🌈🌈🌈🌈🌈🌈🌈
🌈 *ಇಅ್ ತಿಕಾಫ್*. 🌈
🌈🌈🌈🌈🌈🌈🌈
*ಇಅ್ ತಿಕಾಫ್ ಯಾವಾಗಲೂ ಸುನ್ನತ್ . ರಮಳಾನಿನಲ್ಲಿ ವಿಶೇಷ ಇಬಾದತ್.*
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರು ತಮ್ಮ ವಫಾತ್ ನವರೆಗೂ ರಮಳಾನಿನ ಕೊನೆಯ ಹತ್ತರಲ್ಲಿ ಇಅ್ ತಿಕಾಫ್ ಕೂರುತ್ತಿದ್ದರು. ಒಂದು ವರ್ಷ ಯಾತ್ರೆಯಲ್ಲಿದ್ದ ಕಾರಣ ಇಅ್ ತಿಕಾಫ್ ಕೂರಲಾಗಲಿಲ್ಲ. ಮುಂದಿನ ವರ್ಷ 20 ದಿನ ಇಅ್ ತಿಕಾಫ್ ಕೂತರು.
〰ಸುನನುಲ್ ಕುಬ್ ರಾ_ 8649〰
ರಮಳಾನಿನಲ್ಲಿ 10 ದಿನ ಈ ರೀತಿ ಇಅ್ ತಿಕಾಫ್ ಕೂತವರಿಗೆ ಎರಡು ಹಜ್ಜ್ ಮತ್ತು ಉಮ್ರಾಗಳ ಪುಣ್ಯವಿದೆ.
〰ಹದೀಸ್〰
ಕೆಲವೇ ಕ್ಷಣ ಯಾರಾದರೂ ಇಅ್ ತಿಕಾಫ್ ಕೂತರೆ ಒಬ್ಬ ಗುಲಾಮನನ್ನು ದಾಸ್ಯ ಮುಕ್ತಿ ಮಾಡಿದಷ್ಟು ಪುಣ್ಯ ದೊರೆಯುವುದು.
〰ಹದೀಸ್〰
ಇಅ್ ತಿಕಾಫ್ ನ ಆಚರಣೆ, ಅತ್ಯಂತ ಸರಳ. ಬುದ್ಧಿ, ವಿವೇಕವಿರುವ (ಹುಚ್ಚು, ಪ್ರಜ್ಞಾಹೀನತೆಗಳಿಲ್ಲದ) ಹಿರಿಯ ಅಶುದ್ಧಿಯಿಂದ ಶುದ್ಧಿಯಿರುವ ಮುಸ್ಲಿಮ್ , ನಿಯ್ಯತ್ ನೊಂದಿಗೆ ಮಸೀದಿಯಲ್ಲಿ ತಂಗುವುದೇ ಇಅ್ ತಿಕಾಫ್.
ಇಅ್ ತಿಕಾಫ್ "ಕೂರುವುದು" ಎನ್ನುವುದು ಒಂದು ಪ್ರಯೋಗವಷ್ಟೇ. ಕೂರುವುದೇ ಆಗಬೇಕಿಲ್ಲ. ನಿಂತರೂ, ಮಲಗಿದರೂ ಸರಿ, ನಿಯ್ಯತ್ ಮಾಡಿ ಮಸೀದಿಯಲ್ಲಿದ್ದರಾಯಿತು.
ಇಅ್ ತಿಕಾಫ್ ಮಸೀದಿಯಲ್ಲಿ ಮಾತ್ರ ಲಭ್ಯ. ಮಸೀದಿಯಾಗಿ ವಕ್ಫ್ ಮಾಡಿಲ್ಲದ, ನಮಾಝ್ ನ ಅಗತ್ಯಕ್ಕಾಗಿ ನಿರ್ಮಿಸಿದ ನಮಾಝ್ ಹಾಲ್, ಸಿರಾಂಬಿ, ಮಸೀದಿಗೆ ತಾಗಿ ಕೊಂಡಿದ್ದರೂ ವಕ್ಫ್ ಮಾಡಿಲ್ಲದ ಜಾಗದಲ್ಲಿ ಇಅ್ ತಿಕಾಫ್ ನ ಪುಣ್ಯ ಸಿಗದು.
ಇಅ್ ತಿಕಾಫ್ ಗೆ ವಕ್ಫ್ ಮಾಡಲ್ಪಟ್ಟ ಮಸೀದಿಯಾಗಿದ್ದರೆ ಸಾಕು. ಜುಮಾ ಮಸೀದಿಯೇ ಆಗಬೇಕೆಂದಿಲ್ಲ. ಆದರೆ ಜುಮಾ ಮಸೀದಿಯಲ್ಲಾಗಿರುವುದು ಹೆಚ್ಚು ಶ್ರೇಷ್ಠ. ಜುಮುಅದ ಅಗತ್ಯಕ್ಕಾಗಿ ಬೇರೆ ಮಸೀದಿಗೆ ಹೋಗುವುದನ್ನು ತಪ್ಪಿಸುವುದು, ಹೆಚ್ಚು ಜನರ ಪಾಲ್ಗೊಳ್ಳುವಿಕೆಯಿಂದ ಸಿಗುವ ಪುಣ್ಯಗಳನ್ನು ಪಡೆಯುವುದಕ್ಕಾಗಿ ಜುಮಾ ಮಸೀದಿ ಶ್ರೇಷ್ಠ ಎನ್ನಲಾಗಿದೆ.
ಮಸ್ಜಿದುಲ್ ಹರಾಂ, ಮದೀನಾದ ಮಸ್ಜಿದುನ್ನಬವಿ ಹಾಗೂ ಬೈತುಲ್ ಮುಖದ್ದಸ್ ಎಂಬೀ ಮೂರು ಮಸೀದಿಗಳನ್ನು ಬಿಟ್ಟು ಬೇರೆಲ್ಲಾ ಮಸೀದಿಗಳಿಗೂ ಸಮಾನಸ್ಥಾನ. ಹಾಗಾಗಿ ಉಳಿದ ನಿರ್ದಿಷ್ಟ ಮಸೀದಿಯೊಂದನ್ನು ಗೊತ್ತು ಪಡಿಸಿ ಇಅ್ ತಿಕಾಫನ್ನು ಹರಕೆ ಮಾಡಿದರೆ ಇಅ್ ತಿಕಾಫ್ ಕಡ್ಡಾಯವಾಗುತ್ತದೆ. ಆದರೆ ಅದೇ ಮಸೀದಿಯಲ್ಲಾಗುವುದು ಕಡ್ಡಾಯವಾಗುವುದಿಲ್ಲ. ಯಾವ ಮಸೀದಿಯಲ್ಲಿ ನಿರ್ವಹಿಸಿದರೂ ಆಗುತ್ತದೆ.
ಇಅ್ ತಿಕಾಫ್ ಗೆ ನಿಯ್ಯತ್ ಕಡ್ಡಾಯ. ಮಸೀದಿಗೆ ಪ್ರವೇಶಿಸುವಾಗ, "ಈ ಮಸೀದಿಯಲ್ಲಿ ಅಲ್ಲಾಹನಿಗಾಗಿ ಇಅ್ ತಿಕಾಫ್ ಇರುತ್ತೇನೆ" ಎಂದು ಮನಸ್ಸಿನಲ್ಲಿ ಸಂಕಲ್ಪಿಸಿಕೊಂಡರಾಯಿತು. ಬಾಯಿಯಲ್ಲಿ ಹೇಳುವುದು ಸುನ್ನತ್. ಯಾವ ಭಾಷೆಯಲ್ಲಾದರೂ ಸರಿ. ಅರಬಿಯಲ್ಲಾದರೆ " ನವೈತುಲ್ ಇಅ್ ತಿಕಾಫ ಫೀ ಹಾದ್ಸಲ್ ಮಸ್ಜಿದಿ ಲಿಲ್ಲಾಹಿ ತಆಲಾ" ಎನ್ನಬೇಕು.
No comments:
Post a Comment