—————💐💐————
ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಇದರ ಅಧ್ಯಕ್ಷರಾದ ರಹೀಸುಲ್ ಉಲಮಾ
ಈ ಸುಲೈಮಾನ್ ಉಸ್ತಾದರ ಸುಪುತ್ರ ಮರ್ಹೂಮ್ ಅಬ್ದುರ್ರಹ್ಮಾನ್ ಅಹ್ಸನಿ ಯ ಕುರಿತು ಫೈಸಲ್ ಅಹ್ಸನಿ ರಂಡತ್ತಾನಿಯವರ ಸ್ಮರಣೆ ಲೇಖನಿಯಿಂದ..........
-----------------------------
-----------------------------
'ಮಾನು' ವಿನ ಪರಿಚಯವಾಗುವುದೇ ನನ್ನ ಅಭಿವಂದ್ಯ ಗುರುವಿನ ಮೂಲಕ.
ನಾವು ಒಟ್ಟಿಗೆ ಒಂದೇ ತರಗತಿಯಲ್ಲಿ ಕಲಿತವರೇನೂ ಅಲ್ಲ. 'ಇಹ್ಯಾಸ್ಸುನ್ನ'
ದರ್ಸ್ ನಲ್ಲಿ ಅವನು ನನ್ನ ಜೂನಿಯರ್ ಆಗಿದ್ದ.
ಲಾಲಿತ್ಯದಿಂದ ಕೂಡಿದ ಅವನ ಮಂದಸ್ಮಿತ ಮುಖ ಕೆಲವೊಮ್ಮೆ ದರ್ಶಿಸಿದ್ದರೂ ಮಿತಭಾಷಿ ಯಾದ ಅವನೊಂದಿಗೆ ಹತ್ತಿರದ ಒಡನಾಟ ನನಗೆ ಇರಲಿಲ್ಲ.
ನಂತರ ಅವನನ್ನು ನಾನು ಗುರುತಿಸಲು ಆರಂಭಿಸಿದಾಗ ಅವನ ವಿನಯ,ಸಹನೆ,ಮಂದಹಾಸ, ಸಂಘಟನೆ,ತೀರದ ಜ್ಞಾನತೃಷೆ ಎಲ್ಲವೂ ನನ್ನಲ್ಲಿ ಅಚ್ಚರಿ ಮೂಡಿಸಿತು.
ಒಂದರ್ಥದಲ್ಲಿ ನನ್ನ ವಂದ್ಯ ಗುರು ಅವನ ತಂದೆಯೂ ಆದ ಉಸ್ತಾದಾಗಿದ್ದಾರೆ ಅವನನ್ನು ನನಗೆ ತೋರಿಸಿ ಕೊಟ್ಟದ್ದು.
'ರಹೀಸುಲ್ ಉಲಮಾ' ಎಂಬ ಖ್ಯಾತಿಯ ತನ್ನ ತಂದೆಯ ಪೂರ್ಣ ಆಶಿರ್ವಾದವನ್ನು ಅವನು ಸಂಪಾದಿಸಿದ್ದ ಎಂಬುದು ನನಗೆ ಖಾತರಿಯಾಗಿತ್ತು.
ನನ್ನ ಗುರುವು ಅವನ ತಂದೆಯೂ ಆದ 'ಉಸ್ತಾದ್' ಅವನ ಕುರಿತು ಹೀಗೆ ಹೇಳುತ್ತಿದ್ದರು..
"ಕಲಿತು ಅಹ್ಸನಿ ಬಿರುದು ಪಡೆದ ನಂತರ ಅವನು ನನ್ನಲ್ಲಿ ಹೇಳಿದ 'ನನಗೆ ಇನ್ನೂ ಕಲಿಯಬೇಕು ಎಪಿ ಉಸ್ತಾದರ ಹತ್ತಿರ ಹೋಗಬೇಕು' ಹಾಗೆ ಅವನು ಕಾಮಿಲ್ ಸಖಾಫಿ ಬಿರುದು ಸಂಪಾದಿಸಿದ. ನಂತರ ಮುದರ್ರಿಸ್ ಆದ.
ಅವನ ನಿಮಿತ್ತ ನನಗೆ ಏನು ಮೊಟಕು ಗೊಳಿಸಬೇಕಾಗಿ ಬರಲಿಲ್ಲ!
ಒಂದೇ ಒಂದು ಸುನ್ನತ್ ನಮಾಝ್ ಕೂಡಾ!
ನನ್ನಿಂದಾಗಿ ಅವನು ಯಾವುದೇ ತೊಂದರೆ ಅನುಭವಿಸಬೇಕಾಗಿ ಬರಲಿಲ್ಲ!
ಅವನು ಎಲ್ಲರನ್ನೂ ಪ್ರೀತಿಸಿದ್ದು ಹಾಗೆಯೇ ಕೆಲವರನ್ನು ದೂರ ಇಟ್ಟಿದ್ದ. ಎಲ್ಲವೂ ದೀನಿಗಾಗಿ!
ಅವನಿಗೆ ಅವನ ಸಂಘಟನೆ ದೊಡ್ಡದಾಗಿತ್ತು ಅದನ್ನು ಯಾರೂ ಸಣ್ಣದಾಗಿ ಕಾಣ ಬಾರದು ವಿಮರ್ಶಿಸುವುದನ್ನು ಅವನು ಸಹಿಸುತ್ತಿರಲಿಲ್ಲ.ಆ ವಿಷಯದಲ್ಲಿ ಅವನ ತೀರ್ಮಾನ ಕಟ್ಟುನಿಟ್ಟಾಗಿತ್ತು!
ಅದೆಲ್ಲವೂ ದೀನಿಗಾಗಿ...
ಇದೆಲ್ಲಾ ಹೇಳುವಾಗಲೂ ಉಸ್ತಾದ್ ನನ್ನನ್ನೂ ಕೂಡಾ 'ತರ್ಬಿಯತ್' ಮಾಡುತ್ತಿದ್ದರು!
ಒಂದು ದಿನ ನಾನು ಉಸ್ತಾದರ ರೂಮಿಗೆ ಹೋದಾಗ ಅವನು ಉಸ್ತಾದರ ಹತ್ತಿರ ಕುಳಿತುಕೊಂಡಿದ್ದ.
ಡಯಾಲಿಸ್ ಮಾಡಲಿಕ್ಕೆ ಹೊರಟದ್ದಾಗಿತ್ತು.
ಹೋಗಲಿಕ್ಕೆ ಇಷ್ಟ ಇಲ್ಲ. ತುಂಬಾ ಹೊತ್ತು ಹಾಗೆ ಕುಳಿತಿದ್ದ ನಂತರ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ.ಅವನು ಅಂದು ಅತ್ಯಂತ ದುಖತಪ್ತನಾಗಿದ್ದ!
ಆವಾಗ ಉಸ್ತಾದ್ ಅವನಲ್ಲಿ ಹೇಳಿದ ಮಾತು ಕೇಳಿ ನಾನು ನಿಶ್ಯಬ್ದನಾಗಿ ಬಿಟ್ಟೆ!
"ಸುಖ ದುಖ ಎಲ್ಲವೂ ಅಲ್ಲಾಹನ ತೀರ್ಮಾನದಂತೆ ನಡೆಯುತ್ತೆ. ರೋಗ ಶಮನವಾಗಲು ಅಲ್ಲಾಹನ ವಿಧಿ ಇದ್ದರೆ ಅವನು ನಿನಗೆ ಸೌಖ್ಯ ನೀಡುವನು
ಮರಣ ಹೊಂದುವ ವಿಧಿ ಎಂದಾದಲ್ಲಿ ಮರಣವೇ ಬರಲಿ!
ಏನೆ ಆದರೂ ಒಂದು ದಿನ ಮರಣ ಹೊಂದಲೇ ಬೇಕಲ್ಲವೇ?
ಅಲ್ಲಾಹನ ಪರೀಕ್ಷೆ ಯಾಗಿದೆ ಇದು.
ಅದೆಷ್ಟೋ ಪ್ರವಾದಿಗಳನ್ನು ಅಲ್ಲಾಹು ಕಠಿಣವಾದ ಪರೀಕ್ಷೆಗಳಿಗೆ ಒಡ್ಡಿದ್ದಾನೆ.
ನಮಗೆ ಅವನು ನೀಡಿರುವ ಆಜ್ಞೆ ರೋಗ ಬಂದರೆ ಚಿಕಿತ್ಸೆ ಮಾಡಿ ಮತ್ತು ಪ್ರಾರ್ಥಿಸಿರಿ..
ಅದನ್ನು ನಾವು ಮಾಡೇಕು ನಂತರ ಅಲ್ಲಾಹನ ವಿಧಿಯಲ್ಲಿ ಪೂರ್ಣ ಸಂತೃಪ್ತಿ ಹೊಂದಬೇಕು
ಎಲ್ಲವನ್ನು ಕ್ಷಮೆಯೊಂದಿಗೆ ಸಹಿಸಬೇಕು ಅಷ್ಟೇ! "
ಇದೆಲ್ಲವನ್ನು ಕೇಳಿ ಕಣ್ಣು ಒರೆಸುತ್ತಾ ಅವನು ಹೊರಹೋದ!"
ಅವನು ಹೋದ ನಂತರ ಉಸ್ತಾದ್ ನಮ್ಮಲ್ಲಿ ಹೇಳಿದರು.
"ಅವನಿಗೆ ನಿನ್ನ ರೋಗ ಸಂಪೂರ್ಣ ಗುಣ ಆಗುತ್ತೆ ಎಂದು ಖಚಿತವಾಗಿ ನಾನು ಹೇಳಬೇಕು ಅದಾಗಿದೆ ಅವನ ಆಶೆ.
ಹಾಗೆ ನಾನು ಹೇಳಿದರೆ ಅವನ ರೋಗ ಗುಣವಾಗಬಹುದೆಂದಾಗಿದೆ ಅವನ ವಿಶ್ವಾಸ.
ನಾವು ಹಾಗೆ ಖಚಿತವಾಗಿ ಹೇಳಲು
ಸೃಷ್ಠಿಕರ್ತ ಏನೂ ಅಲ್ಲ ತಾನೇ?
ಸೃಷ್ಟಿಕರ್ತನಾದ ಅಲ್ಲಾಹನ ಆಜ್ಞೆಪ್ರಕಾರ ನಡೆಯಬೇಕು ಅಷ್ಟೇ ನಮ್ಮಿಂದ ಸಾಧ್ಯ!"
'ಅಲ್ಲಾಹನಿಗೆ ಕೆಲವು ದಾಸರಿದ್ದಾರೆ ಅವರು
ಅಲ್ಲಾಹನಲ್ಲಿ ಶಪಥ ಹಾಕಿ ಕೇಳಿದರೆ ಅವನು ಸಾಧಿಸಿಕೊಡುವನು'
ಎಂಬ ಹದೀಸ್ 'ಮನು' ವಿನ ಮನಸ್ಸನ್ನು ನಿಯಂತ್ರಿಸುತ್ತಿದೆ ಎಂದು ನನಗೆ ಮನದಟ್ಡಾಗಿತ್ತು!
ಹಾಗೆ ಹಲವರಿಗೆ ಹಲವು ಸಂದರ್ಭಗಳಲ್ಲಿ ಆ ವಂಧ್ಯ ಗುರುವಿನ 'ಶಪಥ' ಪರಿಹಾರವಾಗಿದೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ.
ಆದರೆ ಇದು ತನ್ನ ಸಹನೆಯನ್ನು ಕೂಡಾ ಪರೀಕ್ಷೆ ಗೆ ಒಡ್ಡುವ ಅಗ್ನಿಪರೀಕ್ಷೆಯಾಗಿದೆ ಎಂಬ ಪೂರ್ಣ ಅರಿವು ಉಸ್ತಾದರಿಗಿತ್ತು!
ತನ್ನ ಪುತ್ರನಲ್ಲಿ ಕ್ಷಮೆ ಮತ್ತು ಸಹನೆಯ ಪಾಠ ಹೇಳಿಕೊಡುತ್ತಿದ್ದದ್ದು ಅದಕ್ಕೆ.
ಉಸ್ತಾದ್ ತನ್ನ ರೋಗಿಯಾದ ಪುತ್ರನಿಗೆ ಉಪದೇಶಿಸಿದ ಸಂದರ್ಭ ಯಹ್'ಕೂಬ್ ನೆಬಿ ಮತ್ತು ಇಬ್ರಾಹಿಮ್ ನೆಬಿಯವರ ತ್ಯಾಗದ ನೆನಪು ನನ್ನನ್ನು ಆವರಿಸಿತು.
ಪುತ್ರನನ್ನು ದ್ಸಬಹ್ ಮಾಡಲು ಅಲ್ಲಾಹನು ಆಜ್ಞಾಪಿಸಿದಾಗ ಅದನ್ನು ಹಿಂಪಡೆಯಲು ಇಬ್ರಾಹಿಮ್ ನೆಬಿ ಕೋರಲಿಲ್ಲ ಅಲ್ಲಾಹನ ಆಜ್ಞೆ ಶಿರಸಾ ಪಾಲಿಸಿದರು!
ಅದನ್ನು ಪೂರ್ಣ ತೃಪ್ತಿಯೊಂದಿಗೆ ಅಂಗೀಕರಿಸಿದರು!
ಇಬ್ರಾಹಿಮ್ ನೆಬಿಗೆ ಪುತ್ರನೊಂದಿಗೆ ಸ್ನೇಹವಿಲ್ಲ ಎಂದು ಅದಕ್ಕೆ ಅರ್ಥ ಇಲ್ಲ ತಾನೆ?
ಯೂಸುಫ್ ನೆಬಿ ಅಲೈಹಿಮಾಸ್ಸಲಾಂ ರನ್ನು ಕಾಣದಾದಾಗ ಯಹಕೂಬ್ ನೆಬಿ ಸುಂದರವಾದ ಕ್ಷಮೆ ಕೈಗೊಂಡಿದ್ದರು!
ಯಾವುದೇ ಅತೃಪ್ತಿ ಅವರು ವ್ಯಕ್ತಪಡಿಸಲಿಲ್ಲ.
ಅಲ್ಲಾಹನ ವಿಧಿಯಲ್ಲಿ ಸಮಾಧಾನ ಗೊಂಡರು.
ಹಾಗೆ ಅಲ್ಲಾಹನ ಅನುಲ್ಲಂಘನಿಯ ಮರಣ ವೆಂಬ ವಿಧಿ ತನ್ನ ಪುತ್ರನಿಗೆ ಸಂಭವಿಸಿದಾಗ ಉಸ್ತಾದ್ ಕೂಡಾ ಎಲ್ಲರಿಗೂ ಮಹಾ ಮಾದರಿಯಾದರು!
ಸಾಮಾನ್ಯವಾಗಿ ಎಲ್ಲಾ ಶುಕ್ರವಾರ ಬೇಗನೆ ಮಸೀದಿಗೆ ಹೋಗಿ ಪ್ರಾರ್ಥನಾ ನಿರತರಾಗುತ್ತಿದ್ದ ಉಸ್ತಾದ್ ಅಂದು ಕೂಡಾ ಬೇಗನೆ ಮಸೀದಿಗೆ ಹೋಗಿ ಇಬಾದತ್ ನಲ್ಲಿ ತಲ್ಲೀನರಾಗಿದ್ದರು.
ಪುತ್ರನ ರೋಗ ಉಲ್ಬಣಿಸಿದ ವಿವರ ಸಿಕ್ಕಿದಾಗ ಮನೆಗೆ ಮರಳಿ ಬಂದರು.
ಬಂದವರೇ ಮಗನ ಕಿವಿಯ ಹತ್ತಿರ ಗಟ್ಟಿಸ್ವರದಲ್ಲಿ
'ಲಾ ಇಲಾಹ ಇಲ್ಲಲ್ಲಾಹ್ ಹಕ್ಕನ್ ಹಕ್ಕಾ'
ಎಂದು ಆ ವಂದ್ಯ ಪಿತರು ಹೇಳಿಕೊಟ್ಟಾಗ ಆ ಭಗ್ಯವಂತ ಪುತ್ರ ಸ್ಪುಟವಾಗಿ ಹೇಳಿ ಶುಕ್ರವಾರ ಜುಮಾ ನಮಾಜಿಗೆ ಮುಂಚಿತವಾಗಿ ಚಿರನಿದ್ರೆಗೆ ಜಾರಿದ!
ಗುರು ಮತ್ತು ತಂದೆಯಾದ ಆ ಮಹಾ ಪಂಡಿತನ ಪೂರ್ಣ ಆಶಿರ್ವಾದ ಮತ್ತು ತೃಪ್ತಿ 'ಮನು' ವಿಗೆ ಲಭ್ಯವಾಗಿತ್ತು ಎಂಬುದಕ್ಕೆ ಇದಕ್ಕಿಂತ ದೊಡ್ಡ ಶಾಕ್ಷಿ ಬೇರೆ ಬೇಕಿಲ್ಲ ತಾನೇ?
ಉಸ್ತಾದ್ ಪುತ್ರನ ಮಯ್ಯಿತ್ತ್'ಗೆ ಬಿಳಿ ವಸ್ತ್ರ ಹೊದೆಸಿ ಪುನಃ ಮಸೀದಿಗೆ ಮರಳಿದ್ದರು!
ಮರುದಿವಸ ಬೆಳಿಗ್ಗೆ 'ಇಹ್ಯಾಹುಸ್ಸುನ್ನ'ದತ್ತ ಹೊರಟಿದ್ದರು ಮುತಹಲ್ಲಿಮರಿಗೆ ಕಿತಾಬ್ ದರ್ಸ್ ನಡೆಸಿಕೊಡಲು!
ಒಮ್ಮೆ ನನ್ನ ಮಿತ್ರರೊಬ್ಬರು ಉಸ್ತಾದರ ನ್ನು ಬೇಟಿಯಾದಾಗ ಹೇಳಿದರಂತೆ..
"ನಿನ್ನೆ ನಾನು ಅಬ್ದುರ್ರಹ್ಮಾಮ್ ನನ್ನು ಕಂಡೆ
ಅವನಲ್ಲಿ ಸ್ಥಿತಿಗತಿಗಳ ಕುರಿತು ವಿಚಾರಿಸಿದೆ
ಅವನು ಹೇಳಿದ ಇಲ್ಲಿ ತೊಂದರೆಗಳೇನು ಇಲ್ಲ ಒಳ್ಳೆಯ ನೆಮ್ಮದಿ ಇದೆ.ಮಲಕುಗಳು ನನಗೆ ಉತ್ತರ ತಿಳಿದಿರುವಂತಹ ಪ್ರಶ್ನೆ ಗಳನ್ನೇ ಕೇಳಿ ಬೇಗ ಹೋದರು"
ಉಸ್ತಾದರ ಈ ಮಾತಿನ ರಹಸ್ಯ ಏನೆಂದು ಪೂರ್ಣವಾಗಿ ನನಗೆ ಅರ್ಥವಾಗಲಿಲ್ಲ!
ನಮಗೆಲ್ಲಿ ಅರ್ಥವಾಗುವುದು❓
ಸುಳ್ಳು ವಂಚನೆಯ ಈ ಭೌತಿಕ ಪ್ರೇಮದ ನಶೆಯಲ್ಲಿ ಮುಳುಗಿದ ಅಲೆಮಾರಿಗಳಿಗೆ ಸ್ಪಟಿಕ ಸಮಾನರಾದ ಆತ್ಮಜ್ಞಾನಿಗಳ ವಚನ ರಹಸ್ಯ ತಿಳಿಯುವುದಾದರೂ ಹೇಗೆ❓
ಕನ್ನಡಕ್ಕೆ
✒ಅಬೂಶಝ
(ಪ್ರತಿಯೊಬ್ಬ ಕಾರ್ಯಕರ್ತನೂ ತನ್ನ ಸಂಘಟನೆ ಮತ್ತು ಉಸ್ತಾದರ ಪೂರ್ಣ ಆಶಿರ್ವಾದ ಪಡೆದರೆ ಅವನ ಅಂತ್ಯ ಸಂತೋಷ ಭರಿತವಾಗುವುದು ಸಂಶಯ ಬೇಡ!)
No comments:
Post a Comment