೆಂಗ್ಳೂರ್ ಕಡೆ ಇರುವ ನಮ್ಮ ಮುಸ್ಲಿಮರು ಸ್ಲಮ್ ಗಳಲ್ಲಿ ಹೊರಳಾಡುತ್ತಿರುವುದು, ಗುಜುರಿ ಹೆಕ್ಕುವುದು ನಮ್ ದೃಷ್ಟಿಯಲ್ಲಿ ಅವಮಾನವಾಗಿ ಕಾಣಲೇ ಇಲ್ಲ!
ಇದುವೇ ವಿಪರ್ಯಾಸ.

ಸೂಲಿಬೆಲೆ ಹೇಳಿದಂತೆ ನಮ್ ಹಿಂದು ಸಮಾಜದಲ್ಲಿ ಏನಾದರೂ ಕಳಂಕ ಕಂಡು ಬಂದರೆ ಅದನ್ನು ಹೆಂಗಾದರೂ ಮಾಡಿ ಸರಿಮಾಡಬೇಕಾದು ನಮ್ ಕರ್ತವ್ಯ. ಅಂತಹುದೇ ಕರ್ತವ್ಯ ಮುಸ್ಲಿಮರಾದ ನಮ್ಮ ಮೇಲೆಯೂ ಇಲ್ಲವೇ?
ಶಾಲೆಯ ಮೆಟ್ಟಿಲು ಕಾಣದ ನಮ್ ಮಕ್ಕಳಿಗೆ ಬೇಕಾಗಿ ನಾವು ಏನು ಮಾಡಿದ್ದೇವೆ? ಮಕ್ಕಳಿಗೆ ನಾಲ್ಕು ಬ್ಯೇಗ್ ವಿತರಿಸಿ ಎಣ್ಣೆ ಸವರಿದರೆ ನಮ್ ಸಮುದಾಯ ಉದ್ದಾರವಾಗುತ್ತಾ?
 ನಮ್ಮನ್ನೇ ಗಟ್ಟಿಗೊಳಿಸುವ ಯೋಜನೆ ಏನಾದರೂ ಹಾಕಿದ್ದು ಇದೆಯಾ?
ಸೂಲಿಬೆಲೆ ಹೇಳಿದಂತೆ ಕ್ರಿಮಿನಲ್ ಚಟುವಟಿಕೆಗಳಿಂದ ಬಂಧಿಸಲ್ಪಟ್ಟವರಲ್ಲಿ ಮುಸ್ಲಿಮರ ಹೆಸರು ಇಲ್ಲ ಎಂದಾಗ ಮನಸ್ಸಿಗೆ ಸಮಾದಾನವಾಗುತ್ತದೆ ಎಂದು ಒಬ್ಬ ಮುಸ್ಲಿಮ್ ಸಹೋದರ ಹೇಳಿದ್ದು ಅದು ಸರಿ ತಾನೇ?
ನಮ್ಮೆಲ್ಲರ ಅನುಭವ ಅದೇ ತಾನೇ ನಮ್ಮ ಮುಸ್ಲಿಮ್ ಹುಡುಗರು ಯಾಕೆ ಕ್ರಿಮಿನಲ್ ಆಗುತ್ತಾರೆ ಎಂದು ನಾವು ಎಂದಾದರೂ ಯೋಚಿಸಿದ್ದು ಇದೆಯಾ?
ವಿದ್ಯಾಭ್ಯಾಸವಿಲ್ಲ ಉದ್ಯೋಗವಿಲ್ಲ ಬಡತನದ ಬೇಗುದಿ ಅವನನ್ನು ಕ್ರೈಂಗೆ ಪ್ರಚೋದನೆ ನೀಡುವಾಗ ಅವನನ್ನು ಸರಿದಾರಿಗೆ ತರುವ ಪ್ರಯತ್ನ ನಮ್ಮಿಂದಾಗಿದೆಯಾ?
ಆ ವಿಷಯ ಸೂಲಿಬೆಲೆ ಪ್ರಸ್ತಾಪಿಸಿದಾಗ ಅಭಿಮಾನ ಕೊರತೆ ಕಂಡವರಿಗೆ ಮುಸ್ಲಿಂ ಯುವಕನ ಸ್ಲೇಟ್ ಹಿಡಿದ ಫೋಟೋ ಪೇಪರ್ ನಲ್ಲಿ ಕಾಣುವಾಗ ಅಭಿಮಾನ ಕೊರತೆ ಇರಲಿಲ್ಲವೆ?

ನಿಜವಾಗಿಯೂ ಕೊಳಚೆ ಪ್ರದೇಶದಲ್ಲಿ ಜೀವಿಸುವ ನಮ್ಮ ಮಕ್ಕಳನ್ನು ಕಾಣುವಾಗ ನಮ್ಮ ಅಭಿಮಾನಕ್ಕೆ ದಕ್ಕೆ ಬರಲಿಲ್ಲ ಆದರೆ ಸೂಲಿಬೆಲೆ ಅದನ್ನು ಮಾರ್ಮಿಕವಾಗಿ ಹೇಳಿದಾಗ ನಮ್ಮ ಅಭಿಮಾನ ಪ್ರಜ್ಞೆ ಎಚ್ಚತ್ತು ನಿಂತಿತು!

ಒಂದುವರೇ ತಾಸು ಸಮಯ ಕಲಿಸುವ ಮದ್ರಸ ಮತ್ತು ದಿನಾ ಪೂರ್ತಿ ಕಲಿಸುವ ಮದ್ರಸದ ವ್ಯತ್ಯಾಸ ಸೂಲಿಬೆಲೆಗೆ ನಿನ್ನೆ ಮನದಟ್ಟಾಯಿತೆಂದರೆ ನಾವು ನಮ್ಮ ಕುರಿತು ಇತರರಿಗೆ ಇರುವ ತಪ್ಪುಧಾರಣೆಯನ್ನು ನೀಗಿಸುವ ಯಾವ ಕೆಲಸವನ್ನೂ ಮಾಡಲಿಲ್ಲ ಎಂದಲ್ಲವೇ ಅದರ ಅರ್ಥ ?
ಒಂದು ಲಕ್ಷದ ಅನಧಿಕೃತ ಲೆಕ್ಕ ತೆಗೆದುಕೊಂಡು ಬಂದ ಸೂಲಿಬೆಲೆಗೆ ಅಧಿಕೃತವಾದ ಸಾವಿರಾರು ಮದ್ರಸಗಳು ದೇಶ ಪ್ರೇಮ ಕಲಿಸುತ್ತದೆ ಎಂದು ನಿನ್ನೆಯ ವಿಚಾರಗೋಷ್ಠಿಯಲ್ಲಿ ಮನದಟ್ಟಾದರೆ, ನಾವು ನಮ್ಮ ವ್ಯವಸ್ಥೆಯ ಕುರಿತು ಇತರರಿಗೆ ಮನದಟ್ಟು ಮಾಡುವಲ್ಲಿ ಎಡವಿದ್ದೇವೆ ಎಂದಲ್ಲವೇ ಅದರ ಅರ್ಥ.?
ನಾವು ಯಾಕೆ ನಮ್ಮ ವ್ಯವಸ್ಥೆಯ ಕುರಿತು ಇತರರು ತಿಳಿಯುವಾಗ ಎಗರಿಬೀಳುವುದು?
 ಪರಸ್ಪರ ತಪ್ಪುಧಾರಣೆ ತಿಳಿಯಾಗಿಸುವುದು ನಮ್ಮ ಕರ್ತವ್ಯ ತಾನೆ? ಅಂತಹ ಒಂದು ಸಾಹಸಕ್ಕೆ ಕೈ ಹಾಕಿದ್ದನ್ನು ಅವಮಾನವಾಗಿ ಚಿತ್ರೀಕರಿಸಿದವರಿಗೆ ಅವಮಾನವಾಗಿಯೇ ಉಳಿದಿರುವ ಸ್ಲಮ್ ಮಕ್ಕಳನ್ನು ಮೇಲೆಕ್ಕೆತ್ತುವ ಕಾರ್ಯ ಯಾಕೆ ಮಾಡಲಿಲ್ಲ?
ನಮ್ಮ ಸಾವಿರಾರು ಮದ್ರಸಗಳಿಗೆ ರೆಸ್ಪೆಕ್ಟ್ ಕೊಡುತ್ತಾ ಸೂಲಿಬೆಲೆ ಹೇಳುತ್ತಾರೆ ಹೊರಗಿನ ಹೆಚ್ಚಿನ ಮದ್ರಸಗಳಲ್ಲಿ ಮಕ್ಕಳಿಗೆ ಕಲಿಯಲು ಸರಿಯಾದ ವ್ಯವಸ್ಥೆಯೇ ಇಲ್ಲ.ಮಕ್ಕಳು ಮನೆಯವರ ಒತ್ತಾಯಕ್ಕೆ ಮಣಿದು ಬಂದು ಕಲಿಯುತ್ತಾರೆ ಅಷ್ಟೆ!
ಅಂದರೆ ಇದು ಸೂಲಿಬೆಲೆ ಹೇಳಿದಾಗ ಅವಮಾನವಾದ ನಮಗೆ ಉತ್ತರ ಕರ್ನಾಟಕದ ಮದ್ರಸಗಳ ಅವಸ್ಥೆಯನ್ನು ನೋಡಲಿಕ್ಕೆ ಸೌಜನ್ಯಕ್ಕಾದರೂ ಒಮ್ಮೆ ಭೇಟಿ ನೀಡಿದ್ದು ಇದೆಯಾ?
 ಅಲ್ಲಿನ ಮಕ್ಕಳಿಗೆ ಪುಸ್ತಕ ಇಡಲು ಸರಿಯಾದ ಬೆಂಚು ಕೂಡಾ ಇಲ್ಲದೆ ಪರದಾಡುತ್ತಿರುವುದು ನಮಗೆ ಅವಮಾನವಾಗಿ ಕಾಣಲೇ ಇಲ್ಲ ಯಾಕೆ?
ಅವರು ನಮ್ಮ ಸಮುದಾಯದ ಮಕ್ಕಳು ತಾನೇ? ಅದರ ಕುರಿತು ಚಿಂತನೆ ಮಾಡಬೇಕಾದವರು ನಾವೇ ತಾನೆ?

ನಮಗಾಗದವ ನಮ್ಮ ವ್ಯವಸ್ಥೆಯ ಕುರಿತು ಇಷ್ಟೊಂದು ಮಾರ್ಮಿಕವಾಗಿ ವಿಷಯ ಹಂಚುವಾಗ ಅವನ ವಿರುದ್ದವೇ ಹರಿಹಾಯ್ದರಿಂದ ಆ ಬಡಮಕ್ಕಳಿಗೆ ಪುಸ್ತಕ ಕಡ್ಡಿ ಸಿಗುತ್ತದಾ?
ನಾವು ಯಾಕೆ ನಮ್ಮ ಹಳಸಿದ ವ್ಯವಸ್ಥೆಯನ್ನು ಸರಿಪಡಿಸದೆ ಇನ್ನೊಂದು ವಿಭಾಗದ ವಿರುದ್ಧ ಕತ್ತಿ ಮೆಸೆಯುವ ಕಾರ್ಯ ಮಾಡಬೇಕು?
ನಾನು ತಿಳಿದಂತೆ ಆಯತುಲ್ ಕುರ್ಸಿ ಎಂಬ ಕುರಾನಿಕ್ ವಚನವನ್ನು ಇಬ್ಲೀಸ್ ಒಂದು ಸಹಾಬಿಗೆ ಕಲಿಸಿಕೊಟ್ಟ. ಹಾಗಾಗಿಯೂ ಪ್ರವಾದಿ (ಸ) ರವರು ಅದನ್ನು ತಿರಸ್ಕರಿಸಲಿಲ್ಲ!
ಅಂತೆಯೇ ನಮ್ಮ ದುರವಸ್ಥೆಯ ಕುರಿತು ಯಾರು ಬೊಟ್ಟು ಮಾಡಿದರೂ ಅದರಲ್ಲಿ ಸತ್ಯಾಂಶವಿದೆ ಎಂದಾದಲ್ಲಿ ಅದನ್ನು ಸರಿಪಡಿಸುವತ್ತ ನಾವು ಗಮನಹರಿಸಬೇಕೇ ಹೊರತು ಬೊಟ್ಟುಮಾಡಿದವನ ಮೇಲೆ ಎರಗುವುದು ಅಹಂಕಾರದ ಲಕ್ಷಣವಲ್ಲವೇ?

ಮತ್ತೊಂದು ಸೂಲಿಬೆಲೆ ಹೇಳಿದ ಕಾರ್ಯ ನಮ್ಮ ಹುಡುಗರು ಎಸ್ಸೆಸ್ಸೆಲ್ಸಿ ನಂತರ ವಿರುವ ಡಿಗ್ರಿ ಕೋರ್ಸ್'ಗಳಲ್ಲಿ ಉನ್ನತ ಶ್ರೇಣಿ ಗಳಿಸುವುದರಲ್ಲಿ ತುಂಬಾ ಹಿಂದೆ ಬಿದ್ದಿದ್ದೇವೆ ಎಂದು. ಅದೂ ಕೂಡಾ ಸತ್ಯ ಸಂಗತಿ.ಮದ್ರಸದಿಂದ ಕಲಿತವರು ಇಸ್ರೋ ವಿಜ್ಞಾನಿಗಳಾಗಿ ಬಂದಿಲ್ಲ  ಅದಕ್ಕೆ ಮದ್ರಸ ಕಲಿಕೆ ಕಾರಣವನ್ನಾಗಿ ಮಾಡಿದ್ದು ಸೂಲಿಬೆಲೆಯ ಅಜ್ಞಾನವಾಗಿದ್ದರೂ ನಮ್ಮ ಸಮುದಾಯ ಆ ವಿಷಯದಲ್ಲಿ ಕೂಡಾ ಹಿಂದುಳಿದಿದೆ ಎಂಬುದು ತಪ್ಪಲ್ಲ.
ಇದಕ್ಕೆಲ್ಲಾ ಪರಿಹಾರ ಕಾಣುವಲ್ಲಿ ನಾವು ಎಡವಿದ್ದೇವೆ.
ಆದ್ದರಿಂದ ಆ ಕುಂದುಕೊರತೆಗಳನ್ನು ಮತ್ತೊಬ್ಬರು ಬೊಟ್ಟು ಮಾಡದಂತೆ ಸಮುದಾಯವನ್ನು ಉನ್ನತಿಗೆ ತರುವಲ್ಲಿ ಪ್ರಯತ್ನ ಪಡಬೇಕೆಹೊರತು ಸಂಘರ್ಷಗಳಿಗೆ ಒತ್ತು ಕೊಡುವುದರಿಂದ  ಅದು ಸಾಧ್ಯವಿಲ್ಲ.

ಕಟ್ಟರ್'ವಾದಿಯಾದ ಸೂಲಿಬೆಲೆ ಪ್ರವಾದಿಯವರನ್ನು ಇಸ್ಲಾಮನ್ನು ನಿಂದಿಸಿದ್ದಾರೆ(ನಾನು ಕೇಳಲಿಲ್ಲ)ಎಂದು ಕೇಳಿದ್ದೆ. ಅದೇ ಸೂಲಿಬೆಲೆ ನಿನ್ನೆಯ ವಿಚಾರಗೋಷ್ಠಿಯಲ್ಲಿ ಪ್ರವಾದಿ ಮುಹಮ್ಮದ್ (ಸ) ರವರ ಹೆಸರು ಹೇಳುವಾಗಲೆಲ್ಲಾ (peace be upon him)
ಎಂದು ಸಲಾತ್ ಹೇಳುತ್ತಿದ್ದರು!
ಅಂದರೆ ನಿಂದಿಸಿದ ಅದೇ ನಾಲಗೆಯಿಂದ ವಿಚಾರ ಗೋಷ್ಠಿ ಸಲಾತ್ ಹೇಳಿಸಿತು ಎಂದಲ್ಲವೇ ಅದರ ಅರ್ಥ?
ಅದೊಂದು ಪ್ಲಸ್ ಪೋಯಿಂಟಲ್ಲವೇ?

ನಿನ್ನೆಯ ಅವರ ಭಾಷಣ ಕೇಳಿದಾಗ ಅವರಿಗೆ ಮದ್ರಸದ ಕುರಿತು ಆಳವಾದ ಸಂದೇಹ ಇದೆ ಎಂದು ಮನದಟ್ಟಾಯಿತು.
ಕೆಲವೊಂದು ಸಂದೇಹ ಇತಿಹಾಸದ ತಿರುಚಲಿನಿಂದ ಉಂಟಾಗಿದ್ದೆಂದು ಸ್ಪಷ್ಟ.
ಅದಕ್ಕಾಗಿ ಅವರು ಔರಂಗಜೇಬರನ್ನು ಅಕ್ಬರ್ ನನ್ನು ಎಲ್ಲಾ ಎಳೆದು ತಂದಿದ್ದರು.
ಅದಕ್ಕೆಲ್ಲಾ ಸಭೆಯ ಅಧ್ಯಕ್ಷರಾಗಿದ್ದ ಶಾಫಿ ಸಹದಿಯವರು ತಿರುಚಲ್ಪಟ್ಟ ಗತಕಾಲದ ಇತಿಹಾಸ ಮೆಲುಕು ಹಾಕುವುದರಿಂದ ಯಾವುದೇ ಒಳಿತು ಯಾರಿಗೂ ಇಲ್ಲ ಎಂಬ ಮಾರ್ಮಿಕವಾದ ಉತ್ತರದಿಂದ ಚಾಟಿಯೇಟು ಬೀಸಿದ್ದರು.

ಅದೇ ರೀತಿ ಕುರಾನನ್ನು ವ್ಯಾಖ್ಯಾನ ಇಲ್ಲದೆ ಬರೇ ಕನ್ನಡನುವಾದದಿಂದ ತಿಳಿಯಲು ಸಾಧ್ಯವಿಲ್ಲ ಎಂಬ ಕಟು ಸತ್ಯವನ್ನು ಸೂಲಿಬೆಲೆಯವರಿಗೆ ಮನದಟ್ಟು ಮಾಡಿ ಕೊಟ್ಟದ್ದು ಗ್ರೇಟ್ ಆಗಿತ್ತು.
 ಮತ್ತೆ ಒಂದುವರೇ ತಾಸು ಕಲಿಸುವ ಮದ್ರಸ ಅದು ಪ್ರಾಥಮಿಕ ಮತ್ತು ಫೌಢ ಕಲಿಕೆ ಮಾತ್ರ ಅಲ್ಲಿ ಸಿಗುತ್ತಿದ್ದು, ತಾನು ಕಲಿತ ಸಹದಿಯ್ಯ ಸಂಸ್ಥೆಯನ್ನು ಪರಿಚಯಿಸಿ ಅಲ್ಲಿ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾಭ್ಯಾಸ ನೀಡಲಾಗುತ್ತಿದೆ ಎಂಬ ವಿಷಯವನ್ನು ಮನದಟ್ಟು ಮಾಡಿಕೊಡುವಲ್ಲಿ ಶಾಫಿ ಸಹದಿ ಯಶಸ್ವಿಯಾಗಿದ್ದರು.
ವಿಶಾಲವಾದ ವಿಮರ್ಶೆ ನಡೆಸಲು ಶಾಫಿ ಸಹದಿಯವರಿಗೆ ಸಮಯದ ಅಭಾವ ಕಾಡುತ್ತಿತ್ತು ಅಂತ ನನಗೆ ಭಾಸವಾಯಿತು.

 (ಕೊಳಚೆ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನಲ್ಲಿ ಒಂದು ದೊಡ್ಡ ಸಂಸ್ಥೆಯನ್ನೇ ಕಟ್ಟಿದ ಶಾಫಿ ಸಹದಿಯವರಿಗೆ ಉತ್ತರ ಹೇಳುವ ಎಲ್ಲಾ ಅರ್ಹತೆ ಇತ್ತು ಎಂದಾಗಿದೆ ನನ್ನ ಭಾವನೆ)

ಅದೇ ರೀತಿ ಮದ್ರಸದಲ್ಲಿ ಕಲಿತ ಒಬ್ಬ ಮೌಲ್ವಿ ಸಣ್ಣ ಸಂಬಳ ಪಡೆಯುವಾಗ, ಚಿಕ್ಕಂದಿನಲ್ಲಿ ಅವರ ಜೊತೆ ಆಟವಾಡುತ್ತಿದ್ದ ಹಿಂದು ಗೆಳೆಯ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಾನೆ ಇದು ಮದ್ರಸ ಕಲಿಕೆಯ ಕೊರತೆಯಾಗಿ ಸೂಲಿಬೆಲೆ ಹೇಳಿದಾಗ  ಅದು ಅಭಿಮಾನ ಕೊರತೆಯಾಗಿ ಕೆಲವರಿಗೆ ಕಂಡಿತು.
ಆದರೆ ನಮ್ಮ ಉಸ್ತದಾರು ಕಡಿಮೆ ಸಂಬಳ ನಿಮಿತ್ತ ಮಗಳ ಮದುವೆಗಾಗಿ ಬಿಕ್ಷೆಯಾಟನೆ ಮಾಡುವುದು ಮಾತ್ರ  ಅವರ ಕಣ್ಣಿಗೆ ಅಭಿಮಾನ ಧಕ್ಕೆಯಾಗಿ ಕಾಣಲೇ ಇಲ್ಲ!

ಉಸ್ತಾದರ ಸಂಬಳ ಸ್ವಲ್ಪ ಏರಿಸಲಿಕ್ಕಾಗಿ ವಂತಿಗೆ ಜಾಸ್ತಿಮಾಡಿದಾಗ ಜಮಾತ್ ಕಮಿಟಿಯನ್ನು ದುರುಗುಟ್ಟಿ ನೋಡಲು ಅವನು ಮೆರೆಯಲಿಲ್ಲ.
ನಮ್ಮ ಅವ್ಯವಸ್ಥೆಯ ಕುರಿತು ಇತರ ಧರ್ಮೀಯರು ಕೂಡಾ ಕೀಳಾಗಿ ಕಾಣುತ್ತಾರೆಂದು ಮನದಟ್ಟಾದ ಮೇಲೆಯಾದರೂ ಇದನ್ನು ಸರಿಪಡಿಸಲಿಕ್ಕಾಗಿ ದಿನದ ಇಪ್ಪತ್ತನಾಲ್ಕು ಗಂಟೆ ವಾಟ್ಸಪ್ ನಲ್ಲಿ ಪರವಿರೋಧ ಚರ್ಚೆ  ಮಾಡಿದವರು ತಮ್ಮ ತಮ್ಮ ಜಮಾತ್ ಕಮಿಟಿಯವರೊಂದಿಗೆ ಇದರ ಕುರಿತು ಸಮಾಲೋಚಿಸಿದ್ದಾರೆಯೇ?

ಸೂಲಿಬೆಲೆ ತನ್ನ ಭಾಷಣದ ಆರಂಭದಲ್ಲೇ ನನ್ನ ಬಗ್ಗೆ ನಿಮಗೆ ಅನೇಕ ಗೊಂದಲ ಇದೆ ನನಗೂ ನಿಮ್ನ ಕುರಿತು ಗೊಂದಲ ಇದೆ.ಅದೆಲ್ಲವೂ ಇಂತಹ ಸೌಹಾರ್ದ ವಿಚಾರಗೋಷ್ಠಿ ಮೂಲಕ ಪರಿಹಾರವಾಗಬೇಕು ಎಂಬ ಭರವಸೆಯ ಮಾತನ್ನು ಹೇಳಿದ್ದಾರೆ ಅದನ್ನು ನಾವು ಪೋಸಿಟಿವ್ ಆಗಿ ತೆಗೆಯೋಣ.
ನನ್ನ ಪ್ರಕಾರ ಸುಮ್ನೆ ಹೊಗಳುವ ಸೌಹಾರ್ದ ಸಂಗಮಕ್ಕಿಂತ ಕುಂದು ಕೊರತೆಗಳನ್ನು ಬೊಟ್ಡುಮಾಡುವ, ಸಂದೇಹ ಸಂಶಯಗಳಿಗೆ  ಸೌಹಾರ್ದಯುತವಾಗಿ ಉತ್ತರ ಕೊಟ್ಟು ಸಮಸ್ಯ ಬಗೆ ಹರಿಸುವ ಸೆಮಿನಾರ್ ಗಳು ಇನ್ನಷ್ಟು ನಡೆಯಲಿ.
ಈ ಒಂದು ವಿಚಾರಗೋಷ್ಠಿ ಸಾಕಗಲ್ಲ ಇನ್ನಷ್ಟು ವಿಷಯಗಳ ವಿಚಾರ ವಿನಿಮಯ ನಡೆಯುವಂತಾಗಲಿ.
ಪರಸ್ಪರ ತಪ್ಪುಧಾರಣೆಗೆ ಸ್ವಲ್ಪವಾದರೂ ಕಡಿವಾಣ ಬೀಳಲಿ ಈ ನಿಟ್ಟಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಮುಂದೆ ಬಂದರೆ ಶಾಂತಿಯುತವಾದ ವಾತವರಣ ನಿರ್ಮಾಣವಾಗುತ್ತದೆ.
ಎಸ್ಸೆಸ್ಸೆಫ್ ನ ಅಧೀನದಲ್ಲಿ ಇಹ್ಸಾನ್ ಎಂಬ ಸಂಘಟನೆಯು ಉತ್ತರ ಕರ್ನಾಟಕದ ಮುಸ್ಲಿಮ್ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಗಲಿರುಳು ದುಡಿಯುತ್ತಾ ಇದೆ ಎಂಬುದು ಸಂತಸದ ಸಂಗತಿ.ಅದೇ ರೀತಿ ನಮ್ಮ ಉಲಮಾಗಳು ಅಲ್ಲಲ್ಲಿ ಸಂಸ್ಥೆಗಳನ್ನು ಕಟ್ಟಿ ಮುಸ್ಲಿಮ್ ಮಕ್ಕಳ ವಿದ್ಯಾಭ್ಯಾಸ ಕ್ರಾಂತಿ ಮಾಡುತ್ತಿರುವುದು ಕೂಡಾ ನಾವು ಮೆರೆಯುವಂತಿಲ್ಲ. ಅದರಲ್ಲಿಯೂ ಹರಿಯಾಣ ಜಾರ್ಖಂಡ್ ನ ಬಡ ಮಕ್ಕಳನ್ನು ಇಲ್ಲಿಗೆ ಕರೆತಂದು ಅವರಿಗೆ ಒಳ್ಳೆಯ ಆಹಾರ ವಸ್ತ್ರ ಮತ್ತು ಉನ್ನತ ವಿದ್ಯಾಭ್ಯಾಸ ಮಂಜನಾಡಿ ಮದೀನಾದ ದಂತಹ ಸಂಸ್ಥೆಗಳು ನೀಡುವುದು ಕೂಡಾ ಬಾರಿ ಸಂತೋಷದ ವಿಷಯ.ಹಾಗಾಗಿ
ಎಲ್ಲರೂ ಈ ನಿಟ್ಟಿನಲ್ಲಿ ಮುಂದಾದರೆ ಸುಂದರವಾದ ವಾತವರಣ ಸೃಷ್ಟಿಯಾಗುತ್ತದೆ. ಅಲ್ಲಾಹು ಅನುಗ್ರಹಿಸಲಿ
ಅಮೀನ್.

✒ ಅಬೂಶಝ

No comments:

Post a Comment